‘ಪೌಡರ್ ಒಂದು ಪೂರ್ಣಪ್ರಮಾಣದ ಮನರಂಜನಾತ್ಮಕ ಸಿನಿಮಾ. ಇದರಲ್ಲಿ ಶೇ 90ರಷ್ಟು ಮನರಂಜನೆ ಹಾಗೂ ಶೇ 10ರಷ್ಟು ಪ್ರಯೋಗವಿದೆ. ಮೂಲಕಥೆಯನ್ನು ಮುಂಬೈನ ದೀಪಕ್ ವೆಂಕಟೇಶನ್ ಮಾಡಿದ್ದಾರೆ. ಮೊದಲ ಬಾರಿಗೆ ಹಾಸ್ಯ ಪ್ರಧಾನ ಜಾನರ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದೇನೆ. ಕಾಮಿಡಿ ಎನ್ನುವುದು ಟೈಮಿಂಗ್ ಮೇಲೆ ನಿಂತಿರುತ್ತದೆ. ಇದನ್ನು ನಾವು ಸಾಧಿಸಿದ್ದೇವೆ ಎನ್ನುವ ಭರವಸೆ ಇದೆ’ ಎಂದಿದ್ದಾರೆ ಜನಾರ್ದನ್ ಚಿಕ್ಕಣ್ಣ. ಇಬ್ಬರು ಯುವಕರು ಒಂದು ನಿಗೂಢವಾದ ‘ಪೌಡರ್’ ಪ್ರಭಾವದಿಂದಾಗಿ ದಿಢೀರನೆ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಈ ಚಿತ್ರದ ಕಥಾಹಂದರ. ದಿಗಂತ್, ಧನ್ಯ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕೆ.ಆರ್.ಜಿ. ಸ್ಟೂಡಿಯೊಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.