ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧೀರನ ಗುಟ್ಟು ಬಿಚ್ಚಿಟ್ಟ ಪ್ರಶಾಂತ್‌ ನೀಲ್

Last Updated 31 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

‘ಅಧೀರನ ಪಾತ್ರಕ್ಕೆ ಸಂಜಯ್‌ ದತ್‌ ಅವರೇ ಸೂಕ್ತ ನಟ ಎಂದು ಐದು ವರ್ಷದ ಹಿಂದೆಯೇ ಅವರಿಗಾಗಿ ಕಥೆ ಹೊಸೆದಿದ್ದೆ...’

–ಹೀಗೆಂದು ಒಂದೇ ಸಾಲಿನಲ್ಲಿ ‘ನರಾಚಿ’ ಗಣಿಯಲ್ಲಿ ಅಧೀರ ಸೃಷ್ಟಿಸುವ ಅಬ್ಬರದ ಬಗ್ಗೆ ಕುತೂಹಲದ ಬೀಜ ಬಿತ್ತಿದರು ನಿರ್ದೇಶಕ ಪ್ರಶಾಂತ್‌ ನೀಲ್‌. ‘ಅವರು‘ಕೆಜಿಎಫ್‌ ಚಾಪ್ಟರ್‌ 1’ ಸಿನಿಮಾ ನೋಡುತ್ತಾರೆ. ಇಷ್ಟವಾದರೆ ಖಂಡಿತಾ ನಟಿಸುತ್ತಾರೆ ಎಂಬ ನಂಬಿಕೆ ಇತ್ತು. ಹಾಗಾಗಿಯೇ, ಅಧೀರನ ಮುಖ ತೋರಿಸಿರಲಿಲ್ಲ’ ಎಂದು ಗುಟ್ಟು ಬಿಚ್ಚಿಟ್ಟರು.

‘ಕೆಜಿಎಫ್‌ ಚಾಪ್ಟರ್‌ 1’ರ ಪ್ರಮುಖ ಖಳನಾಯಕ ಸೂರ್ಯವರ್ಧನ್. ಆತನ ಸಹೋದರನೇ ಅಧೀರ. ಸೂರ್ಯವರ್ಧನ್‌ನ ಸಾವಿನ ಬಳಿಕ ಅಧಿಕಾರದ ಗದ್ದುಗೆ ಏರುವುದು ಅವನ ಪುತ್ರ ಗರುಡ. ಸುಫಾರಿ ಪಡೆದ ರಾಕಿ ಭಾಯ್‍(ಯಶ್‌)ನಿಂದ ಈತ ಹತನಾಗುತ್ತಾನೆ. ಅಧೀರನ ಪ್ರವೇಶವಾಗುವುದು ಎರಡನೇ ಅಧ್ಯಾಯದಲ್ಲಿ. ಆ ಪಾತ್ರಕ್ಕೆ ಜೀವ ತುಂಬುತ್ತಿರುವುದು ಬಾಲಿವುಡ್‌ ನಟ ಸಂಜಯ್‌ ದತ್.

‘ಸಂಜಯ್‌ ದತ್‌ ಅವರು ಕಥೆ ಕೇಳಿದ ತಕ್ಷಣ ಸಿನಿಮಾ ಒಪ್ಪಿಕೊಳ್ಳುವುದಿಲ್ಲ. ಯಾವುದೇ‍ಪಾತ್ರದಲ್ಲಿ ನಟಿಸುವ ಮೊದಲು ಸ್ಕ್ರಿಪ್ಟ್‌ ಕೇಳುತ್ತಾರೆ. ಆ ನಂತರವಷ್ಟೇ ನಟಿಸುವ ಬಗ್ಗೆ ತೀರ್ಮಾನಿಸುತ್ತಾರೆ. ಚಾಪ್ಟರ್ 2ರಲ್ಲಿನ ಅವರ ಪಾತ್ರದ ಬಗ್ಗೆ ಎಕ್ಸೈಟ್‌ ಆಗಿದೆ. ಹಾಗಾಗಿಯೇ, ನಟಿಸಲು ಒಪ್ಪಿಕೊಂಡಿದ್ದಾರೆ’ ಎಂದು ವಿವರಿಸಿದರು ಪ್ರಶಾಂತ್‌ ನೀಲ್.

‘ಸಂಜು ಅವರೇ ಅಧೀರನ ಪಾತ್ರಕ್ಕೆ ಸೂಕ್ತವೆಂದು ನಿರ್ಮಾಪಕ ವಿಜಯ್‌ ಕಿರಗಂದೂರು ಅವರಿಗೆ ಹೇಳಿದೆ. ಅವರ ಸೂಚನೆ ಮೇರೆಗೆ ಚಿತ್ರದಲ್ಲಿ ನಟಿಸುವಂತೆ ಸಂಜು ಅವರಿಗೆ ಅಪ್ರೋಚ್‌ ಮಾಡಿದೆ’ ಎಂದರು.

ಚಿತ್ರದ ಎರಡನೇ ಅಧ್ಯಾಯದ ಬಗ್ಗೆ ಪ್ರಶಾಂತ್‌ ವಿವರಿಸುವುದು ಹೀಗೆ: ‘ಮುಂಬೈನ ಕೊಳೆಗೇರಿಗಳಲ್ಲಿ ಬೆಳೆದ ಹುಡುಗನೊಬ್ಬ ಶ್ರೀಮಂತನಾಗುವ ಆಸೆಯ ಮೂಟೆ ಹೊತ್ತು ಕೋಲಾರದ ಚಿನ್ನದ ಗಣಿಗೆ ಬರುತ್ತಾನೆ ಎನ್ನುವ ಚಾಪ್ಟರ್‌ ಒಂದರ ಕಥೆ ಎಲ್ಲರಿಗೂ ಗೊತ್ತು. ಮೊದಲ ಅಧ್ಯಾಯದಲ್ಲಿ ಹೇಳಿರುವುದು ಅರ್ಧ ಕಥೆಯಷ್ಟೇ. ಉಳಿದ ಅರ್ಧ ಕಥೆ ಬಾಕಿ ಇದೆ. ಎರಡನೇ ಅಧ್ಯಾಯದಲ್ಲಿ ಅದನ್ನು ಹೇಳಲು ಹೊರಟಿದ್ದೇವೆ. ಅಷ್ಟನ್ನು ಹೊರತುಪಡಿಸಿ ದೊಡ್ಡದಾಗಿ ಮಾಡಬೇಕು ಎಂಬುದೇನೂ ಇಲ್ಲ. ಚೊಕ್ಕಟವಾಗಿ ಜನರ ಮನಸ್ಸಿಗೆ ನಾಟುವಂತೆ ಕಥೆಯನ್ನು ನಿರೂಪಣೆ ಮಾಡಬೇಕು ಎನ್ನುವುದಷ್ಟೇ ನನ್ನ ಗುರಿ. ಅದಕ್ಕಾಗಿ ಹೆಚ್ಚಿಗೆ ದುಡ್ಡು ಖರ್ಚು ಮಾಡೋಣ, ಸ್ಕೇಲ್‌ ಜಾಸ್ತಿ ಮಾಡಿಕೊಳ್ಳೋಣ ಎನ್ನುವ ಉದ್ದೇಶವಂತೂ ನನಗಿಲ್ಲ. ಆ ಹಾದಿಯಲ್ಲಿ ನಾನು ಸಾಗುವುದೂ ಇಲ್ಲ. ಜನರಿಗೆ ಕಥೆ ಇಷ್ಟವಾಗದಿದ್ದರೆ ಎಷ್ಟೇ ಅಲಂಕಾರ ಮಾಡಿದರೂ ವ್ಯರ್ಥವಲ್ಲವೇ? ಹಾಗಾಗಿ, ಕಥೆ ಹೇಳುವುದಕ್ಕಷ್ಟೇ ಪ್ರಾಮುಖ್ಯತೆ ನೀಡುತ್ತೇನೆ’ ಎಂದು ಹೇಳಿದರು.

* ‘ಕೆಜಿಎಫ್‌ ಚಾಪ್ಟರ್ 2’ ಸಿನಿಮಾದ ಶೂಟಿಂಗ್‌ ಯಾವ ಹಂತದಲ್ಲಿದೆ?

ಚಿತ್ರದ ಶೇಕಡ 50ರಷ್ಟು ಶೂಟಿಂಗ್‌ ಪೂರ್ಣಗೊಂಡಿದೆ. ಅಧೀರ ಪಾತ್ರದ ಚಿತ್ರೀಕರಣ ಕೂಡ ಅರ್ಧದಷ್ಟು ಬಾಕಿ ಇದೆ. ಮುಂದಿನ ಹಂತದಲ್ಲಿ ಮೈಸೂರು, ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ನಲ್ಲಿ ಶೂಟಿಂಗ್‌ ನಡೆಸಲು ನಿರ್ಧರಿಸಿದ್ದೇವೆ.

* ಒಂದೇ ಕ್ಯಾನ್ವಾಸ್‌ ಮೇಲೆ ಹಲವು ಪಾತ್ರಗಳ ಪೋಷಣೆಯು ಸವಾಲು ಎನಿಸಲಿಲ್ಲವೇ?

ಮೊದಲ ಅಧ್ಯಾಯದಲ್ಲಿ ನಟಿಸಿರುವ ಶೇಕಡ 90ರಷ್ಟು ಕಲಾವಿದರು ಹೊಸಬರು. ತಮ್ಮ ಪಾತ್ರಗಳಿಗಾಗಿ ಅವರು ಸಾಕಷ್ಟು ವರ್ಕ್‌ಶಾಪ್‌ ಮಾಡಿದ್ದಾರೆ. ಅವರವರ ಬೆಳವಣಿಗೆಯನ್ನು ಅವರೇ ನೋಡಿಕೊಂಡರು. ನಟನೆಯಲ್ಲಿನ ವಿಕಾಸದ ಪಥ ಕಂಡುಕೊಂಡಿದ್ದೂ ಅವರೇ. ಪಾತ್ರಗಳಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಂಡರು. ಎಲ್ಲರೂ ಸಹಕರಿಸಿದ್ದರಿಂದಲೇ ತಾಳ್ಮೆಯಿಂದ ದೊಡ್ಡ ಸಿನಿಮಾ ಮಾಡಲು ಸಾಧ್ಯವಾಯಿತು. ಜನರಿಗೆ ಗುರುತಿಸದಿರುವ ಹೊಸ ಮುಖಗಳನ್ನೇ ಚಿತ್ರದಲ್ಲಿ ತೋರಿಸಬೇಕು ಎನ್ನುವುದು ನನ್ನ ಉದ್ದೇಶವಾಗಿತ್ತು. ಅದಕ್ಕೆ ತಕ್ಕಂತೆ ಪಾತ್ರಗಳ ಡಿಸೈನ್‌ ಮಾಡಿಕೊಂಡಿದ್ದೆ. ಅದಕ್ಕೆ ಪೂರಕವಾಗಿ ಎಲ್ಲರೂ ಅನುಭವಿ ಕಲಾವಿದರಂತೆಯೇ ನಟಿಸಿದ್ದು ಹೆಮ್ಮೆಯ ಸಂಗತಿ.

* ‘ರಾಖಿ ಭಾಯ್’(ಯಶ್‌) ಪಾತ್ರದ ಶೂಟಿಂಗ್‌ ಎಷ್ಟು ಪೂರ್ಣಗೊಂಡಿದೆ?

ಯಶ್‌ ಪಾತ್ರವೇ ಈ ಕಥನದ ಕೇಂದ್ರ‌ಬಿಂದು. ಅವರ ಪಾತ್ರದ ಶೂಟಿಂಗ್‌ ಶೇಕಡ 50ರಷ್ಟು ಮಾತ್ರ ಪೂರ್ಣಗೊಂಡಿದೆ.

* ಅಧ್ಯಾಯ 2ರ ಮೇಲೆ ನಿಮ್ಮ ನಿರೀಕ್ಷೆಗಳೇನು?

ನಿರ್ಮಾಪಕ ವಿಜಯ್‌ ಕಿರಗಂದೂರು ಈ ಸಿನಿಮಾಕ್ಕೆ ದೊಡ್ಡ ಮೊತ್ತದ ಹಣ ಹೂಡಿದ್ದಾರೆ. ನಾಯಕ ಯಶ್ ಅವರು ಚಿತ್ರಕ್ಕೆ ಅಗತ್ಯವಿರುವಷ್ಟು ಡೇಟ್‌ ಕೊಟ್ಟಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳುವುದಷ್ಟೇ ನನ್ನ ಮುಂದಿರುವ ದೊಡ್ಡ ಜವಾಬ್ದಾರಿ. ಅದನ್ನು ಬಿಟ್ಟು ತಲೆಯಲ್ಲಿ ಬೇರೇನೂ ಇಲ್ಲ.

* ಸಿನಿಮಾ ಬಿಡುಗಡೆ ಯಾವಾಗ?

ಕಳೆದ ಎರಡೂ ತಿಂಗಳಿನಿಂದ ಮಳೆ ಸುರಿಯುತ್ತಿದೆ. ಇದರಿಂದ ಶೂಟಿಂಗ್‌ಗೆ ತೊಡಕಾಗಿದೆ. ಮಳೆ ಎಲ್ಲಿಯವರೆಗೆ ಸುರಿಯುತ್ತದೆ ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ. ಸ್ಥಗಿತಗೊಂಡ ಬಳಿಕ ಮತ್ತೆ ಚಿತ್ರೀಕರಣ ಆರಂಭಿಸುತ್ತೇವೆ. ಶೂಟಿಂಗ್‌ ಪೂರ್ಣಗೊಂಡ ಬಳಿಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಪೂರ್ಣಗೊಳ್ಳಬೇಕಲ್ಲವೇ? ಆ ಬಳಿಕವಷ್ಟೇ ಸಿನಿಮಾದ ಬಿಡುಗಡೆಯ ದಿನಾಂಕದ ಬಗ್ಗೆ ಮಾಹಿತಿ ಕೊಡಬಹುದು. ಸದ್ಯಕ್ಕೆ ಆ ಬಗ್ಗೆ ಏನನ್ನೂ ಹೇಳಲು ಆಗುವುದಿಲ್ಲ.

* ಸಿನಿಮಾಕ್ಕೆ ಕಥೆ ಹೊಸೆಯುವಾಗ ಯಾವ ಅಂಶಗಳಿಗೆ ಒತ್ತು ನೀಡುತ್ತೀರಿ?

ನಾನು ಪ್ರಾಮುಖ್ಯತೆ ಕೊಡುವುದು ಕಥೆಗಷ್ಟೇ. ಥಿಯೇಟರ್‌ನಲ್ಲಿ ಕುಳಿತು ಸಿನಿಮಾ ನೋಡುವ ಜನರಿಗೆ ಕಥೆಯಷ್ಟೇ ಮುಖ್ಯವಾಗಿರುತ್ತದೆ. ಅವರಿಗೆ ಪರದೆ ಮೇಲೆ ಅದು ಕಥೆಯಂತೆ ಕಾಣಿಸಬೇಕು. ಅದರಲ್ಲಿ ಕಮರ್ಷಿಯಲ್‌ ಎಲಿಮೆಂಟ್‌ ಇರಬೇಕು ಎಂದು ಮೊದಲಿಗೆ ಯೋಚಿಸುವುದಿಲ್ಲ. ಕಥೆ ಜನರಿಗೆ ಇಷ್ಟವಾಗುತ್ತದೆಯೇ ಎಂದು ಕಥೆಗಾರರಾಗಿ ನಾವು ಯೋಚಿಸುತ್ತೇವೆ. ಬಳಿಕ ಅದರೊಳಗಿನ ಕ್ಯಾರೆಕ್ಟರ್‌ಗಳು ಅವರ ಮನಸ್ಸಿಗೆ ನಾಟುತ್ತವೆಯೇ ಎಂದು ಅವಲೋಕಿಸುತ್ತೇವೆ. ಅದು ನಾನು ಅಂದುಕೊಂಡ ಸರಿದಾರಿಗೆ ಬಂದಾಗ ಅದಕ್ಕೊಂದು ಅಲಂಕಾರ ಮಾಡಲು ಕುಳಿತುಕೊಳ್ಳುತ್ತೇನೆ. ನಂತರ ಕಮರ್ಷಿಯಲ್‌ ಎಲಿಮೆಂಟ್‌ ತುಂಬುತ್ತೇನೆ.

* ಟಾಲಿವುಡ್‌ ನಟ ಮಹೇಶ್‌ ಬಾಬು ಅವರಿಗೂ ಒಂದು ಸಿನಿಮಾ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇದೆಯಲ್ಲ?

‘ಕೆಜಿಎಫ್‌ ಚಾಪ್ಟರ್‌ 2’ ಚಿತ್ರವಷ್ಟೇ ನನ್ನ ಮುಂದಿರುವ ಬಹುದೊಡ್ಡ ಜವಾಬ್ದಾರಿ. ಅದನ್ನು ತೃಪ್ತಿಯಾಗಿ ಪೂರ್ಣಗೊಳಿಸಬೇಕು. ಆ ಕೆಲಸವಷ್ಟೇ ನನ್ನ ತಲೆಯಲ್ಲಿದೆ. ಹಾಗಾಗಿ, ಉಳಿದ ಯಾವುದರ ಬಗ್ಗೆಯೂ ನಾನು ಮಾತನಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT