ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಿತಾ ಬದುಕಿನ ಹೊಸ ಅಧ್ಯಾಯ

Last Updated 9 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""

ನಟಿ ಸಂಚಿತಾ ಪಡುಕೋಣೆ ಕನ್ನಡಕ್ಕಿಂತ ತೆಲುಗು, ತಮಿಳು ಚಿತ್ರಗಳಲ್ಲಿಯೇ ನಟಿಸಿದ್ದು ಹೆಚ್ಚು. ವೃತ್ತಿಬದುಕಿನಲ್ಲಿ ಒಂದು ದಶಕ ಪೂರೈಸಿರುವ ಅವರಿಗೆ ಉತ್ತಮ ನಟನೆ ಮೂಲಕ ಕನ್ನಡಿಗರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಬೇಕು ಎಂಬ ಹಂಬಲ ಹೊಂದಿದ್ದಾರೆ.

‘ರಾವಣ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು ನಟಿ ಸಂಚಿತಾ ಪಡುಕೋಣೆ. ‘ಸತ್ಯ ಹರಿಶ್ಚಂದ್ರ’ದಲ್ಲಿ ಅನಾಥ ಹುಡುಗಿ. ‘ಗಡಿನಾಡು’ ಚಿತ್ರದಲ್ಲಿ ಮರಾಠಿ ಹುಡುಗಿ. ‘ಮುತ್ತುಕುಮಾರ’ ಚಿತ್ರದಲ್ಲಿ ಅಪ್ಪಟ ಮಂಡ್ಯ ಬೆಡಗಿ. ‘ರವಿ ಬೋಪಣ್ಣ’ದಲ್ಲಿ ನಟ ರವಿಚಂದ್ರನ್‌ ಅವರ ಪ್ರೇಯಸಿ –ಹೀಗೆ ವೃತ್ತಿಬದುಕಿನ ಒಂದು ದಶಕದ ಅವಧಿಯಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವತುಂಬಿದ ಖುಷಿ ಅವರಲ್ಲಿದೆ.

ಕನ್ನಡದಲ್ಲಿ ‘ರಾವಣ’ ಚಿತ್ರದಲ್ಲಿ ನಟಿಸಿದ ಬಳಿಕ ಸಂಚಿತಾ ತೆಲುಗು ಮತ್ತು ತಮಿಳಿನತ್ತ ಮುಖ ಮಾಡಿದರು. ಕಾಲಿವುಡ್‌ನಲ್ಲಿ ಎರಡು ಚಿತ್ರದಲ್ಲಿ ನಟಿಸಿದರು. ಟಾಲಿವುಡ್‌ನಲ್ಲಿ ಅವರು ನಟಿಸಿದ ಚಿತ್ರಗಳ ಸಂಖ್ಯೆ ಹತ್ತು ದಾಟಿತು. ಆದರೆ, ಊರಿಗೆ ಹೋದಾಗಲೆಲ್ಲಾ ‘ನೀನೇಕೆ ಕನ್ನಡದಲ್ಲಿ ನಟಿಸುತ್ತಿಲ್ಲ’ ಎಂಬ ಪ್ರಶ್ನೆ ಜನರಿಂದ ಎದುರಾಗುತ್ತಿತ್ತಂತೆ. ಇದೇ ಅವರು ಮತ್ತೆ ಕನ್ನಡದತ್ತ ಹೊರಳಲು ಪ್ರೇರಣೆ.

‘ನನ್ನೂರಿನ ಜನರು ಪ್ರಶ್ನೆ ಕೇಳಲು ಆರಂಭಿಸಿದಾಗಲೇ ನನಗೆ ಸತ್ಯದ ಅರಿವಾಯಿತು. ನಮ್ಮವರೇ ನನ್ನ ನಟನೆ ನೋಡಲು ಸಾಧ್ಯವಾಗುತ್ತಿಲ್ಲವಲ್ಲ ಎಂದು ಬೇಸರವೂ ಆಯಿತು. ಬಳಿಕ ಕನ್ನಡ ಚಿತ್ರಗಳತ್ತ ನಟಿಸಲು ಮುಂದಾದೆ’ ಎಂದು ನೆನಪಿಸಿಕೊಳ್ಳುತ್ತಾರೆ.

ಆಗ ಅವರಿಗೆ ಮತ್ತೆ ಕನ್ನಡದಲ್ಲಿ ಹೊಸ ಅಧ್ಯಾಯ ಆರಂಭಿಸಲು ಅವಕಾಶದ ಬಾಗಿಲು ತೆರೆದಿದ್ದು ನಟ ಶರಣ್‌ ನಾಯಕರಾಗಿದ್ದ ‘ಸತ್ಯ ಹರಿಶ್ಚಂದ್ರ’ ಚಿತ್ರ. ನಂತರ ಅವರಿಗೆ ‘ಮುತ್ತುಕುಮಾರ’ ಮತ್ತು ‘ರವಿ ಬೋಪಣ್ಣ’ದಲ್ಲಿ ನಟಿಸುವ ಅವಕಾಶ ದೊರೆಯಿತಂತೆ.

ನಾಗ್‌ ಹುಣಸೋಡ್‌ ನಿರ್ದೇಶನದ ‘ಗಡಿನಾಡು’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದರಲ್ಲಿ ಅವರು ಮರಾಠಿ ಹುಡುಗಿಯಾಗಿ ನಟಿಸಿದ್ದಾರೆ. ‘ಇದುವರೆಗೂ ನಾನು ಇಂತಹ ಪಾತ್ರದಲ್ಲಿ ನಟಿಸಿಲ್ಲ. ಆ್ಯಕ್ಷನ್‌ನಲ್ಲಿ ಒಂದು ಪ್ರೀತಿಯ ಕಥೆಯಿದೆ. ಪಟಪ‍ಟನೆ ಮಾತನಾಡುವ ಹುಡುಗಿಯಾಗಿ ನಟಿಸಿದ್ದೇನೆ’ ಎಂದು ತಮ್ಮ ಪಾತ್ರ ಕುರಿತು ವಿವರಿಸುತ್ತಾರೆ.

‘ರವಿ ಬೋಪಣ್ಣ’ದಲ್ಲಿ ರವಿಚಂದ್ರನ್‌ ಅವರೊಟ್ಟಿಗೆ ನಟಿಸುತ್ತಿರುವುದಕ್ಕೆ ಅವರಿಗೆ ಖುಷಿಯಾಗಿದೆಯಂತೆ. ಆ ಚಿತ್ರದ ಪಾತ್ರ ಕುರಿತು ಅವರು ವಿವರಿಸುವುದು ಹೀಗೆ: ‘ಈ ಚಿತ್ರದಲ್ಲಿ ರವಿಚಂದ್ರನ್‌ ಅವರದು ಮೂರು ಛಾಯೆ ಇರುವ ಪಾತ್ರ. ಅವರ ಯಂಗ್‌ ಲುಕ್‌ನ ಪಾತ್ರಕ್ಕೆ ನಾನು ಸಂಗಾತಿಯಾಗಿ ಕಾಣಿಸಿಕೊಂಡಿರುವೆ. ಚಿತ್ರದಲ್ಲಿ ನನ್ನ ಪಾತ್ರ ಸ್ವಲ್ಪವೇ ಇದೆ. ಆದರೆ, ಜನರಿಗೆ ಬಹುಬೇಗ ಕನೆಕ್ಟ್‌ ಆಗುವ ಪಾತ್ರವದು. ಒಂದು ಡುಯೇಟ್‌ ಸಾಂಗ್‌ ಕೂಡ ಇದೆ’ ಎಂದು ತುಟಿಯಂಚಿನಲ್ಲಿಯೇ ನಗುತ್ತಾರೆ.

ರವಿಚಂದ್ರನ್‌ ಅವರಿಂದ ಸಾಕಷ್ಟು ನಟನೆಯ ಪಟ್ಟುಗಳನ್ನು ಕಲಿತಿದ್ದಾರಂತೆ. ನನ್ನ ನಟನೆಗೆ ಅವರೇ ಸ್ಫೂರ್ತಿ ಎಂದು ನೆನೆಯುತ್ತಾರೆ. ‘ಅವರಂತಹ ದೊಡ್ಡ ನಟರೊಟ್ಟಿಗೆ ಕೆಲಸ ಮಾಡುವುದೇ ನನ್ನ ಪುಣ್ಯ. ಅವರ ಕಚೇರಿ ಕರೆದು ಕಥೆಯ ಒಂದು ಎಳೆ ಹೇಳಿದರು. ತಕ್ಷಣವೇ ಒಪ‍್ಪಿಕೊಂಡು ಬಿಟ್ಟೆ. ಅವರು ಸೆಟ್‌ನಲ್ಲಿ ತುಂಬಾ ಶಾಂತವಾಗಿರುತ್ತಾರೆ. ಎಲ್ಲರೊಟ್ಟಿಗೂ ನಗುತ್ತಲೇ ಮಾತನಾಡುತ್ತಿರುತ್ತಾರೆ. ಏನೇ ಮಾತನಾಡಿದರೂ ಸಿನಿಮಾದ ಬಗ್ಗೆಯೇ ಮಾತನಾಡುತ್ತಾರೆ’ ಎಂದು ವಿವರಿಸುತ್ತಾರೆ.

‘ಸೆಟ್‌ಗೆ ಬರುವಾಗ ತಲೆಯಲ್ಲಿ ಏನನ್ನೂ ತುಂಬಿಕೊಂಡು ಬರಬಾರದು. ಖಾಲಿಯಾಗಿಯೇ ಬರಬೇಕು. ಇಲ್ಲಿ ನಾವು ಏನನ್ನು ಕಲಿಯುತ್ತೇವೆಯೋ ಅದು ಮಾತ್ರವೇ ವೃತ್ತಿಬದುಕಿನ ಕೊನೆಯವರೆಗೂ ಉಳಿಯುತ್ತದೆ ಎಂದು ಯಾವಾಗಲೂ ಹೇಳುತ್ತಿದ್ದರು. ಅವರಿಂದ ಸಾಕಷ್ಟು ಕಲಿತಿದ್ದೇನೆ’ ಎಂದು ಸ್ಮರಿಸುತ್ತಾರೆ.

ಸವಾಲಿನ ಪಾತ್ರಗಳೆಂದರೆ ಸಂಚಿತಾಗೆ ಇಷ್ಟವಂತೆ. ತೆಲುಗಿನಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ ‘ಅರುಂಧತಿ’ಯಂತಹ ಪಾತ್ರಗಳಲ್ಲಿ ನಟಿಸಲೂ ಇಷ್ಟ. ‘ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಲು ಇಷ್ಟ. ಅಂತಹ ಪಾತ್ರಗಳು ಬಂದರೆ ಖಂಡಿತಾ ಇಲ್ಲ ಎನ್ನಲಾರೆ’ ಎನ್ನುತ್ತಾರೆ.

ವೃತ್ತಿಬದುಕಿನಲ್ಲಿ ಒಂದು ದಶಕ ಪೂರೈಸಿದರೂ ಇನ್ನೂ ಕನ್ನಡಿಗರ ಮನಸ್ಸಿಗೆ ನಾನು ತಲುಪಿಲ್ಲವಲ್ಲ ಎಂಬ ಸಣ್ಣ ವಿಷಾದವೂ ಅವರಲ್ಲಿದೆ. ಜನರ ಹೃದಯಕ್ಕೆ ನಾಟುವಂತಹ ಪಾತ್ರ ಮಾಡಬೇಕೆಂಬ ಹಂಬಲವೂ ಅವರೊಳಗಿದೆ. ‘ರಾವಣ ಚಿತ್ರದ ಬಳಿಕ ಕನ್ನಡ ಚಿತ್ರರಂಗದಲ್ಲಿಯೇ ಕೆಲಸ ಮಾಡಿಕೊಂಡು ಹೋಗಿದ್ದರೆ ಜನರಿಗೆ ಬಹುಬೇಗ ತಲುಪುತ್ತಿದ್ದೆ. ಆ ವಿಷಯದಲ್ಲಿ ನಾನು ಎಡವಿರುವುದು ನಿಜ’ ಎಂದು ಒಪ್ಪಿಕೊಳ್ಳುತ್ತಾರೆ.

‘ಕನ್ನಡ, ತೆಲುಗು, ತಮಿಳಿನ ಕೆಲವು ಸಿನಿಮಾಗಳನ್ನು ಸಬ್ಜೆಟ್‌ ಚೆನ್ನಾಗಿದೆ ಎಂದೇ ಒಪ್ಪಿಕೊಂಡು ನಟಿಸಿದೆ. ಆದರೆ, ಜನರಿಗೆ ಆ ಸಿನಿಮಾಗಳು ತಲುಪಿಲ್ಲ ಎಂಬ ಬೇಸರವಿದೆ. ಅದಕ್ಕಾಗಿ ಪಶ್ಚಾತ್ತಾಪವನ್ನೂ ಪಟ್ಟಿರುವೆ. ಆಗ ಅಮ್ಮನ ಆತ್ಮವಿಶ್ವಾಸದ ಮಾತುಗಳೇ ನನಗೆ ಚೈತನ್ಯ ತುಂಬಿವೆ. ಅವಕಾಶಗಳು ಸಿಗುತ್ತಿಲ್ಲ ಎಂದು ಕೊರಗಬಾರದು. ಪ್ರಯತ್ನ ಮಾಡುತ್ತಲೇ ಇರಬೇಕು. ಸಿಗುವ ಪಾತ್ರಗಳ ಮೂಲಕ ಜನರ ಮನಸ್ಸಿಗೆ ತಲುಪುವಂತೆ ನಟಿಸಬೇಕು’ ಎಂಬುದು ಅವರ ದೃಢ ನಂಬಿಕೆ.

ಅಂದಹಾಗೆ ತೆಲುಗಿನಲ್ಲಿ ನಟ ಶ್ರೀರಾಮ್‌ ಜೊತೆಗೆ ನಟಿಸಿರುವ ‘ಅಸಲೆಮ್ ಜರಿಗಿಂದಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿಯೂ ಅವರದು ಮುಗ್ಧ ಹಳ್ಳಿ ಹುಡುಗಿಯ ಪಾತ್ರವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT