ಶುಕ್ರವಾರ, ಮಾರ್ಚ್ 5, 2021
27 °C

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ: ಸೀತಾರಾಮ ಕಲ್ಯಾಣಕ್ಕಾಗಿ ನಿಯಮ ಬದಲು?

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ನಟಿಸಿರುವ ‘ಸೀತಾರಾಮ ಕಲ್ಯಾಣ’ ಚಿತ್ರವನ್ನು ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಬಿಐಎಫ್‌ಎಫ್‌) ಪ್ರದರ್ಶನಗೊಳ್ಳಲಿರುವ ಚಿತ್ರಗಳ ಪಟ್ಟಿಗೆ ಸೇರಿಸುವ ಸಲುವಾಗಿ ಬಿಐಎಫ್‌ಎಫ್‌ ನಿಯಮಾವಳಿಯನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಆರೋಪ ಈಗ ಚಿತ್ರೋದ್ಯಮದಿಂದ ಕೇಳಿಬರುತ್ತಿದೆ.

ಉತ್ಸವದಲ್ಲಿ ಪ್ರದರ್ಶಿಸುವ ಸಲುವಾಗಿ 2018ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಜನಪ್ರಿಯ ಎಂಟು ಸಿನಿಮಾಗಳ ಪಟ್ಟಿಯನ್ನು ಕಳುಹಿಸುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಕೆಲವು ದಿನಗಳ ಹಿಂದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು (ಕೆಎಫ್‌ಸಿಸಿ) ಕೇಳಿಕೊಂಡಿತ್ತು. ಮಂಡಳಿಯು ಟಗರು, ಹಂಬಲ್‌ ಪಾಲಿಟೀಷಿಯನ್‌ ನೊಗರಾಜ್‌, ಅಯೋಗ್ಯ, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ರಾಜು ಕನ್ನಡ ಮೀಡಿಯಂ, ವಿಲನ್‌, ರ‍್ಯಾಂಬೊ– 2 ಹಾಗೂ ಕೆಜಿಎಫ್‌ ಚಿತ್ರಗಳ ಪಟ್ಟಿಯನ್ನು ಅಕಾಡೆಮಿಗೆ ಕಳುಹಿಸಿಕೊಟ್ಟಿತ್ತು.

ಆದರೆ, ಕೆಲವೇ ದಿನಗಳಲ್ಲಿ ಆ ಪಟ್ಟಿಯನ್ನು ಮಂಡಳಿಗೆ ಹಿಂತಿರುಗಿಸಿದ ಅಕಾಡೆಮಿಯು, 2019ರ ಜನವರಿ ತಿಂಗಳಲ್ಲಿ ಬಿಡುಗಡೆಯಾದ ಚಿತ್ರವನ್ನೂ ಸೇರಿಸಿ, ಒಂಬತ್ತು ಚಿತ್ರಗಳ ಹೆಸರನ್ನು ಕಳುಹಿಸುವಂತೆ ಮಂಡಳಿಗೆ ಸೂಚಿಸಿತ್ತು. ಅದರಂತೆ ಕೆಎಫ್‌ಸಿಸಿ ಕಾರ್ಯಕಾರಿ ಸಮಿತಿಯು ಮೇಲೆ ತಿಳಿಸಿದ ಚಿತ್ರಗಳ ಜೊತೆಗೆ ‘ಸೀತಾರಾಮ ಕಲ್ಯಾಣ’ ಚಿತ್ರದ ಹೆಸರನ್ನೂ ಸೇರಿಸಿರುವ ಪಟ್ಟಿಯನ್ನು ತಯಾರಿಸಿ, ಜ.31ರಂದು ನಡೆದ ಕಾರ್ಯಕಾರಿ ಸಮಿತಿಯಲ್ಲಿ ಆ ಪಟ್ಟಿಗೆ ಅನುಮೋದನೆಯನ್ನೂ ಪಡೆದು ಚಲನಚಿತ್ರ ಅಕಾಡೆಮಿಗೆ ಕಳುಹಿಸಿದೆ ಎನ್ನಲಾಗಿದೆ. ಸೀತಾರಾಮ ಕಲ್ಯಾಣ ಚಿತ್ರಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದಲೇ 2019ರಲ್ಲಿ ಬಿಡುಗಡೆಯಾದ ಚಿತ್ರವನ್ನೂ ಬಿಐಎಫ್‌ಎಫ್‌ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ.

ಸೀತಾರಾಮ ಕಲ್ಯಾಣ ಸಿನಿಮಾ ಈಗಾಗಲೇ ಕೆಲವು ವಿವಾದಗಳನ್ನು ಸೃಷ್ಟಿಸಿದೆ. ನಟ ನಿಖಿಲ್‌ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ. ಅವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ಮುಖಂಡರು ಈ ಚಿತ್ರದ ಟಿಕೆಟ್‌ಗಳನ್ನು ಖರೀದಿಸಿ, ಉಚಿತವಾಗಿ ಜನರಿಗೆ ಹಂಚುತ್ತಿದ್ದಾರೆ ಎಂಬ ಆರೋಪಗಳೂ ಇವೆ.

ಪ್ರದರ್ಶನದ ಖಾತರಿ ಇಲ್ಲ

‘ಬಿಐಎಫ್‌ಎಫ್‌ ನಿಯಮಾವಳಿಯನ್ನು ಉಲ್ಲಿಂಘಿಸಲಾಗಿದೆ’ ಎಂಬ ಆರೋಪವನ್ನು ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌ ನಿರಾಕರಿಸಿದ್ದಾರೆ. ‘ತಮ್ಮ ಚಿತ್ರವು ಉತ್ಸವಕ್ಕೆ ಆಯ್ಕೆಯಾಗಿಲ್ಲ ಎಂಬ ಕಾರಣಕ್ಕೆ ಉದ್ದಿಮೆಯಲ್ಲಿರುವ ಕೆಲವರು ಇಂಥ ಆರೋಪ ಮಾಡುತ್ತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

‘ಫೆ 7ರಿಂದ ಉತ್ಸವ ಚಿತ್ರೋತ್ಸವ ಆರಂಭವಾಗಬೇಕಿತ್ತು. ಆದರೆ ರಾಜ್ಯ ಬಜೆಟ್‌ಗೆ ಸಿದ್ಧತೆ ನಡೆಯುತ್ತಿರುವುದರಿಂದ ಉತ್ಸವವನ್ನು ಎರಡು ವಾರ ಮುಂದೂಡುವಂತೆ ಸರ್ಕಾರದಿಂದ ನಮಗೆ ಸೂಚನೆ ಬಂದಿತ್ತು. ಎರಡು ವಾರಗಳ ಹೆಚ್ಚುವರಿ ಕಾಲಾವಕಾಶ ಲಭಿಸಿದ್ದರಿಂದ ಇತ್ತೀಚಿನವರೆಗೆ ಬಿಡುಗಡೆಯಾದ ಚಿತ್ರಗಳಿಗೂ ಅವಕಾಶ ಲಭಿಸಲಿ ಎಂಬ ಕಾರಣಕ್ಕೆ, ಹೊಸ ಪಟ್ಟಿಯನ್ನು ಕಳುಹಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ತಿಳಿಸಿದ್ದೆವು. ಇದು ಸೀತಾರಾಮ ಕಲ್ಯಾಣ ಮಾತ್ರವಲ್ಲ, ಇತರ ಚಿತ್ರಗಳಿಗೂ ಅನ್ವಯವಾಗಿದೆ. ಮಂಡಳಿಯವರು ಹೊಸ ಪಟ್ಟಿ ಕಳುಹಿಸಿದ್ದಾರೆ. ಅದರಲ್ಲಿ ಸೀತಾರಾಮ ಕಲ್ಯಾಣವೂ ಸೇರಿದೆ. ಆದರೆ ಆ ಚಿತ್ರವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಎಲ್ಲಿಯೂ ಹೇಳಿಲ್ಲ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಚಿತ್ರಗಳನ್ನು ಆಯ್ಕೆ ಮಾಡಲು ಅದರದ್ದೇ ಆದ ಪ್ರಕ್ರಿಯೆ ಇದೆ. ಅದನ್ನು ಉಲ್ಲಂಘಿಸುವುದಿಲ್ಲ’ ಎಂದು ನಾಗತಿಹಳ್ಳಿ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು