ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪು ತಿಂದವರು ನೀರು ಕುಡಿಯಲೇಬೇಕು: ವಕೀಲ ಪ್ರಶಾಂತ್‌ ಸಂಬರಗಿ ವ್ಯಂಗ್ಯ

Last Updated 8 ಸೆಪ್ಟೆಂಬರ್ 2020, 8:21 IST
ಅಕ್ಷರ ಗಾತ್ರ

ಬೆಂಗಳೂರು: ‘ಉಪ್ಪು ತಿಂದವವರು ನೀರು ಕುಡಿಯಲೇಬೇಕು. ನಮ್ಮಕರ್ಮ ಯಾವಾಗಲೂ ನಮ್ಮ ಬೆನ್ನೇರಿ ಬರುತ್ತದೆ’ ಎಂದು ವಕೀಲ ಪ್ರಶಾಂತ್‌ ಸಂಬರಗಿ ಹೇಳಿದ್ದಾರೆ.

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಮಾಫಿಯಾ ಸಂಬಂಧ ಬಹುಭಾಷಾ ನಟಿ ಸಂಜನಾ ಗಲ್ರಾನಿಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಅವರನ್ನು ವಿಚಾರಣೆಗೆ ಒಳಪಡಿಸಿರುವುದಕ್ಕೆ ಸಂಬರಗಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

‘ಈ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಇನ್ನಷ್ಟು ಘಟಾನುಘಟಿ ನಟ–ನಟಿಯರು ಸಿಕ್ಕಿ ಬೀಳಲಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಅಲ್ಲೋಲಕಲ್ಲೋಲವೇ ಆದರೂ ಅಚ್ಚರಿಪಡುವಂತಿಲ್ಲ. ಡ್ರಗ್ಸ್‌ ಮಾರಾಟದಿಂದಲೇ ಸಂಪಾದಿಸಿದ ಹಣದಿಂದ ನಿರ್ಮಾಣವಾಗಿರುವ ಸಿನಿಮಾವೊಂದರ ಮುಖವಾಡವೂ ಮುಂದಿನ ದಿನಗಳಲ್ಲಿ ಕಳಚಿ ಬೀಳಲಿದೆ’ ಎಂದು ಸಂಬರಗಿ ಹೊಸ ಬಾಂಬ್‌ ಸಿಡಿಸಿದ್ದಾರೆ.

‘ಡ್ರಗ್‌ ಮಾಫಿಯಾ ಮಟ್ಟಹಾಕಲು ದೇಶದ ತನಿಖಾ ಸಂಸ್ಥೆಗಳು ಸಾರಿರುವ ಯುದ್ಧದಲ್ಲಿ ಮಾಹಿತಿ ಒದಗಿಸುವ ಮೂಲಕ ನಾನು ಒಬ್ಬ ಯೋಧನಾಗಿದ್ದೇನೆ. ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕಾದರೆ, ಜನರು ಸ್ವಯಂಪ್ರೇರಿತವಾಗಿ ಡ್ರಗ್ಸ್‌ ಮಾಫಿಯಾ ವಿರುದ್ಧ ಮಾಹಿತಿಗಳನ್ನು ತನಿಖಾ ಸಂಸ್ಥೆಗಳಿಗೆ ಒದಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘ಚಿತ್ರರಂಗದ ನಟ–ನಟಿಯರು, ಸೆಲೆಬ್ರಿಟಿಗಳ ಫೋಟೊ ಶೂಟ್‌ ಮತ್ತು ವಿಡಿಯೊ ಶೂಟ್‌ ಮಾಡಿಸುವ ಕೆಲಸ ಮಾಡುವಾಗ ಕೆಲವರ ಜತೆ ಒಂದಿಷ್ಟು ಸಮಯ ಓಡಾಡಿದೆ. ಆಗ ಇಲ್ಲಿ ಏನೋ ಕಾನೂನು ಬಾಹಿರ ಮತ್ತು ಸಮಾಜ ಬಾಹಿರ ಕೃತ್ಯ ನಡೆಯುತ್ತಿರುವ ವಾಸನೆ ಮೂಗಿಗೆ ಬಡಿಯಿತು. ಈ ಮಾಫಿಯಾ ವಿರುದ್ಧ ಆಗಲೇ ಸೈಲೆಂಟ್ ವಾರ್‌ ಮಾಡಬೇಕೆಂಬ ನಿರ್ಧಾರ ಮಾಡಿದ್ದೆ’ ಎಂದು ಅವರು ತಿಳಿಸಿದ್ದಾರೆ.

‘ಹಂದಿ, ನಾಯಿ ಎಂದು ನನ್ನನ್ನು ನಿಂದಿಸಿರುವುದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ, ನನಗೆ ಚಪ್ಪಲಿಯಿಂದ ಹೊಡೆಯುವುದಾಗಿ ಅವಹೇಳನ ಮಾಡಿರುವುದಕ್ಕೆ ಸಂಜನಾ ಗರ್ಲಾನಿ ವಿರುದ್ಧ ₹10 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್‌ ಮೊಕದ್ದಮೆಯನ್ನು ಇನ್ನು ನಾಲ್ಕು ದಿನಗಳೊಳಗೆ ದಾಖಲಿಸುವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT