ಶುಕ್ರವಾರ, ಆಗಸ್ಟ್ 6, 2021
25 °C

ಅತ್ಯಾಚಾರ ಬೆದರಿಕೆ, ಸೈಬರ್‌ಬುಲ್ಲಿಂಗ್‌ ವಿರುದ್ಧ ಧ್ವನಿ ಎತ್ತಿದ ಎಕ್ತಾ ಕಪೂರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ಕೆಲದಿನಗಳ ಹಿಂದೆ ಹಿಂದಿಯ ‘ಬಿಗ್‌ಬಾಸ್‌ ಸೀಸನ್‌ – 13’ರ ಸ್ಪರ್ಧಿ, ಟಿಕ್‌ಟಾಕ್ ಸ್ಟಾರ್ ವಿಕಾಸ್ ಪಾಟಕ್‌ ನಿರ್ಮಾಪಕಿ ಹಾಗೂ ಬಾಲಾಜಿ ಟೆಲಿಫಿಲ್ಮ್ಸ್‌ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಆಗಿರುವ ಎಕ್ತಾ ಕಪೂರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆ ದೂರಿನಲ್ಲಿ ‘ಎಕ್ತಾ ಕಪೂರ್ ತಮ್ಮ ವೆಬ್‌ಸಿರೀಸ್‌ ತ್ರಿಬಲ್‌ ಏಕ್ಸ್‌ – 2ನಲ್ಲಿ ಸೈನ್ಯಕ್ಕೆ ಅವಮಾನ ಮಾಡಿದ್ದಾರೆ, ಆ ಕಾರಣಕ್ಕೆ ಅವರು ಸೈನ್ಯದ ಬಳಿ ಕ್ಷಮೆ ಕೇಳಬೇಕು’ ಎಂದು ವಿಕಾಸ್ ಆಗ್ರಹಿಸಿದ್ದರು. ಆ ವೆಬ್‌ಸಿರೀಸ್‌ನಲ್ಲಿ ಸೈನ್ಯದ ಅಧಿಕಾರಿಯೊಬ್ಬರ ಮಡದಿ ತನ್ನ ಪ್ರಿಯಕರನಿಗೆ ಗಂಡನ ಸಮವಸ್ತ್ರವನ್ನು ಧರಿಸಲು ನೀಡುತ್ತಾಳೆ, ನಂತರದಲ್ಲಿ ಸಮವಸ್ತ್ರವನ್ನು ಹರಿದು ಹಾಕುವ ದೃಶ್ಯವೂ ಇದೆ. ಆ ಕಾರಣಕ್ಕೆ ಯುಟ್ಯೂಬ್ ಸ್ಟಾರ್ ಕೂಡ ಆಗಿರುವ ವಿಕಾಸ್ ‘ಈ ದೃಶ್ಯವನ್ನು ಡಿಲಿಟ್ ಮಾಡಬೇಕು ಹಾಗೂ ಎಕ್ತಾ ಕಪೂರ್ ಸೈನ್ಯದ ಬಳಿ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದರು. ಆದರೆ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯದ್ದೇ ತಿರುವು ಪಡೆದುಕೊಂಡಿತ್ತು. 

ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಎಕ್ತಾ ಕಪೂರ್‌ಗೆ ಅತ್ಯಾಚಾರದ ಬೆದರಿಕೆಗಳು ಬಂದಿದ್ದವು. ಅವ್ಯಾಚ್ಯ ಶಬ್ದಗಳಿಂದ ಆಕೆಯನ್ನು ನಿಂದಿಸಿದ್ದು ಅಲ್ಲದೇ ಕೆಟ್ಟದಾಗಿ ಟ್ರೋಲ್ ಮಾಡಲು ಆರಂಭಿಸಿದ್ದರು. ಆದರೆ ಈ ಬಗ್ಗೆ ಸುಮ್ಮನೆ ಕೂರದ ನಿರ್ಮಾಪಕಿ ಟ್ರೋಲಿಗರ ವಿರುದ್ಧ ಸಾರ್ವಜನಿಕವಾಗಿ ವಿಮಾತನಾಡಿದ್ದಾರೆ. ಲೈವ್ ಚಾಟ್ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಎಕ್ತಾ ’ವೆಬ್‌ಸೀರಿಸ್‌ನಲ್ಲಿನ ಆ ದೃಶ್ಯವನ್ನು ತಮ್ಮ ತಂಡ ತೆಗೆದುಹಾಕಿದೆ. ನನಗೆ ಯಾರ ಭಾವನೆಗಳಿಗೂ ನೋವು ಮಾಡುವುದು ಇಷ್ಟವಿಲ್ಲ. ಆದರೆ ನನ್ನ ವಿರುದ್ಧ ನಡೆಯುತ್ತಿರುವ ಸೈಬರ್ ಬುಲ್ಲಿಂಗ್ ಅನ್ನು ನಾನು ಸಹಿಸುವುದಿಲ್ಲ‘ ಎಂದಿದ್ದಾರೆ.

’ತನ್ನನ್ನು ತಾನು ಈ ವರ್ಷದ ಅತಿ ಸಂಭಾವಿತ ದೇಶಭಕ್ತ ಎಂದು ಭಾವಿಸಿರುವ ವ್ಯಕ್ತಿ ನನ್ನನ್ನು ಹಾಗೂ ನನ್ನ ತಾಯಿಯನ್ನು ಅವ್ಯಾಚ್ಯವಾಗಿ ನಿಂದಿಸಿದ್ದಾನೆ. ಜೊತೆಗೆ ಈಗ ನೇರವಾಗಿ ಸಾಮಾಜಿಕ ಜಾಲತಾಣದಲ್ಲಿ ಅತ್ಯಾಚಾರದ ಬೆದರಿಕೆ ಹಾಕಿದ್ದಾನೆ. ಆತ ಕಮೆಂಟ್‌ನಲ್ಲಿ ಸೈನ್ಯ ಹಾಗೂ ವೆಬ್‌ಸಿರೀಸ್‌ನಲ್ಲಿರುವ ಲೈಂಗಿಕ ವಿಷಯಗಳ ಬಗ್ಗೆ ಮಾತನಾಡದೇ ‘‘ಅವಳನ್ನು, ಅವಳ ಮಗನನ್ನು ಹಾಗೂ 71 ವರ್ಷದ ತಾಯಿಯನ್ನು ಅತ್ಯಾಚಾರ ಮಾಡಬೇಕು’’ ಎಂದಿದ್ದಾನೆ. ಅಂದರೆ ಅವನ ಅರ್ಥದಲ್ಲಿ ಲೈಂಗಿಕತೆ ಕೆಟ್ಟದ್ದು; ಅತ್ಯಾಚಾರ ಒಳ್ಳೆಯದು ಎಂದು ಅರ್ಥ ಅಲ್ಲವೇ?‘ ಎಂದು ಪ್ರಶ್ನಿಸಿದ್ದಾರೆ. 

‘ಈ ರೀತಿ ಕೇವಲ ನನಗೆ ಮಾತ್ರವಲ್ಲ ಯಾವುದೇ ಹೆಣ್ಣಿಗೂ ಆಗಬಹುದು. ಆದರೆ ಅದನ್ನು ಸಹಿಸಿಕೊಂಡು ಸುಮ್ಮನಿರುವುದು ಸರಿಯಲ್ಲ. ಮಾರ್ಯಾದೆಗೆ ಅಂಜಿ ಟ್ರೋಲಿಗರನ್ನು ಸುಮ್ಮನೆ ಬಿಡುವುದು ಸರಿಯಲ್ಲ. ನಾನು ಸೈಬರ್‌ಬುಲ್ಲಿಂಗ್ ವಿರುದ್ಧ ಹೋರಾಡಲು ನಿರ್ಧರಿಸಿದ್ದೇನೆ.

ನನ್ನಂಥವಳಿಗೆ ಬೆತ್ತಲೆ ಫೋಟೊವನ್ನು ಅಂತರ್ಜಾಲದಲ್ಲಿ ಹಾಕುತ್ತೇವೆ, ನಿನ್ನ ಮರ್ಯಾದೆ ತೆಗೆಯುತ್ತೇವೆ ಎಂದು ಬೆದರಿಕೆ ಹಾಕುವವರು ನಾಳೆ ಬೇರೆ ಹುಡುಗಿಯರಿಗೆ ಹೀಗೆ ಮಾಡುವುದಿಲ್ಲ ಎನ್ನಲು ಹೇಗೆ ಸಾಧ್ಯ. ಜೊತೆಗೆ ಒಬ್ಬ ವ್ಯಕ್ತಿಯಾಗಿ ಹಾಗೂ ಒಂದು ಸಂಸ್ಥೆಯಾಗಿ ನಾವು ಭಾರತೀಯ ಸೈನ್ಯದ ಮೇಲೆ ಅಪಾರ ಗೌರವ ಹೊಂದಿದ್ದೇವೆ. ನಮ್ಮ ರಕ್ಷಣೆ ಹಾಗೂ ಒಳಿತಿಗಾಗಿ ಸೇನೆ ಶ್ರಮಿಸುತ್ತಿದೆ. ಯಾವುದೇ ಸೇನಾ ಸಂಸ್ಥೆ ನಮ್ಮ ಸಂಸ್ಥೆಯ ಬಳಿ ಕ್ಷಮೆ ಕೇಳಲು ಆಗ್ರಹಿಸಿದರೆ ಖಂಡಿತ ನಾವು ಕ್ಷಮೆ ಕೇಳಲು ಸಿದ್ಧರಿದ್ದೇವೆ. ಆದರೆ ನಾಗರಿಕತೆಯಿಲ್ಲದೆ ಅತ್ಯಾಚಾರ ಬೆದರಿಕೆ ಹಾಕುವ ಮಂದಿಗೆ ನಾವು ತಲೆ ಬಾಗುವುದಿಲ್ಲ‘ ಎಂದು ದಿಟ್ಟವಾಗಿ ನುಡಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು