ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರುತಿ ಹರಿಹರನ್ #MeToo ಪತ್ರ: ಸಮಯ ಈಗ ಬಂದಿದೆ!

Last Updated 20 ಅಕ್ಟೋಬರ್ 2018, 8:58 IST
ಅಕ್ಷರ ಗಾತ್ರ

‘ಮೀ ಟೂ’ ಆಂದೋಲನವು ನನ್ನಂಥ ಅನೇಕರಿಗೆ ಅಹಿತಕರವಾದ ಸತ್ಯವನ್ನು ಹಂಚಿಕೊಳ್ಳುವ ಅನುಕೂಲಕರ ವಾತಾವರಣವನ್ನು ಕಲ್ಪಿಸಿದೆ. ತಾವು ಹಿಂದೆಂದೋ ಅನುಭವಿಸಿದ ಲೈಂಗಿಕ ದೌರ್ಜನ್ಯದ ಕಥೆಗಳನ್ನು ಜಗತ್ತಿನ ಎದುರು ತೆರೆದಿಡುವ ಧೈರ್ಯವನ್ನು ಸಂತ್ರಸ್ತರಿಗೆ ಒದಗಿಸಿರುವ ಆಂದೋಲನ ಇದು. ಲೈಂಗಿಕ ಹಿಂಸೆ ಅನುಭವಿಸಿದವರು ‘ಪಕ್ಕಾ ಸಂತ್ರಸ್ತೆ’ ಎನ್ನುವುದಕ್ಕೆ ಮೂರ್ತರೂಪ ಕೊಡಲಾಗದೆ, ಅದನ್ನು ಹೇಳಿಕೊಳ್ಳಲು ಹಿಂಜರಿಯುವುದೇ ಹೆಚ್ಚು. ಅಧಿಕಾರದ ಮದ ಹಾಗೂ ವಿಶೇಷಗೌರವದ ಪ್ರಭಾವಳಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ದುಷ್ಕರ್ಮಿಯ ಹೆಸರನ್ನು ಪ್ರತಿ ಸಲವೂ ಬಯಲಿಗೆಳೆದಾಗ, ಅಂಥವರ ನೆರಳಿನಲ್ಲಿ ದೂಷಣೆಗೆ ಒಳಗಾಗುತ್ತಾ ಯಾತನೆ ಪಡುತ್ತಿರಬಹುದಾದ ಇನ್ನಷ್ಟು ಹುಡುಗಿಯರನ್ನು ರಕ್ಷಿಸಿದಂತೆ ಆಗುತ್ತದೆ. ಸದ್ಯಕ್ಕೆ #metoo ಮೂಲಕ ವಿಶ್ವದಾದ್ಯಂತ ಹೊಮ್ಮುತ್ತಿರುವ ದನಿಗಳು, ಅಧಿಕಾರದರ್ಪದಿಂದ ದೀರ್ಘ ಕಾಲ ಹಿಂಸೆ ಅನುಭವಿಸಿದವರ ಬಿಸಿಯುಸಿರನ್ನು ದಮನ ಮಾಡುತ್ತಾ ಬಂದಿರುವ ವ್ಯವಸ್ಥೆಯ ವಿರುದ್ಧ ಮಾತನಾಡಲು ನನ್ನಂಥವರಿಗೆ ನೆರವಾಗಿವೆ.

#metoo ಆಂದೋಲನವು ಸಾಮಾಜಿಕ ಜಾಲತಾಣದ ಅತಿ ಪರಿಣಾಮಕಾರಿ ಬಳಕೆಗೆ ಸಾಕ್ಷಿಯಾಗಿದ್ದು, ಪುರುಷಪ್ರಧಾನ, ಲಿಂಗ ತಾರತಮ್ಯದ ಹಾಗೂ ಮಹಿಳೆಯರನ್ನು ಕೆಟ್ಟದಾಗಿ ನೋಡುವ ಸಮಾಜಘಾತುಕ ಶಕ್ತಿಗಳನ್ನು ತೊಳೆದುಹಾಕುವ ಉತ್ತಮ ಪ್ರಯತ್ನವಾಗಿದೆ ಎಂದೇ ನಾನು ನಂಬಿದ್ದೇನೆ.

ಈ ಪೀಠಿಕೆಯ ನಂತರ ನನ್ನ ಮೌನವನ್ನು ಮುರಿಯುವ ಸಮಯ ಬಂದಿದೆ.

ನಾನು ಕೂಡ ಬೆಳೆಯುತ್ತಾ ಬಂದಂತೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಅನುಭವಿಸಿದ್ದೇನೆ. ಬಹುತೇಕ ಮಹಿಳೆಯರಿಗೆ ಇಂಥ ಅನುಭವಗಳು ಆಗಿಯೇ ಇರುತ್ತವೆ ಎಂದೂ ಸ್ಪಷ್ಟವಾಗಿ ಹೇಳಬಲ್ಲೆ. ನಾವು ವ್ಯವಹರಿಸುವ ಸಾಮಾಜಿಕ ಹಾಗೂ ವೃತ್ತಿಪರ ವಾತಾವರಣದಲ್ಲಿ ಎದುರಾಗುವ ಅಶ್ಲೀಲ ಅಥವಾ ಅನಗತ್ಯ ಲೈಂಗಿಕ ನಡೆ-ನುಡಿಗಳು ಮುಜುಗರ ಉಂಟುಮಾಡಿರಲಿಕ್ಕೂ ಸಾಕು. ಕೆಲವು ಸಲ ಭಯವೂ ಆಗಿರುತ್ತದೆನ್ನಿ.

ನಾನು ಮೊದ ಮೊದಲು ಸಿನಿಮಾಗಳಲ್ಲಿ ಕೆಲಸ ಮಾಡಲಾರಂಭಿಸಿದಾಗ, ಹೊಸದಾಗಿ ಏನನ್ನಾದರೂ ಕಲಿಯಬೇಕು ಹಾಗೂ ಸವಾಲುಗಳನ್ನು ಎದುರಿಸಬೇಕು ಎಂದುಕೊಂಡಿದ್ದೆ. ವೃತ್ತಿಪರ ಹಾಗೂ ಸನ್ನಡತೆಯ ವಾತಾವರಣದಲ್ಲಿ ಅದು ಸಾಧ್ಯವೆಂದೇ ಭಾವಿಸಿದ್ದೆ. ಇವತ್ತು ನಾನು ಯಾವ ಉದ್ಯಮದಲ್ಲಿ ಕೆಲಸ ಮಾಡುತ್ತಿರುವೆನೋ ಅದಕ್ಕೆ ಕಳಂಕ ತರುತ್ತಿರುವವರ ವಿಚಾರ ಬರೆಯುತ್ತಿದ್ದೇನೆ. ನನ್ನ ಕನಸುಗಳನ್ನು ನನಸಾಗಿಸಿಕೊಳ್ಳಲು, ಸಾಮರ್ಥ್ಯವನ್ನು ಒರೆಗೆಹಚ್ಚಿ ನೋಡಲು ಹಾಗೂ ಅನನ್ಯತೆ ಉಳಿಸಿಕೊಳ್ಳಲು ನೆರವಾದ ಉದ್ಯಮವಿದು. ಆದರೆ, ಇಲ್ಲಿ ನನಗೆ ಅಸುರಕ್ಷೆ ಕಾಡಿದೆ, ಅದು ಅನೇಕ ಸಂದರ್ಭಗಳಲ್ಲಿ ಮನಸ್ಸನ್ನು ಕದಡಿದೆ ಎಂದು ಭಾರದ ಹೃದಯ ಹೊತ್ತು ಹೇಳಿಕೊಳ್ಳಬೇಕಾಗಿದೆ.

‘ಪಾತ್ರಕ್ಕಾಗಿ ಪಲ್ಲಂಗ’-ಇದು ಸಿನಿಮಾ ಉದ್ಯಮದಲ್ಲಿ ಅತಿ ಸಾಮಾನ್ಯ ಎನ್ನುವಂತೆ ನಡೆಯುತ್ತಿರುವ ದೌರ್ಜನ್ಯ. ಪಾತ್ರ ಪಡೆಯಲು ಜತೆಗೆ ಮಲಗಬೇಕು ಎನ್ನುವ ಈ ನಡೆಯು, ಅದಕ್ಕೆ ವಿರೋಧಿಸುವವರನ್ನು ಅವಕಾಶವಂಚಿತರನ್ನಾಗಿಸುತ್ತಿರುವುದೂ ನಿಜ. ‘ಒಪ್ಪಿಕೋ… ಇಲ್ಲವಾದರೆ ಬೇರೆಯವರು ಅದಕ್ಕೆ ರೆಡಿ ಇರುತ್ತಾರೆ’ ಎಂದು ಹೇಳುವಂಥ ಕತ್ತಲ ಕಥನಗಳು ಇಲ್ಲಿವೆ.

ನಾನು ಇಂಥ ದೈಹಿಕ, ಮಾನಸಿಕ ಯಾತನಾ ಪರಿಸ್ಥಿತಿಗಳಿಂದ ಪಾರಾಗುವುದರಲ್ಲಿ ಯಶಸ್ವಿಯಾಗಿದ್ದೇನೆ ಎಂದು ಪ್ರಾಮಾಣಿಕವಾಗಿ ಹೇಳುತ್ತೇನೆ. ಹೀಗಿದ್ದೂ, 2016ರ ಕೊನೆಯ ಭಾಗದಲ್ಲಿ ನಡೆದ ಒಂದು ಘಟನೆ ನನ್ನನ್ನು ಕಳವಳಗೊಳಿಸಿತು. ಅದರಿಂದ ಹೊರಬರಲು ನನಗೆ ಹೆಚ್ಚೇ ಸಮಯ ಬೇಕಾಯಿತು.

ದ್ವಿಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದ ಚಿತ್ರವೊಂದರ ಚಿತ್ರೀಕರಣದಲ್ಲಿದ್ದಾಗ ನಡೆದ ಘಟನೆ ಅದು. ಅರ್ಜುನ್ ಸರ್ಜಾ ಆ ಚಿತ್ರದ ನಾಯಕ. ಅವರ ಚಿತ್ರಗಳನ್ನು ನೋಡಿಕೊಂಡೇ ಬೆಳೆದವಳು ನಾನು. ಅಂಥವರ ಜತೆಗೆ ನಟಿಸಲು ಅವಕಾಶ ಸಿಕ್ಕಿದ್ದು ನನಗೆ ನಿಜಕ್ಕೂ ಖುಷಿಕೊಟ್ಟಿತ್ತು. ಚಿತ್ರೀಕರಣದ ಆರಂಭದ ಕೆಲವು ದಿನಗಳು ಎಲ್ಲವೂ ಸಹಜವಾಗಿಯೇ ಇದ್ದವು. ನಾನು ಅರ್ಜುನ್‌ ಸರ್ಜಾ ಅವರ ಪತ್ನಿಯ ಪಾತ್ರದಲ್ಲಿ ನಟಿಸುತ್ತಿದ್ದೆ. ಅವತ್ತು ನಾವು ಪ್ರಣಯದ ಸನ್ನಿವೇಶವೊಂದರಲ್ಲಿ ನಟಿಸಬೇಕಾಗಿತ್ತು. ಆ ದೃಶ್ಯದಲ್ಲಿ ನಮ್ಮ ನಡುವೆ ಕೆಲವು ಸಂಭಾಷಣೆಗಳು ನಡೆಯುತ್ತವೆ. ನಂತರ ನಾವು ತಬ್ಬಿಕೊಳ್ಳಬೇಕಿತ್ತು. ಈ ದೃಶ್ಯದ ತಾಲೀಮಿನ ಸಂದರ್ಭದಲ್ಲಿ ನಮ್ಮ ನಡುವಿನ ಸಂಭಾಷಣೆಯ ನಂತರ ಅರ್ಜುನ್‌ ನನ್ನನ್ನು ತಬ್ಬಿಕೊಂಡರು. ಯಾವ ಮುನ್ನೆಚ್ಚರಿಕೆ ನೀಡದೆ, ಅನುಮತಿಯನ್ನೂ ಪಡೆದುಕೊಳ್ಳದೆ ಅವರು ತಮ್ಮ ಕೈಗಳನ್ನು ನನ್ನ ಬೆನ್ನಲ್ಲಿ ಮೇಲಿಂದ ಕೆಳಗೆ ಸವರತೊಡಗಿದರು. ಮತ್ತೆ ನನ್ನ ದೇಹವನ್ನು ಇನ್ನಷ್ಟು ಹತ್ತಿರಕ್ಕೆ ಎಳೆದು ಬಿಗಿಯಾಗಿ ಹಿಡಿದುಕೊಂಡು ನಿರ್ದೇಶಕರ ಬಳಿ ‘ನಾವು ಮುಂದಿನ ದೃಶ್ಯಗಳಲ್ಲಿ ಈ ಐಡಿಯಾ ಬಳಸಿಕೊಳ್ಳಬಹುದಲ್ಲವೇ?’ ಎಂದು ಕೇಳಿದರು.

ನಾನಾಗಲೇ ಗಾಬರಿಗೊಂಡಿದ್ದೆ. ಸಿನಿಮಾದ ದೃಶ್ಯಗಳು ವಾಸ್ತವಕ್ಕೆ ಹತ್ತಿರವಾಗಬೇಕು ಎಂಬುದು ನನ್ನ ಅಭಿಪ್ರಾಯವೂ ಹೌದು. ಆದರೆ ಈಗ ಅರ್ಜುನ್ ಮಾಡುತ್ತಿರುವುದು ತಪ್ಪು ಎಂದು ಅನಿಸಿತ್ತು. ಅವರ ಧೋರಣೆ ವೃತ್ತಿಪರವಾಗಿರಲಿಲ್ಲ. ಆ ಕ್ಷಣಕ್ಕೆ ನನಗೆ ಅವರ ವರ್ತನೆಯ ಕುರಿತು ಕೋಪ ಬಂತಾದರೂ ಏನು ಹೇಳಬೇಕೋ ಎಂದು ತಿಳಿಯಲಿಲ್ಲ. ಅರ್ಜುನ್‌ ವರ್ತನೆಯಿಂದ ನನನಗೆಷ್ಟು ಕೋಪ ಬಂತು ಅಂದರೆ ಅವರಿಗೆ ಏನು ಹೇಳಬೇಕು ಎಂಬುದೇ ತಿಳಿಯಲಿಲ್ಲ.

ಕ್ಯಾಮೆರಾ ಎದುರಿಗೆ ಹೋಗಿ ಚಿತ್ರೀಕರಣ ಮಾಡಿಕೊಳ್ಳುವುದಕ್ಕೂ ಮುನ್ನ ತಾಲೀಮು ಮಾಡಲಾಗುತ್ತದೆ. ಸ್ಟೇಜಿಂಗ್, ಆಂಗಿಕಭಾಷೆ, ನಟನ ಡೈನಾಮಿಕ್ಸ್ ಎಲ್ಲವನ್ನೂ ತಿಳಿದುಕೊಳ್ಳಲು ತಾಲೀಮು ಸಹಕಾರಿಯಾಗುತ್ತದೆ. ತಾಲೀಮಿನ ಉದ್ದೇಶವೂ ಅದೇ. ಸಂಭಾಷಣೆ ಹೇಳುವುದು, ಅಭಿನಯಿಸುವುದು ಅದರ ಮೂಲಕ ನಟಿಸಬೇಕಿರುವ ದೃಶ್ಯದ ಮೇಲೆ ಹಿಡಿತ ಸಾಧಿಸುವುದು. ಒಬ್ಬಳು ನಟಿಯಾಗಿ, ನಾನು ನಟಿಸಬೇಕಾದ ದೃಶ್ಯದ ವಿವರಗಳನ್ನು, (ವಿಶೇಷವಾಗಿ ಪ್ರಣಯ ಸನ್ನಿವೇಶಗಳಂಥ ಇಂಟಿಮೇಟ್‌ ದೃಶ್ಯಗಳನ್ನು ಚಿತ್ರೀಕರಿಸುವ ಸಂದರ್ಭದಲ್ಲಿ) ತಿಳಿದುಕೊಳ್ಳುವ ಹಕ್ಕು ಓರ್ವ ನಟಿಯಾಗಿ ನನಗಿದೆ. ಈ ಹಿಂದೆ ನನ್ನ ಜತೆ ನಟಿಸಿದ ಯಾವ ಕಲಾವಿದರೂ ಈ ಮೇಲೆ ನಾನು ಹೇಳಿದ ರೀತಿಯ ‘ದೃಶ್ಯ ಸುಧಾರಣೆ’ ಮಾಡಿರಲಿಲ್ಲ. ಚಿತ್ರದ ನಿರ್ದೇಶಕರಿಗೂ ನಾನು ಅಸ್ವಸ್ಥಳಾಗಿರುವುದು ಗೊತ್ತಾಯಿತು. ನಾನು ನಿರ್ದೇಶನ ವಿಭಾಗವನ್ನು ಸಂಪರ್ಕಿಸಿ ‘ಇನ್ನು ಮುಂದೆ ನನಗೆ ತಾಲೀಮಿನ ಭಾಗ ಆಗಲು ಆಸಕ್ತಿ ಇಲ್ಲ. ನೇರವಾಗಿ ಟೇಕ್‌ಗಳಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳಿಬಿಟ್ಟೆ. ನಂತರ ನನ್ನ ಮೇಕಪ್‌ ತಂಡದ ಜತೆಗೂ ನನಗಾದ ಈ ಅನುಭವವನ್ನು ಹಂಚಿಕೊಂಡೆ.

ಚಿತ್ರೀಕರಣದ ಸ್ಥಳದಲ್ಲಿ ಕನಿಷ್ಠ ಐವತ್ತು ಜನರು ಈ ಘಟನೆಗೆ ಸಾಕ್ಷಿಯಾಗಿದ್ದರು. ಈ ಘಟನೆ ನಡೆದಿದ್ದು ನಾನು ಕೆಲಸ ಮಾಡುವ ಸ್ಥಳದಲ್ಲಿ. ಅರ್ಜುನ್‌ ಅವರ ವೃತ್ತಿಪರವಲ್ಲದ ಮತ್ತು ಕಾಮುಕವಾದ ವರ್ತನೆಯನ್ನು ಸಹಿಸಿಕೊಳ್ಳುವುದಕ್ಕಿಂತ ಅವರಿಂದ ಆದಷ್ಟೂ ದೂರ ಇರುವುದೇ ನನಗೆ ಲೇಸು ಅನಿಸಿತ್ತು.ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದರಿಂದ ಆ ಕೆಲಸವನ್ನು ನಾನು ಮುಗಿಸಲೇಬೇಕಿತ್ತು. ಹಾಗಾಗಿ ಚಿತ್ರೀಕರಣ ಮುಂದುವರಿಸಿದೆ. ನಂತರದ ದಿನಗಳಲ್ಲಿ ಜತೆಗೆ ಕೆಲಸ ಮಾಡುವಾಗ ಅವರು ಆಡುತ್ತಿದ್ದ ಒಂದೊಂದು ವ್ಯಂಗ್ಯಮಾತುಗಳೂ ನನ್ನ ಕೆಲಸವನ್ನು ಇನ್ನಷ್ಟು ಅಸಹನೀಯಗೊಳಿಸುತ್ತಿದ್ದವು. ಅವರಿಂದ ಬರುತ್ತಿದ್ದ ‘ಚಿತ್ರೀಕರಣದ ನಂತರ ಭೇಟಿಯಾಗೋಣ’ ಎಂಬ ದುರುದ್ದೇಶಪೂರಿತ ಆಮಂತ್ರಣಗಳು ನನ್ನನ್ನು ದಿಗಿಲುಗೊಳಿಸುತ್ತಿದ್ದವು.

ಈಗ ಮತ್ತೆ ಆ ಘಟನೆಯನ್ನು ನೆನಪಿಸಿಕೊಂಡು ಹೇಳುವುದಾದರೆ, ಚಿತ್ರ ನಿರ್ಮಾಣಕ್ಕೆ ಯಾವುದೇ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಅವರ ವ್ಯಂಗ್ಯೋಕ್ತಿಗಳನ್ನು ಆದಷ್ಟೂ ನಿರ್ಲಕ್ಷಿಸಿ ಸಹಜವಾಗಿರಲು ಪ್ರಯತ್ನಿಸಿದ್ದೆ. ಅವರಿಂದ ಆರೋಗ್ಯಕರ ಅಂತರವನ್ನು ಕಾಪಾಡಿಕೊಂಡಿದ್ದೆ. ತಾನು ಮಾಡುತ್ತಿರುವುದು ತಪ್ಪು ಎಂಬುದು ಗೊತ್ತಾದ ಮೇಲೂ ಅವರು ಯಾಕೆ ಅಂಥ ವರ್ತನೆಯನ್ನು ನಿಲ್ಲಿಸಲಿಲ್ಲ ಎಂಬುದು ನನಗೆ ನಿಜಕ್ಕೂ ಅಚ್ಚರಿಯನ್ನುಂಟುಮಾಡಿತ್ತು.

ಈಗ ನಾನು ನನಗಾದ ಕೆಟ್ಟ ಅನುಭವದೊಂದಿಗೆ ಜಗತ್ತಿನೆದುರು ನಿರ್ಧರಿಸಿದ್ದೇನೆ. ಯಾಕೆಂದರೆ ಅರ್ಜುನ್‌ ಸರ್ಜಾ ಅವರು ಇನ್ನು ಮುಂದೆ ಕಲಾವಿದರ ನಡುವೆ ಇರುವ ಸೂಕ್ಷ್ಮ ಗಡಿರೇಖೆಯನ್ನು ದಾಟಬಾರದು. ತಮ್ಮ ಪ್ರಭಾವವನ್ನು ಬಳಸಿಕೊಂಡು ಇನ್ನೊಬ್ಬ ವ್ಯಕ್ತಿಗೆ ನೋವುಂಟು ಮಾಡುವುದಾಗಲಿ, ಅಸ್ವಸ್ಥಗೊಳಿಸುವುದಾಗಲೀ ಮಾಡಬಾರದು.

ಈ ಘಟನೆಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಕ್ಕೂ ಕಾರಣವಿದೆ. ಮೀ ಟೂ ಅಭಿಯಾನಕ್ಕೆ ಎನ್ನುವುದು ನನ್ನನ್ನು, ನಿನ್ನನ್ನು ಅಥವಾ ನಮ್ಮ ವೈಯಕ್ತಿಕ ಅನುಭವವನ್ನು ಮೀರಿದ ವ್ಯಾಪ್ತಿಯಿದೆ. ಇದು ಈಗ ಅಸ್ತಿತ್ವದಲ್ಲಿರುವ ಅಧಿಕಾರಮದದ ವ್ಯವಸ್ಥೆ ಒಕ್ಕೊರಲ ಧ್ವನಿಯೆತ್ತಿ ಅದನ್ನು ಧ್ವಂಸಗೊಳಿಸುವ ಆಯುಧ. ಮಹಿಳೆಯ ಮೇಲೆ ತಲತಲಾಂತರಗಳಿಂದ ನಡೆಯುತ್ತಿರುವ ಶೋಷಣೆ ಮತ್ತು ನಿಂದನೆಗಳ ವಿರುದ್ಧದ ಮಹಾಯುದ್ಧದ ಭಾಗವಾಗುವ ಉದ್ದೇಶ ನನ್ನದು. ಯಾವ ಪುರುಷನೂ ಮಹಿಳೆಯ ಖಾಸಗಿತನವನ್ನು ತನ್ನ ಸ್ವತ್ತು ಎಂದು ಭಾವಿಸಬಾರದು; ಅವನ ನಡುವಿನ ಸಂಬಂಧ ಏನೇ ಇರಲಿ.

ಲೈಂಗಿಕ ಶೋಷಣೆ ಅಥವಾ ಯಾವುದೇ ರೀತಿಯ ನಿಂದನಾತ್ಮಕ ಸಂಗತಿಗಳು ಹೆಣ್ಣುತನದ ಭಾಗ ಎಂದೇ ಮಹಿಳೆಯರನ್ನು ನಂಬಿಸಲಾಗಿದೆ. ಕುಸಿದವರನ್ನು ಮಹಿಳೆಯರೇ ಪರಸ್ಪರ ಮೇಲೆತ್ತಬೇಕೇ ವಿನಾ ಇನ್ನಷ್ಟು ಅದುಮಬಾರದು. ಹೊಸ ಪೀಳಿಗೆಯ ಹೆಣ್ಣಿನ ಭವಿಷ್ಯವನ್ನು ಬದಲಾಯಿಸುವ ಸಮಯ ಈಗ ಬಂದಿದೆ. ಅವಳು ‘ನಿಲ್ಲು, ನೀನು ನನ್ನ ಜತೆ ಹೀಗೆ ಮಾತನಾಡುವಂತಿಲ್ಲ’ ಎಂದು ಅಥವಾ ‘ನೀನು ನನ್ನನ್ನು ಈ ರೀತಿ ಮುಟ್ಟುವಂತಿಲ್ಲ’ ಎಂದೋ ದೃಢವಾಗಿ ಹೇಳುವಂಥ ಪರಿಸ್ಥಿತಿ ನಿರ್ಮಾಣ ಮಾಡುವ ಸಮಯ ಈಗ ಬಂದಿದೆ. ಲೈಂಗಿಕ ಶೋಷಣೆ ಎನ್ನುವುದು ತುಲನಾತ್ಮಕವಾದದ್ದಲ್ಲ; ಅದು ವ್ಯಕ್ತಿನಿಷ್ಠವಾದದ್ದು ಎನ್ನುವುದರನ್ನು ಅರಿಯುವ ಸಮಯ ಈಗ ಬಂದಿದೆ. ಪ್ರತಿಯೊಂದು ಪ್ರಕರಣವೂ ಭಿನ್ನ; ಪ್ರತಿಯೊಬ್ಬರು ಪ್ರತಿಕ್ರಿಯಿಸುವ ರೀತಿಯೂ ಭಿನ್ನವೇ ಆಗಿರುತ್ತದೆ. ಅಧಿಕಾರದ ಸ್ಥಾನದಲ್ಲಿದ್ದುಕೊಂಡು ಲೈಂಗಿಕವಾಗಿ ಅನುಚಿತ ವರ್ತನೆ ತೋರುವ ವ್ಯಕ್ತಿಗಳನ್ನು ಕೆಳಗಿಳಿಸಲೇಬೇಕಾದ ಸಮಯ ಈಗ ಬಂದಿದೆ. ಲೈಂಗಿಕ ಸಂತ್ರಸ್ಥರಿಗೆ ಧೈರ್ಯ ತುಂಬಿ, ತಮ್ಮನ್ನು ಶೋಷಿಸಿದವರ ಹೆಸರನ್ನು ಹೇಳುವ ಸ್ಥೈರ್ಯ ತುಂಬುವ ಸಮಯ ಈಗ ಬಂದಿದೆ. ಭವಿಷ್ಯದ ಸ್ತ್ರಿ–ಪುರುಷರಿಗಾಗಿ ಇತಿಹಾಸವನ್ನು ನಿರ್ಮಿಸುವ ಸಮಯ ಈಗ ಬಂದಿದೆ. ಹಿಂದೆಂದಿಗಿಂತಲೂ ಹೆಚ್ಚು ಶಕ್ತಿಶಾಲಿಗಳಾಗುವ ಸಮಯ ಈಗ ಬಂದಿದೆ.

ಸಮಯ ಈಗ ಬಂದಿದೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT