ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ಕುಮಾರ್‌ ಸ್ಮಾರಕ ಪುನರಾಭಿವೃದ್ಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

Published 17 ಅಕ್ಟೋಬರ್ 2023, 3:29 IST
Last Updated 17 ಅಕ್ಟೋಬರ್ 2023, 3:29 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ವರನಟ ರಾಜ್‌ಕುಮಾರ್‌ ಅವರ ಸ್ಮಾರಕ ಪುನರಾಭಿವೃದ್ಧಿ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಘೋಷಿಸಿದರು.

ನಗರದ ರ್‍ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ 3ಡಿ ಮುದ್ರಿತ ಕಿರುಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ, ಪುನೀತ್‌ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ನೀಡಿದ ಮನವಿಯನ್ನು ಸ್ವೀಕರಿಸಿ ಸಿದ್ದರಾಮಯ್ಯ ಈ ಭರವಸೆ ನೀಡಿದರು. ಜೊತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದ ಸ್ಫೂರ್ತಿ ದಿನಾಚರಣೆಯನ್ನು(ಮಾರ್ಚ್‌ 17) ಕಾರ್ಯರೂಪಕ್ಕೆ ತರುವುದಾಗಿ ತಿಳಿಸಿದರು.‌

‘ಪುನೀತ್‌ ಅಪರೂಪದ ವ್ಯಕ್ತಿತ್ವ ಇದ್ದ ನಟ. ಅವರಲ್ಲಿ ಸ್ವಲ್ಪವೂ ಅಹಂ ಇರಲಿಲ್ಲ. ಬಡವರಿಗೆ ಸ್ಪಂದಿಸುವ ಮನೋಭಾವ ಹೊಂದಿದ್ದ ಅವರು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದರು ಎಂದರೆ ಅತಿಶಯೋಕ್ತಿಯಲ್ಲ. ನಾವು ಇನ್ನೊಬ್ಬ ಪುನೀತ್‌ ಅವರನ್ನು ನೋಡಲು ಸಾಧ್ಯವಿಲ್ಲ’ ಎಂದರು.

ಸ್ಫೂರ್ತಿ ದಿನ ಜಾರಿಗೆ ಬರಲಿ: ನಟ ರಾಘವೇಂದ್ರ ರಾಜ್‌ಕುಮಾರ್‌ ಮಾತನಾಡಿ, ‘ವ್ಯಕ್ತಿಯೊಬ್ಬ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟವನು ಪುನೀತ್‌. ಪುನೀತ್‌ ಮೊದಲು ಕುಟುಂಬದ ಜೊತೆ ಬದುಕಿದ್ದ. ಇದೀಗ ಎಲ್ಲರ ಮನಸ್ಸಿನಲ್ಲೂ ಬದುಕಿದ್ದಾನೆ. ಈ ಕಿರುಪ್ರತಿಮೆಯನ್ನು ಕಷ್ಟಪಟ್ಟು ಮಾಡಿಲ್ಲ, ಬದಲಾಗಿ ಇಷ್ಟಪಟ್ಟು ಮಾಡಿದ್ದಾರೆ. ಕೈಯಲ್ಲೊಂದು ಕ್ಯಾಮೆರಾ ಹಿಡಿದ ಪ್ರತಿಮೆಯಿದು. ಆವಾಗ ಅಪ್ಪಾಜಿ ಬಳಿ ಒಂದು ಪೆಂಟಾಕ್ಸ್‌ ಎಂಬ ಕ್ಯಾಮೆರಾ ಇತ್ತು. ಅದರಲ್ಲಿ ಅಪ್ಪಾಜಿ ಫೋಟೊ ತೆಗೆಯುತ್ತಿದ್ದ. ಆತನ ಕೊನೆಯ ಸಿನಿಮಾದಲ್ಲೂ ಆತ ಕ್ಯಾಮೆರಾ ಹಿಡಿದಿದ್ದ. ಜೀವಂತವಾಗಿರುವ ಪುನೀತ್‌ನನ್ನು ಮನೆಗೆ ಕರೆದೊಯ್ಯುತ್ತಿರುವ ರೀತಿ ಭಾವನೆ ಮೂಡಿದೆ. ಪುನೀತ್‌ ಜನ್ಮದಿನವಾದ ಮಾರ್ಚ್‌ 17ನ್ನು ಸ್ಫೂರ್ತಿ ದಿನ ಎಂದು ಘೋಷಣೆ ಮಾಡಿದರು. ಆದರೆ ಅದು ಜಾರಿಗೆ ಬರಲಿಲ್ಲ. ಸರ್ಕಾರ ಅದನ್ನು ಕಾರ್ಯರೂಪಕ್ಕೆ ತರಬೇಕು’ ಎಂದು ಆಗ್ರಹಿಸಿದರು.   

ಪಿ.ಆರ್.ಕೆ ಸ್ಟುಡಿಯೊಸ್ ಸಹಯೋಗದಲ್ಲಿ ಎನ್‌3ಕೆ ಸ್ಟುಡಿಯೊಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಕಿರುಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಪುನೀತ್ ಅವರ ಪುತ್ರಿ ವಂದಿತಾಗೆ ಆಶೀರ್ವಾದ ಮಾಡಿದರು. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ನಟ ಯುವ ರಾಜ್‌ಕುಮಾರ್ ಇದ್ದರು -ಪ್ರಜಾವಾಣಿ ಚಿತ್ರ
ಪಿ.ಆರ್.ಕೆ ಸ್ಟುಡಿಯೊಸ್ ಸಹಯೋಗದಲ್ಲಿ ಎನ್‌3ಕೆ ಸ್ಟುಡಿಯೊಸ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ ಕಿರುಪ್ರತಿಮೆಯನ್ನು ಲೋಕಾರ್ಪಣೆ ಮಾಡಿ ಪುನೀತ್ ಅವರ ಪುತ್ರಿ ವಂದಿತಾಗೆ ಆಶೀರ್ವಾದ ಮಾಡಿದರು. ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಮತ್ತು ನಟ ಯುವ ರಾಜ್‌ಕುಮಾರ್ ಇದ್ದರು -ಪ್ರಜಾವಾಣಿ ಚಿತ್ರ

ವಿಶೇಷವಾದ 3ಡಿ ಪ್ರತಿಮೆ 

ಪಿಆರ್‌ಕೆ ಸ್ಟುಡಿಯೋಸ್‌ ಸಹಯೋಗದಲ್ಲಿ ಎನ್‌3ಕೆ ಡಿಸೈನ್‌ ಸ್ಟುಡಿಯೊ ನಿರ್ಮಾಣ ಮಾಡಿರುವ ಈ 3ಡಿ ಕಿರುಪ್ರತಿಮೆ ಹಲವು ವಿಶೇಷಗಳಿಂದ ಕೂಡಿದೆ. ವಿಚಾರ್‌ ಬಿ.ಎನ್‌ ಈ ಕಿರುಪ್ರತಿಮೆಗೆ ಜೀವನೀಡಿದ್ದು ಝೆಡ್‌ಬ್ರಷ್‌ ಸಾಫ್ಟ್‌ವೇರ್ ಬಳಸಿಕೊಂಡು ಪೋರ್ಚ್‌ಗಲ್‌ನಲ್ಲಿ ಈ ಪ್ರತಿಮೆ ರಚಿಸಿದ್ದಾರೆ. ಹಾಲಿವುಡ್‌ನ ‘ಅವತಾರ್‌’ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿನ ಪಾತ್ರಗಳನ್ನು ಈ ತಂತ್ರಜ್ಞಾನ ಬಳಸಿ ರಚಿಸಲಾಗಿದೆ. ಅತ್ಯಂತ ಸೂಕ್ಷ್ಮವಾದ ವಿವರಗಳೂ ಈ ಪ್ರತಿಮೆಯಲ್ಲಿ ಕಾಣಬಹುದಾಗಿದೆ. ಉದಾಹರಣೆಗೆ ಪುನೀತ್‌ ಅವರ ಕೈಯ ನರಗಳನ್ನೂ ಇದರಲ್ಲಿ ಕಾಣಬಹುದು. ನಡೆಯುವ ಮಾದರಿಯಲ್ಲಿ ಈ ಪ್ರತಿಮೆ ರೂಪುಗೊಂಡಿದ್ದು ಇದೇ ರೀತಿಯಲ್ಲಿ ಹಲವು ಮಾದರಿಯ 3ಡಿ ಪ್ರತಿಮೆಗಳ ರಚನೆಯಾಗಿದೆ. ಪುನೀತ್‌ ಅವರು ನಿಂತಿರುವ ಕಲ್ಲು ನಕ್ಷತ್ರಾಕಾರದಲ್ಲಿದ್ದು ಪುನೀತ್‌ ಅವರ ಮುಗುಳ್ನಗೆ ಬೇರೆ ಬೇರೆ ಕಡೆಯಿಂದ ಬೀಳುವ ಬೆಳಕಿಗೆ ಅನುಗುಣವಾಗಿ ಬದಲಾಗುತ್ತಾ ಹೋಗುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT