ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾವ್ರ ಬಯೋಪಿಕ್‌ಗೆ ನಿರ್ಧರಿಸಿದ್ದ ಪುನೀತ್ ರಾಜ್‌ಕುಮಾರ್‌

Last Updated 29 ಅಕ್ಟೋಬರ್ 2021, 10:28 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಿತ್ರರಂ‌ಗ ಅಭಿವೃದ್ಧಿ ಕಾಣಬೇಕಾದರೆ ಹೊಸಬರು ಚಿತ್ರರಂಗ ಪ್ರವೇಶಿಸಬೇಕು ಎಂಬುದು ‘ಪವರ್‌ ಸ್ಟಾರ್‌’ ಪುನೀತ್ ರಾಜ್‌ಕುಮಾರ್‌ ಅವರ ಹಂಬಲವಾಗಿತ್ತು. ಒಳ್ಳೆಯ ಸ್ಕ್ರಿಪ್ಟ್‌ಗಳಿದ್ದರೆ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಗೆಲ್ಲುತ್ತದೆ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು.

ಕನ್ನಡ ಚಿತ್ರರಂಗದಲ್ಲಿ ವರ್ಷವೊಂದಕ್ಕೆ ನಿರ್ಮಾಣವಾಗುತ್ತಿರುವ ಸಿನಿಮಾಗಳ ಸಂಖ್ಯೆ 200 ದಾಟುತ್ತಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಹೊಸಬರು ಪ್ರವೇಶಿಸುತ್ತಿದ್ದಾರೆ. ಅವರಿಗೆ ಭೂಮಿಕೆ ಒದಗಿಸಲು ಪುನೀತ್‌ ಅವರು ಪಿಆರ್‌ಕೆ ಪ್ರೊಡಕ್ಷನ್‌ (ಪಾರ್ವತಮ್ಮ ರಾಜ್‌ಕುಮಾರ್‌ ಪ್ರೊಡಕ್ಷನ್‌) ಸ್ಥಾಪಿಸಿದ್ದರು. ಅವರ ಪತ್ನಿ ಅಶ್ವಿನಿ ಇದರ ಉಸ್ತುವಾರಿ ಹೊತ್ತಿದ್ದರು.

2019ರಲ್ಲಿ ಮೊದಲ ಬಾರಿಗೆ ಈ ಪ್ರೊಡಕ್ಷನ್‌ನಡಿ ‘ಕವಲುದಾರಿ’ ಸಿನಿಮಾವನ್ನು ನಿರ್ಮಿಸಿದ್ದರು. ಇದನ್ನು ನಿರ್ದೇಶಿಸಿದ್ದು ಹೇಮಂತ್‌ ಎಂ. ರಾವ್‌. ಒಂದು ಕೋನದಲ್ಲಿ ಕ್ರೈಮ್‌ ಥ್ರಿಲ್ಲರ್‌ನಂತೆ; ಮತ್ತೊಂದು ಆಯಾಮದಲ್ಲಿ ಆತ್ಮವಿಮರ್ಶೆಯ ಸೂಜಿಮೊನೆಯಂತಿದ್ದ ಈ ಸಿನಿಮಾದ ಚಿತ್ರಕಥೆ ಕನ್ನಡ ಸಿನಿಮಾ ರಸಿಕರಿಗೆ ಮೋಡಿ ಮಾಡಿತ್ತು. ತಮ್ಮ ಪ್ರೊಡಕ್ಷನ್‌ನಡಿ ನಿರ್ಮಾಣಗೊಂಡ ಮೊದಲ ಸಿನಿಮಾಕ್ಕೆ ಪ್ರೇಕ್ಷಕರಿಂದ ಸಿಕ್ಕಿದ ಉತ್ತಮ ಪ್ರತಿಕ್ರಿಯೆಗೆ ಅಪ್ಪು ಖುಷಿಗೊಂಡಿದ್ದರು.

ಆ ನಂತರ ಅವರು ಪಿಆರ್‌ಕೆ ಪ್ರೊಡಕ್ಷನ್‌ನಡಿ ‘ಮಾಯಾಬಜಾರ್ 2016', ‘ಲಾ’,‘ಫ್ರೆಂಚ್‌ ಬಿರಿಯಾನಿ’ ಸಿನಿಮಾಗಳನ್ನು ನಿರ್ಮಿಸಿದ್ದರು. ಈ ಸಿನಿಮಾಗಳು ಒಟಿಟಿ ಮೂಲಕ ಬಿಡುಗಡೆಯಾಗಿದ್ದು ವಿಶೇಷ. ಇದೇ ಪ್ರೊಡಕ್ಷನ್‌ನಡಿ ಎಸ್‌. ಅರ್ಜುನ್‌ಕುಮಾರ್‌ ನಿರ್ದೇಶಿಸಿರುವ ‘ಫ್ಯಾಮಿಲಿ ಪ್ಯಾಕ್‌’ ಚಿತ್ರ ಬಿಡುಗಡೆಯ ಹಾದಿಯಲ್ಲಿದೆ.

ಒಂದು ಕಾಲದಲ್ಲಿ ಬೆಳ್ಳಿ ಪರದೆಯಲ್ಲಿ ಮಿಂಚಿದ ಸಿನಿಮಾ ನಟ, ನಟಿಯರ ಜೀವನಗಾಥೆ ತೆರೆಯ ಮೇಲೆ ಬರುತ್ತಿದೆ. ಹಾಗಾಗಿಯೇ, ತನ್ನ ತಂದೆಯಾದ ರಾಜ್‌ಕುಮಾರ್‌ ಅವರ ಬಯೋಪಿಕ್‌ ನಿರ್ಮಿಸುವ ಆಸೆ ಪುನೀತ್‌ ಅವರಲ್ಲಿತ್ತು. ಪಿಆರ್‌ಕೆ ಪ್ರೊಡಕ್ಷನ್‌ನಡಿಯೇ ನಿರ್ಮಿಸಿರುವ ಅಭಿಲಾಷೆ ಹೊಂದಿದ್ದರು. ಈ ಕುರಿತು ಅವರು ಪತ್ರಕರ್ತರ ಮುಂದೆ ಮನದಾಳ ಹಂಚಿಕೊಂಡಿದ್ದು ಉಂಟು.

‘ಅಪ್ಪಾಜಿಯ ಬಯೋಪಿಕ್‌ ಮಾಡುವ ಆಸೆ ಇದೆ. ಅದೊಂದು ದೊಡ್ಡ ಪ್ರಾಜೆಕ್ಟ್‌. ಸೂಕ್ತ ಕಲಾವಿದರು ಬೇಕು. ಅದಕ್ಕೊಂದು ಯೋಜನೆ ರೂಪುಗೊಳ್ಳಬೇಕು. ಅಂತಹ ಅವಕಾಶ ಲಭಿಸಿದರೆ ಖಂಡಿತ ಹಿಂದೆ ಸರಿಯುವುದಿಲ್ಲ’ ಎಂದು ಅಪ್ಪು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT