ಶ್ರದ್ಧಾ ಶ್ರೀನಾಥ್ ಸಂದರ್ಶನ: ನನ್ನ ಬದುಕು ನಿರ್ಧರಿಸುವ ಹಕ್ಕು ಯಾರಿಗೂ ಕೊಡಲಾರೆ

ಮಂಗಳವಾರ, ಏಪ್ರಿಲ್ 23, 2019
31 °C

ಶ್ರದ್ಧಾ ಶ್ರೀನಾಥ್ ಸಂದರ್ಶನ: ನನ್ನ ಬದುಕು ನಿರ್ಧರಿಸುವ ಹಕ್ಕು ಯಾರಿಗೂ ಕೊಡಲಾರೆ

Published:
Updated:

ರಂಗಭೂಮಿಯ ನೆಲದ ಸತ್ವದಲ್ಲಿ ಬೇರೂರಿ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಕೊನರುತ್ತಿರುವ ಪ್ರತಿಭೆ ಶ್ರದ್ಧಾ ಶ್ರೀನಾಥ್‌. ‘ಯು ಟರ್ನ್‌’ ಮೂಲಕ ಸಿನಿಮಾಪ್ರಯಾಣ ಆರಂಭಿಸಿದ ಶ್ರದ್ಧಾ ಎದುರಲ್ಲೀಗ ಅವಕಾಶಗಳ ಆಕಾಶವೇ ತೆರೆದುಕೊಂಡಿದೆ. ಕನ್ನಡದಲ್ಲಿ ಅವರು ನಟಿಸಿರುವ ‘ರುಸ್ತುಂ’ ಮತ್ತು ‘ಗೋದ್ರಾ’ ಬಿಡುಗಡೆಗೆ ಸಜ್ಜಾಗಿವೆ. ‘ಮಿಲನ್‌ ಟಾಕೀಸ್’ ಸಿನಿಮಾ ಮೂಲಕ ಬಾಲಿವುಡ್‌ಗೂ ಪ್ರವೇಶ ಪಡೆದಿರುವ ಇವರು ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಬೇಡಿಕೆಯಲ್ಲಿರುವ ನಟಿ. ನಟನೆಯ ಪ್ರತಿಭೆಯ ಜತೆಗೆ ಮಹಿಳಾ ಅಸ್ಮಿತೆಯ ಕುರಿತು ದಿಟ್ಟತನದ ಧ್ವನಿ ಎತ್ತುವುದರ ಮೂಲಕವೂ ಗಮನ ಸೆಳೆದಿರುವ ಶ್ರದ್ಧಾ ಜೊತೆಗಿನ ಮಾತುಕತೆ ಇಲ್ಲಿದೆ.

---

ನಿಮ್ಮ ರಂಗಭೂಮಿ ದಿನಗಳನ್ನು ನೆನಪಿಸಿಕೊಳ್ಳಬಹುದೇ? ಕಾನೂನು ಪದವೀಧರೆಯಾದ ನೀವು ರಂಗಭೂಮಿಯತ್ತ ಆಕರ್ಷಿತರಾಗಿದ್ದು ಹೇಗೆ?‌

ಕಾಲೇಜಲ್ಲಿ ಓದುತ್ತಿದ್ದಾಗಲೇ ರಂಗಭೂಮಿಯಲ್ಲಿ ನಟನೆ ಆರಂಭಿಸಿದ್ದು. ನನಗಾಗಲೇ ರಂಗಭೂಮಿ ಕುರಿತು ತುಂಬ ಆಸಕ್ತಿ ಇತ್ತು. ಆದರೆ ಅವಕಾಶ ಪಡೆದುಕೊಳ್ಳುವುದು ಹೇಗೆ, ಎಲ್ಲಿ ಆಡಿಷನ್‌ ಕೊಡ್ತಾರೆ ಎಂಬುದೆಲ್ಲ ಏನೂ ಗೊತ್ತಿರಲಿಲ್ಲ. ನನ್ನ ಸ್ನೇಹಿತೆಗೆ ನನ್ನ ಆಸಕ್ತಿಯ ಬಗ್ಗೆ ಗೊತ್ತಿತ್ತು. ಅವಳು ಒಂದು ದಿನ ಫೇಸ್‌ಬುಕ್‌ನಲ್ಲಿ ರಂಗಭೂಮಿ ಕಲಾವಿದರ ಆಡಿಷನ್‌ ಕುರಿತು ಹಾಕಿದ ಪ್ರಕಟಣೆ ನೋಡಿ ನನಗೆ ಹೇಳಿದಳು. ಅಷ್ಟು ವರ್ಷದಿಂದ ನಾನು ಬಯಸುತ್ತಿದ್ದ ಜಗತ್ತಿನ ಬಾಗಿಲು ಆಗ ತೆರೆದುಕೊಳ್ಳುವುದರಲ್ಲಿತ್ತು. ಆ ನಂಬರ್‌ಗೆ ಮೊದಲು ಫೋನ್‌ ಮಾಡಲು ನಾನು ಭಯಪಟ್ಟಿದ್ದು ಇನ್ನೂ ನೆನಪಿದೆ. ಶನಿವಾರ ಸಂಜೆ ಆಡಿಷನ್‌ಗೆ ವೇಳೆ ನಿಗದಿ ಆಯಿತು. ಶುಕ್ರವಾರ ರಾತ್ರಿಯಿಡೀ ಭಯದಲ್ಲಿಯೇ ಇದ್ದೆ. ಕ್ಯಾನ್ಸಲ್‌ ಮಾಡಿಬಿಡೋಣ ಅಂತಲೂ ಅನಿಸಿತು. ಆದರೆ ಶನಿವಾರ ಬೆಳಿಗ್ಗೆ, ‘ಇಂಥದ್ದೊಂದು ಅವಕಾಶ ಸಿಕ್ಕಿದೆ, ಬಳಸಿಕೊಳ್ಳಬೇಕು. ಇಲ್ಲಾಂದ್ರೆ ಮತ್ತೊಂದು ಅವಕಾಶ ಸಿಗುವುದಿಲ್ಲ’ ಅನಿಸಿಬಿಡ್ತು. ಆಡಿಷನ್‌ಗೆ ಹೋದೆ; ಸೆಲೆಕ್ಟ್‌ ಕೂಡ ಆದೆ. ನಾನು ರಂಗಭೂಮಿಗೆ ಪದಾರ್ಪಣೆ ಮಾಡಿದ್ದು ಹೀಗೆ. ನಾನು ಮೊದಲು ಮಾಡಿದ ನಾಟಕ ‘ಡ್ರೀಮ್‌ 2012’. 

ಇದನ್ನೂ ಓದಿ: ಮಾಧುರಿ ದೀಕ್ಷಿತ್ ನೆನಪಿಸಿದ ಶ್ರದ್ಧಾ ಶ್ರೀನಾಥ್

ನಿಮ್ಮ ಒಟ್ಟಾರೆ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಲ್ಲಿ ರಂಗಭೂಮಿಯ ಪಾತ್ರ ಎಂಥದ್ದು?

ಆ ದಿನಗಳೇ ಬೇರೆ ಥರ ಇದ್ದವು. ನನಗಾಗ ಆ್ಯಕ್ಟಿಂಗ್‌ ಅಂದರೆ ರಂಗಭೂಮಿ, ರಂಗಭೂಮಿ ಅಂದ್ರೆ ಆ್ಯಕ್ಟಿಂಗ್‌. ನಮ್ಮ ತಂಡದಲ್ಲಿದ್ದ ಎಲ್ಲರೂ ಕೆಲಸದಲ್ಲಿದ್ದವರೇ. ಬೆಳಿಗ್ಗೆ ಐದು ಗಂಟೆಗೆ ಮನೆಬಿಟ್ಟು ಐದೂ ಮುಕ್ಕಾಲಿಗೆ ತಾಲೀಮು ಶುರು ಮಾಡ್ತಿದ್ವಿ. ಏಳೂವರೆ–ಏಳೂಮುಕ್ಕಾಲಿಗೆ ಎಲ್ಲರೂ ಮತ್ತೆ ಮನೆಗೆ ಹೋಗಿ ಆಫೀಸಿಗೆ ಹೋಗ್ತಿದ್ವಿ. ಸಂಜೆಯೂ ಮತ್ತೆ 6.30ಕ್ಕೆ ಹೊರಟು ಏಳೂವರೆಯಿಂದ ಎಂಟೂವರೆಯವರೆಗೆ ತಾಲೀಮು ಮಾಡ್ತಿದ್ವಿ. ಆಗ ನನಗೆ ಒಂದು ನಾಟಕಕ್ಕೆ ಎರಡು ಸಾವಿರದಿಂದ ಮೂರು ಸಾವಿರ ರೂಪಾಯಿ ಸಿಕ್ಕರೆ ಹೆಚ್ಚು. ಅದಕ್ಕಾಗಿ ಎರಡು ಎರಡೂವರೆ ತಿಂಗಳು ತಾಲೀಮು ಮಾಡ್ತಿದ್ವಿ. ಆ ಎರಡೂವರೆ ಸಾವಿರದಲ್ಲಿ ಎಂಥ ಖುಷಿ ಸಿಗ್ತಿತ್ತು ಗೊತ್ತಾ? ನಾನೇ ದುಡಿದಿದ್ದು ಎಂಬ ಹೆಮ್ಮೆ. 

ಬೆಂಗಳೂರು ಬಿಟ್ಟು ಮುಂಬೈ, ಚೆನ್ನೈ, ಗೋವಾಗಳಿಗೆಲ್ಲ ಹೋಗಿ ನಾಟಕ ಆಡುವಾಗ ‘ನಮ್ಮ ನಾಟಕವನ್ನು ಬೇರೆ ಊರಿಗೆ ತೆಗೆದುಕೊಂಡು ಹೋಗ್ತಾ ಇದ್ದೀವಿ’ ಎಂಬ ಹೆಮ್ಮೆ ಇರ್ತಿತ್ತು. ನಾವು ಸ್ಟಾರ್‌ಗಳು ಅನ್ನೋ ಥರ ಫೀಲಿಂಗ್‌ ಇರ್ತಿತ್ತು. 

ನಾಟಕ ಅಂದ್ರೇನೆ ಟೀಂವರ್ಕ್‌. ಅಲ್ಲಿ ಹೀರೊ ಹೀರೊಯಿನ್‌ ಇರಲ್ಲ. ನಮಗೆ ಯಾರೂ ಮೇಕಪ್‌ ಮಾಡೋಕೆ ಬರಲ್ಲ. ನಾವೇ ಮೇಕಪ್ ಮಾಡಬೇಕು. ಜೊತೆಗಿರುವವರಿಗೂ ಮೇಕಪ್‌ ಮಾಡಿಕೊಳ್ಳಲು ಸಹಾಯ ಮಾಡಬೇಕು. ಷೋ ಮುಗಿದ ಮೇಲೆ ಚಕಚಕನೇ ಪ್ರಾಪರ್ಟಿಗಳನ್ನೆಲ್ಲ ಬಿಚ್ಚಲು ನಾವೂ ಸಹಾಯ ಮಾಡ್ತಿದ್ವಿ. ಅಲ್ಲಿ ದೊಡ್ಡವರು, ಸಣ್ಣವರು ಎಂದೆಲ್ಲ ಏನೂ ಇರಲಿಲ್ಲ. ಟೀಂನ ಸದಸ್ಯರು ಎಲ್ಲರೂ ಒಂದೇ. 

ವರ್ಷದಲ್ಲಿ ನಮ್ಮ ನಾಟಕದ ಕುರಿತು ಪತ್ರಿಕೆಗಳಲ್ಲಿ ಹೆಚ್ಚೆಂದರೆ ಎರಡು ಲೇಖನ ಬರ್ತಾ ಇತ್ತು. ಅದರಲ್ಲಿ ಒಂದು ಗ್ರೂಪ್‌ ಫೋಟೊ ಇರ್ತಾ ಇತ್ತು. ಅದರಲ್ಲಿ ನಾನೂ ಇರ್ತಿದ್ದೆ. ಅದನ್ನೇ ನೋಡಿ ಎಷ್ಟು ಖುಷಿ ಪಡ್ತಿದ್ವಿ... ಒಂದು ನಾಟಕದ ಪ್ರದರ್ಶನ ಮುಗಿದ ಮೇಲೆ ಪ್ರೇಕ್ಷಕರು ನಮ್ಮನ್ನು ಹುಡುಕಿಕೊಂಡು ಗ್ರೀನ್‌ರೂಮಿಗೆ ಬಂದು ವಿಷ್ ಮಾಡ್ತಿದ್ರು. ಅದು ದೊಡ್ಡ ಥ್ರಿಲ್‌ ಕೊಡುತ್ತಿದ್ದ ಸಂಗತಿ. 

ಎಷ್ಟೆಲ್ಲ ಶ್ರಮ ಪಡುತ್ತಿದ್ದೆವು. ಅದನ್ನೆಲ್ಲ ದುಡ್ಡಿಗೋಸ್ಕರ ಮಾಡ್ತಾ ಇರಲಿಲ್ಲ; ಪ್ರಸಿದ್ಧಿಗೋಸ್ಕರ ಮಾಡ್ತಾ ಇರಲಿಲ್ಲ. ಅಮ್ಮ–ಅಪ್ಪ ನನ್ನ ಕಷ್ಟ ನೋಡಿ ಟೆನ್ಷನ್‌ ಮಾಡಿಕೊಳ್ತಿದ್ರು. ‘ಎಷ್ಟೊಂದು ಹಾರ್ಡ್‌ ವರ್ಕ್‌ ಮಾಡ್ತಾಳಲ್ವಾ ಮಗಳು’ ಎಂದು ಚಿಂತೆ ಮಾಡ್ತಿದ್ರು. ನಾನವರಿಗೆ ಹೇಳ್ತಿದ್ದೆ; ‘ನನ್ನ ಬಗ್ಗೆ ಯೋಚನೆ ಮಾಡಬೇಡಿ. ನನಗೆ ಇದರಿಂದಲೇ ಖುಷಿ ಸಿಗ್ತಾ ಇದೆ. ಮಧ್ಯದಲ್ಲಿ ಎಂಟು ಗಂಟೆ ಆಫೀಸು ಕೆಲಸಕ್ಕೆ ಹೋಗ್ತೀನಲ್ವಾ. ಅದರಿಂದ ಏನೂ ಸಿಗ್ತಾ ಇಲ್ಲ.’

ಇದನ್ನೂ ಓದಿ: ಪ್ರತಿಭೆಗೆ ಮನ್ನಣೆ– ಶ್ರದ್ಧಾ ಹರ್ಷ

ಅಷ್ಟು ವರ್ಷದ ರಂಗಭೂಮಿ ನಿಮಗೆ ಕಲಿಸಿಕೊಟ್ಟಿರುವುದೇನು?

ತುಂಬ ಸಂಗತಿಗಳನ್ನು ಕಲಿತಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಟೀಂವರ್ಕ್‌ನ ಮಹತ್ವ. ರಂಗಭೂಮಿಯಲ್ಲಿ ನಮಗಿಂತ ನಮ್ಮ ಪಾತ್ರ ಮುಖ್ಯ. ನನ್ನ ರಂಗಭೂಮಿ ದಿನಗಳಲ್ಲಿ ನಾನು ಅಜ್ಜಿಯ ಪಾತ್ರದಲ್ಲಿ ನಟಿಸಿದ್ದೇನೆ; ವೇಶ್ಯೆಯ ಪಾತ್ರ, ಗೃಹಿಣಿಯ ಪಾತ್ರ... ಹೀಗೆ ಬೇರೆ ಬೇರೆ ಥರದ ಪಾತ್ರಗಳಲ್ಲಿ ನಟಿಸಿದ್ದೇನೆ. ಈಗ ಸಿನಿಮಾದಲ್ಲಿದ್ದೇನೆ. ಅಂಥದ್ದೊಂದು ಪಾತ್ರವನ್ನು ಕೊಂಚ ರಿಸ್ಕ್‌ ತಗೊಂಡು ಮಾಡಿದರೆ ಮುಂದಿನ ಸಿನಿಮಾಗೆ ಅವಕಾಶ ಸಿಗತ್ತಾ ಎಂಬ ಯೋಚನೆಯಾಗಿಬಿಡುತ್ತದೆ. ಜನರು ಪ್ರಶ್ನೆಗಳನ್ನು ಕೇಳ್ತಾರೆ. ರಂಗಭೂಮಿಯಲ್ಲಿ ನನ್ನ ವಯಸ್ಸಿಗೆ ಈ ಪಾತ್ರ ಹೊಂದುತ್ತದಾ ಎಂದೆಲ್ಲ ಯೋಚಿಸುತ್ತಲೇ ಇರಲಿಲ್ಲ. ಅಲ್ಲಿ ನಮಗಿಂತ ಪಾತ್ರಗಳು ಮುಖ್ಯವಾಗಿದ್ದವು. ನಾಟಕ ಮುಖ್ಯವಾಗಿತ್ತು. 

ನನಗೆ ಆಗ ದುಡ್ಡು ಮುಖ್ಯ ಅನಿಸುತ್ತಿರಲಿಲ್ಲ. ದುಡ್ಡೇ ಸಿಗುವುದಿಲ್ಲ ಅಂದರೂ ನಾನು ನಾಟಕಗಳಲ್ಲಿ ನಟಿಸುತ್ತಿದ್ದೆ. ನಟನೆ ಎಂದರೆ ಎಷ್ಟು ಪ್ರೀತಿ ಎಂದು ನನಗೆ ಅರಿವಾಗಿದ್ದೇ ಆವಾಗ. 

ಇದನ್ನೂ ಓದಿ: ಜುಂಬಾ, ಪಥ್ಯಾಹಾರ ಮತ್ತು ಶ್ರದ್ಧಾ

ಈಗ ಸಿನಿಮಾರಂಗದಲ್ಲಿದ್ದೀರಿ. ಹಲವು ಭಾಷೆಗಳಲ್ಲಿ ನಟಿಸುತ್ತಿದ್ದೀರಿ. ಬೇಡಿಕೆಯ ನಟಿ. ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಪ್ರತಿವಾರ ನಿಮ್ಮ ಬಗ್ಗೆ ಒಂದಲ್ಲ ಒಂದು ಪತ್ರಿಕೆಯಲ್ಲಿ ಲೇಖನ ಬರುತ್ತಿರುತ್ತದೆ. ಪ್ರಸಿದ್ಧಿಯಿದೆ. ರಂಗಭೂಮಿ ದಿನಗಳಿಗೆ ಹೋಲಿಸಿದರೆ ಸಿನಿಮಾ ಜಗತ್ತಿನಿಂದ ನೀವು ಪಡೆದುಕೊಂಡಿದ್ದೇನು ಮತ್ತು ಗಳಿಸಿಕೊಂಡಿದ್ದೇನು?

ನಾನು ರಂಗಭೂಮಿಯಲ್ಲಿ ನಟಿಸುತ್ತಿದ್ದುದು ಪ್ಯಾಷನ್‌ಗಾಗಿ. ಆದರೆ ಸಿನಿಮಾ ಹಾಗಲ್ಲ. ಇದೊಂದು ಉದ್ಯಮ; ಹಣ ಮಾಡುವ ಉದ್ಯಮ. ಇಲ್ಲಿ ಯಾರೂ ಸೇವೆಗಾಗಿ ಪುಕ್ಕಟೆ ಕೆಲಸ ಮಾಡಲ್ಲ. ನನಗೆ ಗೊತ್ತು, ನನ್ನ ಮುಖಕ್ಕೆ ಇಲ್ಲೊಂದು ಬೆಲೆ ಇದೆ. ಹಾಗಾಗಿಯೇ ನನಗೆ ಅವಕಾಶಗಳು ಸಿಗುತ್ತವೆ. ಅದಕ್ಕೆ ನಾನು ನಿಗದಿತ ಸಂಭಾವನೆ ತೆಗೆದುಕೊಳ್ಳುತ್ತೇನೆ. ಆದರೆ ರಂಗಭೂಮಿ ದಿನಗಳಲ್ಲಿ ಎರಡು ಸಾವಿರ ರೂಪಾಯಿ ಸಂಭಾವನೆ ಪಡೆದಾಗ ಸಿಗುತ್ತಿದ್ದ ಮುಗ್ಧ ಸಂತೋಷ ಇತ್ತಲ್ಲ, ಆ ಮುಗ್ಧತೆಯನ್ನು ನಾನು ಕಳೆದುಕೊಂಡಿದ್ದೇನೆ ಅನಿಸುತ್ತದೆ. ಹೆಚ್ಚು ಪ್ರಾಕ್ಟಿಕಾಲಿಟಿ ಬಂದಿದೆ. ಆಗ ರಂಗಭೂಮಿ ನನ್ನ ಜೀವನೋಪಾಯದ ಮಾರ್ಗ ಆಗಿರಲಿಲ್ಲ. ಬೇರೆ ಕೆಲಸ ಇತ್ತು. ಈಗ ನಟನೆ ನನ್ನ ಜೀವನೋಪಾಯವೂ ಹೌದು. ಇದೇ ನನ್ನ ವೃತ್ತಿ. ರಂಗಭೂಮಿ ದಿನಗಳ ಮುಗ್ಧತೆಯನ್ನು ಕಳೆದುಕೊಂಡು ಪ್ರಾಕ್ಟಿಕಾಲಿಟಿಯನ್ನು ಪಡೆದುಕೊಂಡಿದ್ದೇನೆ. 

ಫಾಲೋ ಮಾಡೋಕೆ ಟ್ವಿಟರ್‌ನಲ್ಲಿ, ಇನ್‌ಸ್ಟಾಗ್ರಾಂನಲ್ಲಿ ಬೇಕಾದಷ್ಟು ಜನ ಇದ್ದಾರೆ. ಆದರೆ ಅದರಲ್ಲಿ ಎಷ್ಟು ಜನ ನಿಜವಾಗಲೂ ನನ್ನ ಅಭಿಮಾನಿಗಳು ಗೊತ್ತಿಲ್ಲ. ನನ್ನ ಮುಖ ನೋಡಿದರೆ ‘ಮ್ಯಾಮ್‌, ನಾನು ನಿಮ್ಮ ದೊಡ್ಡ ಅಭಿಮಾನಿ’ ಎಂದು ಹೇಳ್ತಾರೆ. ನನ್ನ ಬದಲಿಗೆ ಇನ್ಯಾವುದಾದರೂ ನಟಿ ಸಿಕ್ಕರೆ ಅವರ ಬಳಿ ಹೋಗಿಯೂ ಅದನ್ನೇ ಹೇಳ್ತಾರೆ. ಅದು ನನಗೊಬ್ಬಳಿಗೆ ನಿಷ್ಠಳಾಗಿರುವ ಅಭಿಮಾನ ಏನಲ್ಲ. ಈ ವಾಸ್ತವದ ಅರಿವಾದ ಕ್ಷಣವೇ ‘ನಾನು ಸ್ಪೆಷಲ್‌ ಅಲ್ಲ’ ಎನ್ನುವುದು ಗೊತ್ತಾಗಿಬಿಡುತ್ತದೆ. ಎಷ್ಟು ಅಭಿಮಾನಿಗಳಿದ್ದಾರೋ ಅಷ್ಟೇ ಸೆಲೆಬ್ರಿಟಿಗಳೂ ಇದ್ದಾರೆ. ಅವರಲ್ಲಿ ನಾನೂ ಒಬ್ಬಳು ಎನ್ನುವುದು ಗೊತ್ತಾದರೆ ಈ ಪ್ರಸಿದ್ಧಿ ತಲೆಗೆ ಹತ್ತುವುದಿಲ್ಲ. ಹಾಗಾಗಿಯೇ ಎಷ್ಟೇ ಜನಪ್ರಿಯತೆ ಬಂದರೂ, ಶ್ರೀಮಂತಿಕೆ ಬಂದರೂ ‘ನಾನು ಬರೀ ಶ್ರದ್ಧಾ. ನಮ್ಮ ಅಪ್ಪ ಅಮ್ಮನ ಮಗಳು. ಸಾಮಾನ್ಯಳಲ್ಲಿ ಸಾಮಾನ್ಯಳು’ ಎಂದೇ ಅನಿಸುತ್ತಿರುತ್ತದೆ. 

ಇದನ್ನೂ ಓದಿ: ಪರಭಾಷೆಯಲ್ಲಿ ಶ್ರದ್ಧಾ ಬ್ಯುಸಿ

ಶ್ರದ್ಧಾ ಸಖತ್‌ ಬೋಲ್ಡ್‌ ಹಡುಗಿ ಅನ್ನುವ ಮಾತು ಚಿತ್ರರಂಗದಲ್ಲಿದೆ. ಹೆಣ್ಣುಮಕ್ಕಳು ಕೊಂಚ ನೇರವಾಗಿ ಮಾತನಾಡಿದರೆ, ದಿಟ್ಟವಾಗಿ ಕಂಡರೆ ‘ಬೋಲ್ಡ್‌’ ಎಂಬ ಹಣೆಪಟ್ಟಿ ಹಚ್ಚುವುದು; ಅದು ಹೆಣ್ಣಿಗೆ ಸಹಜ ಸ್ವಭಾವ ಅಲ್ಲ ಎನ್ನುವಂತೆ ನೋಡುವುದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಹಹ್ಹಹ್ಹಾ... ನಂಗೆ ತುಂಬ ಫನ್ನಿ ಅನಿಸುತ್ತದೆ. 

ನಮ್ಮ ದೃಷ್ಟಿಕೋನಗಳೇ ಎಷ್ಟು ಸಿಲ್ಲಿಯಾಗಿವೆ ಎಂದರೆ, ಹುಡುಗಿ ಸ್ವಲ್ಪ ಜಾಸ್ತಿ ಮಾತಾಡಿದರೆ ಬೋಲ್ಡ್‌; ಮಾತಾಡಿಲ್ಲ ಅಂದ್ರೆ ಕ್ಯೂಟ್‌, ಬಬ್ಲಿ, ಗರ್ಲ್‌ ನೆಕ್ಸ್ಟ್‌ ಡೋರ್‌! ಅಂದ್ರೆ ನಾವು ಹುಡುಗಿಯರನ್ನು ಈ ಚೌಕಟ್ಟಿನಲ್ಲಿ ಹಾಕಿಟ್ಟುಬಿಡುತ್ತೇವೆ. ಸ್ವಲ್ಪ ರಿಸ್ಕ್‌ ಇರುವ ಪಾತ್ರ ಮಾಡ್ತಾಳೆ ಅಂದ್ರೆ ಬೋಲ್ಡ್‌, ಸ್ವಲ್ಪ ದೇಹಪ್ರದರ್ಶನ ಮಾಡ್ತಾಳೆ ಅಂದ್ರೆ ಗ್ಲ್ಯಾಮರಸ್‌. 

ಬೋಲ್ಡ್‌ ಎನ್ನುವುದು ದೇಹಕ್ಕಿಂತಲೂ, ವರ್ತನೆ, ಸ್ಟೈಲ್‌, ವ್ಯಕ್ತಿತ್ವಕ್ಕೆ ಸಂಬಂಧಪಟ್ಟಿದ್ದು. ನನಗನಿಸುವ ಪ್ರಕಾರ ಇಂದು ಬಹುತೇಕ ಅಲ್ಲ, ಎಲ್ಲ ಹುಡುಗಿಯರೂ ಬೋಲ್ಡ್‌ ಆಗಿದ್ದಾರೆ; ಅಂದರೆ ಅವರಿಗೆ ಅವರದ್ದೇ ಧ್ವನಿ ಇದೆ. ಸ್ವತಂತ್ರ ವ್ಯಕ್ತಿತ್ವ ಇದೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಕ್ಷಮತೆ ಇದೆ. ಸುಶಿಕ್ಷಿತರಾಗಿದ್ದೀವಿ. ಈ ದೃಷ್ಟಿಯಿಂದ ಸ್ಕೂಲಿಗೆ ಹೋಗುತ್ತಿರುವವರು, ಕಾಲೇಜಿಗೆ ಹೋಗುತ್ತಿರುವವರು, ಕೆಲಸಕ್ಕೆ ಹೋಗುತ್ತಿರುವವರು, ಮನೆಯನ್ನು ನೋಡಿಕೊಳ್ಳುತ್ತಿರುವವರು ಎಲ್ಲ ಹೆಣ್ಣುಮಕ್ಕಳೂ ಬೋಲ್ಡ್‌ ಹೆಣ್ಣುಮಕ್ಕಳೇ. ಎಲ್ಲೋ ಒಂದಿಷ್ಟು ಜನ ಸುಮ್ಮನಿದ್ದಾರೆ ಎಂದರೆ ಅದರರ್ಥ ಅವರು ನಾಚಿಕೊಂಡಿದ್ದಾರೆ ಎಂದಲ್ಲ. ಸಮಯ ಬಂದಾಗ ಅವಳೂ ಬೋಲ್ಡ್ ಆಗಿಯೇ ಆಗುತ್ತಾಳೆ. ಮಾತನಾಡುತ್ತಾಳೆ. 

ನಾನು ಮಾತ್ರವಲ್ಲ, ಚಿತ್ರರಂಗದಲ್ಲಿ ನನ್ನ ಹಾಗೆಯೇ ಸಾಕಷ್ಟು ಬೋಲ್ಡ್ ಹುಡುಗಿಯರು ಇದ್ದಾರೆ. ನನಗೆ ಅದೊಂದು ಕಾಂಪ್ಲಿಮೆಂಟ್‌!

ಇದನ್ನೂ ಓದಿ: ಅಪ್ಪ, ನಾನು ಮತ್ತು ಕಾರು

ವಿಶೇಷವಾಗಿ ಚಿತ್ರರಂಗದಲ್ಲಿ ಗ್ಲ್ಯಾಮರಸ್‌ ಅನ್ನುವುದು ಬರೀ ದೇಹಕ್ಕೆ ಸಂಬಂಧಿಸಿದ್ದು ಎಂಬ ನಂಬಿಕೆಯೇ ಇದೆ. ನಿಮ್ಮ ದೃಷ್ಟಿಯಲ್ಲಿ ಗ್ಲ್ಯಾಮರ್‌ ಅಂದರೆ ಏನು?

ನಿಜ. ಚಿತ್ರರಂಗದ ದೃಷ್ಟಿಯಲ್ಲಿ ದೇಹಪ್ರದರ್ಶನವೇ ಗ್ಲ್ಯಾಮರ್‌. ಅವರ ಪ್ರಕಾರ ನಾನು ಸೀರೆ ಉಟ್ಟುಕೊಂಡರೆ ಗ್ಲ್ಯಾಮರಸ್‌ ಅಲ್ಲ. ಗ್ಲ್ಯಾಮರಸ್‌ ಎಂಬ ಶಬ್ದದ ಅರ್ಥ ಏನು ಎಂದು ಗೊತ್ತಿಲ್ಲದೆಯೇ ನಾವು ಆ ಶಬ್ದವನ್ನು ಬಳಸುತ್ತಿರುತ್ತೇವೆ. ಗ್ಲ್ಯಾಮರಸ್‌ ಎಂಬ ಶಬ್ದಕ್ಕೂ  ವ್ಯಕ್ತಿತ್ವಕ್ಕೂ ಸಂಬಂಧವೇ ಇಲ್ಲ ಎನ್ನುವ ಹಾಗೆ ಆ ಶಬ್ದವನ್ನು ಬಳಸುತ್ತಿದ್ದೇವೆ.

ನನ್ನ ಪ್ರಕಾರ ಗ್ಲ್ಯಾಮರ್‌ ಎನ್ನುವುದು ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು. ಸರಳವಾದ ಕಾಟನ್‌ ಸೀರೆ ಉಟ್ಟುಕೊಂಡು, ಕಣ್ಣಿಗೆ ಕಾಜಲ್‌ ಹಚ್ಚಿಕೊಂಡು, ಕೂದಲನ್ನು ಕಟ್ಟಿಕೊಂಡರೆ ಅದು ಗ್ಲ್ಯಾಮರಸ್‌ ಆಗಿಯೇ ಇರುತ್ತದೆ. ನಾನೊಂದು ಸ್ಥಳವನ್ನು ಪ್ರವೇಶಿಸಿದಾಗ ಜನರೆಲ್ಲ ನನ್ನನ್ನು ನೋಡುತ್ತಾರೆ ಎಂಬ ವಿಶ್ವಾಸವೇ ಗ್ಲ್ಯಾಮರ್‌. ದೇಹಪ್ರದರ್ಶನ ಮಾಡಿ ಗಮನಸೆಳೆಯುವುದು ದೊಡ್ಡ ಮಾತೇ ಅಲ್ಲ. ಆದರೆ ಅದನ್ನು ಬಿಟ್ಟು ವ್ಯಕ್ತಿತ್ವದಿಂದ ಗಮನ ಸೆಳೆಯುವುದಿದೆಯಲ್ಲ, ಅದು ನನ್ನ ಪಾಲಿನ ನಿಜವಾದ ಗ್ಲ್ಯಾಮರ್‌. 

ಹಾಗಂತ ನಾನು ಎಕ್ಸ್‌ಪೋಸ್‌ ಮಾಡುವುದನ್ನು ವಿರೋಧಿಸುವುದಿಲ್ಲ. ನಿಮಗೆ ಕಂಫರ್ಟ್‌ ಅನಿಸಿದರೆ ಎಕ್ಸ್‌ಪೋಸ್‌ ಅನ್ನುವುದು ಸರಿಯೇ. ಜನ ಹೇಳ್ತಾರೆ ಅಂತ ನಾವು ನಮ್ಮ ಉಡುಗೆ ತೊಡುಗೆಯನ್ನು ಬದಲಾಯಿಸಿಕೊಳ್ಳಬೇಕಿಲ್ಲ. ನಿಮಗೆ ಶಾರ್ಟ್‌ ಡ್ರೆಸ್‌ ಹಾಕಿಕೊಳ್ಳಬೇಕು ಎಂದು ಅನಿಸಿದರೆ ಧರಿಸಿ ಅಷ್ಟೆ. ಯಾರಿಗೂ ನಿಮ್ಮನ್ನು ತಡೆಯುವ ಅಧಿಕಾರ ಇಲ್ಲ. ನನ್ನ ಪೋಷಕರು ನನ್ನನ್ನು ಯಾವತ್ತೂ ಈ ವಿಷಯದಲ್ಲಿ ನಿರ್ಬಂಧಿಸಿಲ್ಲ. ನಾನು ಯಾರನ್ನೂ ನಿರ್ಬಂಧಿಸಿಲ್ಲ. ಹೆಣ್ಣು ತೊಡುವ ಬಟ್ಟೆಗಳಿಂದ ಅವಳ ಮೇಲೆ ಅತ್ಯಾಚಾರಗಳಾಗುತ್ತವೆ ಎನ್ನುವುದೆಲ್ಲ ದೊಡ್ಡ ಮಿಥ್‌ ಅಷ್ಟೆ. 

ಇಂದಿನ ಆಧುನಿಕ ಹೆಣ್ಣಿಗೆ ಎರಡು ರೀತಿಯ ದ್ವಂದ್ವಗಳಿವೆ. ಒಂದು ಸಾಂಪ್ರದಾಯಿಕ ಹೇರಿಕೆಗಳನ್ನು ನಿರಾಕರಿಸುವುದು; ಅದೇ ಸಮಯದಲ್ಲಿ ತಮ್ಮ ನಿಜವಾದ ಸಂತೋಷ, ತೃಪ್ತಿ ಯಾವುದರಲ್ಲಿದೆ ಎಂದು ಕಂಡುಕೊಳ್ಳುವುದು. ಸಮಾಜದ ಕಟ್ಟಳೆಗೆ ಒಳಗಾಗದೇ ತನ್ನ ವ್ಯಕ್ತಿತ್ವ ಹೇಗಿದೆಯೋ ಹಾಗೆಯೇ ತೋರಿಸಿಕೊಳ್ಳುವ ಸವಾಲನ್ನು ಹೇಗೆ ನಿಭಾಯಿಸಿಕೊಳ್ಳಬಹುದು? 

ಆ ಥರದ ನಿರ್ಬಂಧಗಳು ಮನೆಯಿಂದಲೇ ಬಂದರೆ ಒಂದು ವಯಸ್ಸಿನವರೆಗೆ ಯಾರೂ ಏನೂ ಮಾಡುವುದಕ್ಕಾಗುವುದಿಲ್ಲ. ಯಾಕೆಂದರೆ ಅವರು ಕುಟುಂಬದ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ ಎಷ್ಟೋ ಸಲ ಅವರು ಇಂಡಿಪೆಂಡೆಂಟ್‌ ಆಗಿರುತ್ತಾರೆ; ಆದರೂ ‘ಅಮ್ಮನನ್ನು ಕೇಳಿ ಬರಬೇಕು’, ‘ಅಪ್ಪ ಬೇಡ ಅಂದ್ಬಿಟ್ರು’, ‘ನಂಗೆ ಬೇಗ ಬರೋಕೆ ಹೇಳಿದಾರೆ’, ‘ಆರು ಗಂಟೆಗೆ ಮೊದಲೇ ನಾನು ಮನೆಗೆ ಹೋಗ್ಬೇಕು’ ಹೀಗೆಲ್ಲ ಹೇಳುವುದನ್ನು ನನಗಂತೂ ಅರಗಿಸಿಕೊಳ್ಳೋಕೆ ಆಗಲ್ಲ. ಸ್ಟು‍ಪಿಡ್‌ ಅನಿಸುತ್ತದೆ. ಆದರೆ ಅವರ ಮನೆಯಲ್ಲಿ ಬಟ್ಟೆಗಳ ಮೇಲೆ, ವರ್ತನೆಗಳ ಮೇಲೆ ಇರುವ ನಿರ್ಬಂಧಗಳ ಕುರಿತು ನಾನು ಟೀಕೆ ಮಾಡಕ್ಕೆ ಆಗಲ್ಲ. ಅದು ಅವರ ವೈಯಕ್ತಿಕ ಬದುಕು.

ಆದರೆ, ನಾನು ಏನು ಬಟ್ಟೆ ಹಾಕಬೇಕು, ಏನು ತಿನ್ನಬೇಕು, ಯಾರನ್ನು ಪ್ರೀತಿ ಮಾಡಬೇಕು... ಇವೆಲ್ಲವೂ ತುಂಬ ವೈಯಕ್ತಿಕವಾದದ್ದು. ನಾನು ಹುಡುಗನನ್ನು ಪ್ರೀತಿಸಬಹುದು, ಹುಡುಗಿಯನ್ನೇ ಪ್ರೀತಿಸಬಹುದು, ಅದನ್ನು ಪ್ರಶ್ನಿಸುವ ಅಧಿಕಾರ ಯಾರೆಂದರೆ ಯಾರಿಗೂ ಇಲ್ಲ. ನಾನು ಯಾವುದೇ ಜಾತಿ ಇರಲಿ, ಯಾವುದೇ ದಿನ ಇರಲಿ, ಏನು ಬೇಕಾದರೂ ತಿಂತೀನಿ. ನನ್ನನ್ನು ತಡೆಯುವ ಅಧಿಕಾರ ಈ ಜಗತ್ತಿನ ಯಾರಿಗೂ ಇಲ್ಲ. ಹಾಗೆಯೇ ಯಾವ ಬಟ್ಟೆ ಹಾಕ್ಕೋಬೇಕು, ಹೇಗೆ ಕಾಣಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಹಕ್ಕನ್ನು ನಾನು ನನ್ನ ಕುಟುಂಬದವರಿಗಾಗಲಿ, ನೆರೆಹೊರೆಯವರಿಗಾಗಲಿ ಕೊಟ್ಟಿಲ್ಲ. ಅದು ನನ್ನಿಷ್ಟ. 

ಈ ಮನಸ್ಥಿತಿಯನ್ನು ಎಲ್ಲ ಹೆಣ್ಣುಮಕ್ಕಳೂ ಬೆಳೆಸಿಕೊಳ್ಳಬೇಕು. ಇಲ್ಲಾಂದ್ರೆ ಬೇರೆಯವರೇ ನಮ್ಮ ಬದುಕನ್ನು ಸಂಪೂರ್ಣವಾಗಿ ನಿಯಂತ್ರಿಸಿಬಿಡುತ್ತಾರೆ.

ಮಾಡರ್ನಿಸಮ್‌ ಎನ್ನುವುದು ವ್ಯಕ್ತಿಸ್ವಾತಂತ್ರ್ಯದ ವೇದಿಕೆ ಎಂಬ ವ್ಯಾಖ್ಯಾನ ನಮ್ಮಲ್ಲಿದೆ. ಆದರೆ ಮಾಡರ್ನಿಸಮ್‌ ಎನ್ನುವುದು ಹೆಣ್ಣಿಗೆ ನಿಜವಾಗಿಯೂ ಹೆಣ್ಣಿಗೆ ಸ್ವಾತಂತ್ರ್ಯವನ್ನು ಕೊಟ್ಟಿದೆ ಅನಿಸುತ್ತದಾ ಅಥವಾ ಅದಕ್ಕಿರುವ ಮಿತಿಗಳಲ್ಲಿ ಹೊಸ ಪರಿವೇಷಗಳಲ್ಲಿ ಹಳೆಯ ಸಂಕೋಲೆಗಳೇ ಅವಳನ್ನು ಕಟ್ಟಿಹಾಕುತ್ತಿವೆಯಾ?

ಆಧುನಿಕತೆ ಎನ್ನುವುದು ಜೀವನಶೈಲಿಗೆ ಸಂಬಂಧಿಸಿದ್ದಲ್ಲ. ಅದು ಆಲೋಚನೆಗಳಿಗೆ ಸಂಬಂಧಿಸಿದ್ದು. ಪ್ರಗತಿಪರ ಆಲೋಚನೆಗಳಿಗೆ ಸಂಬಂಧಿಸಿದ್ದು. ನನ್ನ ಅಮ್ಮಮ್ಮ (ಅಜ್ಜಿ) 1930ರಲ್ಲಿ ಹುಟ್ಟಿದವರು. ಈಗ ಅವರಿಲ್ಲ. ಹದಿನಾರು ಹದಿನೇಳು ವರ್ಷಕ್ಕೇ ಮದುವೆಯಾದರು. ಆದರೆ ಅವರು ಎಷ್ಟು ಮಾಡರ್ನ್‌ ಆಗಿ ಬದುಕಿದ್ದರು ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ.

ಹೆಣ್ಣುಮಕ್ಕಳು ಮುಟ್ಟಾಗುತ್ತಾರಲ್ಲಾ, ಆಗ ಅಡುಗೆ ಮನೆಗೆ ಹೋಗುವ ಹಾಗಿಲ್ಲ. ದೇವರ ಮನೆಗೆ ಹೋಗುವ ಹಾಗಿಲ್ಲ. ದೇವಸ್ಥಾನಕ್ಕೆ ಹೋಗುವ ಹಾಗಿಲ್ಲ. ಹೀಗೆ ಹಲವು ನಿರ್ಬಂಧಗಳು ಇರುತ್ತಿದ್ದವು. ಈಗಲೂ ಅವು ಇವೆ. ಆದರೆ ನಮ್ಮ ಅಮ್ಮ ಆ ಕಾಲದಲ್ಲಿಯೇ ‘ಇದೆಲ್ಲ ಹಳೆಯ ಕಾಲದ ನಂಬಿಕೆ. ನೀವು ಅದನ್ನೆಲ್ಲ ನಂಬಲಿಕ್ಕೆ ಹೋಗಬೇಡಿ’ ಎಂದು ಹೇಳುತ್ತಿದ್ದರಂತೆ. ಅವರೇನೂ ಪದವಿಧರೆ ಅಲ್ಲ, ಆದರೆ ಅವರ ಆಲೋಚನೆ ಎಷ್ಟು ಆಧುನಿಕವಾಗಿತ್ತು, ಪ್ರಗತಿಪರವಾಗಿತ್ತು ನೋಡಿ. ರಾತ್ರಿ ಹೊತ್ತು ಉಗುರು ಕತ್ತರಿಸಿದರೆ ದೌರ್ಭಾಗ್ಯ ಬರತ್ತದೆ ಎಂಬ ನಂಬಿಕೆ ಇದೆಯಲ್ಲ. ಅದರ ಕುರಿತೂ ಅವರು ‘ಹಳೆಯ ಕಾಲದಲ್ಲಿ ಬೆಳಕು ಇರುತ್ತಿರಲಿಲ್ಲ. ಹಾಗಾಗಿ ಉಗುರು ಕತ್ತರಿಸುವಾಗ ಬೆರಳು ಕತ್ತರಿಸಿಹೋಗಬಹುದೇನೋ ಎಂಬ ಕಾರಣಕ್ಕೆ ಅಂಥದ್ದೊಂದು ನಂಬಿಕೆ ಹುಟ್ಟುಹಾಕಿದ್ದರು. ಆದರೆ ಈಗ ನೂರು ವೋಲ್ಟ್‌ ಬಲ್ಬ್‌ ಇದ್ಯಲ್ಲ. ಯಾಕೆ ಉಗುರು ಕತ್ತರಿಸಿಕೊಳ್ಳಬಾರದು?’ ಎಂದು ಪ್ರಶ್ನಿಸುತ್ತಿದ್ದರು. ಅವರು ಯಾವಾಗಲೂ ಹಳೆಯ ಆಲೋಚನೆಗಳನ್ನು ನಂಬಿಕೆಗಳನ್ನು ಹೀಗೆಯೇ ಪ್ರಶ್ನಿಸುತ್ತಿದ್ದರು. ಅವರು ನನ್ನ ದೊಡ್ಡ ಸ್ಫೂರ್ತಿ. 

ನನ್ನಮ್ಮ ಬೆಳೆದಿದ್ದು ಸ್ವಲ್ಪ ಸಾಂಪ್ರದಾಯಿಕ ಮನೆತನದಲ್ಲಿ. ನಾನು ಹುಟ್ಟಿದಾಗ ಅವರಿಗೆ ಎರಡು ಆಯ್ಕೆಗಳು ಇದ್ದವು. ಒಂದು, ಅವರು ಬೆಳೆದ ರೀತಿಯಲ್ಲಿಯೇ ಸಾಂಪ್ರದಾಯಿಕ ನಿರ್ಬಂಧಗಳಲ್ಲಿಯೇ ಬೆಳೆಸುವುದು; ಇನ್ನೊಂದು, ಅದಕ್ಕೆ ವಿರುದ್ಧವಾಗಿ ಅವರಿಗೆ ಸ್ವಾತಂತ್ರ್ಯ ನೀಡಿ ಸ್ವಾವಲಂಬಿಗಳಾಗಿ ಬೆಳೆಸುವುದು. ಅವಳು ಎರಡನೇ ಆಯ್ಕೆ ಆಯ್ದುಕೊಂಡಳು. ಎಲ್ಲ ಪೋಷಕರಿಗೆ, ಅಮ್ಮಂದಿರಿಗೆ ಈ ಆಯ್ಕೆಗಳಿರುತ್ತವೆ. ಅದರಲ್ಲಿ ಯಾವುದನ್ನು ಆಯ್ದುಕೊಳ್ಳುತ್ತಾರೆ ಎನ್ನುವುದು ಮಕ್ಕಳ ವ್ಯಕ್ತಿತ್ವವನ್ನು, ಬದುಕನ್ನು ರೂಪಿಸುತ್ತದೆ.

ಇಂದು ಸಿನಿಮಾ‌ಕ್ಷೇತ್ರವೂ ಸೇರಿದಂತೆ ಇಡೀ ಸಮಾಜದಲ್ಲಿ ಬೌದ್ಧಿಕತೆಯನ್ನು, ಬುದ್ಧಿಜೀವಿಗಳನ್ನು ದ್ವೇಷಿಸುವ, ಅವರು ನಮ್ಮ ಸಮಾಜಕ್ಕೆ ಬೇಕಾಗಿಲ್ಲ ಎಂಬ ಮನೋಭಾವ ವ್ಯಾಪಕವಾಗುತ್ತಿದೆಯಲ್ಲವೇ? ಈ ಕುರಿತು ನಿಮ್ಮ ಅಭಿಪ್ರಾಯ ಏನು?

ಹಿಂದಿನ ಕಾಲದಲ್ಲಿ ಚಿಂತಕರಿಗೆ ಸಾಕಷ್ಟು ಮಹತ್ವ ಇತ್ತು. ತತ್ವಜ್ಞಾನಿಗಳ, ವಿಷಯತಜ್ಞರ ಮಾತಿಗೆ ಸಮಾಜದಲ್ಲಿ ಸಾಕಷ್ಟು ಬೆಲೆ ಇತ್ತು. ಈಗ ನಮಗೆ ಹುಟ್ಟಿನಿಂದಲೇ ಬದುಕು ಸುಲಭವಾಗಿಬಿಟ್ಟಿದೆ. ಅಂದೆರ ಸೆಟ್‌ ಆಗಿಬಿಟ್ಟಿದೆ. ಹಾಗಾಗಿ ನಾವು ಯೋಚಿಸುವುದನ್ನೇ ನಿಲ್ಲಿಸಿಬಿಟ್ಟಿದ್ದೇವೆ. ಯಾರಾದ್ರೂ ಯಾವುದಾದರೂ ವಿಷಯದ ಬಗ್ಗೆ ಸ್ವಲ್ಪ ಜಾಸ್ತಿ ಯೋಚಿಸುತ್ತಾರೆ, ಮಾತನಾಡುತ್ತಾರೆ ಎಂದಾಕ್ಷಣ ಅವರನ್ನು ‘ಬುದ್ಧಿಜೀವಿ’ ಎಂದು ಹಣೆಪಟ್ಟಿ ಹಚ್ಚಿ ಬ್ಯಾನ್‌ ಮಾಡಿಬಿಡುತ್ತೇವೆ. ಅವರನ್ನು ಟಾರ್ಗೆಟ್‌ ಮಾಡಿ ಬುದ್ಧಿಜೀವಿಗಳನ್ನು ಬೈಗುಳ ಎನ್ನುವ ರೀತಿ ಬಳಸುತ್ತಿದ್ದೇವೆ.

ಅಂತರ್ಜಾಲ, ಸೋಷಿಯಲ್‌ ಮೀಡಿಯಾ ಇವೆಲ್ಲ ಒಳ್ಳೆಯ ವೇದಿಕೆಗಳು. ಆದರೆ ಇವುಗಳಿಂದ ಕೆಟ್ಟದ್ದೂ ಅಷ್ಟೇ ಆಗುತ್ತಿದೆ. ಮನುಷ್ಯ ಮನುಷ್ಯರ ನಡುವಿನ ದ್ವೇಷ ಇದೆಯಲ್ಲ, ಅದು ಜಾಸ್ತಿಯಾಗಿದೆ. ಬಾಯಿಗೆ ಬಂದಹಾಗೆಯೇ ಟೈಪ್‌ ಮಾಡಿ ಕಮೆಂಟ್ ಮಾಡ್ತಾರೆ. ಇಂಟರ್‌ನೆಟ್‌ ಎನ್ನುವುದು ಮೂರ್ಖರ ಆಟದ ಮೈದಾನವಾಗಿಬಿಟ್ಟಿದೆ. 

ಏನೋ ಟ್ವೀಟ್‌ ಮಾಡಿದರೆ ಸಾಕು ‘ಓ.. ಬಂದ್ಬಿಟ್ಳು. ಫೆಮಿನಿಸ್ಟ್‌’ ಅನ್ನಲು ಶುರುಮಾಡ್ತಾರೆ. ‘ಪ್ರತಿಯೊಬ್ಬ ಗಂಡಸೂ ಕೆಟ್ಟವರಾಗಿರ್ತಾರಾ?’ ಎನ್ನಲು ಶುರುಮಾಡ್ತಾರೆ. ಅವರಿಗೆ ಫೆಮಿನಿಸ್ಟ್‌ ಶಬ್ದದ ಅರ್ಥ ಗೊತ್ತಿಲ್ಲ. ನಾನು ಯಾವ ಉದ್ದೇಶದಿಂದ ಟ್ವೀಟ್‌ ಮಾಡಿದ್ದೀನಿ ಗೊತ್ತಿಲ್ಲ. ಒಬ್ಬಳು ಹೆಣ್ಣುಮಗಳು ಯೋಚಿಸುತ್ತಾಳೆ, ತನ್ನ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಾಳೆ ಎನ್ನುವುದೇ ಅವರಿಗೆ ಸಹಿಸಲಿಕ್ಕೆ ಅಸಾಧ್ಯವಾಗಿ ಕಾಣಿಸುತ್ತದೆ. 

ಈಗ ಆರೋಗ್ಯಕರ ಸಂವಾದಕ್ಕೆ ವೇದಿಕೆಗಳೇ ಇಲ್ಲ. ಲೆಫ್ಟಿಸ್ಟ್‌, ರೈಟಿಸ್ಟ್‌, ಫೆಮಿನಿಸ್ಟ್‌, ನಮ್ಮ ದೇಶ ಬಿಟ್ಬಿಡಿ... ಹೀಗೆ ದ್ವೇಷಮಯ ಎರಚಾಟಗಳೇ ಎಲ್ಲ. ತುಂಬ ವಿಚಿತ್ರವೆನಿಸುತ್ತದೆ ಇದು. ‘ಎಲ್ಲ ಮನುಷ್ಯನೊಳಗೂ ಒಬ್ಬ ಕ್ರೂರ ಪ್ರಾಣಿ ಇರುತ್ತದೆ. ಅವಕಾಶ ಸಿಕ್ಕಾಗ ಹೊರಗೆ ಬರುತ್ತದೆ’ ಎಂಬ ಮಾತಿದೆಯಲ್ಲವೇ? ಇಂಟರ್ನೆಟ್‌ ಮನುಷ್ಯನೊಳಗಿನ ಆ ಪ್ರಾಣಿಗಳು ಹೊರಗೆ ಬರಲು ಅವಕಾಶ ಕೊಟ್ಟಿದೆ. 

ಮುಖಮರೆಸಿಕೊಂಡು ಮಾತನಾಡುವುದು ತುಂಬ ಸುಲಭ. ಅನಾಮಿಕತೆಯಲ್ಲಿಯಷ್ಟೇ ಹುಟ್ಟಿಕೊಳ್ಳುವ ಕ್ರೌರ್ಯ ಅದು. ವಾಸ್ತವ ಜಗತ್ತಿನಲ್ಲಿ ಯಾರೂ ಹಾಗಿರುವುದಿಲ್ಲ. ನನ್ನನ್ನು ಟ್ವಿಟರ್‌ನಲ್ಲಿ ಬೈಯುವ ಎಷ್ಟೋ ಜನರಿಗೆ ನನ್ನ ಮುಖದೆದುರು ಬಂದು ಹೇಳುವ ಧೈರ್ಯ ಇಲ್ಲ. ವರ್ಚುವಲ್‌ ಜಗತ್ತು ಸೃಷ್ಟಿಸಿರುವ ವಿಕೃತಿ ಅದು. 

 

 

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !