ಚಂದನವನದ ತೆರೆಗಳಲ್ಲಿ ‘ಭೀಮ’, ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾಗಳ ಓಟದ ನಡುವೆ ಇಂದು(ಆ.23) ನಾಲ್ಕು ಸಿನಿಮಾಗಳು ತೆರಕಾಣುತ್ತಿವೆ.
‘ಪೌಡರ್’: ಜನಾರ್ದನ್ ಚಿಕ್ಕಣ್ಣ ನಿರ್ದೇಶಿಸಿರುವ ದಿಗಂತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಹಾಸ್ಯಪ್ರಧಾನ ಚಿತ್ರವಾಗಿದೆ. ‘ಗುಲ್ಟು’ ಸಿನಿಮಾ ನಿರ್ದೇಶಿಸಿದ್ದ ಜನಾರ್ದನ್ ಚಿಕ್ಕಣ್ಣ ಇದೇ ಮೊದಲ ಬಾರಿಗೆ ಹಾಸ್ಯಪ್ರಧಾನ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಚಿತ್ರದ ಮೂಲಕಥೆ ಮುಂಬೈನ ದೀಪಕ್ ವೆಂಕಟೇಶನ್ ಅವರದ್ದು. ಇಬ್ಬರು ಯುವಕರು ಒಂದು ನಿಗೂಢವಾದ ‘ಪೌಡರ್’ ಪ್ರಭಾವದಿಂದಾಗಿ ದಿಢೀರನೆ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಈ ಚಿತ್ರದ ಕಥಾಹಂದರ. ದಿಗಂತ್ ಮಂಚಾಲೆ, ಧನ್ಯ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಕೆ.ಆರ್.ಜಿ. ಸ್ಟೂಡಿಯೊಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಸಹಯೋಗದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾದ ಟಿಕೆಟ್ ದರವನ್ನು ಇಳಿಸಲಾಗಿದೆ. ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲಿ ₹150ರಿಂದ ಟಿಕೆಟ್ ಬೆಲೆ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
‘ಸಿ’: ಇದು ಬಹುತೇಕ ಹೊಸಬರಿಂದಲೇ ಕೂಡಿರುವ ಸಿನಿಮಾ. ಕಿರಣ್ ಸುಬ್ರಮಣಿ ನಿರ್ದೇಶನದ ಜೊತೆಗೆ ನಾಯಕನಾಗಿಯೂ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಜಿಎಸ್ ಪ್ರೊಡಕ್ಷನ್ ಬಂಡವಾಳ ಹೂಡಿದೆ.
ಕಣ್ಣು ಕಾಣದ ಮಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಒದ್ದಾಡುವ ತಂದೆಯ ಪಾತ್ರದಲ್ಲಿ ಕಿರಣ್ ನಟಿಸಿದ್ದು, ಮಗಳ ಶಸ್ತ್ರಚಿಕಿತ್ಸೆಗಾಗಿ ಏನು ಬೇಕಾದರೂ ಮಾಡಲು ಹಠಕ್ಕೆ ಬೀಳುವ ಅಪ್ಪ, ಹೇಗೆ ಮೆಡಿಕಲ್ ಮಾಫಿಯಾದ ಬುಡ ಅಲುಗಾಡಿಸುತ್ತಾನೆ ಎಂಬುವುದೇ ಸಿನಿಮಾದ ಎಳೆ. ಈ ಸಿನಿಮಾ ಸಸ್ಪೆನ್ಸ್ ಕಂ ಕ್ರೈಂ ಥ್ರಿಲ್ಲರ್ ಶೈಲಿಯಲ್ಲಿದೆ.
ಈ ಸಿನಿಮಾ ಜೊತೆಗೆ ‘ದಿ ಜರ್ನಲಿಸ್ಟ್’ ಹಾಗೂ ‘ತಾಜ್’ ಎಂಬ ಸಿನಿಮಾಗಳೂ ಬಿಡುಗಡೆಯಾಗಿವೆ.