ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಬಾಲಕನಿಗೆ ಧೈರ್ಯ ಹೇಳಿದ ರಜನಿ

Last Updated 23 ಮೇ 2020, 8:05 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿರುವ ಬಾಲಕನೊಬ್ಬನಿಗೆ ದೂರವಾಣಿ ಕರೆ ಮಾಡಿರುವ ಸೂಪರ್‌ಸ್ಟಾರ್ ರಜನಿಕಾಂತ್, ಆ ಬಾಲಕನಿಗೆ ಧೈರ್ಯ ಹೇಳುವ ಕೆಲಸ ಮಾಡಿದ್ದಾರೆ. ‘ಹುಷಾರಾದ ನಂತರ ಚೆನ್ನೈಗೆ ಬಾ. ನಾವಿಬ್ಬರೂ ಭೇಟಿಯಾಗೋಣ’ ಎಂದೂ ಆ ಬಾಲಕನಲ್ಲಿ ಹೇಳಿದ್ದಾರೆ.

ಕ್ಯಾನ್ಸರ್‌ಗೆ ತುತ್ತಾಗಿರುವ ಈ ಬಾಲಕನ ಹೆಸರು ಕೆವಿನ್. ಈತ ಈಗ ಬೆಂಗಳೂರಿನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಲಕನಿಗೆ ರಜನಿಕಾಂತ್ ಜೊತೆ ಮಾತನಾಡುವ ಆಸೆ ಇತ್ತು. ಈ ಆಸೆ ಈಡೇರುವಂತೆ ಮಾಡಿದ್ದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ.

‘ಬಾಲಕ ಕೆವಿನ್ ವಿಚಾರ ನನಗೆ ನನ್ನ ಸಂಬಂಧಿಕರಿಂದ ಗೊತ್ತಾಯಿತು. ರಜನಿಕಾಂತ್ ಅವರು ನಮಗೆ ಸಂಬಂಧಿ ಕೂಡ ಹೌದು. ಹಾಗಾಗಿ, ಬಾಲಕನ ಆಸೆ ಈಡೇರಿಸೋಣ ಎಂದು ನಾನು ರಜನಿಕಾಂತ್ ಅವರಿಗೆ ಕರೆ ಮಾಡಿ, ವಿಷಯ ತಿಳಿಸಿದೆ. ಅವರು ನನ್ನ ಮಾತಿಗೆ ಸ್ಪಂದಿಸಿ, ಬಾಲಕನಿಗೆ ಕರೆ ಮಾಡಿದ್ದರು’ ಎಂದು ಸಿಂಧ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹುಡುಗನ ತಂದೆಯ ಹೆಸರು ಮುತ್ತುರಾಮನ್. ಇವರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಕೆವಿನ್ ಪರವಾಗಿ ತಾವು ಪ್ರಾರ್ಥಿಸುವುದಾಗಿ ರಜನಿಕಾಂತ್ ಹೇಳಿದ್ದಾರೆ. ಕೆವಿನ್‌ನ ಆರೋಗ್ಯ ಹಾಗೂ ಅವನಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT