‘ಪವರ್ ಸ್ಟಾರ್’: 2 ದಿನದ ಗಳಿಕೆ ₹ 2 ಕೋಟಿ, ತೆಲುಗಿನಲ್ಲಿ ಸಂಚಲನ ಸೃಷ್ಟಿಸಿದ RGV

ಹೈದರಾಬಾದ್: ವಿವಾದಾತ್ಮಕ ನಿರ್ದೇಶಕ ಎಂದೇ ಕರೆಸಿಕೊಳ್ಳುವ ರಾಮ್ ಗೋಪಾಲ್ ವರ್ಮ (RGV) ಅವರ ‘ಪವರ್ ಸ್ಟಾರ್’ ಚಿತ್ರ ಸುಮಾರು ₹ 2 ಕೋಟಿಗೂ ಹೆಚ್ಚು ಗಳಿಕೆ ಕಂಡು ಹೊಸ ದಾಖಲೆ ಬರೆದಿದೆ ಎಂದು ಟಾಲಿವುಡ್ ಅಂಗಳದಲ್ಲಿ ಬಿಸಿ ಬಿಸಿ ಸುದ್ದಿಗಳು ಹರಿದಾಡುತ್ತಿವೆ.
ಲಾಕ್‌ಡೌನ್ ಆರಂಭವಾದಾಗಿನಿಂದ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇದ್ದರು. ‘ಪವರ್ ಸ್ಟಾರ್’ ಸಿನಿಮಾ ನಿರ್ಮಾಣ ಮಾಡಿ, ಬಿಡುಗಡೆ ಮಾಡುವ ಮೂಲಕ ಭರ್ಜರಿ ಯಶಸ್ಸು ಕಂಡಿದ್ದಾರೆ ಎನ್ನಲಾಗುತ್ತಿದೆ.
ಪ್ರತಿ ಬಾರಿಯೂ ಹೊಸ ಹೊಸ ಪರಿಕಲ್ಪನೆಗಳನ್ನು ಜನರ ಮುಂದೆ ಇಡುವ ವರ್ಮಾ ಈ ಬಾರಿ ತಮ್ಮದೇ ಆದ ಆರ್‌ಜಿವಿ ವರ್ಲ್ಡ್ ಥಿಯೇಟರ್ ಮೂಲಕ ಪವರ್ ಸ್ಟಾರ್ ಚಿತ್ರ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇದರ ಟ್ರೇಲರ್ ವೀಕ್ಷಣೆಗೆ ಹಣ ನಿಗದಿ ಮಾಡುವ ಮೂಲಕ ಸಿನಿಮಾ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದರು.
ಈ ಸಿನಿಮಾವೂ ಜುಲೈ 25ರಂದು ಬೆಳಿಗ್ಗೆ 11 ಗಂಟೆಗೆ ಆರ್‌ಜಿವಿ ವರ್ಲ್ಡ್ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದೆ. ಇದರ ಟ್ರೇಲರ್ ಬಿಡುಗಡೆಯ ದಿನದಂದೇ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಿದ್ದರು. ಮುಂಗಡ ಬುಕ್ಕಿಂಗ್‌ಗೆ ₹ 150 ನಿಗದಿ ಮಾಡಿದ್ದರು. ಬಿಡುಗಡೆ ಬಳಿಕ ₹ 250 ನಿಗದಿ ಮಾಡಲಾಗಿತ್ತು.
ಟ್ರೇಲರ್ ಸೇರಿದಂತೆ ಸಿನಿಮಾದ ಎರಡು ದಿನದ ಒಟ್ಟು ಗಳಿಕೆ ₹ 2 ಕೋಟಿ ಎನ್ನಲಾಗಿದೆ. ಈ ಮೂಲಕ ಟಾಲಿವುಡ್‌ನಲ್ಲಿ ಹೊಸ ದಾಖಲೆ ಬರೆದಂತಾಗಿದೆ ಎಂದು ತೆಲುಗಿನಲ್ಲಿ ಸಿನಿಮಾ ಸುದ್ದಿಗಳನ್ನು ಪ್ರಕಟಿಸುವ ಟಾಲಿವುಡ್ ವೆಬ್‌ಸೈಟ್ ವರದಿ ಮಾಡಿದೆ. ಇನ್ನು ಅಧಿಕೃತ ಮಾಹಿತಿಗಳು ಬಿಡುಗಡೆಯಾಗಿಲ್ಲ.
ಕೇವಲ 37 ನಿಮಿಷಗಳಿರುವ ‘ಪವರ್ ಸ್ಟಾರ್’ ಟಾಲಿವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿರುವುದು ಸುಳ್ಳಲ್ಲ!
ಪವರ್‌ಸ್ಟಾರ್ ಸಿನಿಮಾ ಆರಂಭದಿಂದಲೂ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟು ಹಾಕಿತ್ತು. ಇದು ಮನಸೇನಾ ಪಕ್ಷದ ಸೋಲಿನಿಂದ ನಿರಾಶೆಗೊಳ್ಳುವ ಪವರ್ ಸ್ಟಾರ್ ಕತೆಯಾಗಿದೆ. ಪಕ್ಷದ ಸೋಲಿನ ಮಾತುಕತೆಯೊಂದಿಗೆ ಸಿನಿಮಾ ಆರಂಭವಾಗುತ್ತದೆ. ಇದರಲ್ಲಿ ಸಹೋದರ ಹಾಗೂ ಹಿರಿಯ ನಟ ಜೀವಿ, ಸಾಮಾನ್ಯ ಜನರು, ನಿರ್ಮಾಪಕರು ಬಂದು ಹೋಗುತ್ತಾರೆ. ಹಾಗೇ ಪವನ್ ಕಲ್ಯಾಣ್ ಅವರ ರಷ್ಯಾ ಮೂಲದ 3ನೇ ಮಡದಿಗೂ ಇಲ್ಲಿ ಪಾತ್ರ ಕಲ್ಪಿಸಲಾಗಿದೆ. ಇಡೀ ಸಿನಿಮಾವನ್ನು ಫಾರ್ಮ್‌ಹೌಸ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.