ಗುರುವಾರ , ಮಾರ್ಚ್ 30, 2023
21 °C
ಅರಮನೆ ಮೈದಾನದಲ್ಲಿ ಪುನೀತ್ 12 ನೇ ದಿನದ ಕಾರ್ಯಕ್ರಮ

ಪುನೀತ್: ‘ಅಭಿ’ಮಾನದ ಭೋಜನಕ್ಕೆ ಹರಿದು ಬಂದ ಅಭಿಮಾನಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಾಡಿನಾದ್ಯಂತ ಮತ್ತೆ ಹರಿದು ಬಂದು ಒಂದೆಡೆ ಸೇರಿದ ಅಭಿಮಾನದ ಹೊಳೆ. ಮೇರೆ ಮೀರಿದ ಜಯಘೋಷ, ಅಭಿಮಾನದ ಹರಿವಿಗೆ ಸಾವಿರಾರು ನದಿಗಳು... ಎಂಬ ಹೊಸ ಭಾವನಾತ್ಮಕ ರೂಪಕಕ್ಕೆ ಪುನೀತ್‌ ಪುಣ್ಯಸ್ಮರಣೆಯ 12ನೇ ದಿನ ಸಾಕ್ಷಿಯಾಯಿತು.

ಪುಣ್ಯಸ್ಮರಣೆಯ ಅಂಗವಾಗಿ ಮಂಗಳವಾರ ಸಾರ್ವಜನಿಕ ಅನ್ನಸಂತರ್ಪಣೆ ನಗರದ ಅರಮನೆ ಮೈದಾನದ ‘ತ್ರಿಪುರವಾಸಿನಿ’ ಅಂಗಣದಲ್ಲಿ ನಡೆಯಿತು. ಇದೇ ವೇಳೆ ಅರಮನೆ ಮೈದಾನದ ಇನ್ನೊಂದು ಪಾರ್ಶ್ವದಲ್ಲಿ ರಕ್ತದಾನ ಶಿಬಿರವೂ ನಡೆಯಿತು.

‘ಪುನೀತ್‌ ಅವರಿಗೆ ಅಭಿಮಾನದ ಪ್ರಾರ್ಥನೆ ಸಲ್ಲಬೇಕು. ಅವರನ್ನು ಪ್ರೀತಿಯಿಂದ ಕಳುಹಿಸಿಕೊಡಲೇಬೇಕಾದ ಸಂದರ್ಭವಿದು. ಹಾಗಾಗಿ ಈ ಭೋಜನವನ್ನು ಊಟ ಎಂದು ಭಾವಿಸದೇ ಪ್ರಸಾದ ಎಂಬ ಭಾವದಲ್ಲಿ ಸ್ವೀಕರಿಸಿದ್ದೇವೆ’ ಎಂದು ಮಂಡ್ಯದ ಅಭಿಮಾನಿಯೊಬ್ಬರು ಹೇಳಿದರು. 

‘ನಾವು ಈ ರೀತಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಅವರ ಮೇಲಿನ ಅಭಿಮಾನದೊಂದಿಗೆ ಬಂದಿದ್ದೇವೆ. ಪುನೀತ್‌ ಅವರಿಲ್ಲದ ಖಾಲಿತನ ನಮ್ಮನ್ನು ಆವರಿಸಿದೆ’ ಎಂದು ಲಗ್ಗೆರೆಯಿಂದ ಬಂದ ಅಭಿಮಾನಿಯೊಬ್ಬರು ಹೇಳಿದರು. 

ಪುನೀತ್‌ ಪತ್ನಿ ಅಶ್ವಿನಿ, ನಟ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಅಭಿಮಾನಿಗಳಿಗೆ ಊಟ ಬಡಿಸಿದರು. ಬಳಿಕ ಶಿವರಾಜ್‌ಕುಮಾರ್‌ ರಕ್ತದಾನ ಮಾಡಿದರು. ಅನ್ನಸಂತರ್ಪಣೆಗೆ ಚಾಲನೆ ನೀಡಿದ ಬಳಿಕ ಭಾವುಕರಾದ ಅಶ್ವಿನಿ ಮನೆಗೆ ವಾಪಸಾದರು.

ಊಟ ಮಾಡುತ್ತಿದ್ದ ಅಭಿಮಾನಿಗಳನ್ನು ಖುದ್ದಾಗಿ ಮಾತನಾಡಿಸಿದ ಶಿವರಾಜ್‌ಕುಮಾರ್‌, ‘ಸಾವಕಾಶವಾಗಿ ಊಟ ಮಾಡಿ’ ಎಂದು ಕೋರಿದರು. 

ಪುನೀತ್‌ ಮಕ್ಕಳಾದ ಧೃತಿ, ವಂದನಾ ಸೇರಿದಂತೆ ಡಾ.ರಾಜ್‌ ಕುಟುಂಬದ ಎಲ್ಲ ಸದಸ್ಯರು ಭಾಗವಹಿಸಿದ್ದರು. 

‘ಪುನೀತ್‌ ಹೆಸರಲ್ಲಿ ಈ ರೀತಿ ಊಟ ಹಾಕಬೇಕಾಗುತ್ತದೆ ಎಂಬ ಪರಿಸ್ಥಿತಿ ಬರುತ್ತದೆ ಅಂದುಕೊಂಡಿರಲಿಲ್ಲ. ಬಹುಶಃ ದೇವರ ಇಚ್ಛೆ ಅದೇ ಆಗಿತ್ತೇನೋ. ಪುನೀತ್‌ನಂತಹ ತಮ್ಮನನ್ನು ಪಡೆಯಬೇಕಾದರೆ ನಾನು ಪುಣ್ಯ ಮಾಡಿದ್ದೇನೆ. ಪುನೀತ್‌ನ ಒಳ್ಳೆಯ ಕೆಲಸಗಳು ಸ್ವತಃ ಕುಟುಂಬಕ್ಕೇ ಗೊತ್ತಿರಲಿಲ್ಲ ಅಂದರೆ ನೀವೇ ಅರ್ಥ ಮಾಡಿಕೊಳ್ಳಿ’ ಎಂದು ಶಿವರಾಜ್‌ಕುಮಾರ್‌ ಹೇಳಿದರು. 

‘ಅಭಿಮಾನಿಗಳನ್ನು ದೇವರು ಎಂದು ಇದೇ ಕಾರಣಕ್ಕೆ ಅಪ್ಪಾಜಿ ಹೇಳಿದ್ದರು. ಅಭಿಮಾನಿಗಳು ಇದ್ದರೆ ಮಾತ್ರ ನಾವು. ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದೇವೆ. ಎಷ್ಟು ಜನಕ್ಕೆ ಆಗುತ್ತೋ ಅಷ್ಟು ಜನಕ್ಕೆ ಭೋಜನದ ವ್ಯವಸ್ಥೆ ಮಾಡುತ್ತೇವೆ. ಯಾರೂ ಕೂಡಾ ಗೊಂದಲಕ್ಕೆ ಒಳಗಾಗಬಾರದು’ ಎಂದರು. ರಾಘವೇಂದ್ರ ರಾಜ್‌ಕುಮಾರ್‌ ಕೂಡಾ ಶಿವರಾಜ್‌ ಕುಮಾರ್‌ ಮಾತನ್ನೇ ಪುನರುಚ್ಛರಿಸಿ, ‘ಅಭಿಮಾನಿಗಳಿಗೆ ಊಟ ಹಾಕಬೇಕು ಎಂಬುದು ಅಪ್ಪು ಅವರ ಕನಸೂ ಆಗಿತ್ತು’ ಎಂದರು.

ಸುಮಾರು 30 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದ್ದರು. ಸಸ್ಯಾಹಾರ, ಮಾಂಸಾಹಾರ ಎರಡು ವಿಭಾಗಗಳಿದ್ದವು. ಮಾಂಸಾಹಾರ ಭೋಜನ ವಿಭಾಗದಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚು ಇತ್ತು. ಅಪ್ಪು ಅವರಿಗೆ ಪ್ರಿಯವಾದ ಖಾದ್ಯಗಳನ್ನೇ ಅಭಿಮಾನಿಗಳಿಗೆ ಬಡಿಸಲಾಯಿತು. 

ನೂರಾರು ಪೊಲೀಸರು ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಬ್ಯಾರಿಕೇಡ್‌, ಭದ್ರತಾ ವ್ಯವಸ್ಥೆ ಮಾಡಿದ್ದರು.

ಇದನ್ನೂ ಓದಿ: ಇಂದು ಶಂಕರ್‌ ನಾಗ್‌ ಜನ್ಮದಿನ: ನೆಚ್ಚಿನ ನಟನಿಗೆ ನುಡಿನಮನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು