ಬುಧವಾರ, ಮೇ 25, 2022
28 °C

‘ವೈ ಐ ಕಿಲ್ಡ್ ಗಾಂಧಿ’ ಚಿತ್ರದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಮಹಾತ್ಮ ಗಾಂಧಿಯವರ ಹತ್ಯೆ ಸಂಭವಿಸಿದ ಜನವರಿ 30 ರಂದು ವಿವಿಧ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗಲಿರುವ ‘ವೈ ಐ ಕಿಲ್ಡ್ ಗಾಂಧಿ’ ಚಿತ್ರಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ವಕೀಲ ಅನುಜ್ ಭಂಡಾರಿ ಅವರ ಮೂಲಕ ಸಿಕಂದರ್ ಬೆಹ್ಲ್ ಎಂಬುವವರು ಅರ್ಜಿ ಸಲ್ಲಿಸಿದ್ದು, ಒಟಿಟಿ ವೇದಿಕೆಗಳಲ್ಲಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಯಾವುದೇ ರೀತಿಯ ಪ್ರದರ್ಶನ, ಪ್ರಕಟಣೆ ಮಾಡದಂತೆಯೂ, ಚಿತ್ರಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ನಿಷೇಧಿಸುವಂತೆಯೂ ಕೋರಲಾಗಿದೆ.

ಈ ಚಿತ್ರದ ಬಿಡುಗಡೆ ಮತ್ತು ಪ್ರದರ್ಶನವನ್ನು ತಡೆಯದಿದ್ದರೆ, ಅದು ರಾಷ್ಟ್ರಪಿತನ ಪ್ರತಿಷ್ಠೆಗೆ ಭಾರಿ ದಕ್ಕೆಯುಂಟು ಮಾಡಲಿದೆ. ಸಾರ್ವಜನಿಕ ಅಶಾಂತಿ, ದ್ವೇಷ ಉಂಟುಮಾಡುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಇದಿಷ್ಟೇ ಅಲ್ಲದೇ, ಒಟಿಟಿ ಪ್ಲಾಟ್‌ಫಾರ್ಮ್‌ಗಳ ನಿಯಂತ್ರಣದ ಅಗತ್ಯವನ್ನೂ ಅರ್ಜಿಯಲ್ಲಿ ಒತ್ತಿಹೇಳಲಾಗಿದೆ.

ಚಿತ್ರದ ಟ್ರೈಲರ್‌, ಭಾರತದ ವಿಭಜನೆ ಮತ್ತು ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಮಹಾತ್ಮ ಗಾಂಧಿಯನ್ನು ದೂರುವ ಪ್ರಯತ್ನವನ್ನು ಮಾಡಲಾಗಿದೆ ಮತ್ತು ಆ ಮೂಲಕ ಮಹಾತ್ಮನ ಹತ್ಯೆಯನ್ನು ಸಮರ್ಥಿಸುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ಈ ಚಿತ್ರ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ಸಿನಿ ಕಾರ್ಮಿಕರ ಸಂಘವು (ಎಐಸಿಡಬ್ಲ್ಯುಎ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಗಾಂಧೀಜಿ ಹಂತಕ ನಾಥೂರಾಮ್‌ ಗೋಡ್ಸೆಯನ್ನು ವೈಭವೀಕರಿಸಲು ಉದ್ದೇಶಿಸಿರುವ ಚಿತ್ರವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಆಗ್ರಹಿಸಿದೆ.

ಈ ಚಿತ್ರದಲ್ಲಿ ಎನ್‌ಸಿಪಿ ಸಂಸದ ಅಮೋಲ್ ಕೋಲ್ಹೆ ಅವರು ಗೋಡ್ಸೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ಸರ್ಕಾರದಲ್ಲಿ ಅಸಮಾಧಾನ ಮನೆ ಮಾಡಿದೆ.

ಅಶೋಕ್ ತ್ಯಾಗಿ ನಿರ್ದೇಶನದ ಮತ್ತು ಕಲ್ಯಾಣಿ ಸಿಂಗ್ ನಿರ್ಮಾಣದ ಈ ಸಿನಿಮಾ 2017 ರಲ್ಲಿಯೇ ಸಿದ್ಧವಾಗಿದೆಯಾದರೂ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸೆನ್ಸಾರ್ ಮಂಡಳಿ ಅನುಮತಿ ಸಿಕ್ಕಿಲ್ಲ. ಈಗ ಅದನ್ನು ಒಟಿಟಿ ಮೂಲಕ ಬಿಡುಗಡೆ ಮಾಡಲು ಯೋಜಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು