ಮಂಗಳವಾರ, ಜನವರಿ 21, 2020
28 °C

‘ಸಾರ್ವಜನಿಕರಿಗೆ ಸುವರ್ಣಾವಕಾಶ’: ನಟಿ ಧನ್ಯಾಗೂ ಸುವರ್ಣಾವಕಾಶ....

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ನಟಿ ಧನ್ಯಾಬಾಲಕೃಷ್ಣ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರವೇಶ. ಆದರೆ, ತಮಿಳು ಮತ್ತು ತೆಲುಗಿನಲ್ಲಿ ಅತ್ಯಂತ ಬ್ಯುಸಿ ಮತ್ತು ಚಿರಪರಿಚಿತ ನಟಿ. ಇವರು ಮೂಲತಃ ಬೆಂಗಳೂರಿನ ಬೆಡಗಿ, ಅಪ್ಪಟ ಕನ್ನಡತಿ. ಪರಭಾಷೆ ಚಿತ್ರಗಳಲ್ಲಿ ಮೊದಲು ಅವಕಾಶ ಸಿಕ್ಕಿದ್ದರಿಂದ ಟಾಲಿವುಡ್‌, ಕಾಲಿವುಡ್‌ಗೆ ಹಾರಿದ್ದರು. ಈಗ ಕನ್ನಡದಲ್ಲೂ ಅವಕಾಶಗಳ ಬಾಗಿಲು ತೆರೆದಿರುವುದರಿಂದ ಮರಳಿ ಗೂಡಿಗೆ ಬಂದಿದ್ದಾರೆ.

‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಚಿತ್ರದಲ್ಲಿ ಕನ್ನಡ ಸಿನಿ ಪ್ರೇಕ್ಷಕರ ಮನಗೆಲ್ಲಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ‘ಕವಲುದಾರಿ’ ಖ್ಯಾತಿಯ ನಟ ರಿಷಿ ಜತೆಗೆ ಅವರು ನಾಯಕಿಯಾಗಿ ನಟಿಸಿದ್ದಾರೆ. ಇದೇ 20ರಂದು ತೆರೆಕಾಣಲಿರುವ ಈ ಚಿತ್ರವು ಮುಂಬರುವ ದಿನಗಳಲ್ಲಿ ತನ್ನ ಪಾಲಿಗೆ ಸುವರ್ಣಾವಕಾಶ ತಂದುಕೊಡಲಿದೆ ಎನ್ನುವುದು ಧನ್ಯಾ ನಿರೀಕ್ಷೆ. ತಮ್ಮ ಚಿತ್ರ ಬದುಕಿನ ಪಯಣದ ಕುರಿತು ಹಲವು ಸಂಗತಿಗಳನ್ನು ಅವರು ‘ಸಿನಿಮಾ ಪುರವಣಿ’ಯೊಂದಿಗೆ ಹಂಚಿಕೊಂಡರು.

‘ಸಾರ್ವಜನಿಕರಿಗೆ ಸುವರ್ಣಾವಕಾಶ’ದಲ್ಲಿ ನಟಿಸುವ ಅವಕಾಶ ಸಿಕ್ಕಿದ ಬಗ್ಗೆ ಮಾತು ಹೊರಳಿಸಿದ ಅವರು, ‘ನಿರ್ಮಾಪಕ ಪ್ರಶಾಂತ್‌, ತೆಲುಗಿನಲ್ಲಿ ನಾನು ಅಭಿನಯಿಸಿರುವ ಚಿತ್ರಗಳನ್ನು ನೋಡಿದ್ದರಂತೆ. ಅವರಿಗೆ ನಾನು ಕನ್ನಡತಿ ಎನ್ನುವುದು ಗೊತ್ತಿರಲಿಲ್ಲ. ಗೊತ್ತಾದ ಮೇಲೆ ಅವಕಾಶ ನೀಡಿದರು. ನಿರ್ದೇಶಕ ಅನೂಪ್‌ ಆಡಿಷನ್‌ ನಡೆಸಿ ಚಿತ್ರಕ್ಕೆ ಆಯ್ಕೆ ಮಾಡಿದರು’ ಎಂದು ಮಾತು ವಿಸ್ತರಿಸಿದರು.

ಈ ಚಿತ್ರದಲ್ಲಿ ಧನ್ಯಾ ಅವರದ್ದು ಮಧ್ಯಮ ವರ್ಗದ, ಜತೆಗೆ ವೈದ್ಯಕೀಯ ಸಮಸ್ಯೆ ಇರುವ  ಹುಡುಗಿಯ ಪಾತ್ರ. ನಟನೆ ಸಹಜವಾಗಿರಬೇಕೆನ್ನುವ ಕಾರಣಕ್ಕಾಗಿ ಅವರು ಒಂದಿಷ್ಟು ಪೂರ್ವ ತಯಾರಿ ಮಾಡಿಕೊಳ್ಳಬೇಕಾಯಿತಂತೆ. ‘ಚಿತ್ರದಲ್ಲಿ ನನ್ನದು ಒಬ್ಬ ಸಾಧಾರಣ ಕುಟುಂಬದ ಹುಡುಗಿಯ ಪಾತ್ರ. ಎಂಬಿಎ ಓದುವ ವಿದ್ಯಾರ್ಥಿನಿ. ನಾಯಕನಿಗೆ ಸಹಪಾಠಿ. ಮಧ್ಯಮ ವರ್ಗದವರ ಪ್ರಮುಖ ಸಮಸ್ಯೆ ಎಂದರೆ, ಹಣದ ಸಮಸ್ಯೆ. ಆ ಸಮಸ್ಯೆ ನನ್ನ ಪಾತ್ರಕ್ಕೂ ಇರುತ್ತದೆ. ಸಮಸ್ಯೆಯ ಸುಳಿಯಲ್ಲಿ ಸಿಲುಕಿದಾಗ ಮತ್ತು ವೈದ್ಯಕೀಯ ಸಮಸ್ಯೆಯಲ್ಲಿರುವಾಗ ನಾಯಕ ನನಗೆ ಯಾವ ರೀತಿ ನೆರವಾಗುತ್ತಾನೆ ಎನ್ನುವುದು ಚಿತ್ರದ ಕುತೂಹಲ. ಒಬ್ಬ ಮನುಷ್ಯ ತಾನು ಮೂಲೆಗೆ ಸರಿಯುತ್ತಿದ್ದೇನೆ ಎನ್ನುವ ಭಾವನೆ ಮೂಡಿ ಒತ್ತಡಕ್ಕೆ ಒಳಗಾದಾಗ ಅವನಲ್ಲಿರುವ ನಿಜವಾದ ಕ್ರಿಯೇಟಿವಿಟಿ ಹೊರಬರುವುದೇ ಚಿತ್ರದ ಕಥಾಹಂದರ’ ಎನ್ನುವ ಮಾತು ಸೇರಿಸಿದರು.

ಇದನ್ನೂ ಓದಿ: ಸಾರ್ವಜನಿಕರಿಗೆ ರಿಷಿ ಸಂದೇಶ

‘ಚಿತ್ರದಲ್ಲಿ ಮುಕ್ಕಾಲು ಭಾಗ ಕಾಮಿಡಿ ಇದೆ. ಈ ಚಿತ್ರವನ್ನು ನಿರ್ದಿಷ್ಟ ಶೈಲಿಗೆ ಸೇರಿಸಲು ಆಗದು. ಹಾಸ್ಯ ಪ್ರಧಾನವಾಗಿದ್ದರೂ ಭಾವುಕತೆಯೂ ಸೇರಿ ಮಿಕ್ಕುಳಿದ ಅಂಶಗಳೂ ಚಿತ್ರದಲ್ಲಿವೆ. ಹಿರಿಯ ನಟ ದತ್ತಣ್ಣ ಅವರ ಪಾತ್ರ‌ದಲ್ಲಿ ಬಹಳಷ್ಟು ಭಾವುಕತೆ ಹುಟ್ಟಿಸುವ ದೃಶ್ಯಗಳಿವೆ. ಅವರ ಪಾತ್ರ ಪ್ರೇಕ್ಷಕರನ್ನು ಕಣ್ಣೀರಿನಲ್ಲಿ ಮುಳುಗಿಸುತ್ತದೆ. ಸಿನಿಮಾದ ಆತ್ಮ ಸುಂದರವಾದ ಸಂದೇಶ ನೀಡಲಿದೆ’ ಎಂದರು.

‘ಬೇರೆ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಬಂದರೂ ಇಲ್ಲಿ ನನಗೆ ನನ್ನ ಮನೆಗೆ ಮರಳಿ ಬಂದ ಅನುಭವ ನೀಡುತ್ತಿದೆ. ನಾವು ಮೊದಲು ಯೋಚಿಸುವುದು ಕನ್ನಡದಲ್ಲಿ. ಹಾಗಾಗಿ ಸಂಭಾಷಣೆ ಒಪ್ಪಿಸುವಾಗ ತುಂಬಾ ಸುಲಭ ಎನಿಸುತ್ತಿತ್ತು. ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸುವಾಗ ಮನಸಿನಲ್ಲಿ ಭಾಷಾಂತರ ಮಾಡಿಕೊಳ್ಳಬೇಕಿತ್ತು. ಆದರೆ, ಇಲ್ಲಿ ನನಗೆ ಆ ಸಮಸ್ಯೆ ಕಾಡಲಿಲ್ಲ. ಚಿತ್ರೀಕರಣದ ಸೆಟ್‌ ಕೂಡ ನನಗೆ ಮನೆಯಂತೆ ಇತ್ತು. ತುಂಬಾ ಸುಲಭವಾಗಿ ಎಲ್ಲರೊಂದಿಗೆ ಬೆರೆತುಹೋದೆ’ ಎನ್ನಲು ಅವರು ಮರೆಯಲಿಲ್ಲ. 

ಎಲ್ಲಿ ನೆಲೆ ನಿಲ್ಲಬೇಕೆಂದು ಬಯಸುತ್ತೀರಿ ಎಂದರೆ, ‘ದಕ್ಷಿಣ ಭಾರತದಲ್ಲಿ ಎಲ್ಲ ಭಾಷೆಗಳಲ್ಲಿ ಅಭಿನಯಿಸುವ ಆಸೆ ಮೊದಲಿನಿಂದಲೂ ಇತ್ತು. ಈ ವರ್ಷ ಅದು ನೆರವೇರಿತು. ಮೊದಲ ಕನ್ನಡ ಚಿತ್ರ ಮತ್ತು ಮೊದಲ ಮಲಯಾಳ ಚಿತ್ರವನ್ನು ಈ ವರ್ಷವೇ ಮಾಡಿದ್ದೇನೆ. ಕಲಾವಿದರು ಮತ್ತು ಕಲೆಗೆ ಭಾಷೆಯ ಗಡಿ ಇರಬಾರದು. ಹಾಗೆಯೇ ಸಿನಿಮಾಕ್ಕೂ ಕೂಡ. ಎಲ್ಲ ಭಾಷೆಗಳಲ್ಲೂ ನಟಿಸುವ ಆಸೆ ಇದೆ. ಆದರೆ, ಕಥೆ ತುಂಬಾ ಚೆನ್ನಾಗಿರಬೇಕು. ಇತ್ತೀಚೆಗಷ್ಟೇ ಮರಾಠಿ ಚಿತ್ರಕ್ಕೆ ನಿರ್ದೇಶಕರೊಬ್ಬರು ಕಥೆ ಹೇಳಿದ್ದಾರೆ. ಕಥೆ ತುಂಬಾ ಚೆನ್ನಾಗಿದೆ. ಮಾತುಕತೆ ನಡೆಯುತ್ತಿದ್ದು, ಬಹುತೇಕ ಒಪ್ಪಿಕೊಳ್ಳುವ ಹಂತದಲ್ಲಿದ್ದೇನೆ’ ಎಂದರು. 

ಅಭಿನಯದ ಜತೆಗೆ ನಿರ್ದೇಶಕಿಯಾಗುವ ಕನಸು ಕೂಡ ಧನ್ಯಾ ಅವರಲ್ಲಿ ದೃಢವಾಗಿದೆ. ನಿರ್ದೇಶನದ ಟೊಪ್ಪಿ ಧರಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ‘ನಿರ್ದೇಶಕಿಯಾಗುವ ಕನಸು ಕೈಗೂಡಿದರೆ ಅದೂ ಕನ್ನಡ ಚಿತ್ರರಂಗದಿಂದಲೇ. ಎರಡ್ಮೂರು ಕಥೆಗಳು ಸಿದ್ಧವಿದ್ದು, ಒಳ್ಳೆಯ ನಿರ್ಮಾಪಕರು ಸಿಕ್ಕಿದರೆ ನಾಲ್ಕು ಭಾಷೆಗಳಲ್ಲಿ ಚಿತ್ರ ನಿರ್ದೇಶಿಸುವ ಆಲೋಚನೆಯೂ ಇದೆ. ಸದ್ಯಕ್ಕೆ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮುಗಿಸುವತ್ತ ಗಮನ ಕೊಟ್ಟಿದ್ದೇನೆ’ ಎಂದರು.

ಸಿನಿಮಾ ಜತೆಗೆ ವೆಬ್‌ ಸರಣಿಗಳಲ್ಲೂ ಧನ್ಯಾ ಸಕ್ರಿಯರಾಗಿದ್ದಾರೆ. ಇವರು ತಮಿಳಿನಲ್ಲಿ ನಟಿಸಿದ್ದ ವೆಬ್‌ ಸರಣಿಯೊಂದು ಈಗಾಗಲೇ ಪ್ರಸಾರವಾಗಿದೆ. ಕನ್ನಡದ ವೆಬ್‌ ಸರಣಿ ‘ರಕ್ತಚಂದನ’ದಲ್ಲೂ ಇವರು ನಟಿಸಿದ್ದು, ಅದು ಇನ್ನಷ್ಟೇ ಪ್ರಸಾರವಾಗಬೇಕಿದೆ. ‘ಈ ಸಮಯಕ್ಕೆ ತುಂಬಾ ಪ್ರಸ್ತುತವಾದ ಮತ್ತು ಹೇಳಲೇಬೇಕಾದ ಕಥಾವಸ್ತು ‘ರಕ್ತಚಂದನ’ದಲ್ಲಿದೆ. ಈ ಸರಣಿಯನ್ನು ಬೇಗ ಬಿಡುಗಡೆ ಮಾಡುವಂತೆ ನಿರ್ದೇಶಕ ಗಿರಿರಾಜ್‌ ಅವರಿಗೂ ಕೇಳಿಕೊಳ್ಳುತ್ತೇನೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು