ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ ಬೂಟಿನಲ್ಲಿ ಹೊಡೆದಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದೆ: ಜಗ್ಗೇಶ್‌

Last Updated 23 ಜುಲೈ 2021, 13:08 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಬಹಳ ಸಕ್ರಿಯರಾಗಿರುವ ನಟ ಜಗ್ಗೇಶ್‌, ಶುಕ್ರವಾರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಹತ್ತನೇ ತರಗತಿಯ ಅಂಕಪಟ್ಟಿಯನ್ನು ಅಪ್‌ಲೋಡ್‌ ಮಾಡಿದ್ದಾರೆ. ಕಡಿಮೆ ಅಂಕ ಬಂದಿದ್ದಕ್ಕೆ ಅಪ್ಪ ಬೂಟಿನಲ್ಲಿ ಹೊಡೆದ ಘಟನೆ, ಇದಾದ ನಂತರದಲ್ಲಿ ತಾವು ಆತ್ಮಹತ್ಯೆಗೆ ಯತ್ನಿಸಿದ ಘಟನೆಯನ್ನು ನೆನಪಿಸಿಕೊಂಡು ಪೋಷಕರಿಗೆ ಒಂದಿಷ್ಟು ಕಿವಿಮಾತು ಹೇಳಿದ್ದಾರೆ.

ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆದಿದ್ದು, ಶೀಘ್ರದಲ್ಲೇ ಇದರ ಫಲಿತಾಂಶ ಹೊರಬೀಳಲಿದೆ. ಈ ಸಂದರ್ಭದಲ್ಲೇ ತಮ್ಮ ಶಾಲಾ ದಿನವನ್ನು ನೆಪಿಸಿಕೊಂಡಿರುವ ಜಗ್ಗೇಶ್‌, ‘ಅಂದು ಈ ಜಗ್ಗೇಶ ಶಾಲೆಯಲ್ಲಿ ಈಶ್ವರ. ತಾತ ರಾಜಣ್ಣನಂತೆ ನಟನಾಗು ಎಂದು ತಲೆಯಲ್ಲಿ ಹುಳಬಿಟ್ಟ. ಅದು ನನ್ನ ಚಿಂತನೆಯ ಚಿತೆಯಾಯಿತು. ಪರೀಕ್ಷೆ ಅರ್ಧಮನಸ್ಸಲ್ಲೇ ಓದಿಬರೆದೆ. ಯಾಕೋ ಕನ್ನಡ ಮಾತ್ರ ನನ್ನ ಅಚ್ಚುಮೆಚ್ಚಿನ ವಿಷಯವಾಯಿತು. ಕನ್ನಡ ವ್ಯಾಕರಣ ಸಿಹಿ ತಿನಿಸಂತೆ ಪ್ರೀತಿ. ಬಾಲ್ಯದಿಂದ ಕನ್ನಡ ಭಾಷಾ ಪ್ರೀತಿ ಹುಟ್ಟಿದರೆ ಸಾಯುವವರೆಗೂ ಅದು ಅವನ ಹೃದಯದ ಬಡಿತದಂತೆ ಜೊತೆ ಉಳಿಯುತ್ತದೆ. ಸ್ವಾರ್ಥಕ್ಕೆ ಬಳಕೆಯಾದರೆ ಆತ್ಮದ್ರೋಹವಾಗುತ್ತದೆ’ ಎಂದು ಉಲ್ಲೇಖಿಸಿದ್ದಾರೆ.

‘ನನ್ನ ಅಂಕ ನೋಡಿದ ಅಪ್ಪ ನಡುರೋಡಿನಲ್ಲಿ ಜನ ನೋಡುವಂತೆ ಬೂಟಿನಲ್ಲಿ ಹೊಡೆದುಬಿಟ್ಟರು. ಅವಮಾನ ಸಹಿಸಲಾಗದೆ ಆತ್ಮಹತ್ಯೆಗೆ ಯತ್ನಿಸಿದ್ದೆ. ಆಗ ದಿವಂಗತ ಶ್ರೀರಾಮಪುರದ ಕಿಟ್ಟಿ ನನ್ನ ಬಾಚಿ ಎಳೆದು ರೈಲಿನ ಅನಾಹುತ ತಪ್ಪಿಸಿದ. ಆ ವಿಷಯ ತಿಳಿದು ಅಪ್ಪನಿಗೆ ದುಃಖವಾಗಿ ಮನನೊಂದು ಬಂಧುಮಿತ್ರರ ಮುಂದೆ ಕಣ್ಣೀರು ಹಾಕಿದರು. ಅಂದು ಅನಾಹುತ ಸಂಭವಿಸಿದ್ದರೆ ಇಂದು ಈಶ್ವರ ಜಗ್ಗೇಶನಾಗಿ ಇರುತ್ತಿರಲಿಲ್ಲ. ಬದಲಾಗಿ, ಸತ್ತ ಕೋಟಿ ಜನರಲ್ಲಿ ಒಬ್ಬನಾಗುತ್ತಿದ್ದೆ’ ಎಂದಿದ್ದಾರೆ.

‘ತಂದೆತಾಯಿ ಮಕ್ಕಳನ್ನ ಬರಿ ಓದಿನ ಯಂತ್ರವಾಗಿ ಬೆಳೆಸದೆ ಜಗದ ಪಾಠ ಕಲಿಸುವ ಯತ್ನಮಾಡಿ. ಓದಿದ ಮಕ್ಕಳು ಸರ್ಕಸ್ ಸಿಂಹದಂತೆ. ಓದಿನ ಜೊತೆಗೆ ಜಗದ ಪಾಠ ಕಲಿತವರು ಬೇಟೆಯಾಡುವ ಕಾಡಿನ ಸಿಂಹದಂತೆ. ಇಂದಿನ ಜಗತ್ತಿಗೆ ಮಕ್ಕಳು ಬೇಟೆಯಾಡುವ ಸಿಂಹದಂತೆ ಬಾಳಬೇಕು. ಕಾರಣ ಜಗ ಕಾಡಿನಂತೆ ಆಗಿದೆ, ಮನುಷ್ಯ ಬೇಟೆಯಾಡುವ ಪ್ರಾಣಿಯಂತೆ. ಈ ಸಮಯದಲ್ಲಿ ಮಕ್ಕಳು ಕಾಡಿನ ಸಿಂಹವಾದರೆ, ಕೆಣಕುವವರು ದೂರ ಉಳಿಯುತ್ತಾರೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಏನೇ ಬರಲಿ ನಿಮ್ಮ ಮಕ್ಕಳನ್ನು ಸಿಂಹದಂತೆ ಸಾಕಿ. ಮಿಕ್ಕಂತೆ ಜಗತ್ತೇ ಮನುಜನಿಗೆ ಜೀವನಪಾಠ ಕಲಿಸುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT