ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

777 ಚಾರ್ಲಿ: ಪ್ಯಾನ್‌ ಇಂಡಿಯಾ ಸ್ಟಾರ್‌ ಪಟ್ಟ ಬೇಡ -ರಕ್ಷಿತ್‌ ಶೆಟ್ಟಿ

Last Updated 26 ಮೇ 2022, 13:04 IST
ಅಕ್ಷರ ಗಾತ್ರ

‘777 ಚಾರ್ಲಿ’ಯ ರಕ್ಷಿತ್‌ ಉಳಿದ ಚಿತ್ರಗಳಿಗಿಂತ ಹೇಗೆ ಭಿನ್ನ?

ಐ ಲವ್‌ ಫಿಲ್ಮ್‌ ಮೇಕಿಂಗ್‌... ಹೀಗಾಗಿ ಸಾಮಾನ್ಯವಾಗಿ ನಾನು ಒಂದು ಸಿನಿಮಾ ಮಾಡಬೇಕಾದರೆ ಎಲ್ಲ ವಿಭಾಗಗಳಲ್ಲೂ ಬಹಳಷ್ಟು ತೊಡಗಿಸಿಕೊಳ್ಳುತ್ತೇನೆ. ‘ಗೋಧಿ ಬಣ್ಣ’, ‘ವಾಸ್ತು ಪ್ರಕಾರ’ ಬಿಟ್ಟು ಉಳಿದೆಲ್ಲವೂ ನಾನು ಬರೆದ ಕಥೆಯೇ ಆಗಿದ್ದವು. ಹೀಗಾಗಿ ತಂಡದಲ್ಲಿ ನನ್ನ ಪಾತ್ರವೂ ಅಷ್ಟೇ ಮುಖ್ಯವಾಗಿತ್ತು. ಆದರೆ ಕೆಲ ವರ್ಷದ ಹಿಂದೆ ನನ್ನೊಳಗಿನ ನನ್ನನ್ನು ಹುಡುಕಲು ಸಿನಿಮಾದಿಂದ ಒಂದು ಬ್ರೇಕ್‌ ಅಗತ್ಯವಿತ್ತು. ಇದಕ್ಕೆ ಕಾರಣ ವೈಯಕ್ತಿಕ. ಈ ಸಂದರ್ಭದಲ್ಲಿ 777 ಚಾರ್ಲಿ ಸಿನಿಮಾ ಸಿಕ್ಕಿತು. ಈ ಸಿನಿಮಾದಲ್ಲಿ ನಾನುಕಿರಣ್‌ರಾಜ್‌ ಹೇಳಿಕೊಟ್ಟ ನಟನೆಯನ್ನಷ್ಟೇ ಮಾಡಿದ್ದೇನೆ.

ಈ ಚಾರ್ಲಿ ಪಯಣವನ್ನು ಒಮ್ಮೆ ಮೆಲುಕು ಹಾಕಿದರೆ...

‘ಉಳಿದವರು ಕಂಡಂತೆ’ ಸಿನಿಮಾ ನನ್ನ ಸಿನಿ ಪಯಣದ ಆರಂಭದ ಹೆಜ್ಜೆ, ‘ಕಿರಿಕ್‌ ಪಾರ್ಟಿ’ ಗೆಲುವು ನನಗೆ ಅಗತ್ಯವಾಗಿತ್ತು, ‘ಅವನೇ ಶ್ರೀಮನ್ನಾರಾಯಣ’ ನನ್ನ ಕಲಿಕೆ, ‘777 ಚಾರ್ಲಿ’ ಸಿನಿಮಾದಲ್ಲಿ ಭಾವನಾತ್ಮಕವಾಗಿ ನಾನು ಬಹಳಷ್ಟು ಕಲಿತಿದ್ದೇನೆ. ಒಂದು ರೀತಿ ಜೀವನ ವೃತ್ತ ಪೂರ್ಣಗೊಳಿಸಿದಂತೆ. ಚಾರ್ಲಿ ಪಯಣ ವಿಭಿನ್ನ. ಈ ಚಿತ್ರದ ಮೊದಲಾರ್ಧ ಚಿತ್ರೀಕರಿಸುವಾಗ ಜೊತೆಯಾಗಿ ‘ಅವನೇ ಶ್ರೀಮನ್ನಾರಾಯಣ’ ಶೂಟಿಂಗ್‌ನಲ್ಲೂ ತೊಡಗಿದ್ದೆ. ಈ ಎರಡೂ ಸಿನಿಮಾದಲ್ಲಿರುವ ‘ರಕ್ಷಿತ್‌’ ಪಾತ್ರ ತದ್ವಿರುದ್ಧ. ಚಾರ್ಲಿಯ ದ್ವಿತೀಯಾರ್ಧದ ಚಿತ್ರೀಕರಣದ ವೇಳೆ ಕೋವಿಡ್‌ ಕಾಡಿತು. ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಚಿತ್ರೀಕರಣಕ್ಕೆ ಹೋದಾಗ ‘ಧರ್ಮ’ನ ಪಾತ್ರದೊಳಗೆ ಮತ್ತಷ್ಟು ಇಳಿದಿದ್ದೆ. ಇಲ್ಲಿಂದ ಗೋವಾ, ಪಂಜಾಬ್‌, ರಾಜಸ್ಥಾನ ಹಾಗೂ ಕಾಶ್ಮೀರದವರೆಗಿನ ಪಯಣ ಅದ್ಭುತ.

ನಿರ್ದೇಶಕ ಕಿರಣ್‌ರಾಜ್‌ ನಿಮ್ಮನ್ನು ದುಡಿಸಿಕೊಂಡ ಬಗೆ...

ಹತ್ತನೇ ತರಗತಿ ಮುಗಿಸಿ, ಫಿಲ್ಮ್‌ ಮೇಕರ್‌ ಆಗುವ ಕನಸು ಕಂಡಾತ ಕಿರಣ್‌ರಾಜ್‌. ಈ ಕನಸಿಗಾಗಿ ಮನೆ ಬಿಟ್ಟು ಬಂದು ಮಂಗಳೂರಿನ ಬಾರ್‌ ಒಂದರಲ್ಲಿ ವೇಟರ್‌ ಆಗಿ, ಆಸ್ಪತ್ರೆಯಲ್ಲಿ ವಾಚ್‌ಮನ್ ಆಗಿ, ಸೇಲ್ಸ್‌ಮನ್‌ ಆಗಿ ಕೊನೆಗೆ ಬೆಂಗಳೂರಿಗೆ ಬಂದು ಸಹಾಯಕ ನಿರ್ದೇಶಕನಾಗಿ ಬೆಳೆದವನು. ಇಂಥ ಜೀವನ ಅನುಭವಿ ಸಿದವನಿಗಷ್ಟೇ ಈ ಭಾವನೆಗಳನ್ನು ಕಟ್ಟಲು ಸಾಧ್ಯ. ‘ನಿನ್ನ ಬಳಿ ಕೆಲಸ ಮಾಡಿದ ಅತ್ಯುತ್ತಮ ಸಹಾಯಕ ನಿರ್ದೇಶಕ ಯಾರು?’ ಎಂದು ರಿಷಬ್‌ ಶೆಟ್ಟಿ ಬಳಿ ಕೇಳಿದರೆ ಆತ ಹೇಳುವ ಉತ್ತರ ಕಿರಣ್‌ರಾಜ್‌.

ಈತ ಪೂರ್ಣ ಬದ್ಧತೆಯಿಂದ ಸಿನಿಮಾ ಮಾಡುತ್ತಾನೆ. ಇದುಕಿರಣ್‌ರಾಜ್‌ ನನ್ನ ಬಳಿ ಬಂದು ಈ ಕಥೆ ಹೇಳಿದಾಗಲೇ ನನಗೆ ತಿಳಿದಿತ್ತು. ಆತನ ಈ ಬದ್ಧತೆ ‘ಹುಚ್ಚು’ ಎನ್ನುವಷ್ಟೇ ಇದೆ. ಆತನ ತಲೆಯಲ್ಲಿ ಏನಿದೆಯೋ ಅದೇ ದೃಶ್ಯ ಸೆರೆಯಾಗಬೇಕು. ಇಲ್ಲವಾದರೆ ರಿಟೇಕ್‌...ರಿಟೇಕ್‌.. ಚಾರ್ಲಿ ಸಿನಿಮಾದಲ್ಲಿ ಕೆಲಸ ಮಾಡಿದ ಯಾರನ್ನೇ ಕೇಳಿ, ‘ಕಿರಣ್‌ರಾಜ್‌ನಷ್ಟು ದೊಡ್ಡ ಟಾರ್ಚರ್‌ ಬೇರೆ ಯಾರೂ ಇಲ್ಲ’ ಎಂದು ಖಂಡಿತಾ ಹೇಳುತ್ತಾರೆ. (ನಗುತ್ತಾ) ನಾನೂ ಆ ಟಾರ್ಚರ್‌ ಅನುಭವಿಸಿದ್ದೇನೆ. ಆದರೆ, ನನಗೆ ಆತನಿಗೆ ಸಿನಿಮಾ ಮೇಲಿದ್ದ ಪ್ರೀತಿ ಹಾಗೂ ಬದ್ಧತೆಯಷ್ಟೇ ಕಂಡಿತು. ನನ್ನ ಬಳಿಯೇ ಸಹಾಯಕ ನಿರ್ದೇಶಕನಾಗಿದ್ದ ಕಿರಣ್‌ರಾಜ್‌ ಅವರಿಂದ ಬಹಳಷ್ಟು ಕಲಿತಿದ್ದೇನೆ. ಇದು ಸಂಪೂರ್ಣವಾಗಿ ಕಿರಣ್‌ರಾಜ್‌ ಸಿನಿಮಾ.

ರಿಷಬ್‌ ಶೆಟ್ಟಿ ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ... ನೀವು ನಿಧಾನವೇ ಪ್ರಧಾನ ಎನ್ನುವಂತಿದೆ...

ರಿಷಬ್‌ ಯಾವತ್ತೂ ಕುದುರೆಯ ಮೇಲೆ ಕುಳಿತಿರುತ್ತಾರೆ. ಅದು ಅವರ ಕಾರ್ಯವೈಖರಿ. ‘ಕಿರಿಕ್‌ ಪಾರ್ಟಿ’ ನಂತರ ಸಿನಿಮಾದ ಬಗ್ಗೆ ಮತ್ತಷ್ಟು ಕಲಿಯಬೇಕು ಎಂಬ ಹುಚ್ಚುತನವಿತ್ತು. ಹೀರೊ ಆಗಬೇಕು ಎಂದು ನಾನು ಚಿತ್ರರಂಗಕ್ಕೆ ಬಂದಿದ್ದು. ನಾನು ಮಾಡಬೇಕಾಗಿದ್ದ ಪಾತ್ರಗಳನ್ನು ಯಾರೂ ಬರೆಯುತ್ತಿಲ್ಲವಲ್ಲ ಎಂಬ ಕಾರಣಕ್ಕೆ ನಾನು ಕಥೆ ಬರೆದೆ, ನಿರ್ದೇಶಕನಾದೆ. ಇಂಥ ಒಂದು ಅದ್ಭುತವಾದ ಮಾಧ್ಯಮದ ಮುಖಾಂತರ ಕಥೆಗಳನ್ನು ಹೇಳಬಹುದಲ್ಲವೇ ಎಂದು ನಿರ್ದೇಶನದತ್ತ ಮತ್ತಷ್ಟು ಆಕರ್ಷಿತನಾದೆ.

ಆರು ವರ್ಷಗಳಲ್ಲಿ ಎರಡೇ ಸಿನಿಮಾ ಮಾಡಿದ್ದೇನೆ. ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಳಿಕ ತಮಿಳು, ತೆಲುಗು ಚಿತ್ರರಂಗದಿಂದಲೂ ನನಗೆ ಆಫರ್‌ಗಳು ಬಂದಿವೆ. ಆದರೆ ಯಾವ ಸಿನಿಮಾಗಳನ್ನು ಮಾಡಬೇಕು ಎನ್ನುವ ಲೈನ್‌ಅಪ್‌ ನನಗೆ ಗೊತ್ತು. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರೀಕರಣ ನಡೆಯುತ್ತಿದೆ. ಇದಾದ ಬಳಿಕ ಕ್ರಮವಾಗಿ, ‘ರಿಚರ್ಡ್‌ ಆ್ಯಂಟನಿ’, ‘ಕಿರಿಕ್‌ ಪಾರ್ಟಿ–2’, ‘ಮಿಡ್‌ ವೇ ಟು ಮೋಕ್ಷ’ ಹಾಗೂ ‘ಪುಣ್ಯಕೋಟಿ’ ಸಿನಿಮಾ ಕೈಗೆತ್ತಿಕೊಳ್ಳಲಿದ್ದೇನೆ. ಇದನ್ನು ಬಿಟ್ಟರೆ ಬೇರೆ ಯಾವ ಸಿನಿಮಾಗಳನ್ನೂ ಮಾಡುವುದಿಲ್ಲ. ಈ ಸಿನಿಮಾ ಮುಗಿಸಿದ ಬಳಿಕವಷ್ಟೇ ಮುಂದಿನದನ್ನು ಯೋಚಿಸುತ್ತೇನೆ. ನಟನೆಯಿಂದ ಸಂಪೂರ್ಣ ನಿವೃತ್ತಿಯಂತೂ ತೆಗೆದುಕೊಳ್ಳುವುದಿಲ್ಲ.

ಚಾರ್ಲಿ ಮೂಲಕ ರಕ್ಷಿತ್‌ ಶೆಟ್ಟಿ ಅಧಿಕೃತವಾಗಿ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗುತ್ತಿದ್ದಾರೆ...

ಇದ್ಯಾವುದೂ ನನ್ನ ಗಮನದಲ್ಲಿ ಇಲ್ಲ. ಚಾರ್ಲಿ ಸಿನಿಮಾದ ಕಥೆಗೆ ಮಾರುಕಟ್ಟೆ ಇರುವ ಕಾರಣ ಈ ಸಿನಿಮಾವನ್ನು ಪ್ಯಾನ್‌ ಇಂಡಿಯಾ ಬಿಡುಗಡೆ ಮಾಡುತ್ತಿದ್ದೇವೆ. ಇನ್ನು ಹತ್ತು ಹದಿನೈದು ವರ್ಷ ಚಾರ್ಲಿ ರೀತಿಯ ಇನ್ನೊಂದು ಸಿನಿಮಾ ಮಾಡಲು ಸಾಧ್ಯವಿಲ್ಲ. 167 ದಿನ ಒಂದು ನಾಯಿಯ ಜೊತೆ ಇದ್ದುಕೊಂಡು ಚಿತ್ರೀಕರಣ ನಡೆಸುವುದು ಸುಲಭವಲ್ಲ. ನಾನು ಎಲ್ಲ ಸಿನಿಮಾವನ್ನೂ ಪ್ಯಾನ್‌ ಇಂಡಿಯಾ ಮಾಡಬೇಕು ಎಂದು ಹೊರಡುವುದಿಲ್ಲ. ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಪ್ಯಾನ್‌ ಇಂಡಿಯಾ ಬಿಡುಗಡೆ ಮಾಡುವ ಯೋಚನೆಯೇ ಇಲ್ಲ. ಆದರೆ ಬಿಡುಗಡೆ ಸಂದರ್ಭದಲ್ಲಿ ಸಿನಿಮಾವನ್ನು ವಿತರಕರಿಗೆ ತೋರಿಸುತ್ತೇವೆ. ಅವರ ಮಾರುಕಟ್ಟೆಯಲ್ಲಿ ಈ ಸಿನಿಮಾ ಓಡುತ್ತದೆ ಎನ್ನುವ ನಂಬಿಕೆ ಅವರಿಗಿದ್ದರೆ ಕೊಡುತ್ತೇವೆ. ಪ್ಯಾನ್‌ ಇಂಡಿಯಾ ಸ್ಟಾರ್‌ ಎನ್ನುವ ಪಟ್ಟ ನನಗೆ ಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT