ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ನಿರ್ಮಾಣದ ಗುಟ್ಟು ಹೇಳಿದ ರವೈಲ್

Last Updated 22 ಫೆಬ್ರುವರಿ 2019, 12:54 IST
ಅಕ್ಷರ ಗಾತ್ರ

ಬೆಂಗಳೂರು:‘ಸಿನಿಮಾದ ಗೆಲುವಿಗೆ ಕಥೆಯಷ್ಟೇ ಮುಖ್ಯ. ಸ್ಟಾರ್‌ಗಿರಿಯದ್ದು ನಂತರದ ಸ್ಥಾನ’ ಎಂದು ಬಾಲಿವುಡ್‌ ನಿರ್ದೇಶಕ ರಾಹುಲ್‌ ರವೈಲ್‌ ಪ್ರತಿಪಾದಿಸಿದರು.

ನಗರದ ಒರಾಯನ್‌ ಮಾಲ್‌ನಲ್ಲಿ ನಡೆಯುತ್ತಿರುವ 11ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗುರುವಾರ ಸಿನಿಮಾ ನಿರ್ಮಾಣ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಎಂಬತ್ತರ ದಶಕದಲ್ಲಿ ಸಿನಿಮಾ ನಿರ್ದೇಶನಕ್ಕೆ ಈಗಿರುವಷ್ಟು ಸೌಕರ್ಯ ಇರಲಿಲ್ಲ. ತಂತ್ರಜ್ಞಾನ ಕೂಡ ಅಭಿವೃದ್ಧಿ ಹೊಂದಿರಲಿಲ್ಲ. ಈಗ ಸಿನಿಮಾ ನಿರ್ಮಿಸಿ ಪೆನ್‌ಡ್ರೈವ್‌ನಲ್ಲಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಹಿಂದೆ ಅದಕ್ಕಾಗಿಯೇ ಒಂದು ಸುರಕ್ಷಿತ ಪೆಟ್ಟಿಗೆ ಬೇಕಿತ್ತು. ಲಭಿಸುವ ಅವಕಾಶ ಬಳಸಿಕೊಂಡು ಗುಣಮಟ್ಟದ ಸಿನಿಮಾ ನಿರ್ಮಿಸುವುದಕ್ಕೆ ಯುವ ನಿರ್ದೇಶಕರು ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಿನಿಮಾ ರಂಗವನ್ನು ನಾನು ತೆಲುಗು, ತಮಿಳು, ಕನ್ನಡ ಎಂದು ಪ್ರಾದೇಶಿಕವಾಗಿ ವಿಂಗಡಿಸುವುದಿಲ್ಲ. ನನ್ನ ಪ್ರಕಾರ ಭಾಷಾವಾರು ಸಿನಿಮಾಗಳ ವರ್ಗೀಕರಣವೇ ತಪ್ಪು. ಸ್ಥಳೀಯ ಭಾಷೆಗಳಲ್ಲೂ ಉತ್ತಮ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಇದಕ್ಕೆ ಕನ್ನಡದ ‘ಕೆಜಿಎಫ್‌’ ಚಿತ್ರ ಉತ್ತಮ ನಿದರ್ಶನ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಿರ್ದೇಶಕರಿಗೆ ಸಿನಿಮಾ ನಿರ್ಮಾಣದ ಎಲ್ಲ ನಿಯಮಗಳನ್ನು ಮುರಿಯುವ ಹಕ್ಕಿದೆ. ಹಾಗೆಂದು ಜನರ ಅಭಿರುಚಿಗೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುವುದು ಸಲ್ಲದು. ತನ್ನಲ್ಲಿನ ಆಲೋಚನೆಗಳನ್ನು ಪ್ರೇಕ್ಷಕರಿಗೆ ಇಷ್ಟವಾಗುವಂತೆ ದೃಶ್ಯ ರೂಪಕ್ಕಿಳಿಸಬೇಕು. ನಿರ್ದೇಶಕ ಮಾಂತ್ರಿಕನಲ್ಲ. ತೆರೆಯ ಮೇಲೆ ಒಳ್ಳೆಯ ದೃಶ್ಯಗಳಿದ್ದರೆ ಮಾತ್ರವೇ ಜನರನ್ನು ಚಿತ್ರಮಂದಿರದತ್ತ ಸೆಳೆಯಬಹುದು ಎಂದು ಸಲಹೆ ನೀಡಿದರು.

‘ನನಗೀಗ ಸಿನಿಮಾ ನಿರ್ದೇಶಿಸುವ ಆಸೆಯಿಲ್ಲ. ನನ್ನ ಬಳಿ ಯಾವುದೇ ಸ್ಕ್ರಿ‍ಪ್ಟ್ ಕೂಡ ಇಲ್ಲ. ಆದರೆ, ವೆಬ್‌ ಸೀರಿಸ್‌ ನಿರ್ಮಿಸುವ ಆಸೆಯಿದೆ. ಆ ನಿಟ್ಟಿನಲ್ಲಿ ಕಾರ್ಯನಿರತನಾಗಿದ್ದೇನೆ’ ಎಂದರು.

‘ಹದಿನಾರನೇ ವಯಸ್ಸಿಗೆ ನಿರ್ದೇಶಕ ರಾಜ್‌ಕಪೂರ್‌ ಅವರೊಟ್ಟಿಗೆ ಕೆಲಸ ಆರಂಭಿಸಿದ್ದು ನನ್ನ ಅದೃಷ್ಟ. ನನ್ನ ವೃತ್ತಿಬದುಕಿನಲ್ಲಿ ಅವರ ಪಾಲು ದೊಡ್ಡದು ಎಂದ ಅವರು, ನಾನು ನಿರ್ದೇಶಿಸಿದ ‘ಲವ್‌ ಸ್ಟೋರಿ’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಸದ್ದು ಮಾಡಿತು. ಆದರೆ, ಚಿತ್ರದಲ್ಲಿ ನನ್ನ ಹೆಸರನ್ನು ಮುದ್ರಿಸಲಿಲ್ಲ. ನಿರ್ದೇಶಕನ ಹೆಸರಿಲ್ಲದೆ ಪ್ರದರ್ಶನ ಕಂಡ ವಿಶ್ವದ ಏಕೈಕ ಸಿನಿಮಾವೆಂದರೆ ಅದೇ ಇರಬೇಕು. ಕೊನೆಗೆ, ನಾನು ನ್ಯಾಯಾಲಯದ ಮೆಟ್ಟಿಲೇರಿ ಜಯ ಸಾಧಿಸಿದೆ’ ಎಂದು ನೆನಪಿಸಿ ಬುತ್ತಿ ಬಿಚ್ಚಿಟ್ಟರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ, ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್‌. ವಿದ್ಯಾಶಂಕರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT