ಮಂಗಳವಾರ, ಜನವರಿ 28, 2020
23 °C
ಮೇಜರ್ ಸಂದೀಪ್ ಉನ್ನಿಕೃಷ್ಣನ್‌ ಬಯೋಪಿಕ್‌

₹ 2.5 ಕೋಟಿ ಸಂಭಾವನೆ ಕೇಳಿ ತೆಲುಗಿನ ಮೇಜರ್ ಸಿನಿಮಾದಿಂದ ಹೊರಬಿದ್ದ ಪೂಜಾ ಹೆಗ್ಡೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌:  ನಟಿ ಪೂಜಾ ಹೆಗ್ಡೆ ಪ್ರತಿಭಾನ್ವಿತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಕೆ ಟಾಲಿವುಡ್‌ನಲ್ಲಿ ಮಾತ್ರ ಮಿಂಚುತ್ತಿಲ್ಲ. ಬಾಲಿವುಡ್‌ನಲ್ಲೂ ತನ್ನ ಪ್ರತಿಭೆ ತೋರಿಸುವಲ್ಲಿ ಈ ಕನ್ನಡತಿ ಹಿಂದೆ ಬಿದ್ದಿಲ್ಲ. ಆಕೆಯ ಬತ್ತಳಿಕೆಯಲ್ಲಿ ಹಲವು ಬಿಗ್‌ ಬಜೆಟ್‌ ಸಿನಿಮಾಗಳಿರುವುದು ಎಲ್ಲರಿಗೂ ತಿಳಿದಿದೆ. ತನಗೆ ಸಿಕ್ಕಿದ ಪಾತ್ರಗಳಿಗೆ ನ್ಯಾಯ ಒದಗಿಸುವುದರಲ್ಲೂ ಆಕೆ ಒಂದು ಹೆಜ್ಜೆ ಮುಂದಿದ್ದಾಳೆ. ಆದರೆ, ತಾನು ಚೊಕ್ಕಟವಾಗಿ ನಿರ್ವಹಿಸಿದ ಕೆಲಸಕ್ಕೆ ದೊಡ್ಡ ಮೊತ್ತವನ್ನು ಯಾವುದೇ ಮುಲಾಜಿಲ್ಲದೆ ಕೇಳುತ್ತಾಳೆ ಎನ್ನುವುದು ತೆಲುಗು ಚಿತ್ರರಂಗದ ಅಂಗಳದಲ್ಲಿ ಕೇಳಿಬರುವ ಸಾಮಾನ್ಯ ಮಾತು.

ಆಕೆಯ ಈ ಮುಲಾಜಿಲ್ಲದ ಧೋರಣೆಗೆ ಸೂಕ್ತ ಪುರಾವೆ ಎನ್ನುವಂತೆ ಇತ್ತೀಚೆಗೆ ಟಾಲಿವುಡ್‌ನಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ‘ಟಾಲಿವುಡ್‌ ಪ್ರಿನ್ಸ್‌’ ಮಹೇಶ್‌ಬಾಬು ಮತ್ತು ಅವರ ಪತ್ನಿ ನಮ‍್ರತಾ ತಮ್ಮ ಸ್ವಂತ ಬ್ಯಾನರ್‌ ಆದ ಜಿಎಂಬಿ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಡಿ ’ಮೇಜರ್‌’ ಸಿನಿಮಾದ ನಿರ್ಮಾಣಕ್ಕೆ ಇಳಿದಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಇದರಲ್ಲಿ ಅಡವಿ ಶೇಷ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುವಂತೆ ಈ ದಂಪತಿ ಪೂಜಾ ಹೆಗ್ಡೆಯನ್ನು ಕೋರಿತಂತೆ. ಆದರೆ, ಆಕೆ ಕೇಳಿದ ದುಬಾರಿ ಸಂಭಾವನೆಗೆ ಮಹೇಶ್‌ಬಾಬು ದಂಪತಿ ತಬ್ಬಿಬ್ಬಾಗಿದ್ದಾರೆ. ಅಂದಹಾಗೆ ತೆಲುಗಿನ ‘ಮಹರ್ಷಿ’ ಚಿತ್ರದಲ್ಲಿ ಮಹೇಶ್‌ಬಾಬು ಅವರಿಗೆ ಪೂಜಾ ಹೆಗ್ಡೆಯೇ ಜೋಡಿಯಾಗಿದ್ದರು.

ಸಾಮಾನ್ಯವಾಗಿ ಪೂಜಾ ಸಿನಿಮಾವೊಂದಕ್ಕೆ ₹ 1.5ರಿಂದ ₹ 2 ಕೋಟಿ ಸಂಭಾವನೆಗೆ ಕೇಳುತ್ತಾರಂತೆ. ಆದರೆ, ಈ ಸಿನಿಮಾಕ್ಕೆ ಅವರು ಒರೋಬ್ಬರಿ ₹ 2.5 ಕೋಟಿ ಸಂಭಾವನೆಯ ಬೇಡಿಕೆ ಇಟ್ಟಿದ್ದರಂತೆ. ಹಾಗಾಗಿಯೇ, ಆಕೆಯನ್ನು ಚಿತ್ರದಿಂದ ಕೈಬಿಡಲಾಗಿದೆ. ಬಾಲಿವುಡ್‌ ನಟಿಯನ್ನು ಈ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆ ಮಾಡಲು ಹುಡುಕಾಟ ನಡೆದಿದೆಯಂತೆ.

ಅಡವಿ ಶೇಷ ನಾಯಕರಾಗಿರುವ ಈ ಚಿತ್ರಕ್ಕೆ ಶಶಿಕಿರಣ ಟಿಕ್ಕ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಇದು ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಅವರ ಜೀವನಾಧಾರಿತ ಚಿತ್ರ. ಮುಂಬೈನ ತಾಜ್‌ ಹೋಟೆಲ್‌ ಮೇಲೆ ನಡೆದ 26/11 ಉಗ್ರರ ದಾಳಿಯಲ್ಲಿ ಹೋರಾಡಿ ಹುತಾತ್ಮರಾದ ಸಂದೀಪ್‌ ಉನ್ನಿಕೃಷ್ಣನ್‌ ಅವರ ಪಾತ್ರದಲ್ಲಿ ಅಡವಿ ಶೇಷ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್‌ ಮತ್ತು ಅಲ್ಲು ಅರ್ಜುನ್‌ ಅವರ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ತೆಲುಗಿನ ‘ಅಲಾ ವೈಕುಂಠಪುರಮುಲೋ’ ಚಿತ್ರ ಜ. 12ರಂದು ಬಿಡುಗಡೆಯಾಗುತ್ತಿದೆ. ಇದರಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು