ಶುಕ್ರವಾರ, ಅಕ್ಟೋಬರ್ 23, 2020
26 °C

ಚಿತ್ರಮಂದಿರಕ್ಕೆ ಲಗ್ಗೆ ಇಡುವ ಸುಳಿವು ನೀಡಿದ ‘ರಾಬರ್ಟ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ದರ್ಶನ್‌ ಮತ್ತು ನಿರ್ದೇಶಕ ತರುಣ್‌ ಸುಧೀರ್‌ ಕಾಂಬಿನೇಷನ್‌ನಡಿ ನಿರ್ಮಾಣವಾಗಿರುವ ‘ರಾಬರ್ಟ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ಏಪ್ರಿಲ್‌ ಮೊದಲ ವಾರವೇ ಇದರ ಬಿಡುಗಡೆಗೆ ದಿನಾಂಕವೂ ನಿಗದಿಯಾಗಿತ್ತು. ಆದರೆ, ಕೋವಿಡ್‌–19 ಪರಿಣಾಮ ಬಿಡುಗಡೆಯು ಮುಂದೂಡಿಕೆಯಾಗಿತ್ತು.

ಈಗ ಚಿತ್ರಮಂದಿರಗಳ ಪುನರಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ‘ರಾಬರ್ಟ್‌’ ಸಿನಿಮಾ ಕೂಡ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಉಮಾಪತಿ ಫಿಲ್ಮ್ಸ್‌ ಸುಳಿವು ನೀಡಿದೆ. ಆದರೆ, ಅಧಿಕೃತವಾಗಿ ದಿನಾಂಕವನ್ನು ಪ್ರಕಟಿಸಿಲ್ಲ. ಅಂದಹಾಗೆ ಇಂದು ನಿರ್ದೇಶಕ ತರುಣ್‌ ಸುಧೀರ್‌ ಅವರ ಜನ್ಮದಿನ. ಹಾಗಾಗಿ, ‘ರಾಬರ್ಟ್‌’ ಚಿತ್ರದ ಹೊಸ ಪೋಸ್ಟರ್‌ ಕೂಡ ಬಿಡುಗಡೆಯಾಗಿದೆ. ಕಳೆದ ತಿಂಗಳು ಚಿತ್ರದ ನಾಯಕಿ ಆಶಾ ಭಟ್‌ ಅವರ ಹುಟ್ಟುಹಬ್ಬದಂದು ಆಕೆಯ ಫಸ್ಟ್‌ಲುಕ್‌ ಪೋಸ್ಟರ್‌ ಅನ್ನು ಬಿಡುಗಡೆ ಮಾಡಲಾಗಿತ್ತು.

‘A Brother from another Mother ತರುಣನಿಗೆ ನಮ್ಮ ರಾಬರ್ಟ್ ತಂಡದಿಂದ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲವೂ ಈಡೇರಲಿ ಎಂದು ಆಶಿಸುತ್ತೇನೆ’ ಎಂದು ದರ್ಶನ್‌ ಟ್ವೀಟ್‌ ಮಾಡಿದ್ದಾರೆ.

‘ರಾಬರ್ಟ್‌’ ದರ್ಶನ್‌ ನಟನೆಯ 53ನೇ ಸಿನಿಮಾ. ಇದಕ್ಕೆ ಉಮಾಪತಿ ಶ್ರೀನಿವಾಸ್‌ ಗೌಡ ಬಂಡವಾಳ ಹೂಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಸುಧಾಕರ್‌ ಎಸ್‌. ರಾಜು ಅವರ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್‌ ಸಂಕಲನ ನಿರ್ವಹಿಸಿದ್ದಾರೆ. ಟಾಲಿವುಡ್‌ನ ಜಗಪತಿ ಬಾಬು ಖಳನಟನಾಗಿ ನಟಿಸಿದ್ದಾರೆ. ವಿನೋದ್ ಪ್ರಭಾಕರ್, ಸೋನಲ್ ಮಾಂತೆರೊ, ಶಿವರಾಜ್ ಕೆ.ಆರ್. ಪೇಟೆ, ರವಿಕಿಶನ್, ಚಿಕ್ಕಣ್ಣ, ರವಿಶಂಕರ್ ತಾರಾಗಣದಲ್ಲಿ ಇದ್ದಾರೆ.

ಕಳೆದ ವರ್ಷ ದರ್ಶನ್ ಅಭಿನಯದ ‘ಯಜಮಾನ’, ‘ಮುನಿರತ್ನ ಕುರುಕ್ಷೇತ್ರ’ ಮತ್ತು ‘ಒಡೆಯ’ ಸಿನಿಮಾಗಳು ತೆರೆಕಂಡಿದ್ದವು. ಹಾಗಾಗಿ, ಈ ಸಿನಿಮಾದ ಮೇಲೂ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದೆ. ಪ್ರಸ್ತುತ ದರ್ಶನ್ ‘ರಾಜವೀರ ಮದಕರಿ ನಾಯಕ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶಿಸಿರುವ ಇದರ ಮೊದಲ ಹಂತದ ಶೂಟಿಂಗ್‌ ಪೂರ್ಣಗೊಂಡಿದೆ. ಶೀಘ್ರವೇ, ಎರಡನೇ ಹಂತದ ಶೂಟಿಂಗ್‌ ಆರಂಭವಾಗಲಿದೆಯಂತೆ. ಇದಾದ ಬಳಿಕ ದಚ್ಚು ‘ಮಿಲನ’ ಚಿತ್ರದ ಖ್ಯಾತಿಯ ಪ್ರಕಾಶ್‌ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಇದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು