ಶನಿವಾರ, ಮಾರ್ಚ್ 25, 2023
27 °C

ರಣವೀರ್ ಸಿಂಗ್ ಬೆತ್ತಲೆ ಚಿತ್ರ ವಿವಾದ: ಮಹಿಳೆಯರನ್ನು ಎಳೆತಂದ ರಾಮ್‌ಗೋಪಾಲ್ ವರ್ಮಾ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇತ್ತೀಚೆಗೆ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಮ್ಯಾಗ್‌ಜಿನ್ ಒಂದಕ್ಕೆ ತಮ್ಮ ಬೆತ್ತಲೆ ಚಿತ್ರಗಳನ್ನು ಫೋಟೊಶೂಟ್ ಮಾಡಿಸಿದ್ದರು. ಇದು ದೊಡ್ಡ ವಿವಾದವಾಗಿದ್ದು ಬೆತ್ತಲೆ ಚಿತ್ರಗಳನ್ನು ಖಂಡಿಸಿ ರಣವೀರ್ ಸಿಂಗ್ ಮೇಲೆ ಎಫ್‌ಐಆರ್ ಕೂಡ ದಾಖಲಾಗಿದೆ.

ಇದೀಗ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಕೂಡ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದು, ಮಹಿಳೆಯರು ಹೀಗೆ ಮಾಡಿದರೆ ಸುಮ್ಮನಿರುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ನಾನು ವೈಯಕ್ತಿಕವಾಗಿ ರಣವೀರ್ ಸಿಂಗ್ ಅವರು ಈ ರೀತಿ ಫೋಟೊಗಳನ್ನು ಹಾಕಿದ್ದಕ್ಕೆ ಶ್ಲಾಘಿಸುತ್ತೇನೆ. ಅನೇಕರು ರಣವೀರ್‌ನ ಹೊಸ ಸಾಹಸವನ್ನು ಶ್ಲಾಘಿಸುವುದನ್ನು ನೋಡಿ ನಾನು ರೋಮಾಂಚನಗೊಂಡಿದ್ದೇನೆ. ಆದರೆ, ಒಬ್ಬ ಮಹಿಳೆ ಅದೇ ರೀತಿ ಮಾಡಿದರೆ ಆ ಮಹಿಳೆಯನ್ನೂ ಶ್ಲಾಘಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಲಿಂಗ ಸಮಾನತೆ ಇರಬೇಕು ಅಲ್ವಾ ಎಂದು ವ್ಯಂಗ್ಯಭರಿತವಾಗಿ ಟ್ವೀಟ್ ಮಾಡಿದ್ದಾರೆ.

ಇನ್ನು ರಣವೀರ್ ಸಿಂಗ್ ಅವತಾರ ಖಂಡಿಸಿ ಅನೇಕರು ರಣವೀರ್‌ ಅವರಿಗೆ ಬಟ್ಟೆ ದಾನ ಮಾಡಿ ಎಂಬ ಅಭಿಯಾನವನ್ನು ಕೂಡ ಅಲ್ಲಲ್ಲಿ ಆರಂಭಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ತಮ್ಮದೇ ನಗ್ನ ಚಿತ್ರಗಳನ್ನು ಪ್ರಕಟಿಸಿದ್ದಕ್ಕಾಗಿ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಮುಂಬೈ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರು.

 

ತಮ್ಮ ನಗ್ನ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ರಣವೀರ್ ಸಿಂಗ್ ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದಲ್ಲದೆ, ಅವರ ಘನತೆಗೆ ಕುಂದು ಉಂಟು ಮಾಡಿದ್ದಾರೆ ಎಂಬುದಾಗಿ ಮುಂಬೈನಲ್ಲಿ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು ಎಂದು ಪೊಲೀಸರು ಸೋಮವಾರ ತಿಳಿಸಿದ್ದರು.

ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ನಟನ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ದೂರುದಾರರು ಒತ್ತಾಯಿಸಿದ್ದರು.

ರಣವೀರ್ ಸಿಂಗ್ ಇತ್ತೀಚೆಗೆ ನಿಯತಕಾಲಿಕೆಯೊಂದರ ಫೋಟೊಶೂಟ್‌ಗೆ ಬೆತ್ತಲೆಯಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ತಮ್ಮ ನಗ್ನ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿಯೂ ಪ್ರಕಟಿಸಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು