ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕನ ನೋವು ಯಾರಿಗಾದರೂ ಗೊತ್ತಾ?!

Last Updated 22 ಮೇ 2020, 6:30 IST
ಅಕ್ಷರ ಗಾತ್ರ

‘ಅಯೋಗ್ಯ’ ಚಿತ್ರ ಖ್ಯಾತಿಯ ನಿರ್ದೇಶಕ ಎಸ್‌.ಮಹೇಶ್‌ ಕುಮಾರ್‌, ಶ್ರೀಮುರಳಿ ಮತ್ತು ಆಶಿಕಾ ರಂಗನಾಥ್‌ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಮದಗಜ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕನ್ನಡದಲ್ಲಿ ಮಾತ್ರ ನಿರ್ಮಿಸಲು ಯೋಜಿಸಿದ್ದ ಈ ಚಿತ್ರ ಈಗ ತ್ರಿಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದ ಕುರಿತು ಮತ್ತುತೆರೆಯ ಹಿಂದಿನ ಕೆಲವು ಕಹಿಸತ್ಯಗಳನ್ನು ಅವರು ‘ಸಿನಿಮಾ ಪುರವಣಿ’ಯ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

*ತ್ರಿಭಾಷೆಯಲ್ಲಿ ಸಿನಿಮಾ ಮಾಡುವ ಆಲೋಚನೆ ಬಂದಿದ್ದು ಹೇಗೆ?

ಅಮ್ಮನ ಪಾತ್ರಕ್ಕೆ ಡೇಟ್‌ ಪಡೆಯಲು ನಮ್ಮ ಕನ್ನಡದ ನಟಿಯೊಬ್ಬರ ಮನೆಗೆ ಹೋಗಿದ್ದೆ. ಚಿತ್ರದ ಕಥೆಯನ್ನು ಅವರಿಗೆ ಹೇಳಿದೆ, ತುಂಬಾ ಖುಷಿಯಿಂದನಟಿಸಲು ಒಪ್ಪಿದರು. 25 ದಿನಗಳ ಡೇಟ್‌ ಅವಶ್ಯಕತೆ ಇತ್ತು. ಸಂಭಾವನೆ ವಿಚಾರ ಬಂದಾಗ ₹10 ಸಾವಿರ ಹೆಚ್ಚು ಬೇಕೆಂದು ಚೌಕಾಶಿ ನಡೆಸಿದರು. ಪಾತ್ರಕ್ಕಿಂತ ಹತ್ತು ಸಾವಿರವೇ ಮುಖ್ಯ ಎಂದುಬಿಟ್ಟರು. ಅನಿವಾರ್ಯವಾಗಿ ಅಮ್ಮನ ಪಾತ್ರಕ್ಕೆ ಪರಭಾಷೆಯ ಕಲಾವಿದೆಯನ್ನು ಕರೆತಂದೆವು.

ಇನ್ನು ವಿಲನ್‌ ಪಾತ್ರಕ್ಕೆ ನಮ್ಮ ಕನ್ನಡದ ನಟರೊಬ್ಬರನ್ನು ಸಂಪರ್ಕಿಸಿದ್ದೆ. ಅವರು ಇತ್ತೀಚೆಗೆ ಜನಪ್ರಿಯರು. ಅವರೂ ಕಥೆ ಕೇಳಿ ಸಿನಿಮಾ ಒಪ್ಪಿಕೊಂಡರು. ಸಂಭಾವನೆ ವಿಚಾರ ಬಂದಾಗ, ‘ಹೊರಗಿನವರನ್ನು ಕರೆತಂದು ಕೋಟಿಗಟ್ಟಲೆ ಕೊಡುತ್ತೀರಿ, ನಮಗೇಕೆ ಕೊಡಬಾರದು?’ ಎಂದರು. 16 ದಿನಗಳ ಕಾಲ್‌ಶೀಟ್‌ಗೆ ₹90 ಲಕ್ಷ ಬೇಡಿಕೆ ಇಟ್ಟರು. ಕ್ಯಾಷ್‌ ಕೊಡದಿದ್ದರೆ ರೇಂಜ್‌ ರೋವರ್‌ ಕಾರು ಕೊಡಿಸಿ ಎಂದುಬಿಟ್ಟರು. ವಿಲನ್‌ಗಳಿಗೂಪರಭಾಷೆಗೆ ಹೋಗುವಂತಾಯಿತು. ಇದನ್ನೆಲ್ಲ ‌ನಿರ್ದೇಶಕನಾಗಿ ತುಂಬಾ ನೋವಿನಿಂದ ಹೇಳುತ್ತಿದ್ದೇನೆ.

ಈ ನೋವಿನ ನಡುವೆಯೇ ನನಗೊಂದು ಹೊಸ ಆಲೋಚನೆ ಹೊಳೆಯಿತು. ಪರಭಾಷೆಯ ಕಲಾವಿದರು ಚಿತ್ರತಂಡ ಕೂಡಿಕೊಂಡ ನಂತರ ತೆಲುಗು, ತಮಿಳಿಗೂಡಬ್ಬಿಂಗ್‌ ಮಾಡಿ ಚಿತ್ರವನ್ನು ತ್ರಿಭಾಷೆಗಳಲ್ಲಿಏಕಕಾಲಕ್ಕೆ ಬಿಡುಗಡೆ ಮಾಡುವ ಆಲೋಚನೆ ಬಂದಿತು.ಆಗಿದ್ದೆಲ್ಲವೂ ಒಳ್ಳೆಯದೇ ಆಯಿತು.

*ಚಿತ್ರ ಈಗ ಯಾವ ಹಂತದಲ್ಲಿದೆ?

ಪರಿಸ್ಥಿತಿ ಸರಿ ಇದ್ದಿದ್ದರೆ ಚಿತ್ರ ಶೇ 95ರಷ್ಟು ಪೂರ್ಣವಾಗಿರುತ್ತಿತ್ತು. ಸದ್ಯ ಶೇ 30ರಷ್ಟು ಚಿತ್ರೀಕರಣವಾಗಿದೆ. 50 ದಿನಗಳ ಚಿತ್ರೀಕರಣ ಬಾಕಿ ಇದೆ. ಮೈಸೂರಿನಲ್ಲಿ 32 ದಿನಗಳು, ಬೆಂಗಳೂರಿನಲ್ಲಿ ಆರು ದಿನ ಹಾಗೂ ಹೊಗೇನಕಲ್ಲಿನಲ್ಲಿ 12 ದಿನಗಳ ಕಾಲ ಶೂಟಿಂಗ್‌ ನಡೆಸುವ ಯೋಜನೆ ಇದೆ.

*ವಾರಾಣಸಿಯ ಶೂಟಿಂಗ್‌ ಅನುಭವ ಹೇಗಿತ್ತು?

ಶಿವರಾತ್ರಿಯ ದಿನ ವಾರಾಣಸಿಯಲ್ಲಿ ಚಿತ್ರೀಕರಣ ನಡೆಸಿದ ಅನುಭವ ಎಂದೂ ಮರೆಯಲಾಗದು. ಆ ಕ್ಷಣಕ್ಕಾಗಿ ಬಹಳ ದಿನಗಳಿಂದ ಕಾದುಕೊಂಡಿದ್ದೆವು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಘೋರಿಗಳ ನಡುವೆ ಚಿತ್ರದ ಫೈಟ್‌ ಮತ್ತು ಕೆಲವು ದೃಶ್ಯಗಳನ್ನು ಚಿತ್ರೀಕರಿಸುವಾಗ ಮೈರೋಮಾಂಚನವಾಗುತ್ತಿತ್ತು. ಶಿವರಾತ್ರಿಯಂದು ಅಹೋರಾತ್ರಿ ಅಘೋರಿಗಳಿಂದ ನಡೆಯುವ ವಿಶಿಷ್ಟ ಆಚರಣೆಗಳು ಮೈಜುಮ್ಮೆನಿಸುತ್ತಿದ್ದವು. ಸುಟ್ಟ ಹೆಣದ ಮಾಂಸ ಭಕ್ಷಿಸುವ, ಹಠ ಯೋಗದಲ್ಲಿ ನಿರತರಾಗುವ, ಮುಕ್ತಿಗಾಗಿ ಅಂದು ಪ್ರಾಣ ತ್ಯಾಗ ಮಾಡುವ ಅಘೋರಿಗಳ ಸಮೂಹದ ನಡುವೆ ನಿಂತಾಗ ಹೊಸ ಲೋಕದ ಅನುಭವವಾಯಿತು. ಅಘೋರಿಗಳಿಂದ ನಮಗೆ ಅಡ್ಡಿಯಾಗಲಿಲ್ಲ, ಚಿತ್ರೀಕರಣಕ್ಕೆ ಸಂಪೂರ್ಣ ಸಹಕಾರ ನೀಡಿದರು.

*ಚಿತ್ರದ ಕಥೆಯ ಬಗ್ಗೆ ಹೇಳಿ...

ಇದೊಂದು ಪಕ್ಕಾ ಫ್ಯಾಮಿಲಿ ಸೆಂಟಿಮೆಂಟ್‌, ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್‌ ಸಿನಿಮಾ.‘ಉಗ್ರಂ’, ‘ಮಫ್ತಿ’ ಚಿತ್ರಗಳಲ್ಲಿನ ಶ್ರೀಮುರಳಿಯವರ ಹಳೆಯ ಚಾರ್ಮ್‌ ಇದರಲ್ಲಿ ಕಾಣಿಸಲಿದೆ. ಅದೇ ಡಾರ್ಕ್‌ಶೇಡ್‌ನಲ್ಲಿ ಹೊಸ ಜಾನರ್ ಕಥೆ‌ ಹೇಳಲಿದ್ದೇನೆ. ಟೈಟಲ್‌ ಹೇಳುವಂತೆ ಸಾಹಸವೇ ಪ್ರಧಾನವಾಗಿರಲಿದೆ. ಮದಗಜ ಎಂದಾಕ್ಷಣ ಪ್ರೇಕ್ಷಕರು ಹಾಸ್ಯ ನಿರೀಕ್ಷೆ ಮಾಡುವುದು ಸಹಜ. ಆದರೆ, ಇದು ಶುದ್ಧ ಭಾರತೀಯ ಭಾವುಕತೆಯ ಚಿತ್ರ. ಪೀಳಿಗೆ ಬದಲಾಗಬಹುದು, ಆದರೆ, ಭಾವನೆ, ಭಾವುಕತೆ ಬದಲಾಗುವುದಿಲ್ಲವಲ್ಲ.

*ಚಿತ್ರ ಯಾವಾಗ ಬಿಡುಗಡೆಯಾಗಲಿದೆ?

ಡಿಸೆಂಬರ್‌ 25ರಂದು ಕ್ರಿಸ್‌ಮಸ್‌ ಪ್ರಯುಕ್ತ ಚಿತ್ರ ಬಿಡುಗಡೆ ಮಾಡಲಿದ್ದೇವೆ. ಆಗಸ್ಟ್‌ 14ಕ್ಕೆ ಬಿಡುಗಡೆ ಮಾಡಬೇಕಿತ್ತು. ಕೊರೊನಾ ಕಾರಣಕ್ಕೆ ಎಲ್ಲವೂ ತಲಕೆಳಗಾಯಿತು. ಈಗಲೂ ನಮ್ಮ ಯೋಜನೆಗಳು ಸರ್ಕಾರದ ನಿರ್ಧಾರದ ಮೇಲೆಯೇ ನಿಂತಿವೆ.

ಈ ಚಿತ್ರಕ್ಕೆ ಉಮಾಪತಿಗೌಡ ಬಂಡವಾಳ ಹೂಡಿದ್ದಾರೆ. ಎಸ್‌.ಮಹೇಶ್‌ ಕುಮಾರ್‌ ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ ನಿಭಾಯಿಸಿದ್ದಾರೆ. ‘ಮಫ್ತಿ’ ಖ್ಯಾತಿಯ ನವೀನ್‌ಕುಮಾರ್‌ ಅವರ ಛಾಯಾಗ್ರಹಣ, ಕೆಜಿಎಫ್‌ ಖ್ಯಾತಿಯ ಚಂದ್ರಮೌಳಿ ಮತ್ತು ಶಂಕರ್‌ ಅವರ ಸಂಭಾಷಣೆ, ಸಂಕಲನ ಹರೀಶ್‌ ಕೊಂಡೆ, ರವಿ ಬಸ್ರೂರ್‌ ಸಂಗೀತ ನಿರ್ದೇಶನವಿದೆ. ಚೇತನ್‌ ಕುಮಾರ್‌ ಸಾಹಿತ್ಯ ಬರೆದಿದ್ದಾರೆ.ರಾಮ್‌– ಲಕ್ಷ್ಮಣ್, ಅನ್ಬು– ಅರಿವು ಅವಳಿ–ಜವಳಿ ಸಹೋದರರಸಾಹಸ ನಿರ್ದೇಶನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT