ಶುಕ್ರವಾರ, ಮೇ 20, 2022
27 °C

ಕೋವಿಡ್‌ ಅವಧಿಯಲ್ಲಿ ಸಿನಿಮಾ ಕೆಲಸ: ಇದು ಕಿರು ಚಿತ್ರಗಳ ಕಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರ ಪ್ರದರ್ಶನಗಳಿಗೆ ಇತಿಮಿತಿಯ ಹೊತ್ತಿನಲ್ಲಿ ಸಿನಿಮಾ ಕಲಾವಿದರು, ತಂತ್ರಜ್ಞರು ಅಲ್ಲಲ್ಲಿ ಕಿರುಚಿತ್ರಗಳನ್ನು ಮಾಡಲಾರಂಭಿಸಿದ್ದಾರೆ. ಒಂದು ವಾರದ ಅವಧಿಯಲ್ಲಿ ಎರಡು ಕಿರುಚಿತ್ರಗಳು ಬಿಡುಗಡೆಗೊಂಡು ಪ್ರದರ್ಶನಗೊಂಡಿವೆ. ಇನ್ನೊಂದು ಕಿರುಚಿತ್ರ ಜ. 26ರಂದು ಬಿಡುಗಡೆ ಆಗಲಿದೆ. ಟ್ರೇಲರ್‌ನಿಂದಲೇ ಸದ್ದು ಮಾಡಿದೆ. 

ಯುಟ್ಯೂಬ್‌ನಲ್ಲಂತೂ ಕಿರುಚಿತ್ರಗಳ ಪ್ರಸಾರ ಲಕ್ಷಾಂತರ ವೀಕ್ಷಕರನ್ನು ಸೆಳೆದಿದೆ. ಈ ಸಾಲಿಗೆ ಸೇರ್ಪಡೆಗೊಂಡದ್ದು ಸತ್ಯ ಹೆಗಡೆ ಸ್ಟುಡಿಯೋಸ್‌ನ ‘ಪಪ್ಪೆಟ್ಸ್‌’ ಹಾಗೂ ‘ದಿ ಕ್ರಿಟಿಕ್‌’. ಛಾಯಾಗ್ರಾಹಕ ಸತ್ಯ ಹೆಗಡೆ ಈಗ ಕಿರುಚಿತ್ರ ನಿರ್ಮಾಣದತ್ತ ವಾಲಿದ್ದಾರೆ.

ಅಭಿಷೇಕ್ ಕಾಸರಗೋಡು ನಿರ್ದೇಶನದ ‘ಪಪ್ಪೆಟ್ಸ್’ ಹಾಗೂ ಮಂಸೋರೆ ನಿರ್ದೇಶನದ ‘ದಿ ಕ್ರಿಟಿಕ್’ ಹತ್ತು ನಿಮಿಷ ಅವಧಿಯ ಈ ಎರಡು ಕಿರುಚಿತ್ರಗಳ ಬಿಡುಗಡೆ ಈಚೆಗೆ ನಡೆಯಿತು. ಕೆಎಚ್‌ಪಿ ಫೌಂಡೇಷನ್‌ ನಿರ್ಮಾಣದ ವಾಗೀಶ್ ಆರ್. ಕಟ್ಡಿ ನಿರ್ದೇಶನದ ‘ಕರ್ನಾಟಕದ ಜಲಿಯನ್‌ ವಾಲಾಬಾಗ್‌’ ಹೆಸರಿನ ಕಿರುಚಿತ್ರ ಜ. 26ರಂದು ಬಿಡುಗಡೆಯಾಗಲಿದೆ.   

ಪಪ್ಪೆಟ್‌: ಅಭಿಷೇಕ್ ಕಾಸರಗೋಡು ನಿರ್ದೇಶನದ ‘ಪಪ್ಪೆಟ್ಸ್’ ಕಿರುಚಿತ್ರದಲ್ಲಿ ಗೌತಮಿ ಜಾಧವ್ ನಾಯಕಿ. ನಟಿಯೊಬ್ಬಳು ಸೇಲ್ಸ್ ಗರ್ಲ್ ಒಬ್ಬಳಿಂದ ಪ್ರಭಾವಿತಳಾಗುವ ಸನ್ನಿವೇಶ ಈ ಚಿತ್ರದಲ್ಲಿದೆ. 

ಮಂಸೋರೆ ನಿರ್ದೇಶನದಲ್ಲಿ ‘ದಿ ಕ್ರಿಟಿಕ್’ ಮೂಡಿಬಂದಿದೆ. ನಿರ್ದೇಶಕ ಮತ್ತು ನಟ ಟಿ.ಎಸ್.ನಾಗಾಭರಣ ಹಾಗೂ ವೈ.ಜಿ.ಉಮಾ ನಟಿಸಿದ್ದಾರೆ. ಲೇಖಕಿ ಮತ್ತು ವಿಮರ್ಶಕ ಎಂಬ ಎರಡೇ ಪಾತ್ರಗಳು, ಪುಸ್ತಕಗಳ ರಾಶಿಯ ನಡುವೆ ನಡೆಯುವ ಕಥೆಯಿದು. ಪುಸ್ತಕ ಓದದೇ ವಿಮರ್ಶಿಸುವ ವಿಮರ್ಶಕ, ಕೊನೆಗೂ ಲೇಖಕಿಯ ಮೇಲೆ ಹಣ ಕಳವಿನ ಆರೋಪ ಹೊರಿಸುತ್ತಾನೆ. ಕೊನೆಗೆ ಆ ಹಣ ಅವಳು ಕೊಟ್ಟ ಪುಸ್ತಕದೊಳಗೇ ಇರುತ್ತದೆ. ಲೇಖಕಿ ವಿಮರ್ಶಕನ ಕಣ್ಣು ತೆರೆಸಿ ಹೋಗುತ್ತಾಳೆ. ಬಿ.ಎಂ. ಬಶೀರ್‌ ಈ ಚಿತ್ರದ ಕಥೆ ಬರೆದಿದ್ದಾರೆ.

ವಾಗೀಶ್ ಆರ್ ಕಟ್ಟಿ ನಿರ್ದೇಶನದಲ್ಲಿ ಮೂಡಿಬಂದಿದೆ ‘ಕರ್ನಾಟಕದ ಜಲಿಯನ್ ವಾಲಾಬಾಗ್’ ಕಿರುಚಿತ್ರ. ‘ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ವಿಧುರಾಶ್ವತ್ಥದಲ್ಲಿ 1938ರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಬ್ರಿಟಿಷ್‌ ಸೈನಿಕರು ಗುಂಡು ಹಾರಿಸಿದ ಪರಿಣಾಮ 30ಕ್ಕೂ ಹೆಚ್ಚು ಹೋರಾಟಗಾರರು ಬಲಿಯಾದ ಘಟನೆಯನ್ನು ಆಧರಿಸಿ ಈ ಚಿತ್ರ ಮಾಡಿದ್ದೇನೆ’ ಎಂದರು ವಾಗೀಶ್‌. ಈ ಕಿರುಚಿತ್ರ 35 ನಿಮಿಷ ಅವಧಿಯದ್ದು. ಪುಟ್ಡಸ್ವಾಮಿ ಗೌಡರು ಈ ಚಿತ್ರ ನಿರ್ಮಿಸಿದ್ದಾರೆ. 

ಕಿರುಚಿತ್ರಗಳ ಮೂಲಕವೇ ಗುರುತಿಸಿಕೊಂಡು ಮುಂದೆ ಕಿರುತೆರೆ/ ಬೆಳ್ಳಿತೆರೆಗೆ ಪ್ರವೇಶ ಪಡೆಯುವ ಗುರಿ ಹೊಸ ಮುಖಗಳದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು