ಬುಧವಾರ, ಫೆಬ್ರವರಿ 19, 2020
30 °C

ಸಲ್ಲು ಜೊತೆ ಕನ್ನಡತಿ ಪೂಜಾ ಹೆಗ್ಡೆ ರೊಮ್ಯಾನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲುಗಿನ ‘ಮಹರ್ಷಿ’ ಚಿತ್ರದ ಬೆಡಗಿ, ಕನ್ನಡತಿ ಪೂಜಾ ಹೆಗ್ಡೆ ಅವರ ಕೈಯಲ್ಲಿ ರಾಶಿ ರಾಶಿ ಸಿನಿಮಾಗಳಿವೆ. ಮತ್ತೊಂದೆಡೆ ಅಲ್ಲು ಅರ್ಜುನ್‌ ಜೊತೆಗೆ ನಟಿಸಿದ ‘ಅಲಾ ವೈಕುಂಠಪುರಮುಲೋ’ ಸಿನಿಮಾದ ಯಶಸ್ಸು ಕೂಡ ಆಕೆಗೆ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿದೆ. ಸೂಪರ್‌ ಸ್ಟಾರ್‌ಗಳು, ಹೊಸಬರ ಚಿತ್ರಗಳಲ್ಲಿ ನಟಿಸಲು ಪೂಜಾ ಹಿಂಜರಿಯುವುದಿಲ್ಲ. ಹಿಂದಿಯಲ್ಲಿ ಹೃತಿಕ್‌ ರೋಷನ್‌ ಮತ್ತು ಅಕ್ಷಯ್‌ ಕುಮಾರ್‌ ಜೊತೆಗೆ ತೆರೆ ಹಂಚಿಕೊಂಡಿದ್ದ ಆಕೆಗೆ ಈಗ ಸಲ್ಮಾನ್‌ಖಾನ್‌ ಜೊತೆಗೆ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದೆ.

‘ದಬಾಂಗ್‌ 3’ ಚಿತ್ರದ ಬಳಿಕ ಕಳೆದ ಜ. 10ರಂದು ಸಲ್ಲು ತಮ್ಮ ಹೊಸ ಚಿತ್ರ ‘ಕಭೀ ಈದ್‌ ಕಭೀ ದಿವಾಳಿ’ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಘೋಷಿಸಿದರು. ಈ ಚಿತ್ರಕ್ಕೆ ಯಾರು ನಾಯಕಿಯಾಗುತ್ತಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಸಲ್ಲು ಜೊತೆಗೆ ಪೂಜಾ ಹೆಗ್ಡೆ  ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಅಧಿಕೃತವಾಗಿ ಹೊರಬಿದ್ದಿದೆ. ಸಾಜಿದ್‌ ನಾದಿಯವಾಲ ಇದರ ಕಥೆ ಹೆಣೆದಿದ್ದಾರೆ. ಆ್ಯಕ್ಷನ್‌ ಹಾಗೂ ಕೌಟುಂಬಿಕ ಮನರಂಜನಾ ಚಿತ್ರ ಇದು. ಅಕ್ಟೋಬರ್‌ನಿಂದ ಶೂಟಿಂಗ್‌ ಶುರುವಾಗಲಿದ್ದು, ಮುಂದಿನ ವರ್ಷ ತೆರೆ ಕಾಣಲಿದೆ. 

ಹಿಂದಿಯ ‘ಹೌಸ್‌ಫುಲ್‌ 4’ ಚಿತ್ರ ನಿರ್ದೇಶಿಸಿದ್ದ ಫರ್ಹಾದ್ ಸಂಜಿ ಅವರೇ ಈ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅಂದಹಾಗೆ ‘ಹೌಸ್‌ಫುಲ್ 4’ ಚಿತ್ರದಲ್ಲೂ ಪೂಜಾ ನಟಿಸಿದ್ದರು. ಇದರಲ್ಲಿನ ಆಕೆಯ ನಟನೆಯನ್ನು ನೋಡಿಯೇ ಸಲ್ಮಾನ್‌ಖಾನ್‌ ಅವರಿಗೆ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆಯಂತೆ. ಚಿತ್ರದಲ್ಲಿ ಆಕೆಯದು ಸಂಪ್ರದಾಯಸ್ಥ ಹುಡುಗಿಯ ಪಾತ್ರವಂತೆ. 

ಪೂಜಾ ಬಾಲಿವುಡ್‌ನಲ್ಲಿ ನಟಿಸಿದ ಮೊದಲ ಚಿತ್ರ ‘ಮೊಹೆಂಜೊ ದಾರೊ’. 2016ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಹೃತಿಕ್‌ ರೋಷನ್‌ ನಾಯಕರಾಗಿದ್ದರು. ಇದನ್ನು ನಿರ್ದೇಶಿಸಿದ್ದು ಆಶುತೋಷ್‌ ಗೋವರಿಕರ್‌. ಮೂರು ವರ್ಷದ ಬಳಿಕ ಮತ್ತೆ ಪೂಜಾ ಬಿಟೌನ್‌ನಲ್ಲಿ ಪ್ರತಿಭೆ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

‘ಹೊಸ ವರ್ಷದಲ್ಲಿ ನನ್ನ ಸಿನಿಜರ್ನಿ ಅದ್ಭುತವಾಗಿ ಶುರುವಾಗಿದೆ. ಸಲ್ಮಾನ್‌ಖಾನ್‌ ಜೊತೆಗೆ ನಟಿಸಲು ಕಾತರಳಾಗಿದ್ದೇನೆ’ ಎಂದು ಪೂಜಾ ಖುಷಿ ಹಂಚಿಕೊಂಡಿದ್ದಾಳೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು