ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಚಿತ್ರರಂಗ: ನಷ್ಟದ ತೇರು

ನಮ್ಮ ಚಲನಚಿತ್ರಗಳಿಗೇಕೆ ಒಟಿಟಿ ಅವಕಾಶಗಳು ಸಿಗುತ್ತಿಲ್ಲ?
Last Updated 29 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಒಂದು ಕಾಲವಿತ್ತು. ಆಗ ಚಿತ್ರವಿತರಣಾ ಕಚೇರಿಯಲ್ಲಿ ಒಂದು ಸೂಪರ್‍ಹಿಟ್ ಚಿತ್ರವಿದ್ದರೆ, ಇನ್ನು ಹಲವಾರು ಸುಮಾರಾದ ಚಿತ್ರಗಳಿರುತ್ತಿದ್ದವು. ಸಹಜವಾಗಿಯೇ ಸೂಪರ್‍ಹಿಟ್ ಚಿತ್ರಗಳಿಗೆ ‘ಡಿಮಾಂಡಪ್ಪೋ ಡಿಮಾಂಡು’! ಆಗ ವಿತರಕರು ಸೂಪರ್‍ಹಿಟ್ ಚಿತ್ರದ ಜೊತೆ ಇತರೆ ಚಿತ್ರಗಳನ್ನೂ ಜೋಡಿಸಿ ಕಡ್ಡಾಯ ಮಾಡಿ ಚಿತ್ರಮಂದಿರಗಳಿಗೆ ಹಂಚುತ್ತಿದ್ದರು. ಮತ್ತು ಆಗೆಲ್ಲ ಪರ್ಸೆಂಟೇಜ್ ಪದ್ಧತಿ. ಹೆಚ್ಚೋ ಕಮ್ಮಿಯೋ, ಅಂತೂ ಗಲ್ಲಾಪೆಟ್ಟಿಗೆಯಲ್ಲಿ ಎಷ್ಟೇ ಸಂಗ್ರಹವಾದರೂ, ನಿರ್ಮಾಪಕನಿಗಿಷ್ಟು, ಚಿತ್ರಮಂದಿರಕ್ಕಿಷ್ಟು ಎಂದು ಹಂಚಿಕೆಯಾಗುತ್ತಿತ್ತು. ಹಾಗಾಗಿ ಎಂಥ ಫ್ಲಾಪ್ ಸಿನಿಮಾ ಆದರೂ ನಾಲ್ಕು ಕಾಸು ಆದಾಯ ನೋಡದೆ ಇರುತ್ತಿರಲಿಲ್ಲ. ಹೂಡಿಕೆದಾರ ಬರಬಾದ್ ಆಗುತ್ತಿರಲಿಲ್ಲ. ಯಾವಾಗ ಪರ್ಸೆಂಟೇಜ್ ಪದ್ಧತಿ ಹೋಗಿ ಚಿತ್ರಮಂದಿರ ಬಾಡಿಗೆ ವ್ಯವಸ್ಥೆ ಬಂತೋ, ಆಗ ನಿರ್ಮಾಪಕ ನಿಜಕ್ಕೂ ಅನಾಥನಾದ. ನಷ್ಟದ ಸಂಪೂರ್ಣ ಹೊರೆ ಈಗ ಅವನೊಬ್ಬನ ತಲೆಯ ಮೇಲೇ ಬಿತ್ತು.

ಹಾಗಾಗಿ ಕನ್ನಡ ಚಿತ್ರರಂಗ ನಿಜ ಅರ್ಥದಲ್ಲಿ ಎಂದೂ ಉದ್ದಿಮೆಯಾಗಲೇ ಇಲ್ಲ. ಯಾಕೆಂದರೆ ಚಿತ್ರೋದ್ಯಮವೇ ಒಟ್ಟಾರೆಯಾಗಿ ನಷ್ಟದ ಕಾರುಬಾರು (ಜಗತ್ತಿನಾದ್ಯಂತ ಇದೇ ನಿಜ.) ಯಶಸ್ಸು ಕಾಣುವುದು ಸರಾಸರಿ ಶೇಕಡಾ ಹತ್ತು ಸಿನಿಮಾಗಳಾದರೆ, ಇನ್ನು ಶೇಕಡಾ ಹತ್ತು ಅಲ್ಲಿಗಲ್ಲಿಗೆ. ಉಳಿದಂತೆ ನೂರಕ್ಕೆ ಎಂಬತ್ತು ಭಾಗ ಭಸ್ಮವಾಗುತ್ತವೆ. ಆ ಎಂಬತ್ತು ಚಿತ್ರಗಳ ನಿರ್ಮಾಪಕರು ಶಾಶ್ವತವಾಗಿ ನಾಪತ್ತೆಯಾಗುತ್ತಾರೆ. ಮತ್ತೆ ಹೊಸಬರು ಬರುತ್ತಾರೆ. ನಷ್ಟದ ತೇರು ಮುನ್ನಡೆಸುತ್ತಾರೆ. ಬಂದವರು ಕೆಲವು ಕಾಲ ಸಕ್ರಿಯವಾಗಿದ್ದು, ನಂತರ ಮುಂದೊಮ್ಮೆ ಚಿತ್ರರಂಗಕ್ಕೆ ರಕ್ತದಾನ ಮಾಡಿ ಮರೆಯಾಗುತ್ತಾರೆ.

ಯಶಸ್ವಿ ಚಿತ್ರಗಳಿಗಾದರೆ ಸಮಸ್ಯೆಯೇ ಇಲ್ಲ. ಎಲ್ಲ ಕಾಲದಲ್ಲೂ ಎಲ್ಲರೂ ಗೆದ್ದ ಎತ್ತಿನ ಬಾಲವನ್ನೇ ತಾನೇ ಹಿಡಿಯುವುದು? ಆದರೆ, ಒಟ್ಟಾರೆ ಚಿತ್ರೋದ್ಯಮದ ಯಶಸ್ಸನ್ನು ಅಳೆಯುವಾಗ ಕೇವಲ ಗೆದ್ದ ಚಿತ್ರಗಳ ಲೆಕ್ಕ ಹಿಡಿದರೆ ಪ್ರಯೋಜನವಿಲ್ಲ. ಸೋತ ನತದೃಷ್ಟರು ಎಷ್ಟು ಸುರಕ್ಷಿತ ಎಂಬುದೇ ನಿಜ ಮಾನದಂಡವಾಗಬೇಕು. ಅದಕ್ಕಾಗಿಯೇ 60ರ ದಶಕದ ವಿತರಣಾ ವ್ಯವಸ್ಥೆ ಮತ್ತು ಪರ್ಸೆಂಟೇಜ್ ಹಂಚಿಕೆಯ ಪ್ರಸ್ತಾಪ ಮಾಡಿದ್ದು. ಆಗ ಗೆದ್ದವರೂ ಸಂತುಷ್ಟರು; ಸೋತವರೂ ತೀರಾ ಬೀದಿಗೆ ಬೀಳದ ಹಾಗೆ ಉದ್ದಿಮೆಯೇ ಆತುಕೊಳ್ಳುತ್ತಿತ್ತು.

ಈಗ ಸಿನಿಮಾ ಅರ್ಥವ್ಯವಸ್ಥೆ ನಖಶಿಖಾಂತ ಬದಲಾಗಿಹೋಗಿದೆ.

ಈಗೇನೋ ಮಲ್ಟಿಪ್ಲೆಕ್ಸ್‌ಗಳು ಬಂದ ಮೇಲೆ ಚಿತ್ರಮಂದಿರದ ಜೊತೆ ಗಳಿಕೆ ಹಂಚಿಕೊಳ್ಳುವ ಪರ್ಸೆಂಟೇಜ್ ಪದ್ಧತಿಯೇನೋ ಮತ್ತೆ ಬಂದಿದೆ. ಆದರೆ ಈಗ ನಿರ್ಮಾಪಕನ ಸ್ವಾತಂತ್ರ್ಯವೇ ಮೊಟಕಾಗಿದೆ. ಅಂದರೆ ಮಲ್ಟಿಪ್ಲೆಕ್ಸ್‌ನಲ್ಲಿ ತನ್ನ ಚಿತ್ರವನ್ನು ಯಾವ ಪರದೆಯಲ್ಲಿ ಹಾಕಬೇಕು, ದಿನಕ್ಕೆ ಎಷ್ಟು ಪ್ರದರ್ಶನ ಕೊಡಬೇಕು, ಚಿತ್ರಮಂದಿರದಿಂದ ಯಾವಾಗ ತೆಗೆಯಬೇಕು- ಈ ಯಾವ ವಿಷಯದಲ್ಲೂ ನಿರ್ಮಾಪಕನಿಗೆ ಹತೋಟಿಯಿಲ್ಲ. ಅದರಲ್ಲೂ ಕನ್ನಡ ಚಿತ್ರ ನಿರ್ಮಾಪಕನಂತೂ ತನ್ನ ನೆಲದಲ್ಲೇ ಎರಡನೇ ದರ್ಜೆಯ ಪ್ರಜೆ! ಮತ್ತು ಈ ಸಮಸ್ಯೆ ಈವತ್ತಿಗೂ ಬಗೆಹರಿದಿಲ್ಲ.

ಸಿನಿಮಾ ಅರ್ಥವ್ಯವಸ್ಥೆ ಬದಲಾದಾಗಲೆಲ್ಲ ಒಟ್ಟಾರೆ ಸಿನಿಮಾ ಕೂಡ ಬದಲಾಗಿದೆ. ಸಿನಿಮಾದ ತಿರುಳು ಬದಲಾಗಿದೆ. ಸಿನಿಮಾದ ರುಚಿ ಬದಲಾಗಿದೆ. ಹಿಂದಿ ಚಿತ್ರರಂಗ ಮಲ್ಟಿಪ್ಲೆಕ್ಸ್ ಸಂಸ್ಕೃತಿ ಬಂದ ಕೂಡಲೇ ಹೊಸ ಹುರುಪಿನಿಂದ ಮೇಲೆದ್ದಿದ್ದನ್ನು ಕಂಡಿದ್ದೇವೆ. ಅದುವರೆಗೆ ಒಂದು ಚಿತ್ರ ಯಶಸ್ವಿ ಅನಿಸಿಕೊಳ್ಳಬೇಕಾದರೆ ಶತದಿನ, ಬೆಳ್ಳಿಹಬ್ಬಗಳನ್ನು ಆಚರಿಸಿಕೊಳ್ಳಬೇಕಿತ್ತು. ಈಗ ಹಾಗಲ್ಲ. ಈಗ ಮಲ್ಟಿಪ್ಲೆಕ್ಸ್‌ಗಳ ‘ಗೋಲ್ಡ್ ಕ್ಲಾಸ್’ ಅರ್ಥವ್ಯವಸ್ಥೆಯೇ ಚಿತ್ರರಂಗವನ್ನು ಪೊರೆಯತೊಡಗಿದೆ.

ನಮ್ಮದೇ ‘ಉಲ್ಟಾ ಪಲ್ಟಾ’ ಬಿಡುಗಡೆಯಾದಾಗ ಕಪಾಲಿ ಚಿತ್ರಮಂದಿರದಲ್ಲಿ ಬಾಲ್ಕನಿ 20 ರೂಪಾಯಿ, ಗಾಂಧಿ ಕ್ಲಾಸ್ 10 ರೂಪಾಯಿ. ಮೊನ್ನೆ ನನ್ನ ಮಗ ಒರಾಯನ್ ಮಾಲ್‍ನಲ್ಲಿ 280 ರೂಪಾಯಿ ಕೊಟ್ಟು ಕಾಂತಾರ ನೋಡಿ ಬಂದ! ಇದರಿಂದಾದ ಪರಿಣಾಮವೆಂದರೆ, ಮಲ್ಟಿಪ್ಲೆಕ್ಸ್ ಸಂಪೂರ್ಣ ಹೊಸ ಮಾರುಕಟ್ಟೆಯನ್ನೇ ಸೃಷ್ಟಿಸಿತು. ಹೊಸ ಬಗೆಯ ಸಣ್ಣ ಚಿತ್ರಗಳು ಧೈರ್ಯವಾಗಿ ಮಾರುಕಟ್ಟೆಗೆ ಇಳಿದವು, ಗೆದ್ದೂ ಗೆದ್ದವು. ಆಗಲೇ ಹೇಳಿದ ಹಾಗೆ, ಹೊಸ ಸಿನಿಮಾ ಅರ್ಥವ್ಯವಸ್ಥೆ, ಹೊಸ ಸಿನಿಮಾಗೆ ದಾರಿ ಮಾಡಿಕೊಟ್ಟಿತು. ಹೊಸ ಆಲೋಚನೆಗಳು ಬಂದವು. ಅನುರಾಗ್ ಕಶ್ಯಪ್‍ನಂಥ ಹೊಸ ರಕ್ತ ಹರಿಯತೊಡಗಿತು. ಸೋಲು-ಗೆಲುವಿನ ವ್ಯಾಖ್ಯಾನವೇ ಬದಲಾಗತೊಡಗಿತು. ಈ ಸನ್ನಿವೇಶದಲ್ಲಿ ಕಣ್ಣೆದುರು ಹೀನಾಯವಾಗಿ ಸೋತ ಚಿತ್ರ ಕೂಡ 100 ಕೋಟಿ ಕ್ಲಬ್ ಸೇರಿಕೊಂಡ ಪವಾಡ ಸಂಭವಿಸತೊಡಗಿತು!

ಮೊನ್ನೆ ಸೂಪರ್ ಡೂಪರ್ ಫ್ಲಾಪ್ ಅನಿಸಿದ ಅಮೀರ್ ಖಾನನ ‘ಲಾಲ್ ಸಿಂಗ್ ಚಡ್ಡಾ’ (‘ಫಾರೆಸ್ಟ್ ಗಂಪ್’ ಚಿತ್ರದ ಅಧಿಕೃತ ರೀಮೇಕ್) ಬಿಡುಗಡೆಗೆ ಮುಂಚೆಯೇ ₹ 300- 400 ಕೋಟಿ ಲಾಭದಲ್ಲಿತ್ತು!

ಒಟ್ಟು ಸಿನಿಮಾ ಸಂಸಾರ ಹೀಗೆ ಸುಖವಾಗಿ ಸಾಗುತ್ತ, ಸಣ್ಣ ಪುಟ್ಟ ಗೊಣಗಾಟಗಳಲ್ಲೇ ಎಲ್ಲ ನೆಮ್ಮದಿಯಾಗಿದ್ದಾಗ ಇದ್ದಕ್ಕಿದ್ದಂತೆ ಕೋವಿಡ್ ಅಪ್ಪಳಿಸಿತು. ಕನ್ನಡವೇನು, ಭಾರತವೇನು, ಜಾಗತಿಕ ಜನಜೀವನವೇ ಅಲ್ಲೋಲಕಲ್ಲೋಲವಾಯಿತು.

ಚಿತ್ರರಂಗದ ವಿಷಯಕ್ಕೆ ಬಂದರೆ ಕೊರೊನಾದ ಎರಡು ವರ್ಷಗಳಲ್ಲಿ ಎಷ್ಟು ಕುಟುಂಬಗಳು ನಿರ್ನಾಮವಾದವೋ, ಎಷ್ಟು ಕೋಟಿಗಳು ಮುಳುಗಿಹೋದವೋ, ಯಾರೂ ಲೆಕ್ಕ ಹಾಕಿಲ್ಲ. ಆಗ ದಿಕ್ಕೆಟ್ಟು ದಿಕ್ಕಾಪಾಲಾಗಿಹೋದ ಚಿತ್ರೋದ್ಯಮ ಇಂದಿಗೂ ಪರಿಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಕೋವಿಡ್ ಮುಗಿದ ಮೇಲೂ ಚಿತ್ರರಂಗದ ಆತ್ಮವಿಶ್ವಾಸ ಕುದುರಿಲ್ಲ. ವಿಶೇಷವಾಗಿ ಕನ್ನಡ ಚಿತ್ರರಂಗ. ಈಗ ಸಿನಿಮಾ ಅರ್ಥವ್ಯವಸ್ಥೆಯೇ ಸಾದ್ಯಂತ ತಲೆಕೆಳಗಾಗಿದೆ. ಎಲ್ಲೆಡೆ ವಿರಾಟ್ ಗೊಂದಲ ಆವರಿಸಿಕೊಂಡಿದೆ.

ಇಂಥ ಸಮಯದಲ್ಲಿ ಒಟಿಟಿಗಳು ಸಿನಿಮಾ ದಿಗಂತದಲ್ಲಿ ಹೊಸ ಸಂಜೀವಿನಿಯಾಗಿ ಅವತರಿಸಿದವು. ಹಿಂದಿಯಿರಲಿ, ದಕ್ಷಿಣದ ಇತರೆ ಭಾಷೆಗಳಾದ ಮಲಯಾಳಂ, ತಮಿಳು, ತೆಲುಗು ಚಿತ್ರಗಳಿಗೂ ಕೂಡ ಈಗ ಒಟಿಟಿಗಳು ಜೀವಸೆಲೆಗಳಾಗಿವೆ. ನೆಟ್‍ಫ್ಲಿಕ್ಸ್, ಅಮೆಜಾನ್‍ನಂಥ ದೈತ್ಯ ಕಂಪನಿಗಳು ಇಂದು ಭಾರತೀಯ ಚಿತ್ರಗಳಿಗಾಗಿಯೇ ಸಾವಿರಾರು ಕೋಟಿ ಹೂಡುತ್ತಿವೆ ಎಂಬುದು ನಿಜ. ಆದರೆ ನಮ್ಮ ದುರದೃಷ್ಟ, ಕನ್ನಡವನ್ನು ಇಲ್ಲಿಯೂ ಕೇಳುವವರು ದಿಕ್ಕಿಲ್ಲ. ಅತಿ ದೊಡ್ಡ ಯಶಸ್ಸು ಕಂಡ ಕೆಲವೇ ನಿರ್ಮಾಣ ಸಂಸ್ಥೆಗಳ ಹೊರತಾಗಿ ಸಣ್ಣ ಚಿತ್ರಗಳನ್ನು ಮೂಸಿ ನೋಡುವವರಿಲ್ಲ. ಒಟಿಟಿ ಎಂಬುದು ಬೃಹತ್ತಾದ ಹೊಸ ಮಾರುಕಟ್ಟೆ ಎಂದು ಎಲ್ಲ ಮಾತಾಡುವುದಂತೂ ಹೌದು. ಆದರೆ ಆ ಸುಖಪುರುಷರ ಪ್ರಪಂಚದಲ್ಲಿ ಕನ್ನಡಕ್ಕಿನ್ನೂ ಪ್ರವೇಶವಿಲ್ಲ! ಅಂತೂ ಕನ್ನಡಕ್ಕಿನ್ನೂ ಶಾಪವಿಮೋಚನೆಯಿಲ್ಲ!

ಆಗಲೇ ಹೇಳಿದಂತೆ ಉದ್ದಿಮೆಯ ಆರೋಗ್ಯ ನಿಂತಿರುವುದು ಗೆದ್ದ ಚಿತ್ರಗಳ ಹಮ್ಮಿನಲ್ಲಲ್ಲ, ಸೋತವರಿಗೆಂಥ ಭದ್ರತೆ ಸಿಕ್ಕಿದೆ ಎಂಬುದರಲ್ಲಿ. ಸಣ್ಣ ನಿರ್ಮಾಪಕರು, ಸಣ್ಣ ಚಿತ್ರಗಳಿಗೆ ಕನಿಷ್ಠ ಮಟ್ಟದ ರಕ್ಷಣೆಯೂ ಇಲ್ಲವಾದರೆ ಚಿತ್ರೋದ್ಯಮವೇ ನಷ್ಟದ ತೇರಿನ ಯಾತ್ರೆಯಾಗುತ್ತದೆ. ಆ ತೇರಿನ ಗಾಲಿಗೆ ಸಿಕ್ಕು ನಾಮಾವಶೇಷವಾಗುವ ನಿರ್ಮಾಪಕರು ದುರಂತದ ಚರಿತ್ರೆಯನ್ನೇ ಬರೆಯುತ್ತಾ ಮರೆಯಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT