ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಟ್ಟೇರಿತು ‘ಮನಸಾಗಿದೆ’ ಚಿತ್ರ

Last Updated 31 ಮಾರ್ಚ್ 2021, 6:54 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಾಪಕ ಎಸ್‌.ಚಂದ್ರಶೇಖರ್‌ ಅವರು ತಮ್ಮ ಪುತ್ರ ಅಭಯ್‌ ಅವರನ್ನು ‘ಮನಸಾಗಿದೆ’ ಚಿತ್ರದ ಮುಖಾಂತರ ಚಂದನವನಕ್ಕೆ ಪರಿಚಯಿಸಲು ಸಜ್ಜಾಗಿದ್ದಾರೆ.

ಚಿತ್ರದ ಶೀರ್ಷಿಕೆ ಅನಾವರಣವು ಮಂಗಳವಾರ ನಡೆದಿದೆ. ‘ಇದೊಂದು ಪ್ರೇಮಕಥೆಯಾಗಿದೆ. ಕೆಲವರು ಪ್ರೀತಿಯನ್ನು ಪಡೆಯಬೇಕು ಎಂದು ಹುಡುಕಿಕೊಂಡು ಹೋಗುತ್ತಾರೆ. ಮತ್ತೆ ಕೆಲವರಿಗೆ ಪ್ರೀತಿಯೇ ಹುಡುಕಿಕೊಂಡು ಬರುತ್ತದೆ. ನಮ್ಮ ಚಿತ್ರದಲ್ಲಿ ನಾಯಕನು ಮನಸಾರೆ ಬಯಸಿದ ಪ್ರೀತಿಯನ್ನು ಪಡೆಯಬೇಕು ಎಂದು ಹೊರಟಾಗ, ಇನ್ನೊಂದು ರೂಪದಲ್ಲಿ ಪ್ರೀತಿಯೇ ಅವನನ್ನು ಹುಡುಕಿಕೊಂಡು ಬರುತ್ತದೆ. ಈ ಸಂದರ್ಭದಲ್ಲಿ ನಾಯಕ ಯಾವುದನ್ನು ಪಡೆಯುತ್ತಾನೆ ಎನ್ನುವುದು ಕಥಾಹಂದರ’ ಎನ್ನುತ್ತಾರೆ ಕಥೆ ರಚಿಸಿರುವ ಎಸ್‌.ಚಂದ್ರಶೇಖರ್‌.

ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಟಿಕ್‌ಟಾಕ್‌ ಸ್ಟಾರ್‌ ಅಥಿರ ಹಾಗೂ ಮೇಘಶ್ರೀ ಕ್ರಮವಾಗಿ ‘ಸಿಂಚನ’ ಮತ್ತು ‘ಅಂಕಿತ’ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಚಿತ್ರದ ಶೀರ್ಷಿಕೆಯನ್ನು ನೋಡಿದಾಗಲೇ ಇದೊಂದು ಪ್ರೇಮಕಥೆ ಎನ್ನುವುದು ಸ್ಪಷ್ಟ. ಚಂದನವನದಲ್ಲಿ ಅದೆಷ್ಟೋ ಪ್ರೇಮಕಥೆಗಳು ಬಂದಿವೆ. ಆದರೆ ಇದೊಂದು ವಿಭಿನ್ನ ಚಿತ್ರ. ಪ್ರೀತಿ ಮತ್ತು ಮನುಷ್ಯತ್ವದ ನಡುವೆ ನಡೆಯುವ ಸಂಘರ್ಷದ ವಿಷಯ ಇಟ್ಟುಕೊಂಡು ಚಿತ್ರ ಮಾಡಿದ್ದೇವೆ. ಇದೊಂದು ಮಾಸ್‌ ಸಿನಿಮಾ. ಚಿತ್ರದಲ್ಲಿ ಮನರಂಜನೆಗೆ ಕೊರತೆ ಇಲ್ಲ. ಕಾಮಿಡಿ ಕಿಲಾಡಿಗಳು ಇಲ್ಲಿದ್ದಾರೆ. ಮೊದಲು ಅಭಯ್‌ ಅವರನ್ನು ನೋಡಿದಾಗ, ಇನ್ನೂ ಚಿಕ್ಕ ಹುಡುಗನಂತೆ ಕಂಡರು. ನಾಯಕನ ಪಾತ್ರಕ್ಕೆ ಅವರು ಸರಿಹೋಗುವುದಿಲ್ಲ ಎಂದಿದ್ದೆ. ಆದರೆ, ನಾಲ್ಕು ತಿಂಗಳಲ್ಲಿ ಅವರಲ್ಲಿ ಆದ ಬದಲಾವಣೆ ನನಗೆ ಅಚ್ಚರಿ ತರಿಸಿತು’ ಎಂದು ನಿರ್ದೇಶಕ ಶ್ರೀನಿವಾಸ್‌ ಶಿಡ್ಲಘಟ್ಟ ಹೇಳಿದರು.

ಚಿತ್ರಕ್ಕೆ ಮಾನಸ ಹೊಳ್ಳ ಅವರು ಸಂಗೀತ ನೀಡಿದ್ದು, ಥ್ರಿಲ್ಲರ್‌ ಮಂಜು ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಅವರು ಸಂಭಾಷಣೆ ಬರೆದಿದ್ದು, ಡಾ.ವಿ.ನಾಗೇಂದ್ರ ಪ್ರಸಾದ್‌, ಕವಿರಾಜ್‌, ಅರಸು ಅಂತಾರೆ, ರೆಮೋ, ಸಂತೋಷ್‌ ನಾಯಕ್‌ ಅವರು ಸಾಹಿತ್ಯ ಬರೆದಿದ್ದಾರೆ. ಚಿತ್ರದ ಚಿತ್ರೀಕರಣ ಏಪ್ರಿಲ್‌ನಲ್ಲಿ ಆರಂಭವಾಗಲಿದ್ದು, ಬೆಂಗಳೂರು ಹಾಗೂ ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT