ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶಸ್ಸಿನ ನಿರೀಕ್ಷೆಯಲಿ ನಿಶ್ವಿಕಾ

Last Updated 28 ಜನವರಿ 2021, 19:30 IST
ಅಕ್ಷರ ಗಾತ್ರ

‘ಜಂಟಲ್‌ಮನ್‌’, ‘ವಾಸು ನಾನ್ ಪಕ್ಕಾ ಕಮರ್ಷಿಯಲ್‘, ‘ಪಡ್ಡೆ ಹುಲಿ’ ಹಾಗೂ ‘ಅಮ್ಮ ಐ ಲವ್‌ ಯು’ ಹೀಗೆ ಒಂದಿಷ್ಟು ಚಿತ್ರಗಳ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿದ ನಟಿ ನಿಶ್ವಿಕಾ ನಾಯ್ಡು, ನಾಯಕಿಯಾಗಿ ಅಭಿನಯಿಸಿರುವ ಕಮರ್ಷಿಯಲ್ ಚಿತ್ರ ‘ರಾಮಾರ್ಜುನ’ ಇದೇ ಶುಕ್ರವಾರ (ಜ.29) ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

‘ವಾಸು ನಾನ್ ಪಕ್ಕಾ ಕಮರ್ಷಿಯಲ್’ ಚಿತ್ರದ ನಂತರ ನಾಯಕ ನಟ ಮತ್ತು ನಿರ್ದೇಶಕ ಅನೀಶ್‌ ಜತೆಗೆ ನಿಶ್ವಿಕಾ ಮತ್ತೊಮ್ಮೆ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರ ಖಂಡಿತಾ ಒಂದು ಬ್ರೇಕ್‌ ಕೊಡಲಿದೆ ಎನ್ನುವ ಅಪರಿಮಿತ ವಿಶ್ವಾಸದಲ್ಲಿರುವ ನಿಶ್ವಿಕಾ ನಾಯ್ಡು ತಮ್ಮ ಸಿನಿ ಪಯಣದ ಕುರಿತು ಹಲವು ಸಂಗತಿಗಳನ್ನು ‘ಸಿನಿಮಾ ಪುರವಣಿ’ಯ ಜತೆಗೆ ಹಂಚಿಕೊಂಡಿದ್ದಾರೆ.

‘ಇದೊಂದು ಥ್ರಿಲ್ಲರ್‌ ಸಿನಿಮಾ, ದೊಡ್ಡ ಬಜೆಟ್‌ ಸಿನಿಮಾಗಳಂತೆಯೇ ಅದ್ಧೂರಿಯಾಗಿ ನಿರ್ಮಾಣವಾಗಿದೆ. ಸಿನಿಮಾ ಕಥೆಯ ಬಗ್ಗೆ ಒಂದಿಷ್ಟು ಹೇಳಿದರೂ ಇಡೀ ಕಥಾಹಂದರವೇ ಬಿಚ್ಚಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಕಥೆಯ ಬಗ್ಗೆ ಹೆಚ್ಚು ಹೇಳಲಾರೆ. ನನ್ನ ಪಾತ್ರದ ಹೆಸರು ಖುಷಿ. ಆಕೆ ಕಾನೂನು ವಿದ್ಯಾರ್ಥಿ. ಈವರೆಗಿನ ಚಿತ್ರಗಳಲ್ಲಿ ಬಬ್ಲಿ, ಕ್ಯೂಟ್‌, ಮುಗ್ಧ ಹುಡುಗಿಯ ಪಾತ್ರಗಳಲ್ಲಿ ನಟಿಸಿದ್ದೆ. ಮೊದಲ ಬಾರಿಗೆ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರದಲ್ಲಿ ತುಂಬಾ ನಾಟಕೀಯತೆಯೂ ಇದೆ. ಹೇಗೆ ಜನರನ್ನು ನಗಿಸುವೆ ಮತ್ತು ಅಳುವಂತೆ ಮಾಡುವೆ ಎನ್ನುವುದನ್ನು ತೆರೆಯ ಮೇಲೆಯೇ ನೋಡಬೇಕು. ಮೊದಲಾರ್ಧ ಕಾಮಿಡಿ ಇದ್ದರೆ, ದ್ವಿತಿಯಾರ್ಧದಲ್ಲಿ ಕೌಟುಂಬಿಕ ಮನರಂಜನೆ ಇದೆ. ನಿರ್ದೇಶಕ ಅನೀಶ್‌ ಪಾತ್ರದ ಬಗ್ಗೆ ಹೇಳಿದಾಗ ನಾನು ‘ಖುಷಿ’ಯಿಂದ ಚಿತ್ರ ಒಪ್ಪಿಕೊಂಡೆ. ಈ ಚಿತ್ರದ ಬಗ್ಗೆ ನನಗೂ ಅಪಾರ ನಿರೀಕ್ಷೆಗಳಿವೆ. ನನ್ನ ಸಿನಿ ಬದುಕಿನಲ್ಲಿ ಇದು ಖಂಡಿತಾ ಒಂದು ದೊಡ್ಡ ಯಶಸ್ಸು ನೀಡಲಿದೆ ಎನ್ನುವ ನಂಬಿಕೆಯೂ ಇದೆ’ ಎಂದು ಮಾತು ವಿಸ್ತರಿಸಿದರು.

‘ಚಿತ್ರವು ಕೊರೊನಾ ಪೂರ್ವದಲ್ಲೇ ಪೂರ್ಣವಾಗಿತ್ತು. ಬೆಂಗಳೂರಿನಲ್ಲೇಬಹುತೇಕ ಚಿತ್ರೀಕರಣ ನಡೆದಿತ್ತು. ಒಂದು ಹಾಡಿನ ಚಿತ್ರೀಕರಣ ಮಾತ್ರ ನಾರ್ವೆಯಲ್ಲಿ ಆಗಿದೆ. ಅದೇ ಹಾಡನ್ನು ಅಪ್ಪು ಸರ್‌ (ಪುನೀತ್‌ ರಾಜ್‌ಕುಮಾರ್‌) ಹಾಡಿದ್ದು, ಇದು ನಮ್ಮ ಚಿತ್ರದ ಬೆನ್ನೆಲುಬು ಕೂಡ. ಈ ಹಾಡು ಈಗಾಗಲೇ ಸಿನಿಪ್ರಿಯರ ಹೃದಯವನ್ನೂ ಗೆದ್ದಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್‌ ಕೂಡ ಚಿತ್ರತಂಡದ ವಿಶ್ವಾಸ ಹೆಚ್ಚಿಸಿದೆ. ಟ್ರೈಲರ್‌ ಎರಡನೇ ದಿನಗಳಲ್ಲಿ 2.5 ದಶಲಕ್ಷ ಜನರಿಂದ ವೀಕ್ಷಣೆ ಪಡೆದುಕೊಂಡಿತು. ಚಿತ್ರ ಖಂಡಿತವಾಗಿಯೂ ಇಡೀ ಸಮೂಹವನ್ನು ತಲುಪಲಿದೆ’ ಎನ್ನುವುದು ಅವರ ವಿಶ್ವಾಸದ ನುಡಿ.

‘ಕೊರೊನಾ ಪೂರ್ವದಲ್ಲಿ ಜನರು ಮನರಂಜನೆಗಾಗಿ ತಾವಾಗಿಯೇಚಿತ್ರಮಂದಿರಗಳಿಗೆ ಬರುತ್ತಿದ್ದರು. ಈಗ ಕೊರೊನಾ ಭಯವಿರುವುದರಿಂದ ಅವರಲ್ಲಿ ಅಂಜಿಕೆ ಇರುವುದು ಸಹಜ. ಅಂಜಿಕೆ ಬಿಟ್ಟು ಬನ್ನಿ ಎಂದು ಅವರನ್ನು ಕರೆಯುವಂತಾಗಿದೆ. ಚಿತ್ರರಂಗದಿಂದ ಆ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಒಳ್ಳೆಯ ಸಿನಿಮಾಗಳು ಬಿಡುಗಡೆಯಾದರೆ ಜನರು ಖಂಡಿತಾಚಿತ್ರಮಂದಿರಗಳಿಗೆ ಬರುತ್ತಾರೆ. ನಮ್ಮ ಚಿತ್ರವು ಜನರನ್ನು ಚಿತ್ರಮಂದಿರದತ್ತ ಲಗ್ಗೆ ಇಡುವಂತೆ ಮಾಡಲಿದೆ’ ಎನ್ನುವ ಮಾತು ಸೇರಿಸಿದರು.

‘ಸಿನಿಮಾ ಸ್ಕ್ರಿಪ್ಟ್‌ ಮತ್ತು ಮೇಕಿಂಗ್‌ ನೋಡಿಯೇ ರಕ್ಷಿತ್‌ ಶೆಟ್ಟಿ ಅವರು ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರವನ್ನು ಒಟಿಟಿಗೆ ಕೊಡದೆ, ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವ ತೀರ್ಮಾನ ಅವರದೇ. ರಕ್ಷಿತ್‌ ಶೆಟ್ಟಿ ಅವರ ಪಾಲ್ಗೊಳ್ಳುವಿಕೆ ಚಿತ್ರದ ಪ್ಲಸ್‌ ಪಾಯಿಂಟ್‌’ ಎನ್ನಲು ಅವರು ಮರೆಯಲಿಲ್ಲ.

ಹೊಸ ಯೋಜನೆಯ ಬಗ್ಗೆ ಮಾತು ಹೊರಳಿದಾಗ, ‘ಮರ್ಫಿ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಮಾರ್ಚ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಜತೆಗೆ ‘ಗಾಳಿಪಟ–2’ರಲ್ಲೂ ನಟಿಸುತ್ತಿದ್ದು, ಇದು ವಿದೇಶದಲ್ಲಿ ಚಿತ್ರೀಕರಣ ಮಾಡಬೇಕಿರುವುದರಿಂದ ಯಾವಾಗ ಶುರುವಾಗಲಿದೆ ಎನ್ನುವುದು ಗೊತ್ತಿಲ್ಲ’ ಎಂದು ನಿಶ್ವಿಕಾ ಮಾತಿಗೆ ವಿರಾಮ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT