ಬುಧವಾರ, ಆಗಸ್ಟ್ 4, 2021
23 °C
ಫೇಕ್ ನ್ಯೂಸ್, ಸುದ್ದಿ ಸಮರದ ಬಗ್ಗೆ ಮೊದಲೇ ಎಚ್ಚರಿಕೆ ನೀಡಿತ್ತು!

‘ಫಿರ್ ಭಿ ದಿಲ್‌ ಹೈ ಹಿಂದೂಸ್ತಾನಿ’ಗೆ 20 ವರ್ಷದ ಸಂಭ್ರಮ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

Prajavani

ಸುದ್ದಿ ಚಾನೆಲ್‌ನಲ್ಲಿ ಒಂದು ಸುದ್ದಿ ಬ್ರೇಕ್ ಆಗುತ್ತಿದ್ದಂತೆಯೇ, ಅದು ‘ಫೇಕ್’ ಅಥವಾ ‘ಒರಿಜಿನಲ್’ ಎಂಬುದರ ಬಗ್ಗೆ ಚರ್ಚೆ ಶುರುವಾಗುತ್ತದೆ. ಸುದ್ದಿ ಚಾನೆಲ್, ಆ್ಯಂಕರ್, ವರದಿಗಾರ ಸೇರಿದಂತೆ ಎಲ್ಲರ ಮೂಲಗಳ ಬಗ್ಗೆ ಪರ–ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತದೆ. ಇಂಥ ಬೆಳವಣಿಗೆಯ ಕಲ್ಪನೆಯಿರದ ಕಾಲಘಟ್ಟದಲ್ಲೇ (20 ವರ್ಷಗಳ ಹಿಂದೆ) ‘ಫಿರ್‌ ಭಿ ದಿಲ್‌ ಹೈ ಹಿಂದೂಸ್ತಾನಿ’ (ಜನವರಿ 2000) ಚಿತ್ರ ತೆರೆ ಕಂಡು ಸುದ್ದಿಗಳ ಮೌಲ್ಯ ಮತ್ತು ರಾಜಕಾರಣ ವ್ಯಾಖ್ಯಾನಿಸಿತ್ತು.

ಅಜೀಜ್ ಮಿರ್ಜಾ ನಿರ್ದೇಶನದ ಮತ್ತು ಶಾರುಖ್ ಖಾನ್–ಜೂಹಿ ಚಾವ್ಲಾ ಅಭಿನಯದ ‘ಫಿರ್ ಭಿ...’ ತೆರೆ ಕಂಡ ಸಂದರ್ಭದಲ್ಲಿ ದೊಡ್ಡ ಸಂಚಲನ ಉಂಟು ಮಾಡಿತ್ತು. ಚಿತ್ರದ ಟೈಟಲ್ ಟ್ರ್ಯಾಕ್ ಭಾರತೀಯರ ಜೀವನಶೈಲಿ ಪ್ರಸ್ತುತಪಡಿಸಿದರೆ, ಇಡೀ ಚಿತ್ರವು ರಾಜಕೀಯ–ಅಪರಾಧ–ಸಾಮಾಜಿಕ ವಿಷಯಗಳಲ್ಲಿ ಸುದ್ದಿ ಮಾಧ್ಯಮ ವಹಿಸುವ ಪಾತ್ರ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಇದು ಕೆಲ ಸುದ್ದಿ ಚಾನೆಲ್‌ನವರನ್ನು ಕಣ್ಣು ಕೆಂಪಾಗಿಸಿತ್ತು. ನಂತರದ ದಿನಗಳಲ್ಲಿ ಇದು ಚಿತ್ರ ಕಟುವಾದ ವಿಮರ್ಶೆಗೂ ಕಾರಣವಾಗಿತ್ತು.

ರಾಜಕಾರಣಿಯೊಬ್ಬನ ಸಂಬಂಧಿಯ ಕೊಲೆ ಪ್ರಕರಣದ ಕುರಿತು ನಡೆಯುವ ತನಿಖೆ ಮತ್ತು ಅದರ ಭಾಗವಾಗಿ ಅಮಾಯಕ ವ್ಯಕ್ತಿಯನ್ನು ಗಲ್ಲಿಗೇರಿಸಲು ನಡೆಯುವ ಷಢ್ಯಂತ್ರವನ್ನು ಚಿತ್ರ ಅನಾವರಣಗೊಳಿಸಿತ್ತು. ವೀಕ್ಷಕರನ್ನು ಸೆರೆ ಹಿಡಿಯಲು ಮತ್ತು ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಸುದ್ದಿ ಚಾನೆಲ್‌ಗಳು ಅನುಸರಿಸುವ ಬಗೆಬಗೆಯ ತಂತ್ರಗಳು, ಗಲ್ಲಿಗೇರಿಸುವ ಸನ್ನಿವೇಶಕ್ಕೆ ಪ್ರಾಯೋಜಕತ್ವದ ಆಫರ್ ಮತ್ತು ವಿವಿಧ ಉತ್ಪನ್ನಗಳ ಜಾಹೀರಾತು ಪ್ರದರ್ಶನ ಸೂಕ್ಷ್ಮವಾಗಿ ತೋರಿಸಿತ್ತು.

ಕೊರೊನಾ ತೀವ್ರವಾಗಿ ವ್ಯಾಪಿಸುತ್ತಿರುವ ಇಂದಿನ ಸಮಯದಲ್ಲಿ ಮತ್ತು ಸುದ್ದಿ ಚಾನೆಲ್‌ಗಳ ಮಧ್ಯೆ ಹೆಚ್ಚುತ್ತಿರುವ ಪೈಪೋಟಿ ಗಮನಿಸಿದರೆ, ‘ಫಿರ್ ಭಿ...’ ಚಿತ್ರವು ಈಗ ಹೆಚ್ಚು ಪ್ರಸ್ತುತ ಎಂದು ಅನ್ನಿಸದೇ ಇರುವುದಿಲ್ಲ. ಎರಡು ದಶಕಗಳ ಹಿಂದೆಯೇ ಚಿತ್ರವು ಪ್ರಸ್ತುತಪಡಿಸಿದ ಪರಿಸ್ಥಿತಿಗೂ ಮತ್ತು ಈಗಿನ ಸನ್ನಿವೇಶಕ್ಕೂ ಹೆಚ್ಚೇನೂ ವ್ಯತ್ಯಾಸಗಳಿಲ್ಲ. ಸುದ್ದಿಗಾಗಿ ಸಮರ, ಹಗರಣದಲ್ಲಿ ವಿದೇಶಿಗರ ಕೈವಾಡ ಎಂದು ಆರೋಪಿಸುವುದು, ಚಲ್ತಾ ಹೈ ಎಂದು ಜನರು ಹೇಳುವುದು ಎಲ್ಲವೂ ಎಂದಿನಂತೆಯೇ ಇದೆ.

ಶಾರುಖ್ ಖಾನ್, ಜೂಹಿ ಚಾವ್ಲಾ ಮತ್ತು ಅಜೀಜ್ ಮಿರ್ಜಾ ಮೂವರು ಸೇರಿ ‘ಡ್ರೀಮ್ಜ್ ಅನ್‌ಲಿಮಿಟೆಡ್’ ಎಂಬ ಪ್ರೊಡಕ್ಷನ್ ಬ್ಯಾನರ್‌ನಡಿ ನಿರ್ಮಿಸಿದ ಮೊದಲ ಚಿತ್ರ ‘ಫಿರ್ ಬಿ....’ ಈಗಲೂ ಶಾರುಖ್ ಖಾನ್‌ಗೆ ಹೆಚ್ಚು ಆಪ್ತ. ‘ಈ ಚಿತ್ರವು ಫ್ಲಾಪ್‌ ಆಗಿರಬಹುದು. ಆದರೆ ನನಗೆ, ಜೂಹಿ ಮತ್ತು ಅಜೀಜ್‌ಗೆ ಇದು ಶಕ್ತಿವಂತವಾಗಿಸಿದ್ದು ಸುಳ್ಳಲ್ಲ’ ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದರು. ಈ ಚಿತ್ರವು ಬಾಕ್ಸ್‌ಆಫೀಸ್‌ನಲ್ಲಿ ಹಿಟ್‌ ಆಗಲಿಲ್ಲ ಎಂಬುದಕ್ಕೆ ಹಲವಾರು ವ್ಯಾಖ್ಯಾನಗಳಿವೆ.

ಈ ಚಿತ್ರವು ಸುದ್ದಿ ಚಾನೆಲ್‌ಗಳ ಕಥೆ–ವ್ಯಥೆಗಳು ಅಷ್ಟೇ ಅಲ್ಲ, ಅಪರಾಧಿಗೆ ಗಲ್ಲಿಗೇರಿಸುವ ಪ್ರಕ್ರಿಯೆಯನ್ನು ಪ್ರಶ್ನಿಸಿತ್ತು. ಖಚಿತ ಸಾಕ್ಷ್ಯಾಧಾರ ಇದ್ದರೂ ನಿರಪರಾಧಿಯನ್ನು ಭಯೋತ್ಪಾದಕನೆಂದು ಹೇಗೆ ಬಿಂಬಿಸಲಾಗುತ್ತದೆ ಎಂಬುದನ್ನು ಹೇಳಿತ್ತು. ಜನರನ್ನು ಸಂಘಟಿಸಬೇಕಾದರೆ, ಅವರನ್ನು ಹೇಗೆ ತಲುಪಬೇಕು ಎಂಬುದನ್ನು ತಿಳಿಸಿತ್ತು. ಪ್ರಭಾವಿಗಳನ್ನು ಹೇಗೆ ಮಣಿಸಬೇಕೆಂದು ವಿವರಿಸಿತ್ತು. ರಾಷ್ಟ್ರಧ್ವಜದ ಗೌರವ ಕಾಯ್ದುಕೊಂಡು ಹೇಗೆ ಹೋರಾಟಕ್ಕಿಳಿಯಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿತ್ತು. ಈ ಚಿತ್ರವೀಗ 20 ವರ್ಷದಷ್ಟು ಹರೆಯವಾದರೂ ಅಷ್ಟೇ ತಾಜಾತನದಿಂದ ಕೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು