ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ–2 | ಅತ್ಯುತ್ತಮ ಚೊಚ್ಚಲ ನಿರ್ದೇಶನ: ನಾಮನಿರ್ದೇಶಿತರು

Published 4 ಜೂನ್ 2024, 0:05 IST
Last Updated 4 ಜೂನ್ 2024, 0:05 IST
ಅಕ್ಷರ ಗಾತ್ರ

‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿ ಸಮಾರಂಭ ಶೀಘ್ರದಲ್ಲೇ ನಡೆಯಲಿದ್ದು, 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರು ಮತ್ತು ಸಿನಿಮಾಗಳ ಪಟ್ಟಿಯನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ಅತ್ಯುತ್ತಮ ಚೊಚ್ಚಲ ನಿರ್ದೇಶನ’ ವಿಭಾಗದಲ್ಲಿ ನಾಮನಿರ್ದೇಶಿತಗೊಂಡವರ ಪರಿಚಯಿಸುವ ಸಮಯ. ಇನ್ನಷ್ಟು ಮಾಹಿತಿಗಳಿಗಾಗಿ ವೆಬ್‌ಸೈಟ್‌ ನೋಡಿ. prajavani.net/cinesamman/season2

‘ಟಗರುಪಲ್ಯ’ ಸಿನಿಮಾ ನಿರ್ದೇಶನಕ್ಕಾಗಿ ಉಮೇಶ್‌ ಕೆ.ಕೃಪ ನಾಮನಿರ್ದೇಶನಗೊಂಡಿದ್ದಾರೆ. ನಟ ಧನಂಜಯ ಅವರ ಡಾಲಿ ಪಿಕ್ಚರ್ಸ್‌ನಡಿ ನಿರ್ಮಾಣಗೊಂಡಿದ್ದ ಈ ಸಿನಿಮಾ ಮಣ್ಣಿನ ಕಥೆಯನ್ನು ಹೊತ್ತು ಪ್ರೇಕ್ಷಕರೆದುರಿಗೆ ಬಂದಿತ್ತು. ಮಣ್ಣಿನ ಕಥೆಗೆ ಕಮರ್ಷಿಯಲ್‌ ಸ್ಪರ್ಶ ನೀಡಿ ಸಿನಿಮಾ ಮಾಡುವ ಕನಸು ಹೊತ್ತ ಉಮೇಶ್‌, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕಲಿತವರು. ಯೋಗರಾಜ್‌ ಭಟ್ ನಿರ್ದೇಶನದ ‘ಪಂಚತಂತ್ರ’, ‘ಗಾಳಿಪಟ–2’, ನಾಗಶೇಖರ್‌ ನಿರ್ದೇಶನದ ‘ಮಾಸ್ತಿಗುಡಿ’ ಹಾಗೂ ಪವನ್‌ ಒಡೆಯರ್‌ ನಿರ್ದೇಶನದ ‘ರಣವಿಕ್ರಮ’ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಉಮೇಶ್‌, ‘ಜಯಮ್ಮನ ಮಗ’, ‘ಕಾಣದಂತೆ ಮಾಯವಾದನು’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಪ್ರೊಡಕ್ಷನ್‌ ಡಿಸೈನರ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

‘ಡೇರ್‌ಡೆವಿಲ್‌ ಮುಸ್ತಾಫಾ’ ಚಿತ್ರದ ನಿರ್ದೇಶನಕ್ಕಾಗಿ ಶಶಾಂಕ್ ಸೋಗಾಲ್ ನಾಮನಿರ್ದೇಶನಗೊಂಡಿದ್ದಾರೆ. ಮೈಸೂರಿನಲ್ಲಿ ಹುಟ್ಟಿ ಬೆಳೆದ ಶಶಾಂಕ್‌, ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕೆಲಸ ಮಾಡಿ ಸಿನಿ ಪಯಣಕ್ಕೆ ಹೆಜ್ಜೆ ಇಟ್ಟವರು. ರಂಗಭೂಮಿಯ ನಂಟು ಹೊಂದಿರುವ ಶಶಾಂಕ್‌, ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದಾಗ ಕಥೆ, ಕಾದಂಬರಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡವರು. ಆ ಸಂದರ್ಭದಲ್ಲೇ ಸಿನಿಮಾದ ಸಣ್ಣ ಕನಸೂ ಅವರಲ್ಲಿ ಚಿಗುರೊಡೆದಿತ್ತು. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಕಥೆಗಳನ್ನು ಸಿನಿಮಾ ಮಾಡಬೇಕು ಎಂಬ ಶಂಶಾಕ್‌ ಯೋಚನೆಯೇ ‘ಡೇರ್‌ಡೆವಿಲ್‌ ಮುಸ್ತಾಫಾ’ ಸಿನಿಮಾ ರೂಪ ಪಡೆಯಿತು. ಕನ್ನಡ ಸಿನಿಮಾವನ್ನು ಬ್ರ್ಯಾಂಡ್‌ ಮಾಡಬೇಕು ಎಂಬ ಆಸೆ ಹೊತ್ತಿರುವ ಶಶಾಂಕ್‌ ಸದ್ಯ ತಮ್ಮ ಮುಂದಿನ ಚಿತ್ರದ ತಯಾರಿಯಲ್ಲಿದ್ದಾರೆ.

‘ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ನಿರ್ದೇಶನಕ್ಕಾಗಿ ನಿತಿನ್‌ ಕೃಷ್ಣಮೂರ್ತಿ ನಾಮಿನಿರ್ದೇಶನಗೊಂಡಿದ್ದಾರೆ. 2023ರಲ್ಲಿ ಪ್ರಾರಂಭದ ಐದು ತಿಂಗಳುಗಳಲ್ಲಿ ಪ್ರೇಕ್ಷಕರಿಲ್ಲದೆ ಸೊರಗುತ್ತಿದ್ದ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಮತ್ತೆ ಸೆಳೆದ ಮೊದಲ ಚಿತ್ರ ಇದಾಗಿತ್ತು. ಬಿಗ್‌ಬಾಸ್‌ ಮೊದಲ ಆವೃತ್ತಿಯಲ್ಲಿ ಕೆಲಸ ಮಾಡಿದ ಅನುಭವವಿದ್ದ ನಿತಿನ್‌, ‘ಜೀ ಕನ್ನಡ’ದಲ್ಲಿ ಏಳು ವರ್ಷ ಪ್ರಚಾರ ವಿಭಾಗದ ಮುಖ್ಯಸ್ಥರಾಗಿದ್ದರು. ‘ಲೂಸಿಯಾ’ದಲ್ಲಿ ಸಹಾಯಕ ನಿರ್ದೇಶಕನಾಗಿಯೂ ಇವರು ಕೆಲಸ ಮಾಡಿದ್ದರು. ಇದು ಸಿನಿಮಾದಲ್ಲಿ ಅವರ ಚೊಚ್ಚಲ ಹೆಜ್ಜೆ. ಬೆಂಗಳೂರಿನಲ್ಲೇ ಬೆಳೆದ ನಿತಿನ್‌ ಅವರಿಗೆ ರಂಗಭೂಮಿಯ ನಂಟೂ ಇದೆ. ಮೊದಲ ಲಾಕ್‌ಡೌನ್‌ ಸಂದರ್ಭದಲ್ಲಿ ಹಾಸ್ಯಪ್ರಧಾನ ‘ಹಾಸ್ಟೆಲ್‌ ಹುಡುಗರು...’ ಸಿನಿಮಾ ಬರೆದಿದ್ದ ನಿತಿನ್‌, ಸದ್ಯ ಭಿನ್ನ ಜಾನರ್‌ನ ಸಿನಿಮಾ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ.

‘ಆಚಾರ್‌ ಆ್ಯಂಡ್‌ ಕೋ.’ ಚಿತ್ರದ ನಿರ್ದೇಶನಕ್ಕಾಗಿ ಸಿಂಧು ಶ್ರೀನಿವಾಸಮೂರ್ತಿ ನಾಮನಿರ್ದೇಶನಗೊಂಡಿದ್ದಾರೆ. 1960ರಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಥೆ ಹೊತ್ತ ಈ ಸಿನಿಮಾವನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ನಿರ್ಮಾಣ ಮಾಡಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುವ ಈ ಸಿನಿಮಾ ತನ್ನೊಳಗಿನ ಸರಳ ಚಿತ್ರಕಥೆಯಿಂದ ಪ್ರೇಕ್ಷಕರನ್ನು ಸೆಳೆದಿತ್ತು. 16ನೇ ವಯಸ್ಸಿನಲ್ಲಿ ರಂಗಭೂಮಿಗೆ ಹೆಜ್ಜೆ ಇಟ್ಟ ಸಿಂಧು, ಮುಂಬೈನಲ್ಲಿ ನಟನೆಯ ತರಬೇತಿ ಪಡೆದವರು. ಅಲ್ಲಿಯೇ ಚಿತ್ರಕಥೆ ಬರವಣಿಗೆಯ ಕೋರ್ಸ್‌ ಪೂರ್ಣಗೊಳಿಸಿದ ಅವರು ನಂತರದಲ್ಲಿ ‘ಆಚಾರ್‌ ಆ್ಯಂಡ್‌ ಕೋ.’ ಬರೆದಿದ್ದರು. ಸಿಂಧು ‘ಫ್ರೆಂಚ್‌ ಬಿರಿಯಾನಿ’, ತೆಲುಗಿನ ‘ಸಿನಿಮಾ ಬಂಡಿ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

‘ತತ್ಸಮ ತದ್ಭವ’ ಚಿತ್ರದ ನಿರ್ದೇಶನಕ್ಕಾಗಿ ವಿಶಾಲ್‌ ಅತ್ರೇಯ ನಾಮನಿರ್ದೇಶನಗೊಂಡಿದ್ದಾರೆ. ಅಪರಾಧ ತನಿಖೆಯ ಕಥೆ ಹೊತ್ತ ಥ್ರಿಲ್ಲರ್‌ ಜಾನರ್‌ನ ಈ ಸಿನಿಮಾದಲ್ಲಿ ಮೇಘನಾ ರಾಜ್‌, ಪ್ರಜ್ವಲ್‌ ದೇವರಾಜ್‌ ಮುಖ್ಯಭೂಮಿಕೆಯಲ್ಲಿದ್ದಾರೆ. ಭಿನ್ನವಾದ ಶೀರ್ಷಿಕೆ ಹೊತ್ತ ಈ ಸಿನಿಮಾವನ್ನು ನಿರ್ದೇಶಕ ಪನ್ನಗ ಭರಣ ಹಾಗೂ ಸ್ಫೂರ್ತಿ ಅನಿಲ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಜಾಹೀರಾತು, ಕಿರುಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದ ವಿಶಾಲ್‌, ‘ತತ್ಸಮ ತದ್ಭವ’ ಚಿತ್ರದ ಕಥೆಯನ್ನು ಮೊದಲು ಪಿಆರ್‌ಕೆ ಮುಂದಿಟ್ಟಿದ್ದರು. ಬಳಿಕ ಕಥೆಯನ್ನು ಪನ್ನಗ ಅವರ ಬಳಿ ಹೇಳಿದಾಗ ಅವರು ನೇರವಾಗಿ ವಿಶಾಲ್‌ ಅವರಿಗೆ ನಿರ್ಮಾಣದ ಆಫರ್‌ ನೀಡಿದ್ದರು. ಈ ಸಿನಿಮಾ ಬಿಡುಗಡೆ ಸಂದರ್ಭದಲ್ಲೇ ಮಾಸ್‌ ಕಥೆಯೊಂದನ್ನು ಸಿದ್ಧಪಡಿಸಿಟ್ಟುಕೊಂಡಿದ್ದರು ವಿಶಾಲ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT