ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್‌ ನಿಧನ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಸಂತಾಪ

Last Updated 3 ಫೆಬ್ರುವರಿ 2023, 10:16 IST
ಅಕ್ಷರ ಗಾತ್ರ

ಹೈದರಾಬಾದ್: ಸಪ್ತಪದಿ, ಶುಭಲೇಖ, ಸಿರಿಸಿರಿ ಮುವ್ವಾ ಮುಂತಾದ ಖ್ಯಾತ ಸಿನಿಮಾಗಳ ನಿರ್ದೇಶಕ ಕಲಾ‍ತಪಸ್ವಿ ಕಾಸಿನಧುನಿ ವಿಶ್ವನಾಥ್‌ (92) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಶ್ವನಾಥ್‌ ಅವರು ಗುರುವಾರ ಮಧ್ಯರಾತ್ರಿ ಹೈದರಾಬಾದ್‌ನಲ್ಲಿ ನಿಧನರಾಗಿದ್ದು, ಪತ್ನಿ ಹಾಗೂ ಮೂರು ಮಕ್ಕಳನ್ನು ಅಗಲಿದ್ದಾರೆ.

‘ಕೆ. ವಿಶ್ವನಾಥ್ ಅವರ ನಿಧನದಿಂದ ದುಃಖವಾಗಿದೆ. ಅವರು ಸೃಜನಶೀಲ ಮತ್ತು ಬಹುಮುಖಿ ನಿರ್ದೇಶಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಸಿನಿಮಾ ಪ್ರಪಂಚದ ಧೀಮಂತರಾಗಿದ್ದರು. ಅವರ ಚಲನಚಿತ್ರಗಳು ಹಲವಾರು ಪ್ರಕಾರಗಳನ್ನು ಒಳಗೊಂಡಿವೆ. ದಶಕಗಳವರೆಗೆ ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಖ್ಯಾತ ಚಲನಚಿತ್ರ ನಿರ್ದೇಶಕ ಕೆ.ವಿಶ್ವನಾಥ್ ನಿಧನರಾಗಿರುವುದು ಭಾರತೀಯ ಚಿತ್ರರಂಗಕ್ಕೆ ದೊಡ್ಡನಷ್ಟ. ‘ಶಂಕರಾಭರಣಂ’ ನಂತಹ ಕಲಾರತ್ನಗಳನ್ನು ನೀಡಿದ ಅವರು ಭಾರತೀಯ ಚಿತ್ರರಂಗದಲ್ಲಿ ಅಜರಾಮರರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ವಲಯಕ್ಕೆ ದಯಪಾಲಿಸಲಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

‘ಕೆ.ವಿಶ್ವನಾಥ್ ಅವರ ನಿಧನ ತೀವ್ರ ದುಃಖ ತಂದಿದೆ. ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರಗಳು ತೆಲುಗು ಸಂಸ್ಕೃತಿ ಮತ್ತು ತೆಲುಗು ಚಿತ್ರರಂಗಕ್ಕೆ ಅಪ್ರತಿಮ ಗೌರವ ತಂದುಕೊಟ್ಟಿವೆ. ಅವರು ಕಲಾವಿದರಾಗಿ ತೆಲುಗು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ’ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌, ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ರಾಜಕೀಯ ಮುಖಂಡರು ವಿಶ್ವನಾಥ್ ನಿಧಕ್ಕೆ ಸಂತಾಪ ಸೂಚಿಸಿದ್ದಾರೆ.

ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ, ಜನಸೇನಾ ಪಕ್ಷದ ಮುಖ್ಯಸ್ಥ, ನಟ ಪವನ್ ಕಲ್ಯಾಣ, ರಾಮ್ ಚರಣ್, ವಿಕ್ಟರಿ ವೆಂಕಟೇಶ್, ನಿರ್ದೇಶಕ ಎಸ್‌.ಎಸ್‌.ರಾಜಮೌಳಿ, ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ ಸೇರಿದಂತೆ ಅನೇಕ ಗಣ್ಯರು ಕೆ.ವಿಶ್ವನಾಥ್ ಅವರ ಅಂತಿಮ ದರ್ಶನ ಪಡೆದಿದ್ದಾರೆ.

1930 ಫೆಬ್ರವರಿ 19 ರಂದು ಗುಂಟೂರಿನಲ್ಲಿ ಜನಿಸಿದ್ದ ಕೆ.ವಿಶ್ವನಾಥ್ ಅವರು, ಕಲಾತಪಸ್ವಿ ಎಂದೇ ಪ್ರಖ್ಯಾತರಾಗಿದ್ದರು. ತೆಲುಗು, ತಮಿಳು ಹಾಗೂ ಹಿಂದಿ ಸೇರಿ 50ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ಶಂಕರಾಭರಣಂ, ಸಿರಿಸಿರಿ ಮುವ್ವಾ, ಸಪ್ತಪದಿ, ಶುಭಲೇಖ, ಸಾಗರಸಂಗಮಂ, ಸ್ವಾತಿಮುತ್ಯಂ, ಸೂತ್ರಧಾರುಲು, ಶೃತಿಲಯಲು, ಶುಭಸಂಕಲ್ಪಂ, ಆಪ್ತಬಂಧವುಡು, ಸ್ವಯಂ ಕೃಷಿ, ಸ್ವರ್ಣ ಕಮಲಂ– ಇವು ಅವರು ನಿರ್ದೇಶಿಸಿದ ಪ್ರಮುಖ ಚಿತ್ರಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT