ಬುಧವಾರ, ಆಗಸ್ಟ್ 10, 2022
23 °C

ಉಪ್ಪಿಯ ಜನ್ಮದಿನಕ್ಕೆ ಭರ್ಜರಿ ಗಿಫ್ಟ್‌ ನೀಡಿದ ಕಬ್ಜ ಚಿತ್ರತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಳೆ (ಸೆ. 18ರಂದು) ‘ರಿಯಲ್‌ ಸ್ಟಾರ್‌’ ಉಪೇಂದ್ರ ಅವರ ಜನ್ಮದಿನ. ಉಪ್ಪಿ ನಟಿಸುತ್ತಿರುವ ‘ಕಬ್ಜ’ ಚಿತ್ರತಂಡ ಹೊಸ ಪೋಸ್ಟರ್‌ ಬಿಡುಗಡೆಯ ಮೂಲಕ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆ. ಅಂದಹಾಗೆ ಈ ಪೋಸ್ಟರ್‌ ಬಿಡುಗಡೆ ಮಾಡಿರುವುದು ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ.

ಆರ್‌. ಚಂದ್ರು ಮತ್ತು ಉಪೇಂದ್ರ ‘ಐ ಲವ್‌ ಯು’ ಚಿತ್ರದ ಬಳಿಕ ‘ಕಬ್ಜ’ದಲ್ಲಿ ಮತ್ತೆ ಒಂದಾಗಿದ್ದಾರೆ. ಈ ಹಿಂದೆ ಇಬ್ಬರ ಕಾಂಬಿನೇಷನ್‌ನಡಿ ತೆರೆಕಂಡಿದ್ದ ‘ಬ್ರಹ್ಮ’ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿತ್ತು. ಹಾಗಾಗಿಯೇ, ಮೂರನೇ ಬಾರಿಗೆ ಈ ಜೋಡಿ ಒಂದಾಗುತ್ತಿದೆ.

‘ಕಬ್ಜ’ದಲ್ಲಿ ಭೂಗತ ಲೋಕದ ಸುತ್ತ ಕಥೆ ಹೆಣೆಯಲಾಗಿದೆ. ಹೊಸ ಆಯಾಮದಡಿ ರೌಡಿಸಂ ಕಥೆ ಕಟ್ಟಿಕೊಡಲು ಚಂದ್ರು ಮುಂದಾಗಿದ್ದಾರಂತೆ. ‘ಓಂ’ ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಕೈಗೆ ಲಾಂಗ್‌ ಕೊಟ್ಟಿದ್ದರು ಉಪ್ಪಿ. ಅದಾದ ಬಳಿಕ ಅವರೇ ನಟಿಸಿದ ಹಲವು ಸಿನಿಮಾಗಳಲ್ಲಿ ಮಚ್ಚು, ಲಾಂಗ್‌ಗಳನ್ನು ಚೆನ್ನಾಗಿಯೇ ಝಳಪಿಸಿದ್ದರು. ಈಗ ಮತ್ತೆ ಲಾಂಗ್‌ ಹಿಡಿದು ಡಾನ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರ ಹಿಂದಿ, ತೆಲುಗು, ತಮಿಳು, ಮಲಯಾಳ, ಬಂಗಾಳಿ ಮತ್ತು ಮರಾಠಿ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಎಂಬತ್ತರ ದಶಕದ ಕಥೆ ಇದು. ರೆಟ್ರೊ ಶೈಲಿಯ ರಗಡ್‌ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಳ್ಳಲಿದ್ದಾರೆ.

ಕೋವಿಡ್‌–19 ಪರಿಣಾಮ ಇದರ ಶೂಟಿಂಗ್‌ ಸ್ಥಗಿತಗೊಂಡಿತ್ತು. ಈ ತಿಂಗಳ ಅಂತ್ಯದಲ್ಲಿ ಶೂಟಿಂಗ್‌ ಶುರುವಾಗಲಿದೆಯಂತೆ. ಇದಕ್ಕಾಗಿ ಬೆಂಗಳೂರಿನ ಮಿನರ್ವ ಮಿಲ್ ಬಳಿ ದೊಡ್ಡ ಜೈಲಿನ ಸೆಟ್ ಅಳವಡಿಸಲಾಗಿದೆ. ಇಲ್ಲಿಯೇ ಸಾಹಸ ದೃಶ್ಯದ ಶೂಟಿಂಗ್ ನಡೆಯಲಿದೆ.

ಶ್ರೀಸಿದ್ದೇಶ್ವರ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿ ಎಂ.ಟಿ.ಬಿ. ನಾಗರಾಜ್ ಇದಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನೂ ಈ ಚಿತ್ರದ ನಾಯಕಿ ಯಾರೆಂಬುದು ಅಂತಿಮಗೊಂಡಿಲ್ಲ. ಇದಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸಲಿದ್ದಾರೆ. ಅರ್ಜುನ್ ಶೆಟ್ಟಿ ಅವರ ಛಾಯಾಗ್ರಹಣವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು