ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ನಟ ಪುನೀತ್‌ಗೆ ಅಭಿಮಾನದ ಹೂಮಳೆ

‘ಯುವರತ್ನ’ ಸಿನಿಮಾ ಪ್ರಚಾರ ಸಭೆಗೆ ಸೇರಿದ್ದ ಅಪಾರ ಜನ
Last Updated 22 ಮಾರ್ಚ್ 2021, 14:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ‘ಯುವರತ್ನ’ ಸಿನಿಮಾ ಪ್ರಚಾರದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸಭೆಗೆ ಆಗಮಿಸಿದ ನಟ ಪುನೀತ್‌ ರಾಜಕುಮಾರ್‌ ಹಾಗೂ ‘ಡಾಲಿ’ ಎಂದೇ ಖ್ಯಾತರಾಗಿರುವ ಧನಂಜಯ್‌ ಅವರಿಗೆ ಅಭಿಮಾನಿಗಳು ಹೂಮಳೆ ಸುರಿಸಿದರು.

ವೇದಿಕಯ ಸುತ್ತ ಜೆಸಿಬಿ ಯಂತ್ರಗಳಲ್ಲಿ ತುಂಬಿದ್ದ ತರಹೇವಾರಿ ಹೂಗಳನ್ನು ಸುರಿದು ಅಭಿಮಾನ ಮೆರೆದರು. 200 ಕೆ.ಜಿ. ತೂಕದ ಸೇಬು ಹಣ್ಣಿನ ಹಾರವನ್ನು ಕ್ರೇನ್‌ ನೆರವಿನಿಂದ ಹಾಕಲು ಪ್ರಯತ್ನಿಸಿದರು. ‘ಅಪ್ಪು.. ಅಪ್ಪು..’ ಎಂಬ ಜಯಘೋಷ ಮೈದಾನದಲ್ಲಿ ಮಾರ್ಧನಿಸಿತು.

‘ಯುವರತ್ನ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಸಿನಿಮಾ ಪ್ರಚಾರಕ್ಕೆ ಚಿತ್ರತಂಡ ರಾಜ್ಯ ಪ್ರವಾಸ ಮಾಡುತ್ತಿದೆ. ಬಳ್ಳಾರಿ ಜಿಲ್ಲೆಯಿಂದ ಮಧ್ಯಾಹ್ನ 1.30ಕ್ಕೆ ಬರಬೇಕಿದ್ದ ಚಿತ್ರತಂಡ ಮಧ್ಯಾಹ್ನ 3.30ಕ್ಕೆ ಮೈದಾನಕ್ಕೆ ಬಂದಿತು. ಬಿರುಬಿಸಿಲಿನಲ್ಲಿ ಎರಡು ಗಂಟೆಗೂ ಹೆಚ್ಚು ಹೊತ್ತು ಕಾದಿದ್ದ ಜನರು ಪುನೀತ್‌ ಕಂಡೊಡನೆ ಹುಚ್ಚೆದ್ದು ಕುಣಿದರು.

ಮೈದಾನದಲ್ಲಿ ಸೇರಿದ್ದ ಜನಸ್ತೋಮದಲ್ಲಿ ಯುವಸಮೂಹವೇ ಹೆಚ್ಚಾಗಿತ್ತು. ಅಲ್ಲಲ್ಲಿ ನಿಂತಿದ್ದ ಮಹಿಳೆಯರು, ಯುವತಿಯರು ಪುನೀತ್‌ ಕಣ್ತುಂಬಿಕೊಳ್ಳಲು ಮುಂದಾದರು. ವೇದಿಕೆಯ ಮುಂಭಾಗದಲ್ಲಿ ನಿರ್ಮಿಸಿದ್ದ ರ್‍ಯಾಂಪ್‌ ಮೇಲೆ ಚಿತ್ರತಂಡ ಹೆಜ್ಜೆ ಹಾಕುತ್ತಿದ್ದಂತೆ ಎಲ್ಲೆಡೆ ಸಿಳ್ಳೆ, ಕೇಕೆಗಳು ಮೊಳಗಿದವು. ‘ನಮಸ್ಕಾರ ಚಿತ್ರದುರ್ಗ’ ಎನ್ನುತ್ತಲೇ ಮಾತುಗಳು ಆರಂಭವಾದವು.

ಕೈಗೆ ಮೈಕ್‌ ಎತ್ತಿಕೊಂಡ ಅಪ್ಪು, ‘ಹೇಗಿದ್ದೀರಿ...’ ಎಂದು ಕೇಳುತ್ತಿದ್ದಂತೆ ಅಭಿಮಾನದಿಂದಲೇ ಜನರು ಪ್ರತಿಕ್ರಿಯಿಸಿದರು. ‘ನಿಮ್ಮನ್ನು ನೋಡಿ ಖುಷಿ ಆಯ್ತು. ಎಲ್ಲ ಊರು ಸುತ್ತಿ ಇಲ್ಲಿಗೆ ಬರುವ ಹೊತ್ತಿಗೆ ಕೊಂಚ ತಡವಾಯಿತು. ಇದಕ್ಕೆ ಕ್ಷಮೆಯಿರಲಿ’ ಎಂದರು.

‘ಚಿತ್ರದುರ್ಗ ಎಂದಾಕ್ಷಣ ಐತಿಹಾಸಿಕ ಕಲ್ಲಿನ ಕೋಟೆ ನೆನಪಾಗುತ್ತದೆ. ‘ಹುಡುಗರು’ ಸಿನಿಮಾ ಚಿತ್ರೀಕರಣಕ್ಕೆ ಕೋಟೆಯಲ್ಲಿ ಅವಕಾಶ ಸಿಕ್ಕಿತ್ತು. ಸುತ್ತಲಿನ ಹಲವು ಊರುಗಳಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ‘ದೊಡ್ಮನೆ ಹುಡುಗ’ ಸಿನಿಮಾ ಚಿತ್ರೀಕರಣಕ್ಕೂ ಇಲ್ಲಿಗೆ ಬಂದಿದ್ದೆ’ ಎಂದು ನೆನಪಿಸಿಕೊಂಡರು.

‘ಯುವರತ್ನ ಸಿನಿಮಾ ಯುವ ಸಮೂಹಕ್ಕೆ ಸಂಬಂಧಿಸಿದೆ. ಶಿಕ್ಷಣ, ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಸಿನಿಮಾ ರೂಪಿಸಲಾಗಿದೆ. ಯುವಕರಿಗೆ ಉತ್ತಮ ಸಂದೇಶವಿದ್ದು, ಕುಟುಂಬ ಸಹಿತ ವೀಕ್ಷಿಸಬಹುದಾದ ಚಿತ್ರ. ಸಿನಿಮಾ ವೀಕ್ಷಿಸಿ, ನಿಮ್ಮ ಪ್ರೀತಿ ಮತ್ತು ವಿಶ್ವಾಸಕ್ಕೆ ಚಿರಋಣಿ’ ಎಂದು ಹೇಳಿದರು.

ಕೋವಿಡ್‌ ಬಗ್ಗೆ ಎಚ್ಚರಿಕೆ

ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪುನೀತ್‌ ರಾಜಕುಮಾರ್‌ ಕೋವಿಡ್‌ ನಿಯಂತ್ರಣಕ್ಕೆ ಮುನ್ನೆಚರಿಕೆ ಕೈಗೊಳ್ಳುವಂತೆ ಸಲಹೆ ನೀಡಿದರು.

‘ಇಷ್ಟೊಂದು ಜನ ಸೇರಿದ್ದೀರಿ. ಆರೋಗ್ಯದ ಕಡೆಗೆ ಗಮನ ಕೊಡಬೇಕು. ಎಲ್ಲರೂ ಮಾಸ್ಕ್‌ ಧರಿಸಬೇಕು. ಅಂತರ ಕಾಯ್ದುಕೊಳ್ಳುವುದೇ ಅತ್ಯುತ್ತಮ ಔಷಧ. ಜನಸಂದಣಿ ಉಂಟಾಗದಂತೆ ನೋಡಿಕೊಳ್ಳಿ’ ಎಂದು ಹೇಳಿದರು.

ನಿರ್ದೇಶಕ ಸಂತೋಷ್‌ ಆನಂದರಾಮ್‌, ಜೆಡಿಎಸ್ ಮುಖಂಡ ಕಾಂತರಾಜ್‌, ಅಭಿಮಾನಿಗಳ ಸಂಘದ ಮೋಹನ್‌ ಇದ್ದರು.

* ಅಭಿಮಾನಿಗಳನ್ನು ಕಂಡು ತುಂಬಾ ಖುಷಿಯಾಗಿದೆ. ಏ.1ರಂದು ಸಿನಿಮಾ ಬಿಡುಗಡೆ ಆಗಲಿದೆ. ಅಂದು ಹಬ್ಬದ ವಾತಾವರಣ ನಿರ್ಮಾಣವಾಗಲಿ. ಎಲ್ಲರೂ ಸಿನಿಮಾ ನೋಡಿ, ಮತ್ತೊಮ್ಮೆ ಬರುತ್ತೇವೆ.

–ಡಾಲಿ ಧನಂಜಯ್‌, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT