ಭಾನುವಾರ, ಮಾರ್ಚ್ 26, 2023
21 °C

ಆರ್‌ಜಿವಿ ‘ಮರ್ಡರ್‌’ ಫಸ್ಟ್‌ಲುಕ್‌ ಬಿಡುಗಡೆ

. Updated:

ಅಕ್ಷರ ಗಾತ್ರ : | |

ಖ್ಯಾತ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಅಪ್ಪಂದಿರ ದಿನದಂದು ತಮ್ಮ ಮುಂದಿನ ಚಿತ್ರ ‘ಮರ್ಡರ್‌’ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ತೆಲಂಗಾಣದಲ್ಲಿ ನಡೆದ‌ ಮರ್ಯಾದೆಗೇಡು ಹತ್ಯೆಯ ಸತ್ಯ ಕತೆಯನ್ನು ಆಧರಿಸಿ ಈ ಚಿತ್ರಕತೆ ಹೆಣೆಯಲಾಗಿದೆ. 

2018ರ ಸೆಪ್ಟೆಂಬರ್‌ನಲ್ಲಿ 24 ವರ್ಷದ ಪ್ರಣಯ್‌ ತನ್ನ ಐದು ತಿಂಗಳ ಗರ್ಭಿಣಿ ಪತ್ನಿ ಅಮೃತಾಳೊಂದಿಗೆ ಆಸ್ಪತ್ರೆಯಿಂದ ಮರಳುವಾಗ ಆತನನ್ನು ಹತ್ಯೆ ಮಾಡಲಾಗಿತ್ತು. ಪರಿಶಿಷ್ಟ ಜಾತಿಗೆ ಸೇರಿದ ಪ್ರಣಯ್‌ನನ್ನು‌ ಸ್ವತಃ ಅಮೃತಾಳ ಅಪ್ಪ ಮಾರುತಿ ರಾವ್‌ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದ. 

ಈ ಘಟನೆ ನಡೆದ ಸಂದರ್ಭದಲ್ಲಿಯೇ ಈ ಟ್ರಾಜಿಕ್‌ ಲವ್‌ಸ್ಟೋರಿ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡುವುದಾಗಿ ವರ್ಮಾ ಘೋಷಿಸಿದ್ದರು. ಈಗ ಸದ್ದಿಲ್ಲದೇ ಚಿತ್ರಕತೆ ಮುಗಿಸಿದ್ದು, ಸಿನಿಮಾಕ್ಕೆ ‘ಮರ್ಡರ್‌’ ಎಂದು ಹೆಸರಿಡಲಾಗಿದೆ. ಚಿತ್ರೀಕರಣಕ್ಕೆ ಪೂರ್ವಸಿದ್ಧತೆ ನಡೆಯುತ್ತಿದ್ದು ಶೀಘ್ರದಲ್ಲಿಯೇ ಚಿತ್ರ ಸೆಟ್ಟೇರಲಿದೆ. 

ಜೂನ್‌ 21 ರಂದು ಅಪ್ಪಂದಿರ ದಿನವೇ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಮಾಡಿರುವ ವರ್ಮಾ, ‘ಮಗಳ ಮೇಲಿನ ಅಪ್ಪನ ಅತಿಯಾದ ಪ್ರೀತಿಯೇ ದುರಂತ ಅಂತ್ಯಕ್ಕೆ ಕಾರಣ. ಇಂಥ ಅಪ್ಪ ಯಾರಿಗೂ ಸಿಗದಿರಲಿ’ ಎಂದು ಟ್ವೀಟ್‌ ಮಾಡಿದ್ದಾರೆ.

ಮಗಳನ್ನು ಅತಿಯಾಗಿ ಪ್ರೀತಿಸುವ ಅಪ್ಪನ ಅತಿಯಾದ ‘ಪೊಸೆಸಿವ್‌ನೆಸ್’‌ ಮತ್ತು ‘ದುಡುಕು ನಿರ್ಧಾರ’ದ ಸುತ್ತ ಸಿನಿಮಾ ಕತೆ ಗಿರಕಿ ಹೊಡೆಯಲಿದೆ ಎಂಬ ಸುಳಿವನ್ನು ಆರ್‌ಜಿವಿ ನೀಡಿದ್ದಾರೆ. ಪೋಸ್ಟರ್‌ನಲ್ಲೂ ಅಪ್ಪ– ಮಗಳ ಫೋಟೊ ಕೂಡ ಇದನ್ನೇ ಹೇಳುತ್ತದೆ. 

ಅಮೃತಾಳ ಪಾತ್ರವನ್ನು ಅವಂಚ ಸಾಹಿತಿ ನಿರ್ವಹಿಸಲಿದ್ದಾರೆ. ‘ಕೊರೊನಾ ವೈರಸ್’‌ ಸಿನಿಮಾದ ಮುಖ್ಯ ಪಾತ್ರಧಾರಿ, ನಟ ಶ್ರೀಕಾಂತ್‌ ಅಯ್ಯಂಗಾರ್‌ ಅಪ್ಪ ಮಾರುತಿ ರಾವ್‌ ಪಾತ್ರದಲ್ಲಿ ನಟಿಸಲಿದ್ದಾರೆ. 

ಈ ಸಿನಿಮಾವು ಮಕ್ಕಳ ಮೇಲೆ ತಂದೆಯ ನಿಯಂತ್ರಣದ ಮಿತಿ, ಮಗಳಿಗೆ ಪರಿಸ್ಥಿತಿಯ ಬಗ್ಗೆ ಅರಿವಿದ್ದರೂ ಅದರ ನಿರ್ಲಕ್ಷ್ಯದಿಂದ ಆದ ಪರಿಣಾಮ ಹಾಗೂ ಒಬ್ಬರ ಜೀವನವನ್ನು ಉತ್ತಮಗೊಳಿಸಲು ಬೇರೊಬ್ಬರ ಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಸಮರ್ಥಿಸಿಕೊಳ್ಳಬಹುದೇ? ಎಂಬ ನೈತಿಕ ಪ್ರಶ್ನೆಗಳೊಂದಿಗೆ ಈ ಸಿನಿಮಾ ನಿಮ್ಮ ಮುಂದೆ ಬರಲಿದೆ ಎಂದು ಆರ್‌ಜಿವಿ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು