ಶುಕ್ರವಾರ, ಮಾರ್ಚ್ 24, 2023
30 °C

‘ಡಾಲಿ’ ಧನಂಜಯ ನಟನೆಯ ಹೆಡ್‌ಬುಷ್‌ ವಿವಾದ; ಸಂಧಾನದಲ್ಲಿ ಸುಖಾಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಟ ‘ಡಾಲಿ’ ಧನಂಜಯ ನಟನೆಯ ‘ಹೆಡ್‌ಬುಷ್‌’ ಸಿನಿಮಾ ವಿವಾದ ಸಂಧಾನದಲ್ಲಿ ಸುಖಾಂತ್ಯಗೊಂಡಿದೆ. ವಿವಾದಕ್ಕೆ ಕಾರಣವಾದ ಸಂಭಾಷಣೆಯನ್ನು ಚಿತ್ರದಿಂದ ತೆಗೆಯಲು(ಮ್ಯೂಟ್‌ ಮಾಡಲು) ಚಿತ್ರತಂಡ ಗುರುವಾರ ಒಪ್ಪಿದೆ.

ಸಿನಿಮಾದಲ್ಲಿ ‘ಜುಜುಬಿ ಕರಗ’ ಹಾಗೂ ಕರಗ ಹೊರುತ್ತಿದ್ದ ಅರ್ಚಕರಾದ ದಿವಂಗತ ಶಿವಶಂಕರ್‌ ಅವರನ್ನು ಏಕವಚನದಲ್ಲಿ ಉಲ್ಲೇಖಿಸಿರುವುದನ್ನು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸತೀಶ್‌ ತೀವ್ರವಾಗಿ ಖಂಡಿಸಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬುಧವಾರ ದೂರು ನೀಡಿದ್ದರು. ಈ ಅಂಶಗಳನ್ನು ಸಿನಿಮಾದಿಂದ ತೆಗೆದುಹಾಕುವಂತೆ ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ಗುರುವಾರ ಹೆಡ್‌ಬುಷ್‌ ಚಿತ್ರತಂಡ ಹಾಗೂ ಸಮಿತಿಯ ಸದಸ್ಯರ ಜೊತೆ ಸಂಧಾನ ಸಭೆಯನ್ನು ಮಂಡಳಿ ಆಯೋಜಿಸಿತ್ತು. ಈ ಸಭೆಯಲ್ಲಿ ಸಮಿತಿಯ ಆಗ್ರಹವನ್ನು ಚಿತ್ರತಂಡ ಒಪ್ಪಿದೆ.

ಇದನ್ನೂ ಓದಿ: 

‘ಸಿನಿಮಾದಲ್ಲಿ ಕರಗ ದೃಶ್ಯ ಬಂದಾಗ ಆ ಪದದ ಬಳಕೆ ಬೇಡ ಎಂದು ಅಗ್ನಿ ಶ್ರೀಧರ್‌ ಅವರು ಹೇಳಿದ್ದರು. ಆದರೆ ನಾನು ಹಾಗೂ ನಿರ್ದೇಶಕರು ಆ ಪದವಿದ್ದರೆ ಚೆನ್ನಾಗಿರುತ್ತದೆ ಎಂದುಕೊಂಡಿದ್ದೆವು. ತಪ್ಪಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಸಂಧಾನ ಸಭೆಯಲ್ಲಿ ಸಮುದಾಯದ ಹಿರಿಯರು ನಮಗೆ ಇನ್ನಷ್ಟು ಸೂಕ್ಷ್ಮವಾಗಿ ಸಿನಿಮಾ ಮಾಡಲು ಪ್ರೇರೇಪಿಸಿದರು. ಅವರ ಮಾತುಗಳು ನಮ್ಮ ಪ್ರಯತ್ನವನ್ನು ಟೀಕಿಸಲಿಲ್ಲ. ಸಮುದಾಯಕ್ಕೆ ನೋವುಂಟು ಮಾಡಿದ ಪದವನ್ನು ತೆಗೆಯುತ್ತೇವೆ. ನಾನು ಎಲ್ಲ ಕಲೆಯನ್ನೂ ಪ್ರೀತಿಸುತ್ತೇನೆ. ಯಾರ ಧಾರ್ಮಿಕ ಭಾವನೆಯನ್ನೂ ನೋಯಿಸುವುದಿಲ್ಲ. ವೀರಗಾಸೆ ದೃಶ್ಯಕ್ಕೂ ನಾನು ಸ್ಪಷ್ಟನೆ ನೀಡಿದ್ದೇನೆ. ಅವರೂ ಅರ್ಥಮಾಡಿಕೊಂಡಿದ್ದಾರೆ. ಕಲಾವಿದರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದು ಧನಂಜಯ ತಿಳಿಸಿದರು.

‘ನಾನು ಕೇವಲ ಸಿನಿಮಾ ಮಾಡಲು ಬಂದಿದ್ದೇನೆ. ಯಾವುದೇ ವಿವಾದ ನನಗೆ ಬೇಡ. ಒಳ್ಳೆಯ ಸಿನಿಮಾಗಳನ್ನು ಮಾಡಬೇಕು’ ಎಂದೂ ಧನಂಜಯ ಹೇಳಿದರು.

ವೀರಗಾಸೆ ಕಲಾವಿದರಿಂದಲೂ ದೂರು
ಚಿತ್ರದಲ್ಲಿ ವೀರಗಾಸೆ ಕಲೆಗೆ ಅವಮಾನ ಮಾಡುವ ದೃಶ್ಯಗಳಿವೆ ಎಂದು ಆರೋಪಿಸಿ ಗುರುವಾರ ವೀರಗಾಸೆ ಕಲಾವಿದರೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದರು.

ಈ ಬಗ್ಗೆಯೂ ಸ್ಪಷ್ಟನೆ ನೀಡಿರುವ ಧನಂಜಯ, ‘ನಾನು ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿದ್ದು, ವೀರಗಾಸೆಗೆ ಅವಮಾನಿಸುವ ಯಾವ ಅಂಶವೂ ಇಲ್ಲದಂತೆ ನೋಡಿಕೊಂಡಿದ್ದೇನೆ. ದೂಷಿಸುವವರು ದಯವಿಟ್ಟು ಸಿನಿಮಾ ನೋಡಿ ಕೂಲಂಕಷವಾಗಿ ವಿಮರ್ಶಿಸಿ. ವೀರಗಾಸೆ ನಾನೂ ಚಿಕ್ಕಹುಡುಗನಿದ್ದಾಗಿನಿಂದಲೂ ನೋಡಿದ ಕಲೆ. ಚಿತ್ರದಲ್ಲಿ ವೀರಗಾಸೆ ವೇಷದಲ್ಲಿ ಜಯರಾಜ್‌ ಮೇಲೆ ದಾಳಿ ನಡೆಯುವ ದೃಶ್ಯವದು. ಆ ಸಂದರ್ಭದಲ್ಲಿ ನಿಜವಾದ ವೀರಗಾಸೆಯವರು ಹಿಂದಕ್ಕೆ ಸರಿಯುತ್ತಾರೆ. ವೀರಗಾಸೆಯಲ್ಲಿ ಚಪ್ಪಲಿ ಹಾಕುವುದಿಲ್ಲ. ವೀರಗಾಸೆಯವರು ಶೂ ಹಾಕಿಕೊಂಡಿರುವುದನ್ನು ಗಮನಿಸಿದಾಗ ಜಯರಾಜ್‌ಗೆ ದಾಳಿಯ ಸಂಚು ತಿಳಿಯುತ್ತದೆ. ಜಯರಾಜ್‌ ಹೊಡೆಯುತ್ತಿರುವುದು ವೀರಗಾಸೆಯವರಿಗಲ್ಲ. ಬದಲಾಗಿ ಆ ವೇಷದಲ್ಲಿ ಬಂದವರಿಗೆ. ಇದನ್ನು ಬಹಳ ಸ್ಪಷ್ಟವಾಗಿ ತೋರಿಸಿದ್ದೇವೆ’ ಎಂದರು.

ಓದಿ... ಧನಂಜಯ್‌ ನನ್ನ ಗೆಳೆಯ, ಮಾನವೀಯತೆ ಜೊತೆ ನಾನಿದ್ಡೇನೆ: ವೈಷಮ್ಯ ಬಿಡಿ ಎಂದ ಸತೀಶ್‌ ನೀನಾಸಂ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು