ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪು ಜತೆ ಅಮೋಘ 'ಗಂಧದಗುಡಿ': ನೆನಪುಗಳ ಬುತ್ತಿ ಬಿಚ್ಚಿಟ್ಟ ಅಮೋಘವರ್ಷ

Last Updated 9 ಡಿಸೆಂಬರ್ 2021, 20:00 IST
ಅಕ್ಷರ ಗಾತ್ರ

ಡಾ.ರಾಜ್‌ಕುಮಾರ್‌ ಹಾಗೂ ವಿಷ್ಣುವರ್ಧನ್‌ ನಟನೆಯ ‘ಗಂಧದಗುಡಿ’ಯ 50ರ ಹೊಸ್ತಿಲಿನಲ್ಲಿ, ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ‘ಗಂಧದಗುಡಿ’ ಜನ್ಮತಾಳಿದೆ. ಕರುನಾಡಿನ ವನ್ಯಲೋಕದಲ್ಲಿ ಹಲವು ಸಂದೇಶಗಳನ್ನು ನೀಡುತ್ತಾ ಅಪ್ಪು ತೆರೆ ಮೇಲೆ ಜೀವಿಸಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ ಈ ಚಿತ್ರ 2022ರಲ್ಲಿ ತೆರೆ ಕಾಣಲಿದೆ. ಅಪ್ಪು ಜತೆಗೆ ಈ ಪಯಣದಲ್ಲಿ ಹೆಜ್ಜೆ ಇಟ್ಟ ಅಮೋಘವರ್ಷ ‘ಸಿನಿಮಾ ಪುರವಣಿ’ ಜೊತೆಗೆ ನೆನಪುಗಳ ಬುತ್ತಿ ಬಿಚ್ಚಿಟ್ಟಿದ್ದಾರೆ.

‘ಗಂಧದಗುಡಿ’ಗೆ ಪ್ರವೇಶಿಸಿದ ಕ್ಷಣ ಹಾಗೂ ಈ ಶೀರ್ಷಿಕೆ ಆಯ್ಕೆ ಮಾಡಿದ ಕಾರಣ?

ಪುನೀತ್‌ ರಾಜ್‌ಕುಮಾರ್‌ (ಅಪ್ಪು) ಅವರನ್ನು ಸುಮಾರು ಒಂದೂವರೆ ವರ್ಷ ಹಿಂದೆ ಭೇಟಿಯಾಗಿ ಮಾತುಕತೆ ನಡೆಸಿದಾಗ ಒಂದು ಹೊಸ ಬಗೆಯ ಪ್ರಯೋಗ ಮಾಡೋಣ. ನಾನು ನಾನಾಗಿಯೇ ಇರಬೇಕು, ಅಂತಹ ಭಿನ್ನವಾದ ಸಿನಿಮಾ ಮಾಡೋಣ ಎಂದು ತಮ್ಮ ಅಭಿಲಾಷೆ ಮುಂದಿಟ್ಟಿದ್ದರು.

ನಮ್ಮ ಕ್ಷೇತ್ರ ವನ್ಯಲೋಕ, ಕಾಡು. ಇದನ್ನೇ ಇಟ್ಟುಕೊಂಡು ಸಿನಿಮಾ ಮಾಡೋಣ ಎಂದು ಸಣ್ಣದಾಗಿ ಬಿತ್ತಿದ ಈ ಬೀಜ, ಮಾತುಕತೆ ಬಳಿಕ ಚಿಗುರೊಡೆದು ‘ಗಂಧದಗುಡಿ’ಯಾಗಿ ಬೆಳೆಯುತ್ತಾ ಹೋಯಿತು. ಸುಮಾರು 50 ವರ್ಷಗಳ ಹಿಂದೆ ಬಂದಿದ್ದ ರಾಜ್‌ಕುಮಾರ್‌ ಅವರ ‘ಗಂಧದಗುಡಿ’ ಸಿನಿಮಾದ ದೊಡ್ಡ ಫ್ಯಾನ್‌ ನಾನು. ನಾವು ಈಗ ಪರಿಸರ, ಕಾಡು ಉಳಿಸಿ ಎಂದು ಮಾತನಾಡುತ್ತಿದ್ದೇವೆ, ಎಚ್ಚೆತ್ತುಕೊಳ್ಳುತ್ತಿದ್ದೇವೆ. ಆದರೆ ಐದು ದಶಕದ ಹಿಂದೆಯೇ ಕಾಡನ್ನು ಉಳಿಸಬೇಕು ಎಂದು ಅಣ್ಣಾವ್ರು ಹೇಳಿದ್ದರು. ಅಣ್ಣಾವ್ರು, ಗಂಧದಗುಡಿ ಸಿನಿಮಾ ಹಾಗೂ ನಮ್ಮ ರಾಜ್ಯಕ್ಕೆ ಒಂದು ಕೊಡುಗೆಯಾಗಿ, ಇದಕ್ಕೇನು ಶೀರ್ಷಿಕೆ ಇಡೋಣ ಎಂಬ ಪ್ರಶ್ನೆ ಮೂಡಿದಾಗ ಇಟ್ಟ ಹೆಸರೇ ‘ಗಂಧದಗುಡಿ’.

ಗಂಧದಗುಡಿ ಸಿನಿಮಾವನ್ನು ಮರೆಯಬಾರದು. ಅದೊಂದು ಕನ್ನಡದ ಗೋಲ್ಡನ್‌ ಸಿನಿಮಾ. ಆ ಚಿತ್ರ ನಮಗೆಲ್ಲರಿಗೂ
ಪ್ರೇರಣೆ. ಅಪ್ಪಾಜಿ ಅವರ ಗಂಧದಗುಡಿಯನ್ನು ಜನರು ಮರೆಯಬಾರದು ಎನ್ನುವ ಆಸೆಯನ್ನೂ ಪುನೀತ್‌ ಅವರು ಹೊಂದಿದ್ದರು.

‘ಸ್ಟಾರಿಂಗ್‌ ಪುನೀತ್‌ ರಾಜ್‌ಕುಮಾರ್‌ ಆ್ಯಂಡ್‌ ಅಮೋಘವರ್ಷ’ ಎಂದಷ್ಟೇ ಇದೆ. ಇದಕ್ಕೆ ಕಾರಣ?

ಈಗೇನು ಟೀಸರ್‌ ಅನ್ನು ನೀವು ನೋಡಿದ್ದೀರಿ, ಅದನ್ನು ನಾವು ಅಪ್ಪು ಅವರಿಗೆ ಕಳುಹಿಸಿಕೊಟ್ಟಿದ್ದೆವು. ಇದನ್ನು ನೋಡಿ ‘ನನ್ನದೊಂದು ಸಣ್ಣ ಮನವಿ ಇದೆ, ಪವರ್‌ಸ್ಟಾರ್‌ ಎನ್ನುವುದನ್ನು ತೆಗೆದುಬಿಡಿ’ ಎಂದರು. ‘ಗಂಧದಗುಡಿಯಲ್ಲಿ ಒಬ್ಬ ಸ್ಟಾರ್‌, ಸೆಲೆಬ್ರಿಟಿ ಆಗಿರದೆ, ನಾನು ನಾನಾಗಿಯೇ ಇರುತ್ತೇನೆ’ ಎಂದಿದ್ದರು. ಅವರು ಒಂದು ದಿನವೂ ಮೇಕ್‌ಅಪ್‌ ಹಚ್ಚಲಿಲ್ಲ. ನನಗೆ ಒಬ್ಬ ಸ್ಟಾರ್‌ ಜೊತೆ ಕೆಲಸ ಮಾಡುತ್ತಿದ್ದೇನೆ ಎಂದು ಅನಿಸಲೇ ಇಲ್ಲ. ಈ ಕಾರಣದಿಂದಲೇ ನಾವು ಇಷ್ಟು ಚಿತ್ರೀಕರಿಸಲು, ಒಂದು ವರ್ಷ ಜೊತೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು. ದೃಶ್ಯಗಳು ಅಷ್ಟೊಂದು ನೈಜವಾಗಿ ಬರಲು ಅಪ್ಪು ಅವರ ಸ್ವಭಾವವೇ ಕಾರಣ.

ನೈಜ ಘಟನೆಯನ್ನು ಆಧರಿಸಿ ಎಂದಿದೆ. ಹಾಗಿದ್ದರೆ ಇದು ಯಾವ ಮಾದರಿ ಸಿನಿಮಾ?

ಇದೊಂದು ಹೊಸ ರೀತಿಯ ಅನುಭವಾತ್ಮಕ ಸಿನಿಮಾ. ‘ಇದೇನು ಸಿನಿಮಾನಾ ಅಥವಾ ಸಾಕ್ಷ್ಯಚಿತ್ರವೇ’ ಎಂದು ಎಲ್ಲರೂ ಕೇಳುತ್ತಿದ್ದಾರೆ. ಇದನ್ನು ಸಾಕ್ಷ್ಯಚಿತ್ರ ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಇದರ ಚಿತ್ರೀಕರಣ ಬಹಳ ಭಿನ್ನವಾಗಿದೆ. ಇದು ಚಿತ್ರಮಂದಿರಗಳಲ್ಲಿ ಬರಲಿರುವ ಪೂರ್ಣ ಪ್ರಮಾಣದ ಸಿನಿಮಾ. ಇದನ್ನು ಹೊಸ ವಿಭಾಗಕ್ಕೆ ಸೇರಿಸಬಹುದು. ಇಲ್ಲಿ ಪ್ರೇಕ್ಷಕರು ನೋಡುವುದೆಲ್ಲವೂ ನಿಜವೇ. ಇಲ್ಲಿ ಹಾಡಿದೆ, ಕಥೆ ಇದೆ. ಕಾಲ್ಪನಿಕವಲ್ಲ. ಭಾರತದಲ್ಲೇ ಈ ರೀತಿ ಪ್ರಯೋಗ ಮೊದಲು ನಡೆದಂತಿಲ್ಲ. ಸಿನಿಮಾ ಎಂದರೆ ಪ್ರೇಕ್ಷಕರು ಒಂದು ರೀತಿ ನೋಡುತ್ತಾರೆ, ಸಾಕ್ಷ್ಯಚಿತ್ರ ಎಂದರೆ ಅವರ ಕಲ್ಪನೆ ಬೇರೆ ರೀತಿ ಇರುತ್ತದೆ. ಹೀಗಾಗಿ ಈ ಹೊಸ ಪ್ರಯತ್ನವನ್ನು, ಪ್ರೇಕ್ಷಕರೇ ಚಿತ್ರಮಂದಿರದಲ್ಲಿ ಅನುಭವಿಸಿ ಹೇಳಬೇಕು.

ಗಂಧದಗುಡಿ ಕ್ಲೈಮ್ಯಾಕ್ಸ್‌ನಲ್ಲಿ ಬರುವ ರಾಜ್‌ಕುಮಾರ್‌ ಅವರ ಡೈಲಾಗ್‌ ಬಳಸಿಕೊಳ್ಳಲು ಕಾರಣ?

ಇದನ್ನು ಅಪ್ಪು ಸರ್‌ ಹಾಗೂ ನಾನು ಒಬ್ಬರೂ ಒಟ್ಟಿಗೆ ನಿರ್ಧರಿಸಿದೆವು. ಅಪ್ಪು ಅವರಿಗೂ ಆ ಸಿನಿಮಾ ಎಂದರೆ ತುಂಬಾ ಇಷ್ಟ. ಆ ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಮಾತನಾಡುತ್ತಿದ್ದರು. ನಮಗೆಲ್ಲ ಪ್ರೇರಣೆಯಾದ ‘ಗಂಧದಗುಡಿ’ ಚಿತ್ರದ ಒಂದು ಅಂಶವನ್ನು ಟೀಸರ್‌ನಲ್ಲಿ ಬಳಸಿಕೊಳ್ಳಬೇಕು ಎಂದಾಗ, ಕ್ಲೈಮ್ಯಾಕ್ಸ್‌ನಲ್ಲಿ ಅಣ್ಣಾವ್ರ ಮಾತು ಅತಿ ಸೂಕ್ತ ಎನಿಸಿತು. ಎಲ್ಲ ಜನರ ಮನಸ್ಸಿಗೆ ತುಂಬಾ ಹತ್ತಿರವಾದ ಹಾಗೂ ನೆನಪಿನಲ್ಲಿ ಉಳಿಯುವ ಮಾತದು. ಇಡೀ ದೃಶ್ಯವನ್ನು ನಾವು ಬಳಸಿಕೊಳ್ಳಲು ನಿರ್ಧರಿಸಿದ್ದೆವು. ಅದೇ ರೀತಿ ಬಳಸಿಕೊಂಡೆವು. ಆದರೆ ಅಣ್ಣಾವ್ರ ಆ ಧ್ವನಿಯಲ್ಲೇ ನಮ್ಮ ಈ ಇಡೀ ಗಂಧದಗುಡಿಯ ಸಂದೇಶವಿದ್ದ ಕಾರಣ, ಮೂಲ ದೃಶ್ಯವನ್ನು ಬಳಸಿಕೊಳ್ಳದೇ ಅದನ್ನು ಪ್ರೇಕ್ಷಕರ ಕಲ್ಪನೆಗೆ ಬಿಟ್ಟೆವು.

ಅಪ್ಪು ಅವರ ಜೊತೆ ಕಳೆದ ಕ್ಷಣಗಳು ಹೇಗಿದ್ದವು?

ಇದು ನನ್ನ ಪುಣ್ಯ. ಅಪ್ಪು ಅವರ ಸ್ಮಾರಕ ನೋಡಲು ನೂರಾರು ಕಿ.ಮೀ ದೂರದಿಂದ ಸಾವಿರಾರು ಜನರು ಇಂದೂ ಬರುತ್ತಿದ್ದಾರೆ. ಹೀಗಿರುವಾಗ ಅವರ ಜೊತೆಗೇ ಒಂದು ವರ್ಷ ಕಳೆದಿದ್ದೆ ಎಂದರೆ ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ಇನ್ನೂ ಕನಸಿನಂತೆಯೇ ಇದೆ. ಪ್ರತಿ ಕ್ಷಣವನ್ನೂ ಅನುಭವಿಸುತ್ತಾ, ಸಂತಸಪಡುತ್ತಾ ಅವರು ನಮ್ಮ ಜೊತೆ ಚಿತ್ರೀಕರಣದಲ್ಲಿ ಸಮಯ ಕಳೆದಿದ್ದರು. ಅವರಿಲ್ಲ ಎಂದಾಗ ಬೇಸರವಾಗುತ್ತದೆ. ಆದರೆ ಇವೆಲ್ಲವನ್ನೂ ಅವರು ನೋಡುತ್ತಿದ್ದಾರೆ.

ನಾವು ಯಾವಾಗಲೂ ಕ್ಯಾಮೆರಾ ಹಿಂದೆ ಇದ್ದವರು. ಅಪ್ಪು ಅವರ ಜೊತೆ ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎನ್ನುವಾಗ ಆದ ಹೆಮ್ಮೆಗಿಂತ ಭಯ ಜಾಸ್ತಿ. ಆದರೆ ಅಪ್ಪು ಸರ್‌ ಈ ಭಯವನ್ನು ದೂರ ಮಾಡಿದ್ದರು. ನಮ್ಮೆಲ್ಲರ ಜೊತೆ ಅವರ ಹೊಂದಾಣಿಕೆ ಆ ರೀತಿ ಇತ್ತು. ಕ್ಯಾಮೆರಾ ಮುಂದೆ ಇರುವುದು ಅವರ ಕೋಟೆ. ಹೀಗಾಗಿ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು. ಹಲವು ದಿನ ಅವರ ಜೊತೆ ಕಳೆದ ಬಳಿಕ, ಚಿತ್ರೀಕರಣ ನಡೆಸುತ್ತಿದ್ದೇವೆ ಎಂದು ಅನಿಸಲೇ ಇಲ್ಲ. ಒಬ್ಬರು ಮಾರ್ಗದರ್ಶಿ, ಸ್ನೇಹಿತನ ಜೊತೆ ಕರ್ನಾಟಕ ಸುತ್ತಿದ ಅನುಭವ. ಇಷ್ಟು ದೊಡ್ಡ ಪ್ರಾಜೆಕ್ಟ್‌ ಮಾಡುತ್ತಿದ್ದೇವೆ, ಎಂದು ಅನಿಸಲೇ ಇಲ್ಲ.

ಪುನೀತ್‌ ಅವರ ಸಾಹಸ, ಧೈರ್ಯವನ್ನು ಅಮೋಘವರ್ಷ ಕಂಡಿದ್ದರೇ?

ಕೆಲವರು ದೈಹಿಕವಾಗಿ ಬಹಳ ಸಮರ್ಥರಾಗಿರುತ್ತಾರೆ. ಕೆಲವರು ಚೆನ್ನಾಗಿ ಓಡುತ್ತಾರೆ. ಹೀಗೆ ಒಬ್ಬೊಬ್ಬ ಸ್ಟಾರ್ಸ್‌ಗೆ ಒಂದೊಂದು ಕಲೆ ತಿಳಿದಿರುತ್ತದೆ. ಆದರೆ ಅಪ್ಪು ಅವರು ಎಲ್ಲವನ್ನೂ ಮಾಡುತ್ತಿದ್ದರು. ಅವರ ಬ್ಯಾಕ್‌ಫ್ಲಿಪ್‌ ನೋಡಿ ನಾನು ಆಶ್ಚರ್ಯಪಟ್ಟಿದ್ದೆ. ನನಗೂ ಹೇಳಿಕೊಡಿ ಎಂದು ಕೇಳಿಕೊಂಡಿದ್ದೆ. ‘ಇದರಲ್ಲೇನಿದೆ ದೊಡ್ಡ ವಿಷ್ಯಾ’ ಎಂದು ಮಾಡಿ ತೋರಿಸೋರು.

‘ಗಂಧದಗುಡಿ’ ಯನ್ನು ‘ಮ್ಯಾನ್‌ ವಿದ್‌ ವೈಲ್ಡ್‌’ ಎನ್ನಬಹುದೇ?

ನೀವು ಹೇಳಿದ್ದು ಸರಿ ಇದೆ. ಭಾರತದಲ್ಲಿ ನಾವು ಪರಿಸರ, ವನ್ಯಲೋಕದ ವಿರುದ್ಧ ಎಂದೂ ಹೋಗಿಲ್ಲ. ಹಾಗಾಗಿ ಇದು ಮ್ಯಾನ್‌ ವರ್ಸಸ್‌ ವೈಲ್ಡ್‌ ಅಲ್ಲ. ಪರಿಸರದ ಮೇಲಿರುವ ಗೌರವ, ಹೊಂದಾಣಿಕೆಯೇ ಭಾರತದಲ್ಲಿ ಅಭಯಾರಣ್ಯ, ವನ್ಯಲೋಕ ಇನ್ನೂ ಉಳಿದಿರುವುದಕ್ಕೆ ಕಾರಣ. ಇದನ್ನು ನಾವು ಮುಂದೆಯೂ ಮರೆಯಬಾರದು.

ಅಪ್ಪು ಕನಸು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಮೂಲಕ ನನಸಾಗುತ್ತಿದೆ ಅಲ್ಲವೇ?

ಮೊದಲ ದಿನದಿಂದಲೂ ಅಶ್ವಿನಿ ಅವರೂ ಈ ಪ್ರೊಜೆಕ್ಟ್‌ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು. ಪಿಆರ್‌ಕೆ ಬ್ಯಾನರ್‌ನಲ್ಲಿ ಅಪ್ಪು ಅವರು ಕಾಣಿಸಿಕೊಳ್ಳುತ್ತಿರುವ ಮೊದಲ ಸಿನಿಮಾ ಇದಾಗಿದೆ. ಮೊದಲು ಎರಡು ಸ್ತಂಭಗಳಿದ್ದವು, ಇದೀಗ ಒಂದು ಸ್ತಂಭ ಇದೆ. ಈ ಬೆಂಬಲ ಇರುವುದಕ್ಕೇ ನಾವೇನೋ ಮಾಡಲು ಸಾಧ್ಯವಾಗುತ್ತಿದೆ. ಅಪ್ಪು ಅವರ ಕನಸುಗಳನ್ನು ನೆರವೇರಿಸುವುದೇ ನಮ್ಮ ಕರ್ತವ್ಯ. ಸದ್ಯಕ್ಕೆ ಪೋಸ್ಟ್‌ ಪ್ರೊಡಕ್ಷನ್ಸ್‌ ಹಂತದಲ್ಲಿದ್ದು, 2022ರಲ್ಲಿ ಇದು ತೆರೆಕಾಣಲಿದೆ.

ಅಪ್ಪು ಬಾಯಲ್ಲಿ, ಕಣ್ಣಲ್ಲೇ ನಾವು ಈ ಸಿನಿಮಾ ನೋಡೋಣ. ಇದರಲ್ಲಿ ತುಂಬಾ ಕಥೆಗಳು, ವಿಸ್ಮಯಗಳು, ಭಾವನಾತ್ಮಕ ದೃಶ್ಯಗಳು ಎಲ್ಲವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT