ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಚಾರಿಯ 2ನೇ ಅವತಾರ! ನಟ, ನಿರ್ದೇಶಕ ತೇಜ್‌ ಸಂದರ್ಶನ

Last Updated 31 ಮಾರ್ಚ್ 2023, 0:29 IST
ಅಕ್ಷರ ಗಾತ್ರ

‘ರಾಮಾಚಾರಿ’ ನೆನಪಾಗುವುದು ವಿಷ್ಣುವರ್ಧನ್‌ ಅವರ ನಾಗರಹಾವು ಚಿತ್ರದಿಂದ. ಬಳಿಕ ಕ್ರೇಜಿಸ್ಟಾರ್‌ ರವಿಚಂದ್ರನ್‌ ‘ರಾಮಾಚಾರಿ’ಯಾದರು. ನಟ ಯಶ್‌ ‘ಮಿಸ್ಟರ್‌ ಆಂಡ್‌ ಮಿಸೆಸ್‌ ರಾಮಚಾರಿ’ಯಲ್ಲಿ ಕಂಡರು. ಇದೀಗ ‘ರಾಮಾಚಾರಿ 2.0’ ಏಪ್ರಿಲ್ 7 ರಂದು ತೆರೆ ಮೇಲೆ ಅವತರಿಸಲಿದ್ದಾನೆ. ಈ ಬಗ್ಗೆ ನಟ, ನಿರ್ದೇಶಕ ತೇಜ್‌ ಮಾತನಾಡಿದ್ದಾರೆ.

‘ರಾಮಾಚಾರಿ 2.0’ ಎಂಬ ಶೀರ್ಷಿಕೆಯನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ?

ಇಲ್ಲಿ ತಾತನ ಹೆಸರು ರಾಮಾಚಾರಿ. ಕಥೆಯ ನಾಯಕ, ರಾಮಾಚಾರಿಯ ಮೊಮ್ಮಗ ಸಿಟ್ಟಿನಿಂದ ಕೂಡಿರುವ (ಆ್ಯಂಗ್ರಿ ಯಂಗ್‌ ಮ್ಯಾನ್‌) ಯುವಕ. ಆತ ಬುದ್ಧಿವಂತನಾಗಿದ್ದರೆ ಹೇಗಿರುತ್ತದೆ ಎಂಬುದೇ ಕಥೆ. ಭವಿಷ್ಯವನ್ನು ಹ್ಯಾಕ್‌ ಮಾಡುವ ಮೊಮ್ಮಗ. ತಾತ ಮತ್ತು ಮೊಮ್ಮಗ ನಡುವಿನ ಭಿನ್ನವಾದ ಪಯಣದಲ್ಲಿ ನಾನು ಮೊಮ್ಮಗನ ಪಾತ್ರ ಮಾಡಿದ್ದೇನೆ. ಕರ್ಮದ ಫಲವನ್ನು ಚಿತ್ರದಲ್ಲಿ ಹೇಳಲಾಗಿದೆ. ತಾತ, ಅಪ್ಪನಿಂದ ನಮಗೆ ಭೌತಿಕವಾದ ಆಸ್ತಿ, ಮನೆ, ಅಂತಸ್ತು ಸಿಗುತ್ತದೆ. ಅಜ್ಜ, ಅಪ್ಪ ಮಾಡಿಟ್ಟ ಕರ್ಮವೂ ಅದರ ಜತೆಗೆ ಬರುತ್ತದೆ. ಸುಮಾರು ಜನ ಈ ಶೀರ್ಷಿಕೆಗೆ ಅರ್ಜಿ ಹಾಕಿದ್ದರು. ಆದರೆ ಅಂತಿಮವಾಗಿ ನನಗೆ ಸಿಕ್ಕಿದ್ದು ನನ್ನ ಪುಣ್ಯ.

ಕನ್ನಡದ ಬಹುತೇಕ ಚಿತ್ರಗಳಿಗೆ ಜನವೇ ಬಾರದ ಹೊತ್ತಿನಲ್ಲಿ ಈ ಚಿತ್ರದ ಕುರಿತು ಎಷ್ಟು ನಿರೀಕ್ಷೆಯಿದೆ?

ನನ್ನ ಹಿಂದಿನ ರಿವೈಂಡ್‌ ಆರ್ಥಿಕವಾಗಿ ಉತ್ತಮ ಗಳಿಕೆ ಕಂಡಿದೆ. ಚಿತ್ರಮಂದಿರಲ್ಲಿಯೂ ತಕ್ಕಮಟ್ಟಿನ ಯಶಸ್ಸು ಸಾಧಿಸಿತ್ತು. ಚಿತ್ರದ ಎಲ್ಲ ಹಕ್ಕುಗಳೂ ಮಾರಾಟವಾಗಿವೆ. ಅದರ ಆತ್ಮವಿಶ್ವಾಸದಿಂದಲೇ ರಾಮಾಚಾರಿ 2.0 ಚಿತ್ರ ಮಾಡಿದ್ದೇನೆ. ಒಳ್ಳೆ ಕಂಟೆಂಟ್‌ ಜತೆಗೆ ಕಮರ್ಷಿಯಲ್‌ ಟಚ್‌ ಹೊಂದಿರುವ ಸಿನಿಮಾ. ಸೈನ್ಸ್‌ ಫಿಕ್ಷನ್‌ಗೆ ಮಾಸ್‌ ಟಚ್‌ ನೀಡಿದ್ದೇನೆ. ನಾವು ಪೂರ್ವಜನ್ಮದ, ನಮಗಿಂತ ಮೊದಲಿನ ತಲೆಮಾರಿನ ಕರ್ಮ ನಮ್ಮೊಂದಿಗೆ ಬರುತ್ತದೆ ಎಂದು ನಂಬುತ್ತೇವೆ. ಅದರ ಕಥೆಯನ್ನೇ ಇಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ.

ರಾಘವೇಂದ್ರ ರಾಜಕುಮಾರ್‌ ಅವರ ಪಾತ್ರವೇನು?

ರಾಘಣ್ಣ ನಾಯಕನ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಒಂದು ಭಿನ್ನವಾದ ಪಾತ್ರ. ತಾತ ಮತ್ತು ಮೊಮ್ಮಗನ ನಡುವೆ ನಿಲ್ಲುವ ತಂದೆ ಪ್ರೇಕ್ಷಕರಿಗೆ ಬೇರೆಯದೇ ಕಥೆಯನ್ನು ಹೇಳುತ್ತಾರೆ. ರಾಜ್‌ಕುಮಾರ್‌ ಕಾಲದಿಂದ, ಶಂಕರ್‌ನಾಗ್‌ ಯುಗದಿಂದ ಇಲ್ಲಿತನಕ ಬಹುತೇಕ ಹೊಸ ಪ್ರಯತ್ನಗಳು ಬಂದಿದ್ದು ಕನ್ನಡದಲ್ಲಿ.

‘ಗಾಡ್’ ಸಿನಿಮಾ ಬಗ್ಗೆ?

ಇದೇ ತಿಂಗಳಿನಿಂದ ‘ಗಾಡ್‌’ ಚಿತ್ರೀಕರಣ ಪ್ರಾರಂಭವಾಗುತ್ತದೆ. ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾ. ಇದರಲ್ಲಿಯೂ ರಾಘವೇಂದ್ರ ರಾಜ್‌ಕುಮಾರ್‌ ಮಹತ್ವದ ಪಾತ್ರ ಮಾಡಿದ್ದಾರೆ. ಈ ಚಿತ್ರದ ಬಳಿಕ ‘ಆಟೋರಾಜ ರಿಟರ್ನ್ಸ್‌’ ಎಂಬ ಸಿನಿಮಾ ಮಾಡುತ್ತಿರುವೆ. ‘ಸನ್‌ ಆಫ್‌ ಆಟೋರಾಜ’ ಎಂಬ ಅಡಿಬರಹ ಈ ಚಿತ್ರಕ್ಕಿದೆ. ಆಟೋರಾಜ ತೀರಿಕೊಳ್ಳುತ್ತಾರೆ. ಅಮೆರಿಕದಲ್ಲಿ ಕೆಲಸ ಮಾಡಿ ಭಾರತಕ್ಕೆ ವಾಪಸ್‌ ಬರುವ ಅವರ ಮಗ ಹೇಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾನೆ ಎಂಬುದೇ ಇದರ ಕಥೆ. ಪೊಲಿಟಿಕಲ್‌ ಥ್ರಿಲ್ಲರ್‌ ಮಾಸ್‌ ಸಿನಿಮಾವಿದು. ಶಂಕರ್‌ನಾಗ್‌ಗೆ ಅರ್ಪಣೆ ಮಾಡಿದ್ದೇನೆ.

ನಿಮ್ಮ ಸಿನಿಮಾಗಳಿಗೆ ನೀವೇ ನಾಯಕ, ನಿರ್ದೇಶಕ, ನಿರ್ಮಾಪಕ ಏಕೆ?

ಮೊದಲನೆಯದಾಗಿ ಬೇರೆ ಉತ್ತಮ ನಿರ್ದೇಶಕರು ನನ್ನನ್ನು ಗುರುತಿಸಿಲ್ಲ. ರಿವೈಂಡ್‌ ಸಿನಿಮಾದಲ್ಲಿ ಅಪ್ಪನ ಪಾತ್ರ ಮಾಡಿದ್ದೆ. ‘ರಾಮಾಚಾರಿ’ಯಲ್ಲಿ ಲವರ್‌ ಬಾಯ್‌, ಹಳ್ಳಿ ಹುಡುಗ. ಆದರೆ ‘ಗಾಡ್‌’ ಸಿನಿಮಾದಲ್ಲಿ ನನ್ನದು ನಿರ್ದೇಶನದ ಜತೆಗೆ ವಿಲನ್‌ ಪಾತ್ರ. ಎರಡನೆಯದಾಗಿ ಇಲ್ಲಿವರೆಗೆ ಗಳಿಸಿದ ಬ್ರ್ಯಾಂಡ್‌ ಕಳೆದುಕೊಳ್ಳಬಾರದೆಂಬ ಎಚ್ಚರಿಕೆಯಿಂದ ನನ್ನ ಸಿನಿಮಾ ನಾನೇ ಮಾಡಿಕೊಳ್ಳುತ್ತೇನೆ. ನನ್ನ ನಿರೀಕ್ಷೆಗೆ ತಕ್ಕ ಕಥೆ ಸಿಕ್ಕರೆ ಬೇರೆಯವರ ಜತೆ ಸಿನಿಮಾ ಮಾಡುವೆ. ಸದ್ಯ ಒಂದು ತಮಿಳು ಸಿನಿಮಾ ಒಪ್ಪಿಕೊಂಡಿದ್ದೇನೆ.

‘ರಾಮಾಚಾರಿ 2.0’ ಚಿತ್ರದಿಂದ ಪ್ರೇಕ್ಷಕ ಏನನ್ನು ನಿರೀಕ್ಷಿಸಬಹುದು?

ಒಂದು ಮನೋರಂಜನಾತ್ಮಕ ಚಿತ್ರ. ಒಳ್ಳೆಯದನ್ನು ಮಾಡಿದರೆ ಒಳ್ಳೆಯದಾಗುತ್ತದೆ. ಕೆಟ್ಟದ್ದನ್ನು ಮಾಡಿದರೂ ಕರ್ಮ ಫಲ ಕಾಡುತ್ತದೆ ಎಂಬ ಗಟ್ಟಿಯಾದ ಸಂದೇಶವಿದೆ. ಎಲ್ಲಕ್ಕಿಂತ ಹೆಚ್ಚಾಗಿ ರಾಮಾಚಾರಿ ಎಂಬ ಶೀರ್ಷಿಕೆಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಜನರ ಪ್ರೀತಿಯಿದೆ. ಹೀಗಾಗಿ ಚಿತ್ರಮಂದಿರದಲ್ಲಿ ಉತ್ತಮ ಆರಂಭ ಸಿಗಬಹುದೆಂಬ ನಂಬಿಕೆ ಇದೆ.

ಚಿತ್ರದಲ್ಲಿನ ಇತರ ಪಾತ್ರವರ್ಗದ ಕುರಿತು?

ರಾಘವೇಂದ್ರ ರಾಜ್‌ಕುಮಾರ್‌ ಚಿತ್ರದ ಪ್ರಮುಖ ಆಕರ್ಷಣೆ.'ಶ್ರೀರಸ್ತು ಶುಭಮಸ್ತು' ಧಾರಾವಾಹಿ ನಾಯಕಿ ಚಂದನಾ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ನನ್ನರಸಿ ರಾಧೆ' ಧಾರಾವಾಹಿ ನಟಿ ಕೌಸ್ತುಭ ಮಣಿ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT