ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಞಾನ ಹೋಗಲಾಡಿಸುವವನೇ ಗುರು

ಶಂಕರ ಅಷ್ಟೋತ್ತರ ಶತನಾಮಾವಳಿ ಕಾರ್ಯಕ್ರಮದ ಸಮಾರೋಪದಲ್ಲಿ ಶೃಂಗೇರಿ ಶ್ರೀ
Last Updated 22 ಮೇ 2018, 10:59 IST
ಅಕ್ಷರ ಗಾತ್ರ

ಶೃಂಗೇರಿ: ಸನಾತನ ಧರ್ಮದ ಶ್ರೇಯೋಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸಿದ ಶಂಕರರು ಒಬ್ಬ ಐತಿಹಾಸಿಕ ಗುರು. ಭಾರತದಲ್ಲಿ ಧರ್ಮವನ್ನು ಉಳಿಸುವಲ್ಲಿ ಅವರ ಪಾತ್ರ ಮಹತ್ವವಾದುದು ಎಂದು ಶಾರದ ಮಠದ ಭಾರತೀ ತೀರ್ಥ ಸ್ವಾಮೀಜಿ ಹೇಳಿದರು.

ಶೃಂಗೇರಿ ಶಾರದ ಮಠದ ನರಸಿಂಹವನದ ಗುರುನಿವಾಸದಲ್ಲಿ ನಡೆದ ರಾಜ್ಯ ಮಟ್ಟದ ಶಂಕರ ಅಷ್ಟೋ
ತ್ತರ ಶತನಾಮಾವಳಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜಗತ್ತಿನ ಗುರುಪರಂಪರೆಗೆ ಭಗವತ್ಪಾದರು ನೀಡಿದ ಕೊಡುಗೆ ಅಪಾರ. ಮಾನವನ ಅಜ್ಞಾನವನ್ನು ಹೋಗಲಾಡಿಸಲು ಅವರ ಭಾಷ್ಯ ಹಾಗೂ ಪ್ರಕರಣ ಗ್ರಂಥಗಳು ಸಹಕಾರಿ. ಗುರುವಿನ ಸೇವೆ ಪ್ರತಿಯೊಬ್ಬರು ಶ್ರದ್ಧೆಯಿಂದ ಮಾಡಬೇಕು. ಮಾನವನು ತನ್ನಲ್ಲಿರುವ ಆಧ್ಯಾತ್ಮಿಕ ಸಂಶಯಗಳಿಗೆ ಗುರುವಿನ ಬಳಿ ಕೇಳಿದಾಗ ಅವನಲ್ಲಿರುವ ಅಹಂ ಕಳಚಿ ಬೀಳುತ್ತದೆ. ಗುರುವಿನ ಸೇವೆ ಮಾಡಿದವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದರು.

‘ಹಿಂದಿನ ಗುರುಗಳಾದ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಸ್ವಾಮೀಜಿ ಅವರು ಸುಮಾರು 150 ವರುಷಗಳ ಹಿಂದೆ ವೈಶಾಖಶುಕ್ಷ ಪಂಚಮಿಯಂದು ಶಂಕರಜಯಂತಿ ಉತ್ಸವಕ್ಕೆ ಚಾಲನೆ ನೀಡಿದರು. ಶ್ರೀ ಶಂಕರರ ಜನ್ಮಭೂಮಿ ಕಾಲಟಿ ಕ್ಷೇತ್ರವನ್ನು ಹಾಗೂ ಅವರ ಹಲವಾರು ಗ್ರಂಥಗಳನ್ನು ಪ್ರಕಟಿಸಲು ಪರಮಗುರುಗಳು ಮಾಡಿದ ಸೇವೆ ಅಪಾರ. ಶಂಕರರ ಅಷ್ಟೋತ್ತರ ಪಾರಾಯಣವನ್ನು ಪ್ರತಿಯೊಬ್ಬರು ಮಾಡಬೇಕು. ಆಗ ನಮ್ಮ ಅಹಂಕಾರ ಕಳೆದುಕೊಳ್ಳುತ್ತದೆ. ಶಂಕರರು ಧರ್ಮದ ಉಳಿವಿಗಾಗಿ ಶ್ರಮಿಸಿದ್ದಾರೆ. ಅವರ ಶಿಷ್ಯರಾದ ನಾವೆಲ್ಲರೂ ಧರ್ಮದ ಮಾರ್ಗದಲ್ಲಿ ನಡೆಯಬೇಕು. ಶಂಕರರ ಅಷ್ಟೋತ್ತರ ಪಾರಾಯಣದ ಅನುಷ್ಠಾನವನ್ನು ಜನಸಾಮಾನ್ಯರೂ ಪ್ರತಿ ನಿತ್ಯ ಮಾಡಿ ಶಂಕರರಿಗೆ ತಮ್ಮ ಶ್ರದ್ಧಾಭಕ್ತಿಯನ್ನು ತೋರ್ಪಡಿಸಬೇಕು. ಶಾರದ ಮಠದಿಂದ ಮುಂಬರುವ ದಿನಗಳಲ್ಲಿ ಶಂಕರರ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು’ ಎಂದರು.

ಬೆಳಿಗ್ಗೆ ಶಂಕರರ ರಥದೊಂದಿಗೆ ಮಠದಿಂದ ಶಂಕರಾಚಾರ್ಯ ವೃತ್ತದ ತನಕ ರಾಜ್ಯದ ಮೂರು ಸಾವಿರ ಭಕ್ತರು ಶಂಕರ ಅಷ್ಟೋತ್ತರ ಪಠಣ ಮಾಡಿ ಶ್ರದ್ಧಾಭಕ್ತಿ ಮೆರೆದರು. ಸಂಜೆ ಗುರುನಿವಾಸದಲ್ಲಿ ಪುನ: ಪಾರಾಯಣ ಪಠಿಸಿದರು.
ಬಾಗಲಕೋಟೆ, ಬೀದರ್, ಚಾಮರಾಜನಗರ, ಮ್ಯೆಸೂರು,ಮಂಡ್ಯ, ಬೆಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಭದ್ರಾವತಿ, ಮಂಗಳೂರು, ದಕ್ಷಿಣ ಕನ್ನಡ ಹೀಗೆ ಹಲವಾರು ಜಿಲ್ಲೆಗಳಿಂದ ಬಂದ ಭಕ್ತರು ಶಂಕರ ಅಷ್ಟೋತ್ತರ ಶತನಾಮಾವಳಿಯಲ್ಲಿ ಭಾಗವಹಿಸಿದ್ದರು.

ಡಿಸೆಂಬರ್‍ನಿಂದ ಮೇ ತನಕ ಒಟ್ಟು ಆರು ತಿಂಗಳು ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆದ ಅಷ್ಟೋತ್ತರ ಪಾರಾಯಣವು ಮೇ 20ರಂದು ಶೃಂಗೇರಿಯಲ್ಲಿ ಮುಕ್ತಾಯವಾಗಿದೆ.

ಗುರು ಎಂದರೆ ಸೂರ್ಯ: ಸ್ವಾಮೀಜಿ

‘ಗುರು ಎಂಬ ಶಬ್ಧಕ್ಕೆ ಮಹತ್ತರವಾದ ಆರ್ಥವನ್ನು ಪ್ರಾಚೀನ ಋಷಿಗಳು ನಮಗೆ ನೀಡಿದ್ದಾರೆ. ‘ಗು’ ಎಂದರೆ ಅಂಧಕಾರವನ್ನು ಹೋಗಲಾಡಿಸುವ ಜ್ಞಾನಿ. ‘ರು’ ಎಂದರೆ ಅಜ್ಞಾನವನ್ನುಹೋಗಲಾಡಿಸುವ ಸುಜ್ಞಾನಿ. ಶಂಕರರ ಅಷ್ಟೋತ್ತರದಲ್ಲಿ ಗುರು ಎಂದರೆ ಅಜ್ಞಾನ ಎಂಬ ಕತ್ತಲನ್ನು ಹೋಗಲಾಡಿಸುವ ಸೂರ್ಯನು ಎಂದು ವರ್ಣಿಸಲಾಗಿದೆ ಎಂದು ಶಾರದ ಮಠದ ಭಾರತೀ ತೀರ್ಥ ಸ್ವಾಮೀಜಿ ಹೇಳಿದರು.

ಮುಂಜಾವಿನಲ್ಲಿ ಬೆಳಕು ಬಂದಾಗ ಕತ್ತಲು ನಿವಾರಣೆಯಾಗುತ್ತದೆ. ಸಮುದ್ರಕ್ಕೆ ಚಂದ್ರನನ್ನು ನೋಡಿದರೆ ಅತ್ಯಂತ ಆಹ್ಲಾದಕಾರವಾಗುತ್ತದೆ. ಹಾಗೆಯೇ ಗುರುಗಳ ಸಾನ್ನಿಧ್ಯವು ನಮಗೆ ಚಂದ್ರನ ಹೊಂಬೆಳಕು ನೀಡುತ್ತದೆ. ಶಂಕರರು ಭಾಷ್ಯ ಹಾಗೂ ಪ್ರಕರಣ ಗ್ರಂಥಗಳ ಮೂಲಕ ನಮ್ಮ ಅಜ್ಞಾನ ನಿವಾರಣೆ ಮಾಡಿದರು. ಅಂತಹ ಗುರುವಿಗೆ ನಾವು ಸರ್ವಕಾಲ ಋಣಿಯಾಗಬೇಕು’ ಎಂದು ಹೇಳಿದರು.

**
ಗುರುವಿನ ಉಪಾಸನೆಯಿಂದ ಜ್ಞಾನ ಪಡೆಯಬಹುದು ಎಂದು ಶ್ರೀಕೃಷ್ಣ ಗೀತೆಯಲ್ಲಿ ತಿಳಿಸಿದ್ದಾರೆ. ಗುರುವಿನ ಸೇವೆ ಮಾಡಿ ನಮ್ಮೊಳಗಿನ ಸಂಶಯ ನಿವಾರಣೆ ಮಾಡಿದರೆ ಅಲೌಕಿಕ ಆನಂದ ಪಡೆಯಲು ಸಾಧ್ಯ
– ಭಾರತೀತೀರ್ಥ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT