ಶುಕ್ರವಾರ, ಮೇ 29, 2020
27 °C

ರಾಜಣ್ಣ ಎಂದಿಗೂ ಬತ್ತದ ಪ್ರೀತಿಯ ಕಣಜ: ನೆನಪು ಹಂಚಿಕೊಂಡ ಛಾಯಾಗ್ರಾಹಕ ಬಸವರಾಜು

ನಿರೂಪಣೆ: ಗವಿ ಬ್ಯಾಳಿ Updated:

ಅಕ್ಷರ ಗಾತ್ರ : | |

ತಿಪಟೂರಿನ ಬಿ.ಎಸ್‌. ಬಸವರಾಜು ಅವರು 1980ರ ದಶಕದ ಸ್ಟಾರ್ ಸಿನಿಮಾ‌ ಛಾಯಾಗ್ರಾಹಕ.  ಸಿದ್ಧಲಿಂಗಯ್ಯ, ಪುಟ್ಟಣ್ಣ ಕಣಗಾಲ್‌ರಂತಹ ಖ್ಯಾತ ನಿರ್ದೇಶಕರೊಂದಿಗೆ ಸಾಕಷ್ಟು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿರುವ ಬಸವರಾಜು ಈಗ ನೇಪಥ್ಯಕ್ಕೆ ಸರಿದಿದ್ದಾರೆ. ಕನ್ನಡದ ಮೇರುನಟ ಡಾ. ರಾಜ್‌ ಅವರೊಂದಿಗೆ ಐದಾರು ಚಿತ್ರಗಳಲ್ಲಿ ಕೆಲಸ ಮಾಡಿರುವ ಅವರು, ರಾಜ್‌ ಜತೆಗಿನ ಕೆಲವು ಕತೂಹಲಕರ ಸಂಗತಿಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

* * *

ತಿಪಟೂರಿನ ನಂಟು

ರಾಜ್‌ಕುಮಾರ್‌ ಅವರು ಗುಬ್ಬಿ ನಾಟಕದ ಕಂಪನಿಯಲ್ಲಿದ್ದರು. ಗುಬ್ಬಿ ಕಂಪನಿ ತಿಪಟೂರಿನಲ್ಲಿ ಕ್ಯಾಂಪ್‌ ಮಾಡಿದಾಗ ಹಗಲು ಹೊತ್ತು ಬೆಳ್ಳೂರು ಮೈಲಾರಯ್ಯನ ಛತ್ರದಲ್ಲಿ ಡ್ರಾಮಾ ತಾಲೀಮು ಮಾಡುತ್ತಿದ್ದರು. ನಾನು ಅದನ್ನು ನೋಡಲು ಹೋಗುತ್ತಿದ್ದೆ. ಅಲ್ಲಿ ರಾಜ್‌ಕುಮಾರ್‌ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿತು.

ಅದಾದ ನಂತರ ಗುಬ್ಬಿ ಕಂಪನಿ ಅರಸಿಕೆರೆ, ಚಿಕ್ಕನಾಯಕನಹಳ್ಳಿ ಸುತ್ತಮುತ್ತ ಕ್ಯಾಂಪ್‌ ಮಾಡಿದಾಗಲೂ ರಾಜ್‌ಕುಮಾರ್‌ ಅವರು ಕುಟುಂಬ ಸಮೇತ ಎರಡು ವರ್ಷ ತಿಪಟೂರಿನಲ್ಲಿಯೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಾಟಕ ಕಂಪನಿ ಒಂದು ಊರಲ್ಲಿ ಕನಿಷ್ಠ ಒಂದು ವರ್ಷ ಕ್ಯಾಂಪ್‌ ಮಾಡುತ್ತಿತ್ತು. ಆಗಿನ ಕಾಲಕ್ಕೆ ‘ಸಾಹುಕಾರ’, ‘ಬೇಡರ ಕಣ್ಣಪ್ಪ’ ತುಂಬಾ ಪ್ರಸಿದ್ಧವಾಗಿದ್ದವು. ಎರಡರಿಂದ ಮೂರು ತಿಂಗಳು ಒಂದು ನಾಟಕ ಆಡುತ್ತಿದ್ದರು.

ನಂತರ ರಾಜ್‌ಕುಮಾರ್‌ ಬೇಡರ ಕಣ್ಣಪ್ಪ ಸಿನಿಮಾದಲ್ಲಿ ನಟಿಸಿದರು. ಚಿತ್ರ ಹಿಟ್‌ ಆದ ನಂತರ ಅವರು ಕಾಲೇಜು ಕಟ್ಟಡ ನಿರ್ಮಾಣದ ಸಹಾಯಾರ್ಥ ನಾಟಕದಲ್ಲಿ ನಟಿಸಲು ತಿಪಟೂರಿಗೆ ಬಂದಿದ್ದರು. ಈ ಹಿಂದೆ ಊಟ ಮಾಡುತ್ತಿದ್ದ ರಾಮಣ್ಣನ ಹೋಟೆಲ್‌ ಜ್ಞಾಪಿಸಿಕೊಂಡು ಹೋಗಿ ತಿಂಡಿ ಚಪ್ಪರಿಸಿ ತಿಂದಿದ್ದರು. ಊಟ ಮಾಡುವ  ಫೋಟೊಗಳನ್ನು ನಾನು ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದೆ.

* * *

ತ್ರಿಮೂರ್ತಿಗಳ ಉಪಾಹಾರ

ಗುಬ್ಬಿ ಕಂಪನಿಯ ನಾಟಕದಲ್ಲಿ ಪಾತ್ರ ಮುಗಿಸಿಕೊಂಡು ರಾಜಣ್ಣ, ಬಾಲಣ್ಣ, ನರಸಿಂಹರಾಜು ತ್ರಿಮೂರ್ತಿಗಳು ಸದಾ ತಿಪಟೂರಿನ ರಾಮಣ್ಣ ಹೋಟೆಲ್‌ನಲ್ಲಿ ಬೆಳಗಿನ ಜಾವ ತಿಂಡಿ ತಿನ್ನುತ್ತಿದ್ದರು. ನಾಟಕದವರು ಎಂಬ ಇವರ ಮೇಲಿನ ಗೌರವದಿಂದ ಹೋಟೆಲ್ ‌ನವರು ದುಡ್ಡು ತೆಗೆದುಕೊಳ್ಳುತ್ತಿರಲಿಲ್ಲ. ಒಂದು ವಿಶೇಷವೆಂದರೆ ರಾಜಣ್ಣ ಮತ್ತು ಬಾಲಣ್ಣ ಯಾವಾಗಲೂ ಟವೆಲ್‌ನಿಂದ ಮುಖ ಮುಚ್ಚಿಕೊಂಡು ತಿಂಡಿ ತಿನ್ನುತ್ತಿದ್ದರು. ತಿಪಟೂರಿನ ಊಟ, ತಿಂಡಿ ಇವರಿಗೆ ಅಚ್ಚುಮೆಚ್ಚು. ಒಮ್ಮೆ ಬೆಳಿಗ್ಗೆ ನಮ್ಮ ಮನೆಯಿಂದ ಬಿಸಿ, ಬಿಸಿ ಅಕ್ಕಿರೊಟ್ಟಿ, ಎಣ್ಣಿಗಾಯಿ ಪಲ್ಯ ತಗೊಂಡು ಹೋಗಿ ರಾಜಣ್ಣನವರಿಗೆ ಕೊಟ್ಟಿದ್ದೆ. ಅದನ್ನು ಖುಷಿಯಿಂದ ಸವಿದಿದ್ದರು.

ಮುಂದೆ ನಾನು ಡಾ. ರಾಜ್‌ ನಟಿಸಿದ ದೂರದಬೆಟ್ಟ, ಒಲವು–ಗೆಲುವು, ಪ್ರೇಮದ ಕಾಣಿಕೆ, ಗಂಧದಗುಡಿ, ಭಾಗ್ಯವಂತರು ಸೇರಿದಂತೆ ಐದಾರು ಚಿತ್ರಗಳಲ್ಲಿ ಕ್ಯಾಮರಾಮನ್‌ ರಾಜಾರಾಂ ಅವರ ಅಸಿಸ್ಟೆಂಟ್‌ ಆಗಿ ಕೆಲಸ ಮಾಡಿದ್ದೆ. ರಾಜ್‌ಕುಮಾರ್‌ ಅವರು ನನ್ನನ್ನು ಸೆಟ್‌ನಲ್ಲಿ ನೋಡಿದಾಗಲೆಲ್ಲ ‘ಮತ್ತೊಮ್ಮೆ ನಿಮ್ಮ ಮನೆಯ ಅಕ್ಕಿರೊಟ್ಟಿ ಎಣ್ಣಿಗಾಯಿ ಪಲ್ಯ ತಿನ್ನಬೇಕಲ್ರೀ. ನೆನಪಿಸಿಕೊಂಡರೆ ಇಂದಿಗೂ ಬಾಯಲ್ಲಿ ನೀರು ಬರುತ್ತೇ ಕಣ್ರೀ’ ಎಂದು ಹೇಳುತ್ತಿದ್ದರು. ಸೆಟ್‌ನಲ್ಲಿ ಪ್ರೀತಿಯಿಂದ ಕೈಹಿಡಿದು ತಮ್ಮ ಪಕ್ಕದಲ್ಲಿ ಊಟಕ್ಕೆ ಕುಳಿಸಿಕೊಳ್ಳುತ್ತಿದ್ದರು.

* * *

ಗುಡಿಸಲು ಹೋಟೆಲ್‌ನಲ್ಲಿ ಅಣ್ಣಾವ್ರು

ಮೈಸೂರು ಬಳಿ ‘ಗಂಧದಗುಡಿ’ ಔಟ್‌ಡೋರ್‌ ಶೂಟಿಂಗ್‌ ನಡೆಯುತ್ತಿತ್ತು. ಸಮೀಪದಲ್ಲಿಯೇ ಪುಟ್ಟ ಗುಡಿಸಲಿ  ಹೋಟೆಲ್ ಇತ್ತು. ಅಲ್ಲಿ ಯೂನಿಟ್‌ ಹುಡುಗರೆಲ್ಲ ಅಲ್ಲಿಯೇ ಕಾಫಿ–ಟೀ ಕುಡಿಯುತ್ತಿದ್ದರು. ಅಲ್ಲಿ ದೋಸೆ ಮತ್ತು ತಿಂಡಿ ರುಚಿಯಾಗಿರುತ್ತಿತ್ತು. ಅದು ಹೇಗೊ ಈ ವಿಷಯ ಅಣ್ಣಾವ್ರ ಕಿವಿಗೆ ಬಿದ್ದಿತು. ಮರುದಿನ ಬೆಳಿಗ್ಗೆ ಶೂಟಿಂಗ್‌ ಆರಂಭವಾಗುವ ಮೊದಲೇ ಸೆಟ್‌ ಹುಡುಗರ ಗಾಡಿಯಲ್ಲಿ ರಾಜ್‌ಕುಮಾರ್‌ ಕುಳಿತಿದ್ದರು.ಎಲ್ಲರಿಗೂ ಆಶ್ಚರ್ಯ. ‘ನಾನು ನಿಮ್ಮ ಜತೆ ತಿಂಡಿ ತಿನ್ನಲು ಹೋಟೆಲ್‌ಗೆ ಬರುತ್ತೇನೆ. ಕರೆದುಕೊಂಡು ಹೋಗಿ‘ ಎಂದರು. ಸ್ಟಾರ್‌ ನಟನಾದರೂ,  ಯಾವುದೇ ಹಮ್ಮುಬಿಮ್ಮು ಇರಲಿಲ್ಲ ಅವರಲ್ಲಿ.

ರುಚಿಕರವಾದ ಊಟ, ತಿಂಡಿ ಎಂದರೆ ರಾಜಣ್ಣನವರು ಮಗುವಾಗಿಬಿಡುತ್ತಿದ್ದರು. ಯಾವುದೇ ಊರಿಗೆ ಹೋಗಲಿ ಅಲ್ಲಿನ ತಿಂಡಿ–ಊಟದ ವಿಶೇಷ ಮತ್ತು ಹೋಟೆಲ್‌ ಪಟ್ಟಿ ಅವರಲ್ಲಿರುತ್ತಿತ್ತು. ಅನ್ನ ತಿಂದ ಮನೆಯನ್ನು ಎಂದಿಗೂ ಅವರು ಮರೆಯುತ್ತಿರಲಿಲ್ಲ. ಯಾವಾಗಲೂ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಿದ್ದರು. ಲೈಟ್‌ ಬಾಯ್‌ನಿಂದ ಹಿಡಿದು ಎಲ್ಲರಿಗೂ ಅವರು ಖುಷಿಯಿಂದ ಊಟ ಮಾಡಿಸುತ್ತಿದ್ದರು.    

 * * *

ಮೊದಲು ಬಾಲಣ್ಣ, ನರಸಿಂಹರಾಜು ಕಾಲ್‌ಶೀಟ್‌ 

ಆನ್‌ ಸ್ಕ್ರೀನ್‌ನಲ್ಲಿ ಮಾತ್ರವಲ್ಲ, ಆಫ್‌ ಸ್ಟ್ರೀನ್‌ನಲ್ಲೂ ಡಾ. ರಾಜ್‌, ನರಸಿಂಹರಾಜು ಮತ್ತು ಬಾಲಕೃಷ್ಣ  ಅವರ ಕಾಂಬಿನೇಷನ್‌ ಅದ್ಭುತವಾಗಿತ್ತು. ನಿರ್ಮಾಪಕರು ಅಣ್ಣಾವ್ರ ಕಾಲ್‌ಶೀಟ್‌ ಕೇಳಿದರೆ, ಮೊದಲು ಆ ನರಸಿಂಹರಾಜು ಮತ್ತು ಬಾಲಕೃಷ್ಣ ಅವರ ಕಾಲ್‌ಶೀಟ್‌ ಪಡೆದುಕೊಳ್ಳಿ. ಆ ನರಸಿಂಹರಾಜು ತುಂಬಾ ಬ್ಯುಸಿ. ಅವರಿಬ್ಬರ ಕಾಲ್‌ಶೀಟ್‌ ಪಕ್ಕಾ ಆದರೆ, ಹೇಗಿದ್ದರೂ ನನ್ನ ಕಾಲ್‌ಶೀಟ್‌ ಸಿಕ್ಕೇ ಸಿಗುತ್ತದೆ ಎಂದು ಅವರು ತಮಾಷೆ ಮಾಡುತ್ತಿದ್ದರು.

* * *

‘ಗಂಧದಗುಡಿ’ ಕ್ಲೈಮ್ಯಾಕ್ಸ್‌ ಆಕಸ್ಮಿಕ ಘಟನೆ!

‘ಗಂಧದಗುಡಿ’ ಕ್ಲೈಮ್ಯಾಕ್ಸ್‌ ಚಿತ್ರೀಕರಣದಲ್ಲಿ ಆಕಸ್ಮಿಕವಾಗಿ ನಡೆದ ಒಂದು ಘಟನೆ ಇಂದಿಗೂ ನಿಗೂಢವಾಗಿಯೇ ಉಳಿದಿದೆ. 

ಗಂಧದಗುಡಿ ಕ್ಲೈಮ್ಯಾಕ್ಸ್‌ಗಾಗಿ ಔಟ್‌ಡೋರ್‌ ಶೂಟಿಂಗ್‌ ನಡೆಯುತ್ತಿತ್ತು. ರಾಜ್‌ಕುಮಾರ್‌, ಬಾಲಕೃಷ್ಣ, ಆದವಾನಿ ಲಕ್ಷ್ಮಿದೇವಿ, ವಿಷ್ಣುವರ್ಧನ್ ಮೇಕಪ್‌ ಮಾಡಿಕೊಂಡು ಶೂಟಿಂಗ್‌ ಸ್ಥಳದಲ್ಲಿದ್ದರು. ಬಂದೂಕಿನಿಂದ ಗುಂಡು ಹಾರಿಸುವ ದೃಶ್ಯವನ್ನು ಶೂಟ್‌ ಮಾಡಬೇಕಿತ್ತು. ಆದರೆ, ಅಲ್ಲಿ ಬಂದೂಕು ಇರಲಿಲ್ಲ.

ಅದೇ ಸಮಯಕ್ಕೆ ಸರಿಯಾಗಿ ಕಾಡಿನಿಂದ ಹಿಂದಿರುಗಿದ ಎಂ.ಪಿ.ಶಂಕರ್‌ ಕೈಯಲ್ಲಿದ್ದ ಬಂದೂಕು ಬಳಸಿಕೊಳ್ಳಲು ನಿರ್ಧರಿಸಲಾಯಿತು. ಬಾಲಕೃಷ್ಣ ಅವರು ಬಂದೂಕಿನ ಟ್ರಿಗರ್‌ ಒತ್ತಿದ್ದೇ ತಡ ಜೀವಂತ ಗುಂಡು ನೆಲಕ್ಕೆ ಬಡಿಯಿತು. ಬಂದೂಕಿನಲ್ಲಿ ಗುಂಡು ಇರುವ ವಿಷಯ ಎಂ.ಪಿ. ಶಂಕರ್‌ ಅವರಿಗೂ ನೆನಪಿರಲಿಲ್ಲ. ಇಡೀ ಘಟನೆ ಆಕಸ್ಮಿಕ. ನಂತರದಲ್ಲಿ ಆ ಒಂದು ಘಟನೆ ರಕ್ಕೆಪುಕ್ಕ ಪಡೆದು ಹರಿದಾಡಿತು. ಈಚೆಗೆ ಯಾವುದೋ ಒಂದು ಸಮಾರಂಭದಲ್ಲಿ ಸಿಕ್ಕಿದ್ದ ರಾಘವೇಂದ್ರ ರಾಜ್‌ಕುಮಾರ್‌ ಸಹ ‘ಗಂಧದಗುಡಿ’ ಘಟನೆ ಬಗ್ಗೆ ಕೇಳಿ ತಿಳಿದುಕೊಂಡರು. 

* * * 

ಕನ್ನಡದ ಮೋಸ್ಟ್‌ ಪರ್ಫೆಕ್ಷನಿಸ್ಟ್‌ ನಟ       

ಕೆಲಸದ ವಿಷಯಕ್ಕೆ ಬಂದರೆ ಡಾ. ರಾಜ್‌ ಪಕ್ಕಾ ಪರ್ಫೆಕ್ಷನಿಸ್ಟ್‌. ವೃತ್ತಿನಿರತ ಕಲಾವಿದ. ಪ್ರತಿಯೊಂದು ಶಾಟ್‌ ಆದ ನಂತರವೂ ಕ್ಯಾಮರಾಮನ್‌ ಬಳಿ ಬಂದು ಶಾಟ್‌ ಹೇಗೆ ಬಂದಿದೆ ಎಂದು ಕೇಳುತ್ತಿದ್ದರು. ಸರಿಯಾಗಿ ಬಂದಿಲ್ಲವೆಂದರೆ ಹಿಂದುಮುಂದೆ ನೋಡದೆ ಮತ್ತೊಂದು ಶಾಟ್‌ಗೆ ಸಿದ್ಧರಾಗುತ್ತಿದ್ದರು.

’ಭಾಗ್ಯವಂತರು‘ ಸಿನಿಮಾ ಶೂಟಿಂಗ್‌ ಬೆಂಗಳೂರಿನ ಜಯನಗರದ ಮನೆಯೊಂದರಲ್ಲಿ ನಡೆಯುತ್ತಿತ್ತು. ರಾಜ್‌ ಆಗ ಮದ್ರಾಸ್‌ನಲ್ಲಿದ್ದರು. ಸಂಜೆಯಾಗಿತ್ತು. ಮದ್ರಾಸ್‌ಗೆ ಹೊರಡಲು ಸಿದ್ಧರಾಗಿದ್ದರು. ಇನ್ನೂ ಸಮಯ ಇದ್ದ ಕಾರಣ ಬಾಕಿ ಉಳಿದಿದ್ದ ಒಂದು ಶಾಟ್‌ ಮುಗಿಸೋಣ ಎಂದರು. ಸರಿ ಎಂದು ನಾವು ಸಿದ್ಧರಾದೆವು. ಅವಸರದಲ್ಲಿ ಕ್ಯಾಮೆರಾಕ್ಕೆ ಫಿಲ್ಟರ್‌ ಹಾಕುವುದನ್ನೇ ನನ್ನ ಸಹಾಯಕ ಮರೆತುಬಿಟ್ಟಿದ್ದ. ಕೊನೆಯ ಕ್ಷಣದಲ್ಲಿ ಈ ವಿಷಯ ನನ್ನ ಗಮನಕ್ಕೆ ಬಂತು. ವಿಷಯ ತಿಳಿದ ಅಣ್ಣಾವ್ರು ಮತ್ತೊಮ್ಮೆ ಅದೇ ಶಾಟ್‌ಗೆ ರೆಡಿಯಾದರು. ವಿಮಾನ ಹೊರಡಲು ಸಮಯವಾದ ಕಾರಣ ‘ನೀವು ಹೊರಡಿ‘ ಎಂದು ಮನವಿ ಮಾಡಿದೆವು. ಶೂಟಿಂಗ್ ಮುಗಿದು ಡಬ್ಬಿಂಗ್‌ ನಡೆಯುತ್ತಿದ್ದ ವೇಳೆ ಇದನ್ನು ಗಮನಿಸಿದ ರಾಜ್‌ ಅವರು, ಪರವಾಗಿಲ್ರಿ, ಫಿಲ್ಟರ್‌ ಇಲ್ಲದಿದ್ದರೂ ಶಾಟ್‌ ಚೆನ್ನಾಗಿ ಮೂಡಿಬಂದಿದೆ. ಏನು ಮಾಡಿದ್ರಿ ಎಂದು ನೆನಪು ಮಾಡಿಕೊಂಡರು. ಪ್ರಿಂಟಿಂಗ್‌ನಲ್ಲಿ ಸರಿ ಮಾಡಿದೆ ಎಂದೆ.

ಡಾ. ರಾಜ್‌ ಅವರು ಪಾತ್ರ ನಿರ್ವಹಣೆ, ಅಭಿಯನದ ವಿಷಯಕ್ಕೆ ಬಂದಾಗ ಸಣ್ಣಪುಟ್ಟ ತಪ್ಪುಗಳಾದರೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ದೃಶ್ಯ ಸರಿಯಾಗಿ ಮೂಡಿ ಬರುವವರೆಗೂ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಆ ವೃತ್ತಿಪರತೆ ಗುಣದಿಂದಲೇ ರಾಜಣ್ಣ ಅಷ್ಟು ಎತ್ತರಕ್ಕೆ ಬೆಳೆದದ್ದು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು