ಮಂಗಳವಾರ, ಮಾರ್ಚ್ 28, 2023
29 °C
‘ವಿಕ್ರಾಂತ್‌ ರೋಣ’ ಚಿತ್ರದ ಫಸ್ಟ್‌ಗ್ಲಿಮ್ಸ್‌ ಬಿಡುಗಡೆ

Happy Birthday Sudeep| ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಜನ್ಮದಿನದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ಕಿಚ್ಚ ಸುದೀಪ್‌ ಅವರು ಗುರುವಾರ(ಸೆ.2) 50ನೇ ವಸಂತಕ್ಕೆ ಕಾಲಿರಿಸಿದ್ದು, ಚಂದನವನದ ಕಲಾವಿದರು, ರಾಜಕೀಯ ಗಣ್ಯರು ಸೇರಿದಂತೆ ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮುಖಾಂತರವೇ ಸುದೀಪ್‌ ಅವರಿಗೆ ಶುಭ ಹಾರೈಸಿದ್ದಾರೆ. ಸುದೀಪ್‌ ಅವರ ಜನ್ಮದಿನಕ್ಕೆ ವಿಶೇಷವಾಗಿ ರಚಿಸಲಾದ ಕಾಮನ್‌ ಡಿಪಿಯನ್ನು ತಮ್ಮ ಸಾಮಾಜಿಕ ಜಾಲತಾಣಗಳ ಡಿಪಿಯಾಗಿ ಹಾಕಿಕೊಂಡು ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ. 

ಇದೇ ಸಂಭ್ರಮದ ಸಂದರ್ಭದಲ್ಲೇ ಅನೂಪ್‌ ಭಂಡಾರಿ ನಿರ್ದೇಶನದ, ಸುದೀಪ್‌ ನಟನೆಯ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ‘ದ ಫಸ್ಟ್‌ ಗ್ಲಿಮ್ಸ್‌–ಡೆಡ್‌ಮ್ಯಾನ್ಸ್‌ ಆ್ಯಂಥಮ್‌ ಬಿಡುಗಡೆಯಾಗಿದೆ. ಫಸ್ಟ್ ಗ್ಲಿಮ್ಸ್‌ ಇಡೀ ವಿಕ್ರಾಂತ್‌ ರೋಣ ಚಿತ್ರದ ಅದ್ಭುತ ಮೇಕಿಂಗ್‌ ಅನ್ನು ಮುಂದಿಟ್ಟಿದ್ದು, ಹೊಸ ಲುಕ್‌ನಲ್ಲಿ ಸುದೀಪ್‌ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಚಿತ್ರತಂಡವು ಸುದೀಪ್‌ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆ. ಸುದೀಪ್‌ ನಟನೆಯ ‘ಕೋಟಿಗೊಬ್ಬ–3’ ಚಿತ್ರವೂ ನಾಡಹಬ್ಬಕ್ಕೆ ತೆರೆ ಕಾಣಲಿದೆ. ‘ಕೋಟಿಗೊಬ್ಬ–3’ ಚಿತ್ರವು ಏಪ್ರಿಲ್‌ನಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಲಾಕ್‌ಡೌನ್‌ ಕಾರಣದಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಗಿತ್ತು. ‘ಕೋಟಿಗೊಬ್ಬ–3’ ಚಿತ್ರ ಬಿಡುಗಡೆಯಾಗಿ 2–3 ತಿಂಗಳ ನಂತರ ‘ವಿಕ್ರಾಂತ್‌ ರೋಣ’ ತೆರೆ ಕಾಣಲಿದೆ ಎಂದು ನಿರ್ಮಾಪಕ ಜಾಕ್‌ ಮಂಜು ತಿಳಿಸಿದ್ದರು. ‘ವಿಕ್ರಾಂತ್‌ ರೋಣ’ ಚಿತ್ರವು 2ಡಿ ಹಾಗೂ 3ಡಿಯಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದು, ಸ್ವತಃ ಸುದೀಪ್‌ ಅವರೇ ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನ ಡಬ್ಬಿಂಗ್‌ ಮಾಡಲಿದ್ದಾರೆ. 

ಕೋವಿಡ್‌ ಪಿಡುಗಿನ ಕಾರಣದಿಂದಾಗಿ ಸುದೀಪ್‌ ಅವರು ಈ ಬಾರಿ ಸಾರ್ವಜನಿಕವಾಗಿ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಕುರಿತು ಕಿಚ್ಚ ಕ್ರಿಯೇಷನ್ಸ್‌ ಟ್ವಿಟರ್‌ ಖಾತೆ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದ ಸುದೀಪ್‌, ‘ಕೋವಿಡ್‌ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ವರ್ಷವೂ ನಾನು ನನ್ನ ಜನ್ಮದಿನವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲು ಆಗುತ್ತಿಲ್ಲ. ನೀವು ಇರುವಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ. ಪರಿಸ್ಥಿತಿ ಸುಧಾರಿಸಿದ ನಂತರ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇನೆ’ ಎಂದಿದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು