ಮಂಗಳವಾರ, ಮೇ 18, 2021
28 °C

ನಟನೆಗೆ ತೇಯ್ದ ಚಂದನ...

ಶರತ್‌ ಹೆಗ್ಡೆ  Updated:

ಅಕ್ಷರ ಗಾತ್ರ : | |

ಚಂದನ್‌ ಆಚಾರ್‌ ಬಿಗ್‌ಬಾಸ್‌ ಸರಣಿಯ ಮೂಲಕ ನಾಡಿಗೆ ಪರಿಚಯ ಆದವರು. ರಂಗಭೂಮಿ, ಗಾಯನ, ನಟನೆ ಮೂಲಕ ಗುರುತಿಸಿಕೊಂಡ ಅವರು, ಈಗ ‘ಮಂಗಳವಾರ ರಜಾದಿನ’ ಸಿನಿಮಾದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದಾರೆ. ಅವರೊಂದಿಗೆ ಒಂದು ಮಾತುಕತೆ...

***

ಚಂದನ್‌ ಆಚಾರ್‌ ಎಂದರೆ ‘ಬಿಗ್‌ಬಾಸ್‌’ ಮೂಲಕವೇ ಗುರ್ತಿಸುವುದೋ ಅಥವಾ ಭಿನ್ನ ವ್ಯಕ್ತಿಯಾಗಿಯೋ?
ಹಾಗೇನಿಲ್ಲ. ನಾನು ನಟನಾಗಬೇಕು ಎಂಬ ಸಂಕಲ್ಪ ಮಾಡಿದ್ದೆ. ರಂಗಭೂಮಿ ನನ್ನನ್ನು ಮನುಷ್ಯನನ್ನಾಗಿ ಮಾಡಿತು. ಬಿಗ್‌ಬಾಸ್‌ ನೈಜತೆಯ ದರ್ಶನ ಮಾಡಿಸಿತು. ಏನಿದ್ದರೂ ನಾನೊಬ್ಬ ಸಾಮಾನ್ಯ ನಟ ಅಷ್ಟೆ. ನಟ ಆಗುವ ಮೊದಲು ಅಡುಗೆ ಚೆನ್ನಾಗಿ ಕಲಿಯಬೇಕು. ಮೊದಲಿಗೆ ನಾನು ಹಾಡುಗಾರನಾಗಬೇಕು ಎಂದು ಸಂಗೀತ ಅಭ್ಯಾಸ ಮಾಡಿದೆ. ಫ್ಯಾಷನ್‌ ಅನ್ನೇ ಪೂರ್ಣ ಮುಂದುವರಿಸಲು ಆಗಲಿಲ್ಲ. ನನ್ನ ಶಕ್ತಿಯನ್ನು ನಟನೆಗೂ ಹಾಕಬೇಕು. ಹಾಡು, ನಟನೆ, ಓದುವಿಕೆ ಎಲ್ಲವನ್ನೂ ನಟನೆಗೇ ಅರ್ಪಣೆಯಾಗಬೇಕು ಎಂಬ ಗುರಿ ಇದೆ.

ಶಿಕ್ಷಣ, ರಂಗಭೂಮಿ, ಸಿನಿಮಾ ಬದುಕು– ಈ ಪಯಣದ ಕುರಿತು ಹೇಳಿ...
ನಾನು ಬದುಕಿನಲ್ಲಿ ಏನೇನು ಕನಸು ಕಂಡಿದ್ದೇನೋ ಅದನ್ನೆಲ್ಲಾ ಸಾಕಾರಗೊಳಿಸಿಕೊಳ್ಳಲು ಪ್ರಕೃತಿ ಸಹಾಯ ಮಾಡಿದೆ. ನಾನು ಓದಿದ್ದು ಪತ್ರಿಕೋದ್ಯಮ. ಅದಾದ ಬಳಿಕ ನೀನಾಸಂನಲ್ಲಿ ರಂಗಭೂಮಿ ತರಬೇತಿಗೆ ಹೋದೆ. ನಟರಿಗೆ ಆ ರೀತಿಯ ಸಂಸ್ಕಾರ ಸಿಗುವುದು ಬಹಳ ಮುಖ್ಯ. ನನ್ನ ಈ ವಯಸ್ಸಿನಲ್ಲಿ ಈ ಮಟ್ಟಕ್ಕೆ ತಲುಪಬೇಕು ಅಂದುಕೊಂಡಿದ್ದೆ. ರಂಗಭೂಮಿಯಲ್ಲಿ ಕೆಲಸ ಮಾಡುವಾಗಲೂ ಸಿನಿಮಾದಲ್ಲಿ ಕೆಲಸ ಮಾಡಬೇಕು ಎಂಬ ಗುರಿಯನ್ನೇ ಇಟ್ಟುಕೊಂಡು ಸಿದ್ಧತೆ ಮಾಡುತ್ತಿದ್ದೆ.

ಮೈಸೂರಿನಲ್ಲಿ ರಂಗಾಯಣ, ನಟನ ಹೀಗೆ ಹಲವಾರು ರಂಗ ತಂಡಗಳ ಜೊತೆಗೆ ಕಲಾವಿದರ ಒಡನಾಟ ಆಯಿತು. ಪರೋಕ್ಷವಾಗಿ ಕಾರಂತರೂ ಪರಿಚಯ ಆದರು. ರಂಗಭೂಮಿಯವನು ಮಡಿವಂತಿಕೆಯ ಕಾರಣಕ್ಕೆ ಸಿನಿಮಾಕ್ಕೆ ಹೋಗಬಾರದು ಎಂದು ಅಂದುಕೊಂಡಿದ್ದೆ. ಆದರೆ ನನ್ನ ಸ್ನೇಹಿತನೊಬ್ಬ ಹುರಿದುಂಬಿಸಿದ. ಕಿರಿಕ್‌ ಪಾರ್ಟಿಯಂಥ ಸಿನಿಮಾದ ಆಡಿಷನ್‌ನಲ್ಲಿ ಭಾಗವಹಿಸಿದ ಮೇಲೆ ನಾನೂ ಪ್ರಯತ್ನ ಮಾಡಬಹುದು ಎಂದು ಗೊತ್ತಾಯಿತು. ಕಿರಿಕ್‌ ಪಾರ್ಟಿಯಲ್ಲಿ ರಕ್ಷಿತ್‌ ಶೆಟ್ಟಿ ಅವರು ನನಗೆ ತೆರೆಯಲ್ಲಿ ಒಳ್ಳೆಯ ಅವಕಾಶ ಕೊಟ್ಟರು. ಇಂಥ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡೆ. ಆ ಸಿನಿಮಾದಲ್ಲಿ ಅತ್ಯುತ್ತಮ ಪೋಷಕ ನಟ ಎಂದು ಪ್ರಶಸ್ತಿಯನ್ನೂ ಕೊಟ್ಟರು. ಆ ಸಿನಿಮಾದ ಬಳಿಕ ಮುಗುಳ್ನಗೆ ಸಿನಿಮಾದಲ್ಲಿ ಯೋಗರಾಜ್‌ ಭಟ್‌ ಅವಕಾಶ ಕೊಟ್ಟರು. ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲೂ ಅವಕಾಶ ಸಿಕ್ಕಿತು.   

ಪಾತ್ರದ ಆಯ್ಕೆಯಲ್ಲಿ ನಿಮ್ಮ ಆದ್ಯತೆ ಏನು?
ಸಿನಿಮಾ ಮತ್ತು ರಂಗಭೂಮಿಗೆ ಇರುವ ಸವಾಲು, ವ್ಯಾಕರಣವೇ ಬೇರೆ. ಈ ವಿಷಯದಲ್ಲಿ ನಾನು ತುಂಬಾ ಅದೃಷ್ಟವಂತ. ಕಲಿಕೆ ಇದಕ್ಕೆ ಅತ್ಯಂತ ಮುಖ್ಯ. ಇದರ ಲೆಕ್ಕಾಚಾರವನ್ನು ಅರ್ಥ ಮಾಡಿಕೊಳ್ಳಲು ನನಗೆ ಕಿರಿಕ್‌ ಪಾರ್ಟಿ ಪರಂವಾ ಸ್ಟುಡಿಯೊದಲ್ಲಿ ರಕ್ಷಿತ್‌ ಅವರ ಜೊತೆ ಕೆಲಸ ಮಾಡಿದ ಅನುಭವ ಈ ಕ್ಷೇತ್ರದ ಬಗ್ಗೆ ಇನ್ನಷ್ಟು ಕುತೂಹಲ ಹೊಂದಿ ಕಲಿಯಲು ಅನುಕೂಲ ಆಯಿತು. ರಂಗಭೂಮಿ ಅಥವಾ ಸಿನಿಮಾದಲ್ಲಿ ಒಂದು ಪಾತ್ರಕ್ಕೆ ಆ ತಂಡ ಎಷ್ಟು ಅವಕಾಶ (ಸ್ಪೇಸ್‌) ಕೊಟ್ಟಿದೆ ಎಂಬುದು ಮುಖ್ಯ. ಪಾತ್ರದ ಆತ್ಮ ಅನ್ನುತ್ತೇವಲ್ಲಾ ಅದಕ್ಕೆ ನ್ಯಾಯ ಕೊಡಲು ಪ್ರಯತ್ನಿಸುತ್ತೇನೆ.

‘ಮಂಗಳವಾರ ರಜಾದಿನ’ ಯಾಕೆ? ಇಲ್ಲಿ ಚಂದನ್‌ ಆಚಾರ್‌ ಯಾರು?
ಎಲ್ಲ ಹೇರ್‌ ಕಟ್ಟಿಂಗ್‌ ಸೆಲೂನ್‌ಗಳಲ್ಲಿ ಮಂಗಳವಾರ ರಜಾದಿನ. ಇದು ಜನರ ಮನಸ್ಸಿಗೆ ಹತ್ತಿರವಾದ ಶೀರ್ಷಿಕೆ. ಕಥೆಗೆ ಬೇಕಾಗುವ ಶೀರ್ಷಿಕೆಯೂ ಹೌದು. ಇದರಲ್ಲಿ ನನ್ನದು ಕುಮಾರ ಹೆಸರಿನ ಪಾತ್ರ. ಅವನದ್ದೇ ಆದ ಕಲ್ಪನೆ, ಗುರಿ ಇಟ್ಟುಕೊಂಡಿರುತ್ತಾನೆ. ಕೊನೆಗೂ ಗುರಿ ಮುಟ್ಟುವ ಮಹತ್ವಾಕಾಂಕ್ಷೆಯ ಹುಡುಗ. ಅವನು ಹೇಗೆ ಗುರಿ ಮುಟ್ಟುತ್ತಾನೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು.

ಚಿತ್ರದ ಸವಾಲುಗಳೇನು?
ನಮಗೆ ಸಾಕಷ್ಟು ಸವಾಲುಗಳಿವೆ. ಜನ ಥಿಯೇಟರ್‌ಗೆ ಬಂದು ಸಿನಿಮಾ ನೋಡಬೇಕು. ಮನರಂಜನೆಗೆ ಬೇಕಾದ ಎಲ್ಲ ಅಂಶಗಳು ನಮ್ಮ ಸಿನಿಮಾದಲ್ಲಿ ಇದೆ. ಇಂದಿನ ಪರಿಸ್ಥಿತಿಯಲ್ಲಿ ಜನ ಬಂದು ಸಿನಿಮಾ ನೋಡುವಂತಾಗಬೇಕು. ಆದ್ದರಿಂದ ತುಂಬಾ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದೇವೆ. ನಿರ್ಮಾಪಕರಿಗೆ ಹಣ ವಾಪಸ್‌ ಬರಬೇಕು. ಜನ ಬೆಂಬಲಿಸಬೇಕು ಅಷ್ಟೆ.

‘ಮಂಗಳವಾರ’ದ ಬಳಿಕದ ಕಾರ್ಯಕ್ರಮಗಳೇನು?
ಈ ಸಿನಿಮಾದ ಕೆಲಸ ಮುಗಿದ ಬಳಿಕ ನಾಟಕವೊಂದನ್ನು ನಿರ್ದೇಶಿಸಬೇಕು ಎಂದುಕೊಂಡಿದ್ದೇನೆ. ಈ ಜವಾಬ್ದಾರಿ ಬಳಿಕ ನಾಟಕದ ಕೆಲಸ ಇದೆ. ಮುಂದೆ ಸಿನಿಮಾಗಳಲ್ಲಿ ನಟಿಸುತ್ತಾ, ರಂಗಭೂಮಿಯಲ್ಲೂ ತೊಡಗಿಕೊಂಡು ನನ್ನ ಪೀಳಿಗೆಗೂ ಒಂದು ದಾರಿ ಮಾಡಿಕೊಡಬೇಕು ಎಂದು ಉದ್ದೇಶಿಸಿದ್ದೇನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು