ಭಾನುವಾರ, ಜೂನ್ 20, 2021
29 °C

‘ಒಳ್ಳೆಯ ಹುಡುಗ’ ಪ್ರಥಮ್‌ ಭಯಂಕರ ಹಾರರ್‌!

ಕೆ.ಎಂ.ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಬಿಗ್‌ ಬಾಸ್‌ ಖ್ಯಾತಿಯ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ‘ಒಳ್ಳೆಯ ಹುಡುಗ’ ಪ್ರಥಮ್‌ ಅವರ ಮೂರನೇ ಸಿನಿಮಾ ‘ನಟ ಭಯಂಕರ’ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಭರದಿಂದ ನಡೆಯುತ್ತಿದೆ. ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುವ ಜತೆಗೆ ಪ್ರಥಮ್‌, ಪ್ರಥಮ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳ್ತಾ ಇದ್ದಾರೆ.

ಅವರ ಅಭಿನಯದ ಮೊದಲೆರಡು ಸಿನಿಮಾಗಳಾದ ‘ಎಂಎಲ್‌ಎ’, ‘ದೇವ್ರಂಥ ಮನುಷ್ಯ’ ನಿರೀಕ್ಷಿತ ಯಶಸ್ಸು ತಂದುಕೊಡದಿದ್ದರೂ ನಿರಾಸೆಯಲ್ಲಿ ಕೈಕಟ್ಟಿ ಕೂರದೆ, ನಟ ಭಯಂಕರ ಸಿನಿಮಾಕ್ಕೆ ಕೈಹಾಕಿದ್ದಾರೆ. ಮೂರನೇ ಪ್ರಯತ್ನದಲ್ಲಿ ಗೆದ್ದೇ ಗೆಲ್ಲುತ್ತೇನೆ ಎನ್ನುವ ವಿಶ್ವಾಸದಲ್ಲಿದ್ದಾರೆ ಈ ‘ಒಳ್ಳೆಯ ಹುಡುಗ’.

ನಾಯಕ ನಟನಾಗಿ ಪ್ರಥಮ್‌ ಈ ಚಿತ್ರದಲ್ಲಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿಯುವ ಗೆಟಪ್‌ನ ಟ್ರೇಲರ್‌ ನೋಡಿದರೆ, ‘ನಟ ಭಯಂಕರ’ ಸಿನಿಮಾಕ್ಕೆ ಸ್ವಲ್ಪ ದೊಡ್ಡಮಟ್ಟದಲ್ಲೇ ಬಂಡವಾಳ ಹೂಡಿದಂತಿದೆ. 

‘ದೆವ್ವ ಕುರುಡು, ಅದಕ್ಕೆ ಕಣ್ಣಿಲ್ಲ. ನನ್ನ ಕಣ್ಣಿಗೆ ದೆವ್ವ ಕಾಣಲ್ಲ. ಇದು ಉದಯ್‌ ಮೆಹ್ತಾ ಅವರ ಕಥೆಯ ಸಿನಿಮಾ. ಇದೊಂದು ಕಂ‌ಪ್ಲೀಟ್‌ ಹಾರಾರ್‌ ಕಾಮಿಡಿ ಸಿನಿಮಾ.....’ ಹೀಗೆ ಮಾತು ಆರಂಭಿಸಿದ ನಟ, ನಿರ್ದೇಶಕ ಪ್ರಥಮ್‌. ನನ್ನ ಮೊದಲೆರಡು ಸಿನಿಮಾಗಳು ನಾವು ಸರಿಯಾಗಿ ಮಾರ್ಕೆಟ್‌ ಮಾಡುವುದರಲ್ಲಿ ಎಡವಿದವು. ಆದರೆ, ನಟ ಭಯಂಕರ ಆ ರೀತಿ ಆಗುವುದಿಲ್ಲ’ ಎಂದು ಮಾತು ಆರಂಭಿಸಿದರು ಪ್ರಥಮ್‌.

ಫೈಟಿಂಗ್‌ ದೃಶ್ಯವೊಂದರ ಚಿತ್ರೀಕರಣದ ವೇಳೆ ಸ್ಟಂಟ್‌ ಬಳಸದೆ ‘ನೈಜ ಹೊಡೆದಾಟ’ ಮಾಡಲು ಹೋಗಿ ಪ್ರಥಮ್‌ ಪೆಟ್ಟು ತಿಂದು ಪ್ರಥಮ ಚಿಕಿತ್ಸೆ ಪಡೆದು, 15 ದಿನಗಳ ವಿಶ್ರಾಂತಿ ಪಡೆದುಕೊಳ್ಳಬೇಕಾಯಿತಂತೆ. ಈಗ ವಿಶ್ರಾಂತಿ ಮುಗಿಸಿ, ಮತ್ತೆ ಚಿತ್ರೀಕರಣದಲ್ಲಿ ತೊಡಗಿದ್ದಾರಂತೆ. 

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರು ‘ನಟ ಭಯಂಕರ’ ಸಿನಿಮಾ ಚಿತ್ರೀಕರಣ ಸೆಟ್‌ಗೆ ಭೇಟಿ ಕೊಟ್ಟು, ಪ್ರಥಮ್‌ನ ಬೆನ್ನುತಟ್ಟಿ ಹುರಿದುಂಬಿಸಿ ಬಂದಿದ್ದಾರಂತೆ.

‘ಎಂ.ಎಲ್.ಎ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡುವಾಗ ನಟ ಗಣೇಶ್, ‘ನಿನ್ನ ಸಿನಿಮಾ ಶೂಟಿಂಗ್‌ಗೆ ಒಂದು ಸಲ ಬರ್ತೀನಿ’ ಎಂದಿದ್ದರು. ಕೊಟ್ಟ ಮಾತಿನಂತೆ ಚಿತ್ರೀಕರಣದ ಸೆಟ್‌ಗೆ ಸರ್ಪ್ರೈಸ್ ಭೇಟಿ ಕೊಟ್ಟರು. ಅವರ ಆಗಮನ ನಮ್ ಶೂಟಿಂಗ್ ಮಧ್ಯೆ ಮಿಂಚು ಬಂದಂತಾಯಿತು. ಅವರು ಹೆಸರಿಗೆ ಮಾತ್ರ ಗೋಲ್ಡ್ ಅಲ್ಲ…ವ್ಯಕ್ತಿತ್ವದಲ್ಲೂ ಗೋಲ್ಡ್.. ನನ್ನ ಸಿನಿಮಾಕ್ಕೆ ಗಣೇಶ್‌ ಒಬ್ಬ ಅಣ್ಣನಂತೆ ಬೆನ್ನೆಲುಬಾಗಿ ನಿಂತಿದ್ದಾರೆ. ನನ್ನ ನಿರ್ದೇಶನದ ಸಿನಿಮಾವನ್ನು ತೆರೆ ಮೇಲೆ ನೋಡಲು ಕೌತುಕದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಭಯಂಕರವಾಗಿ ಯಶಸ್ವಿಯಾಗಲೆಂದೂ ಹರಿಸಿದ್ದಾರೆ’ ಎಂದು ಪ್ರಥಮ್ ಹೇಳಿಕೊಂಡರು. 

ಅಂದಹಾಗೆ ಈ ಸಿನಿಮಾದಲ್ಲಿ ನಾಯಕಿಯಾಗಿ ಹಿರೋಯಿನ್‌ ಸುಶ್ಮಿತಾ ಜೋಷಿ ಅಭಿನಯಿಸುತ್ತಿದ್ದಾರೆ. ಸುಶ್ಮೀತಾ ಅಭಿನಯಕ್ಕೆ ಗಣೇಶ್‌ ಕೂಡ ಭೇಷ್‌ ಎಂದಿದ್ದಾರಂತೆ. ಡೆಹರಾಡೂನ್‌ ಮೂಲದ ನಟಿಯಾದ ಸುಶ್ಮಿತಾ ಅವರು ವಿನಯ್‌ ರಾಜ್‌ಕುಮಾರ್‌ ಮೊದಲ ಚಿತ್ರ ‘ರನ್‌ ಆ್ಯಂಟನಿ’ ಚಿತ್ರದಲ್ಲಿ ಕನ್ನಡಕ್ಕೆ ಪದಾರ್ಪಣೆ ಮಾಡಿದ್ದರು. ಮೇಘನಾರಾಜ್‌ ಜತೆಗೆ ‘ನೂರೊಂದು ನೆನಪು’ ಚಿತ್ರದಲ್ಲೂ ನಟಿಸಿದ್ದಾರೆ.

ಈ ಸಿನಿಮಾಕ್ಕೆ ಉದ್ಯಮಿ ಉದಯ್‌ ಮೆಹ್ತಾ ಆರ್ಥಿಕ ಇಂಧನ ಒದಗಿಸಿದ್ದಾರೆ. ಈ ಸಿನಿಮಾಕ್ಕೆ ಥ್ರಿಲ್ಲರ್‌ ಮಂಜು ಅವರ ಸಾಹಸ ನಿರ್ದೇಶನವಿದೆ. ಹಿರಿಯ ನಟರಾದ ಶಂಕರ್ ಅಶ್ವಥ್, ಉಮೇಶ್, ಸತ್ಯಜಿತ್ ಮತ್ತು ಲೀಲಾವತಿ, ಸಾಯಿಕುಮಾರ್, ಕುರಿ ಪ್ರತಾಪ್, ಶೋಭರಾಜ್, ಬಿರಾದರ್, ನಿಹಾರಿಕ ಶಣೈ, ಚಂದನ್ ರಾಘವೇಂದ್ರ, ಅನುಪಮಾ ತಾರಾಬಳಗದಲ್ಲಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು