ಸೋಮವಾರ, ಮಾರ್ಚ್ 27, 2023
32 °C

ಆರ್‌ಜಿವಿ ಕಚೇರಿಗೆ ಪವನ್‌ ಕಲ್ಯಾಣ್‌: ಸಂಚಲನ ಮೂಡಿಸಿದ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

‘ಆಂಧ್ರ ಪ್ರದೇಶದ ಮುಂದಿನ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅಲ್ಲ, ಪವರ್ ಸ್ಟಾರ್ ಪವನ್‌ ಕಲ್ಯಾಣ್’ ಎಂದು ಸಂದರ್ಶನವೊಂದರಲ್ಲಿ ಭವಿಷ್ಯ ನುಡಿದಿದ್ದ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಹೊಸ ಟ್ವೀಟ್‌ ಮೂಲಕ ಟಾಲಿವುಡ್‌ಗೆ ಮತ್ತೊಂದು ಅಚ್ಚರಿ ನೀಡಿದ್ದಾರೆ.

‘ನನ್ನ ಮುಂದಿನ ಚಿತ್ರ ‘ಪವರ್‌ ಸ್ಟಾರ್‌’ ನಟ ನನ್ನ ಕಚೇರಿಗೆ ಭೇಟಿ ನೀಡಿದಾಗ ಸೆರೆಹಿಡಿದ ಚಿತ್ರವಿದು’ ಎಂದು ನಾಯಕ ನಟರೊಬ್ಬರ ಫೋಟೊ ಮತ್ತು ವಿಡಿಯೊ ತುಣುಕೊಂದನ್ನು ವರ್ಮಾ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

ಅದು ಟಾಲಿವುಡ್‌ ಪವರ್‌ಸ್ಟಾರ್‌ ‌ಪವನ್‌ ಕಲ್ಯಾಣ್ ಅವರ ಫೋಟೊ ಮತ್ತು ವಿಡಿಯೊ ಎಂದು ಯಾರು ಬೇಕಾದರೂ ಹೇಳಬಹುದು. ಅದರಲ್ಲೇನಿದೆ ವಿಶೇಷ ಎಂದುಕೊಳ್ಳಬಹುದು. ಆದರೆ, ವರ್ಮಾ ಅವರ ಮರ್ಮ ಅಡಗಿರುವುದು ಅಲ್ಲಿಯೇ!

ಅಸಲಿಗೆ ವಿಡಿಯೊದಲ್ಲಿರುವುದು ಪವನ್‌ ಕಲ್ಯಾಣ್‌ ಅಲ್ಲ. ಬದಲಾಗಿ ಅವರನ್ನು‌ ಹೋಲುವ ‘ತದ್ರೂಪಿ’ ವ್ಯಕ್ತಿ. ಹೇರ್‌ ಸ್ಟೈಲ್‌, ನಡಿಗೆ, ಉಡುಗೆ, ತೊಡುಗೆ, ಸ್ವೆಟರ್‌ ಹೆಗಲ ಮೇಲೆ ಹಾಕಿಕೊಂಡಿರುವ ರೀತಿ ಎಲ್ಲವೂ ಸೇಮ್‌ ಟು ಸೇಮ್‌. ‘ಆಕಸ್ಮಾತ್ ಈ ಸ್ಟಾರ್‌‌ ಟಾಲಿವುಡ್‌ನ ಯಾವುದಾದರೂ ಸ್ಟಾರ್ ನಟನಂತೆ ಕಂಡರೆ ಅದಕ್ಕೆ ನಾನು ಹೊಣೆಯಲ್ಲ. ಇದು ಆಕಸ್ಮಿಕವಷ್ಟೇ!’ ಎಂದು ಆರ್‌ಜಿವಿ ಪವನ್‌ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. 

‘ಇದು ಚಿತ್ರದ ಪ್ರಮೋಶನ್‌ ತಂತ್ರ. ಜನರ ಗಮನ ಸೆಳೆಯಲು ಮತ್ತು ಚಿತ್ರಕ್ಕೆ ಪ್ರಚಾರ ಗಿಟ್ಟಿಸಲು ಬೇಕಾದ ಗಿಮಿಕ್‌ಗಳನ್ನು ಅವರು ಒಂದೊಂದಾಗಿ ಬುಟ್ಟಿಯಿಂದ ಹೊರ ತೆಗೆಯುತ್ತಿದ್ದಾರೆ’ ಎಂದು ಆರ್‌ಜಿವಿಯನ್ನು ಹತ್ತಿರದಿಂದ ಬಲ್ಲವರು ಹೇಳುತ್ತಿದ್ದಾರೆ. ‘ಪವರ್‌ ಸ್ಟಾರ್’ ಚಿತ್ರದ ಟೈಟಲ್‌ಗೂ ಪವನ್‌ ಕಲ್ಯಾಣ ಅವರಿಗೂ ಸಂಬಂಧ ಇಲ್ಲ. ಪವನ್‌ ಕುರಿತು ತಾನು ಚಿತ್ರ ಮಾಡುತ್ತಿಲ್ಲ ಎಂದು ವರ್ಮಾ ಈಗಾಗಲೇ ಹೇಳಿದ್ದಾರೆ.

‘ಅಮ್ಮಾ ರಾಜ್ಯಮಲೊ ಕಡಪಾ ಬಿಡ್ಡಲು’ ಚಿತ್ರದಲ್ಲಿ ಪವನ್‌ ಕಲ್ಯಾಣ್ ಅವರನ್ನು ಹೋಲುವ ಪಾತ್ರವೊಂದಕ್ಕೆ ಈಗಾಗಲೇ ಬೇರೊಬ್ಬಹೊಸ ನಟನನ್ನು ವರ್ಮಾ ಆಯ್ಕೆ ಮಾಡಿದ್ದಾರೆ. ಆರ್‌ಜಿವಿ ಕಚೇರಿಗೆ ಭೇಟಿ ನೀಡಿದ್ದ ವ್ಯಕ್ತಿ ‘ಕಡಪಾ ಬಿಡ್ಡಲು’ ಚಿತ್ರದ ನಟನಲ್ಲ’ ಎಂದು ನೆಟ್ಟಿಗರು ದೃಢಪಡಿಸಿದ್ದಾರೆ. ಅದು ಪವನ್‌ ಕಲ್ಯಾಣ್ ಅಥವಾ ಅವರನ್ನು ಹೋಲುವ ಬೇರೊಬ್ಬ ನಟನೋ ಎಂದು ನಿರ್ಧರಿಸುವ ವಿವೇಚನೆಯನ್ನು ವರ್ಮಾ ಜನರಿಗೆ ಬಿಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು