ಬುಧವಾರ, ಆಗಸ್ಟ್ 4, 2021
23 °C

ಹಾಸ್ಯನಟ ಬುಲೆಟ್‌ ಪ್ರಕಾಶ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನ್ನಡದ ಹೆಸರಾಂತ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ (44) ತೀವ್ರ ಅನಾರೋಗ್ಯದಿಂದಾಗಿ ಸೋಮವಾರ ನಿಧನ ಹೊಂದಿದ್ದಾರೆ.

ಇವರಿಗೆ ತಾಯಿ, ಪತ್ನಿ ಪಿ. ಮಂಜುಳಾ, ಪುತ್ರಿ ಮೋನಿಕಾ ವರ್ಷಿಣಿ ಮತ್ತು ಪುತ್ರ ರಕ್ಷಕ್‌ ಇದ್ದಾರೆ. ನಗರದ ಹೆಬ್ಬಾಳ ಕೆಂಪಾಪುರದಲ್ಲಿ ಮಂಗಳವಾರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವಿಭಿನ್ನ ಹಾಸ್ಯ ಚಟಾಕಿಯ ಮೂಲಕ ಹಲವು ವರ್ಷಗಳ ಕಾಲ ಕನ್ನಡ ಸಿನಿಪ್ರೇಮಿಗಳನ್ನು ಅವರು ನಕ್ಕು ನಲಿಸಿದ್ದರು. ಗ್ಯಾಸ್ಟ್ರಿಕ್‌ ಸಮಸ್ಯೆಯಿಂದ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಯಕೃತ್‌ ಮತ್ತು ಮೂತ್ರಪಿಂಡ ವೈಫಲ್ಯದಿಂದಾಗಿ ಅವರ ಆರೋಗ್ಯ ಎರಡು ದಿನಗಳಿಂದ ಬಿಗಡಾಯಿಸಿತ್ತು. ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.

ನಟ ದರ್ಶನ್‌ ಅವರಿಗೆ ಆಪ್ತರಾಗಿದ್ದ ಬುಲೆಟ್‌ ಪ್ರಕಾಶ್‌, ರವಿಚಂದ್ರನ್‌, ದರ್ಶನ್‌, ಸುದೀಪ್‌, ಶಿವಣ್ಣ, ಪುನೀತ್‌ರಾಜ್‌ಕುಮಾರ್‌ ಅಭಿನಯದ ಚಿತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು. ರಾಜಕಾರಣಕ್ಕೂ ಪ್ರವೇಶ ಕೊಟ್ಟಿದ್ದ ಪ್ರಕಾಶ್‌, ಬಿಜೆಪಿಯಲ್ಲಿ ಸಂಸ್ಕೃತಿ ಘಟಕದ ರಾಜ್ಯ ಸಹ ಸಂಚಾಲಕರಾಗಿದ್ದರು.

ಕೆಲವು ವರ್ಷಗಳ ಹಿಂದೆ ಬುಲೆಟ್‌ ಪ್ರಕಾಶ್‌ ದೇಹದ ತೂಕ ಇಳಿಸಿಕೊಳ್ಳಲು ಯತ್ನಿಸಿದ್ದರಿಂದ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿತ್ತು. ಇದರಿಂದಾಗಿ ನಟನೆಯ ಅವಕಾಶಗಳು ಕಡಿಮೆಯಾಗಿ ಅವರು ಚಿತ್ರರಂಗದಿಂದ ಬಹುತೇಕ ದೂರ ಉಳಿದಿದ್ದರು.  

ಪ್ರಕಾಶ್‌ ಚಿತ್ರ ಬದುಕಿನ ಹಾದಿ

1999ರಲ್ಲಿ ಶಿವಣ್ಣ ಅಭಿನಯದ ‘ಎಕೆ 47’ ಚಿತ್ರದ ಮೂಲಕ ಪೂರ್ಣಪ್ರಮಾಣದ ನಟನಾಗಿ ಪ್ರಕಾಶ್‌ ಗುರುತಿಸಿಕೊಂಡರು.  ಸುಮಾರು 325ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 2019ರಲ್ಲಿ ‘ಜರ್ಕ್‌’ ಸಿನಿಮಾ ಅವರು ನಟಿಸಿದ ಕೊನೆ ಚಿತ್ರ. ತುಳು ಚಿತ್ರ ‘ಸೂಂಬೆ’ಯಲ್ಲೂ ಅವರು ನಟಿಸಿದ್ದಾರೆ. ಕನ್ನಡದ ಬಿಗ್‌ ಬಾಸ್‌ ರಿಯಾಲಿಟಿ ಶೋನಲ್ಲೂ ಅವರು ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದರು.

ರಾಯಲ್‌ ಎನ್‌ಫಿಲ್ಡ್‌ ಬುಲೆಟ್‌ ಬೈಕಿನಲ್ಲಿ ಸದಾ ಓಡಾಡುತ್ತಿದ್ದ ಪ್ರಕಾಶ್‌ ಹೆಸರಿನ ಜತೆಗೆ ಬುಲೆಟ್‌ ಕೂಡ ಸೇರಿಕೊಂಡಿತ್ತು. ತಮ್ಮ ಪುತ್ರ ರಕ್ಷಕ್‌ನನ್ನು ಚಿತ್ರರಂಗಕ್ಕೆ ಪರಿಚಯಿಸಲು ಚಿತ್ರ ನಿರ್ಮಾಣದ ಕನಸು ಕಂಡಿದ್ದರು. ಅದು ಈಡೇರದೆ, ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಕಡಿಮೆಯಾಗಿದ್ದವು. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ಸಂದರ್ಶನಗಳಲ್ಲಿ ಪ್ರಕಾಶ್‌ ನೋವು ತೋಡಿಕೊಂಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು