ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಹಿಟ್‌ ನಿರೀಕ್ಷೆಯಲ್ಲಿ ಪೃಥ್ವಿ ಅಂಬಾರ್‌

Published 8 ಫೆಬ್ರುವರಿ 2024, 23:30 IST
Last Updated 8 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಈ ತಿಂಗಳಲ್ಲೇ ಮೂರು ಸಿನಿಮಾ ಬಿಡುಗಡೆ!

ಹೌದು. ಇಂದು(ಫೆ.9) ‘ಜೂನಿ’ ತೆರೆಕಾಣುತ್ತಿದೆ. ಫೆ.23ರಂದು ‘ಫಾರ್‌ ರಿಜಿಸ್ಟ್ರೇಷನ್‌’ ಹಾಗೂ ‘ಮತ್ಸ್ಯಗಂಧ’ ಬಿಡುಗಡೆಯಾಗುತ್ತಿದೆ. ಹೀಗೆ ಸಾಲು ಸಾಲಾಗಿ ಸಿನಿಮಾ ಬಿಡುಗಡೆ ಮಾಡಬೇಡಿ ಎಂದು ನಾನು ಚಿತ್ರತಂಡಗಳಲ್ಲಿ ಆದಷ್ಟು ಮನವಿ ಮಾಡಿದೆ. ಸಿನಿಮಾಗಳ ನಡುವೆ ಕನಿಷ್ಠ ಒಂದೂವರೆ ತಿಂಗಳು ಸಮಯ ಕೊಡಿ ಎಂದಿದ್ದೆ. ಆದರೆ ಮುಂದಿನ ಲೋಕಸಭೆ ಚುನಾವಣೆ, ಪರೀಕ್ಷೆಗಳು, ಐಪಿಎಲ್‌ ಹೀಗೆ ಹಲವು ಕಾರಣಗಳಿಂದಾಗಿ ನಿರ್ಮಾಪಕರು ಈಗಲೇ ಸಿನಿಮಾ ಬಿಡುಗಡೆಗೆ ನಿರ್ಧರಿಸಿದ್ದಾರೆ. ಅವರ ಲೆಕ್ಕಾಚಾರಕ್ಕೆ ನಾನು ವಿರೋಧಿಸಿಲ್ಲ. ಪ್ರಸ್ತುತ ಒಂದು ಸಿನಿಮಾಗೆ ಪ್ರಚಾರ ಮಾಡುವುದೇ ಕಷ್ಟದ ಸ್ಥಿತಿ ಇದೆ. ಹೀಗಿದ್ದಾಗ ಮೂರು ಸಿನಿಮಾ. ಆದರೂ ಮೂರೂ ಸಿನಿಮಾಗಳಿಗೂ ಪ್ರಚಾರದಲ್ಲಿ ನ್ಯಾಯ ಒದಗಿಸುವ ಪ್ರಯತ್ನ ನನ್ನದಾಗಿದೆ.

ಪೃಥ್ವಿ ಒಟಿಟಿಯಲ್ಲಿ ಸ್ಟಾರ್‌. ಇದನ್ನು ಹೊರತುಪಡಿಸಿ ನಿಮ್ಮ ನಿರೀಕ್ಷೆ ಏನು?

ಒಟಿಟಿಯಲ್ಲಿ ನನ್ನ ಸಿನಿಮಾಗಳು ಬಿಡುಗಡೆಯಾದಾಗ ಜನರು ನೆಚ್ಚಿಕೊಂಡಿದ್ದಾರೆ. ಆದರೆ ಚಿತ್ರಮಂದಿರದಲ್ಲಿ ನನ್ನ ಸಿನಿಮಾ ಹಿಟ್‌ ಆಗಬೇಕಾದ ಅವಶ್ಯಕತೆ ತುಂಬಾ ಇದೆ. ಈ ರೀತಿಯ ಒಂದು ಹಿಟ್‌ ಬೇಕೇ ಬೇಕು. ಏಕೆಂದರೆ ಅದರ ಪರಿಣಾಮವೇ ಬೇರೆಯಾಗಿರುತ್ತದೆ. ನನ್ನ ಪಾತ್ರಗಳು ಒಟಿಟಿಯಲ್ಲಿ ಹೆಚ್ಚಿನ ಗಮನಸೆಳೆದ ಕಾರಣದಿಂದಾಗಿ ಪ್ರಯೋಗಾತ್ಮಕ ಪಾತ್ರಗಳು ಹೆಚ್ಚಾಗಿ ಬರಲಾರಂಭಿಸಿದವು. ನಿರ್ದೇಶಕರು ಇಂತಹ ಪಾತ್ರಗಳಿಗೆ ನಾನು ಸೂಕ್ತ ಎಂದು ಭಾವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೊಸ ಹೊಸ ಪ್ರೊಡಕ್ಷನ್‌ ಹೌಸ್‌ಗಳ ಜೊತೆ, ನಿರ್ದೇಶಕರ ಜೊತೆ ಕೆಲಸ ಮಾಡುತ್ತಿದ್ದೇನೆ. ‘ಜೂನಿ’, ‘ಮತ್ಸ್ಯಗಂಧ’ ಸಿನಿಮಾಗಳು ಇದಕ್ಕೆ ಸಾಕ್ಷಿ. 

ನಾನು ಬಾಕ್ಸ್‌ ಆಫೀಸ್‌ ಗಳಿಕೆ ಎಂಬ ಪದದ ಹಿಂದೆ ಬಿದ್ದಿಲ್ಲ. ಹೀಗಾಗಿದ್ದರೆ ‘ದೂರದರ್ಶನ’, ‘ಜೂನಿ’ಯಂತಹ ಸಿನಿಮಾಗಳನ್ನು ನಾನು ಒಪ್ಪಿಕೊಳ್ಳುತ್ತಿರಲಿಲ್ಲ. ಮಾರುಕಟ್ಟೆ ಬಗ್ಗೆ ತಲೆಕೆಡಿಸಿಕೊಂಡವನಲ್ಲ. ಶೂನ್ಯದಿಂದ ಬಂದಿದ್ದೇನೆ; ಕಳೆದುಕೊಳ್ಳಲು ಏನೂ ಇಲ್ಲ. ಹೀಗಾಗಿ ಕಥೆ ನನ್ನನ್ನು ಕಾಡಿದರೆ ಸಿನಿಮಾ ಮಾಡುತ್ತೇನೆ. ಒಳ್ಳೆಯ ಕಥೆಗಳನ್ನು, ಪಾತ್ರಗಳನ್ನು ಮಾಡಬೇಕು ಎನ್ನುವುದಷ್ಟೇ ನನ್ನ ಗುರಿ. ಈ ದಾರಿಯಲ್ಲಿ ಅನ್ವೇಷಣೆ ನಿರಂತರ.  

‘ಜೂನಿ’ ಚಿತ್ರದಲ್ಲಿನ ನಿಮ್ಮ ಪಾತ್ರ...

‘ಜೂನಿ’ ಒಂದು ಪ್ರಯೋಗಾತ್ಮಕ ಪ್ರೇಮಕಥೆ. ವೈಭವ್ ಮಹಾದೇವ್ ಸಾರಥ್ಯದ ಈ ಸಿನಿಮಾ ಸದ್ದಿಲ್ಲದೇ ಮುಗಿಸಿದ್ದೆವು. ಅಂತಿಮ ಪ್ರಾಡಕ್ಟ್‌ ಸಿದ್ಧವಾದ ಬಳಿಕವಷ್ಟೇ ನಾವು ಸಿನಿಮಾವನ್ನು ಘೋಷಿಸಿದ್ದೆವು. ಒಂದು ರೀತಿಯಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಸಿನಿಮಾ ಇದಾಗಿದೆ. ಈ ವಿಷಯವನ್ನು ಮನರಂಜನಾತ್ಮಕವಾಗಿ ನಿರ್ದೇಶಕರು ಇಲ್ಲಿ ಹೇಳಿದ್ದಾರೆ. ‘ಪಾರ್ಥ’ ಎಂಬ ಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ. ತನಗೆ ಅರಿವಿಲ್ಲದೇ ‘ಡಿಸೋಸಿಯೇಟಿವ್‌ ಐಡೆಂಟಿಟಿ ಡಿಸಾರ್ಡರ್‌’ನಿಂದ ಬಳಲುತ್ತಿರುವ ಹುಡುಗಿಯನ್ನು ಪ್ರೀತಿಸಿದಾತ. ಆಕೆಗೆ ಎರಡು ಮನಃಸ್ಥಿತಿ. ಒಂದು ‘ಜೂನಿ’, ಮತ್ತೊಬ್ಬಳು ‘ಮಾನ್ಸಿ’. ಇಂತಹ ಅನಾರೋಗ್ಯದಿಂದ ಬಳಲುತ್ತಿರುವ ನೈಜ ವ್ಯಕ್ತಿಯನ್ನು ಆಧರಿಸಿ ಸಿನಿಮಾ ಹೆಣೆಯಲಾಗಿದೆ. 

ಸಾಮಾನ್ಯವಾಗಿ ಇಂತಹ ಸಮಸ್ಯೆ ಉಳ್ಳವರಿಂದ ಸಮಾಜಕ್ಕೆ ತೊಂದರೆ ಇದೆ ಎಂದು ಸಿನಿಮಾಗಳಲ್ಲಿ ತೋರಿಸಲಾಗುತ್ತದೆ. ಸರಣಿ ಹಂತಕರಾಗಿ ಇವರನ್ನು ಬಿಂಬಿಸಲಾಗುತ್ತದೆ. ಆದರೆ ಅವರೂ ನಮ್ಮಂತೆಯೇ ಮನುಷ್ಯರು ಎನ್ನುವುದನ್ನು ನಿರ್ದೇಶಕರು ಇಲ್ಲಿ ಬಿಂಬಿಸಿದ್ದಾರೆ. ‘ಪಾರ್ಥ’ ಎಂಬ ಪಾತ್ರದ ಮೂಲಕ ನಾನು ಪ್ರೇಕ್ಷಕರ ಜೊತೆ ಮಾತನಾಡುತ್ತೇನೆ. ‘ಜೂನಿ’ ಕಥೆಯನ್ನು ನನ್ನ ಮೂಲಕ ನಿರ್ದೇಶಕರು ಹೇಳುತ್ತಾರೆ. ಬಹಳ ನ್ಯಾಚುರಲ್‌ ಆಗಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಹೀಗಾಗಿ ಪರಿಣಾಮವೂ ಹೆಚ್ಚು ಇದೆ. 

ಹೊಸ ಪ್ರಾಜೆಕ್ಟ್‌ಗಳು ಯಾವುದು?

‘ಮತ್ಸ್ಯಗಂಧ’ ನಮ್ಮ ಮಣ್ಣಿನ ಕಥೆ. ಉತ್ತರ ಕನ್ನಡದ ಘಮಲು ಇರುವ ಈ ಸಿನಿಮಾದಲ್ಲಿ ಮೊದಲ ಬಾರಿ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪ್ರಮೋದ್‌ ಜೊತೆಯಾಗಿ, ಗಿರೀಶ್‌ ನಿರ್ದೇಶನದ ‘ಭುವನಂ ಗಗನಂ’ ಸಿನಿಮಾ ಹಾಗೂ ನಾಗತಿಹಳ್ಳಿ ಚಂದ್ರಶೇಖರ ಅವರ ಹೊಸ ಪ್ರಾಜೆಕ್ಟ್‌ನಲ್ಲಿ ನಟಿಸುತ್ತಿದ್ದೇನೆ. ಮಂಗಳೂರು ಮೂಲದ ನಿರ್ಮಾಪಕ ಹರಿಪ್ರಸಾದ್‌ ನಿರ್ಮಾಣದ ಹೊಸ ಸಿನಿಮಾದ ಮಾತುಕತೆ ನಡೆಯುತ್ತಿದೆ. ಇದನ್ನು ಅಶ್ವಿನ್‌ ನಿರ್ದೇಶಿಸುತ್ತಿದ್ದಾರೆ. ‘ದಿಯಾ’ ಸಿನಿಮಾ ಮರಾಠಿಯಲ್ಲಿ ಬಿಡುಗಡೆಗೊಂಡ ಬಳಿಕ ಆ ಕಡೆಯಿಂದಲೂ ಹಲವು ಅವಕಾಶಗಳು ಬಂದಿವೆ. ಆದರೆ ನನ್ನನ್ನು ಆಕರ್ಷಿಸಿದ ಕಥೆಗಳು ಇರಲಿಲ್ಲ ಎನ್ನುವ ಕಾರಣಕ್ಕೆ ತಿರಸ್ಕರಿಸಿದ್ದೇನೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT