ಮಂಗಳವಾರ, ಮೇ 18, 2021
24 °C

ಸೈಫ್ ವಯಸ್ಸಿಗೆ ತಕ್ಕ ಪಾತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಸೈಫ್ ಅಲಿ ಖಾನ್ ಅವರು ನಟಿಸುತ್ತಿರುವ ಮುಂದಿನ ಸಿನಿಮಾ ‘ಜವಾನಿ ಜಾನೆಮನ್’. ಈ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂಬುದನ್ನು ಸೈಫ್ ಬಹಿರಂಗಪಡಿಸಿದ್ದಾರೆ. ‘ನನ್ನ ವಯಸ್ಸಿಗೆ ತಕ್ಕ ಪಾತ್ರಗಳನ್ನು ನಾನು ನಿಭಾಯಿಸಬೇಕು’ ಎಂಬುದೇ ಆ ಕಾರಣ ಎಂದು ಹೇಳಿದ್ದಾರೆ.

ಕೌಟುಂಬಿಕ, ಹಾಸ್ಯಮಯ ಸಿನಿಮಾ ಇದು. 49 ವರ್ಷ ವಯಸ್ಸಿನ ಸೈಫ್ ಅವರು ಇದರಲ್ಲಿ ‘ತನಗೊಬ್ಬಳು ಮಗಳಿದ್ದಾಳೆ, ಆಕೆ ತನ್ನ ಮಾಜಿ ಪ್ರೇಯಸಿಗೆ ಜನಿಸಿದವಳು’ ಎಂಬುದನ್ನು ಇದ್ದಕ್ಕಿದ್ದಂತೆ ಕಂಡುಕೊಳ್ಳುತ್ತಾರೆ! ಮಗಳ ಪಾತ್ರವನ್ನು ಅಲಾಯಾ ನಿಭಾಯಿಸಿದ್ದಾರೆ. ಟಬು ಅವರು ಮಾಜಿ ಪ್ರೇಯಸಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಓಂಕಾರ, ತನ್ಹಾಜಿ ಹಾಗೂ ಇವುಗಳಂತಹ ಸಿನಿಮಾಗಳಲ್ಲಿ ಭಿನ್ನ ಬಗೆಯ ಪಾತ್ರಗಳು ನನಗೆ ಸಿಕ್ಕಿವೆ. ಆ ದೃಷ್ಟಿಯಿಂದ ನಾನು ಅದೃಷ್ಟವಂತ. ಜವಾನಿ ಜಾನೆಮನ್‌ ಚಿತ್ರದ ಕಥೆಯೊಂದಿಗೆ ನಿರ್ಮಾಪಕರು ನನ್ನ ಬಳಿ ಬಂದರು. ಆದರೆ ಒಂದೆರಡು ವರ್ಷ ನಾವು ಇದರ ಬಗ್ಗೆ ಚರ್ಚೆ ನಡೆಸಲೇ ಇಲ್ಲ. ನಾನು ನನ್ನ ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾಡಬೇಕು ಎಂದು ಬಯಸಿದ್ದೆ. ತಂದೆಯ ಪಾತ್ರ ನನ್ನಲ್ಲಿ ಆಸಕ್ತಿ ಮೂಡಿಸಿತು. ಇದು ಭಿನ್ನವಾದದ್ದು’ ಎನ್ನುತ್ತಾರೆ ಸೈಫ್.

ಇಷ್ಟನ್ನೆಲ್ಲ ಅವರು ಹೇಳಿದ್ದು ‘ಜವಾನಿ ಜಾನೆಮನ್’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ. ‘ವಯಸ್ಸಾಗುತ್ತಿದೆ ಎಂಬ ಭಯ ಇದೆಯಾ’ ಎಂಬ ಪ್ರಶ್ನೆಗೆ ಸೈಫ್, ಇಲ್ಲವೆಂಬಂತೆ ಉತ್ತರಿಸಿದರು.

‘ಮನಸ್ಸಿನಲ್ಲಿ ನೀವು ಯುವಕರಾಗಿ ಇರಬೇಕು. ನಾನು ತೀರಾ ಎಳೆ ವಯಸ್ಸಿನ ಯುವಕನಂತೆ ಇರಲು ಬಯಸುವುದಿಲ್ಲ. ಹಾಗೆಯೇ, ತೀರಾ ವಯಸ್ಸಾದವನಂತೆ ಇರಲೂ ಇಚ್ಛೆಪಡುವುದಿಲ್ಲ. ಸಂತಸದಿಂದ ಇದ್ದೇನೆ. ನನಗೆ ಕೆಲಸ ಇರುವಷ್ಟು ಕಾಲ ತೃಪ್ತಿಯಾಗಿರುತ್ತೇನೆ. ನಿವೃತ್ತನಾಗಬೇಕಾದಾಗ ನಿವೃತ್ತನಾಗುವೆ’ ಎಂದರು.

ದುಡ್ಡು ಸಂಪಾದಿಸಲು ಒಂದಿಷ್ಟು ಸಮಯ ಮೀಸಲಿಡುವುದು. ವಿಶ್ರಾಂತಿಗೆ ಇನ್ನೊಂದಿಷ್ಟು ಸಮಯ ಮೀಸಲಿಡುವುದು ಎಂಬ ಆಲೋಚನೆ ಸೈಫ್ ಅವರಿಗೆ ಇಷ್ಟವಂತೆ. ಜೀವನದಲ್ಲಿ ಎಲ್ಲದಕ್ಕೂ ಒಂದು ಸಮಯವೆಂಬುದು ಇದೆ ಎನ್ನುವುದು ಸೈಫ್ ಅವರ ಅಭಿಪ್ರಾಯ.

ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿರುವ ಅಲಾಯಾ ಬಗ್ಗೆ ಪ್ರಶಂಸೆಯ ಮಾತು ಆಡಿದ ಸೈಫ್, ‘ಅವರ ಜೊತೆ ಅಭಿನಯಿಸುವುದು ಅದ್ಭುತ ಅನುಭವ ನೀಡಿತು’ ಎಂದರು. ಅಲಾಯಾ ಅವರು ಪೂಜಾ ಬೇಡಿ ಅವರ ಮಗಳು.

‘ನನ್ನ ಸುತ್ತ ಅದ್ಭುತ ನಟ, ನಟಿಯರು ಇದ್ದ ಕಾರಣಕ್ಕೆ ನಾನು ಚೆನ್ನಾಗಿ ಅಭಿನಯಿಸಲು ಸಾಧ್ಯವಾಯಿತು. ಚಿತ್ರದ ಸೆಟ್‌ನಲ್ಲಿ ಪ್ರತಿದಿನವೂ ಖುಷಿಪಟ್ಟಿದ್ದೇನೆ. ಚಿತ್ರೀಕರಣದ ನಂತರ ನನಗೆ ತೃಪ್ತಿ ಸಿಕ್ಕಿದೆ’ ಎನ್ನುವುದು ಅಲಾಯಾ ಅವರ ಮಾತು.

ಟಬು ಅವರದ್ದು ಇದರಲ್ಲಿ ಚಿಕ್ಕ ಪಾತ್ರ. ಅವರು ಸೈಫ್ ಜೊತೆ ಹಿಂದೆ ‘ಹಮ್‌ ಸಾಥ್‌ ಸಾಥ್‌ ಹೈ’, ‘ಬೀವಿ ನಂ. 1’ ಚಿತ್ರಗಳಲ್ಲಿ ನಟಿಸಿದವರು. ‘ಜವಾನಿ ಜಾನೆಮನ್’ ಚಿತ್ರವನ್ನು ನಿತಿನ್ ಕಕ್ಕರ್ ಅವರು ನಿರ್ದೇಶಿಸಿದ್ದಾರೆ. ಇದು ಜನವರಿ 31ರಂದು ತೆರೆಗೆ ಬರುವ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಸೈಫ್ ಅವರೂ ಬಂಡವಾಳ ಹೂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು