ಸೋಮವಾರ, ಜನವರಿ 17, 2022
20 °C

ಶಿವಾಜಿ ಸುರತ್ಕಲ್‌–2: ರಮೇಶ್‌ ಅರವಿಂದ್‌ ತಂದೆ ಪಾತ್ರದಲ್ಲಿ ನಾಸರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

2020ರಲ್ಲಿ ಬಿಡುಗಡೆಯಾಗಿದ್ದ ರಮೇಶ್‌ ಅರವಿಂದ್‌ ಅವರ ಅಭಿನಯದ 101ನೇ ಚಿತ್ರ ‘ಶಿವಾಜಿ ಸುರತ್ಕಲ್‌’ ಪ್ರೇಕ್ಷಕರ ಮನಗೆದ್ದಿತ್ತು. ಈ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಆರಂಭವಾಗಿದ್ದು, ದಕ್ಷಿಣ ಭಾರತದ ಖ್ಯಾತ ನಟ ನಾಸರ್‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆಕಾಶ್ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಕಳೆದ ಡಿಸೆಂಬರ್ 13ರಿಂದ ಬೆಂಗಳೂರಿನ ಸುತ್ತಮುತ್ತ ನಡೆಯುತ್ತಿದೆ. ಶಿವಾಜಿ ಸುರತ್ಕಲ್ ತಂದೆಯ ಪಾತ್ರದಲ್ಲಿ ನಾಸರ್‌ ಕಾಣಿಸಿಕೊಳ್ಳಲಿದ್ದಾರೆ. ಇವರ ಪಾತ್ರದ ಹೆಸರು ವಿಜೇಂದ್ರ ಸುರತ್ಕಲ್. ತಂದೆ ಮಗನ ಬಾಂಧವ್ಯವದ ಬಗ್ಗೆ ಹೇಳುವ ಪಾತ್ರ ಇದಾಗಿದೆ. ಬಹಳ ವರ್ಷಗಳಿಂದ ರಮೇಶ್ ಅರವಿಂದ್ ಮತ್ತು ನಾಸರ್ ಒಬ್ಬರಿಗೊಬ್ಬರು ಪರಿಚಯವಿದ್ದರೂ, ಇದೇ ಮೊದಲ ಬಾರಿಗೆ ತೆರೆಯ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಾಧಿಕಾ ನಾರಾಯಣ್, ರಘು ರಾಮನಕೊಪ್ಪ ಮತ್ತು ವಿದ್ಯಾಮೂರ್ತಿ ಎರಡನೇ ಭಾಗದಲ್ಲೂ ಮುಂದುವರಿಯಲಿದ್ದಾರೆ. ಚಿತ್ರದಲ್ಲಿ ಡಿಸಿಪಿ ಹುದ್ದೆಯಲ್ಲಿರುವ ಯುವ ಐಪಿಎಸ್‌ ಅಧಿಕಾರಿ ‘ದೀಪ ಕಾಮತ್‌’ ಪಾತ್ರದಲ್ಲಿ ಮೇಘನಾ ಗಾಂವ್ಕರ್‌ ಅವರು ಕಾಣಿಸಿಕೊಳ್ಳಲಿದ್ದಾರೆ. ಮಗಳು ಜಾನಕಿ ಧಾರಾವಾಹಿಯಲ್ಲಿ ನಟಿಸಿದ್ದ ರಾಕೇಶ್ ಮಯ್ಯ, ಬಿಗ್‌ಬಾಸ್‌ ಖ್ಯಾತಿಯ ವಿನಾಯಕ ಜೋಷಿ ಅವರೂ ಇದೀಗ ಚಿತ್ರತಂಡ ಸೇರಿಕೊಂಡಿದ್ದು ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

‘ಕನ್ನಡ್‌ ಗೊತ್ತಿಲ್ಲ’ ಹಾಗೂ ಇನ್ನಷ್ಟೇ ಬಿಡುಗಡೆಯಾಗಬೇಕಿರುವ ‘ಲವ್‌ ಮಾಕ್ಟೇಲ್‌–2’ ಸಿನಿಮಾದ ಸಂಗೀತ ನಿರ್ದೇಶಕ ನಕುಲ್‌ ಅಭಯಂಕರ್‌ ಅವರು ಶಿವಾಜಿ ಸುರತ್ಕಲ್‌–2 ಭಾಗಕ್ಕೂ ಸಂಗೀತ ನೀಡಿದ್ದಾರೆ. ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಇವರ ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು