ಬುಧವಾರ, ಜನವರಿ 29, 2020
30 °C

35 ವರ್ಷಗಳ ನಂತರ ಒಟ್ಟಿಗೆ ನಟಿಸಲಿದ್ದಾರೆ ರಜನಿ– ಕಮಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

35 ವರ್ಷಗಳ ನಂತರ ನಟರಾದ ರಜನಿಕಾಂತ್‌ ಹಾಗೂ ಕಮಲಹಾಸನ್‌ ಒಂದೇ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ.

 ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಕಮಲ ಹಾಸನ್‌ ಹಾಗೂ ರಜನಿಕಾಂತ್‌ ಸುಮಾರು 16 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಈ ಇಬ್ಬರು ಶ್ರೇಷ್ಠ ನಟರು 1985ರಲ್ಲಿ ಬಿಡುಗಡೆಯಾದ ‘ಗಿರಫ್ತಾರ್‌’ ಚಿತ್ರದಲ್ಲಿ  ನಟಿಸಿದ್ದರು. ಇದೇ ಇವರಿಬ್ಬರು ಜೊತೆಯಾಗಿ ನಟಿಸಿದ ಕೊನೆಯ ಚಿತ್ರ. ಆ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಜೊತೆ ತೆರೆ ಹಂಚಿಕೊಂಡಿದ್ದರು.

ಈಗ ಇವರಿಬ್ಬರು ಮತ್ತೆ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ನಿರ್ದೇಶಕ ಲೋಕೇಶ್‌ ಕನಕರಾಜ್‌ ಅವರು ತಮ್ಮ ಮುಂದಿನ ಚಿತ್ರದಲ್ಲಿ ಈ ಇಬ್ಬರು ನಟರನ್ನು ಒಟ್ಟಿಗೆ ತೋರಿಸಲಿದ್ದಾರೆ. ಸುಮಾರು ಮೂರು ದಶಕಗಳ ನಂತರ ಇವರಿಬ್ಬರು ಒಟ್ಟಿಗೆ ನಟಿಸುತ್ತಿರುವುದು. 

ಕನಕರಾಜ್‌, ಕಮಲ ಹಾಸನ್‌ ಪ್ರೊಡಕ್ಷನ್‌ ಹೌಸ್‌ನ ಹೊಸ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರಕ್ಕಾಗಿ ಇತ್ತೀಚೆಗೆ ರಜನಿಕಾಂತ್‌ ಜೊತೆ ಕನಕರಾಜ್‌ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಮಾತುಕತೆ ಸಂದರ್ಭದಲ್ಲಿ ಈಚೆಗೆ ಬಿಡುಗಡೆಯಾಗಿದ್ದ ‘ಕೈದಿ’ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಜನಿಕಾಂತ್‌ ಆ ಚಿತ್ರ ಬಾಕ್ಸಾಫೀಸಿನಲ್ಲಿ ಯಶಸ್ಸು ಗಳಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದರು.
ಅದೇ ವೇಳೆ ಈ ಹೊಸ ಚಿತ್ರದ ಬಗ್ಗೆ ಚರ್ಚೆ ಕೂಡ ನಡೆಸಿದ್ದರು.

ಕಮಲಹಾಸನ್‌ ಹಾಗೂ ರಜನಿಕಾಂತ್‌ ಇಬ್ಬರನ್ನೂ ಈ ಚಿತ್ರದಲ್ಲಿ ನಟಿಸುವಂತೆ ಕನಕರಾಜ್‌ ಮನವೊಲಿಸಿದ್ದಾರೆ ಎಂದು ಸುದ್ದಿ ಇದೆ. ಈ ಚಿತ್ರದ ಚಿತ್ರೀಕರಣ ಹೊಸ ವರ್ಷದಲ್ಲಿ ಆರಂಭವಾಗಲಿದೆ. 

ಕಮಲ ಹಾಸನ್‌ ‘ಇಂಡಿಯನ್‌ 2’ ಚಿತ್ರೀಕರಣದಲ್ಲಿ ಹಾಗೂ ರಜನಿಕಾಂತ್‌, ಸಿರುತೈ ಶಿವ ನಿರ್ದೇಶನದ ಹೊಸ ಚಿತ್ರದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಲೋಕೇಶ್‌ ಕನಕರಾಜ್‌ ಅವರು ‘ದಳಪತಿ 64’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು