ಮಂಗಳವಾರ, ಜನವರಿ 21, 2020
28 °C

ಚಂದ್ರಮುಖಿ ಸೀಕ್ವೆಲ್‌...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿನಯದ ‘ಚಂದ್ರಮುಖಿ’ ಸಿನಿಮಾ 2005ರಲ್ಲಿ ಬಿಡುಗಡೆಗೊಂಡಿತ್ತು. ಇದು ತಮಿಳುನಾಡಿನಾದ್ಯಂತ ಬಹುತೇಕ ಎಲ್ಲಾ ಥಿಯೇಟರ್‌ಗಳಲ್ಲಿ 175 ದಿನಗಳಿಗೂ ಹೆಚ್ಚು ದಿನ ಯಶಸ್ವಿಯಾಗಿ ಪ್ರದರ್ಶನಗೊಂಡಿದ್ದ ಚಿತ್ರ. ಈ ಚಿತ್ರವನ್ನು ನಿರ್ದೇಶಿಸಿದವರು ಪಿ. ವಾಸು. ರಜನಿಕಾಂತ್‌, ನಯನತಾರಾ, ಜ್ಯೋತಿಕಾ, ಪ್ರಭು, ನಾಸೀರ್‌, ವಡಿವೇಲು ಹಾಗೂ ವಿನೀತ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಈ ಚಿತ್ರ ಬಿಡುಗಡೆಗೊಂಡು ದಶಕಗಳೇ ಕಳೆದಿವೆ. ಆದರೂ ಈ ಸಿನಿಮಾದ ಕತೆ ಇನ್ನೂ ಪ್ರೇಕ್ಷಕರ ಮನಸ್ಸಿನಲ್ಲಿ ಹಸಿರಾಗಿಯೇ ಇದೆ. ಈಗ ಹೊಸ ಸುದ್ದಿಯೊಂದು ವೈರಲ್‌ ಆಗಿದ್ದು, ‘ಚಂದ್ರಮುಖಿ’ ಸಿನಿಮಾದ ಸೀಕ್ವೆಲ್‌ ಸದ್ಯದಲ್ಲೇ ಸೆಟ್ಟೇರಲಿದೆ ಎಂದು ಸುದ್ದಿ ಹರಿದಾಡುತ್ತಿದೆ.

ಚಿತ್ರಕತೆ ಹಂತ ಈಗಾಗಲೇ ಮುಗಿದಿದೆ. ತಮಿಳು ಚಿತ್ರರಂಗದ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆಯೊಂದು ಇದನ್ನು ನಿರ್ಮಾಣ ಮಾಡಲಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದನ್ನು ಸಿನಿಮಾ ನಿರ್ಮಾಪಕರು ಸದ್ಯದಲ್ಲೇ ತೀರ್ಮಾನಿಸಿ ಘೋಷಣೆ ಮಾಡಲಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

‘ಚಂದ್ರಮುಖಿ’ ಸಿನಿಮಾ ಬಿಡುಗಡೆಯಾದಾಗಿನಿಂದ ಅನೇಕ ದಾಖಲೆಗಳನ್ನು ಮಾಡಿತ್ತು. ಚೆನ್ನೈನ ಶಾಂತಿ ಥಿಯೇಟರ್‌ನಲ್ಲಿ 890 ದಿನಗಳು ಈ ಸಿನಿಮಾ ಪ್ರದರ್ಶನ ಕಂಡಿತ್ತು. ಆ ಕಾಲದಲ್ಲಿ ಬಿಡುಗಡೆಗೊಂಡ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದಾಗಿತ್ತು. ಇದು ಆಪ್ತಮಿತ್ರ ಎಂಬ ಹೆಸರಿನಲ್ಲಿ ಕನ್ನಡಕ್ಕೆ ರಿಮೇಕ್‌ ಆಗಿತ್ತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು