ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಾಕ್‌ಡೌನ್‌: ಚಿತ್ರೀಕರಣ ಮತ್ತೆ ಸ್ತಬ್ಧ!

Last Updated 29 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮೊದಲ ಲಾಕ್‌ಡೌನ್‌ನಿಂದ ನಿಧಾನವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಚಿತ್ರರಂಗ ಈಗ ಮತ್ತೆ ತತ್ತರಿಸಿದೆ. ನಿರ್ಮಾಪಕರು, ಕಲಾವಿದರನ್ನು ಕಳೆದುಕೊಂಡಿದೆ. ಕೆಲವರು ತೀವ್ರ ಆರೋಗ್ಯ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಲೈಟ್ಸ್‌, ಕ್ಯಾಮೆರಾ, ಆ್ಯಕ್ಷನ್‌... ರಿಲೀಸ್‌ ಇತ್ಯಾದಿ ಕೇಳಲು ಇನ್ನೆಷ್ಟು ದಿನ ಬೇಕಾಗಬಹುದೋ?

ಕಳೆದ ವರ್ಷದ ಲಾಕ್‌ಡೌನ್‌ ಸುಳಿಯಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದ್ದ ಕನ್ನಡ ಚಿತ್ರರಂಗ ಫೆಬ್ರುವರಿಯಲ್ಲಿ ಮೈಕೊಡವಿ ಮತ್ತೆ ಎದ್ದುನಿಂತಿತ್ತು. ‘ಇನ್‌ಸ್ಪೆಕ್ಟರ್‌ ವಿಕ್ರಂ’, ‘ಪೊಗರು’, ಹೀರೋ’, ‘ರಾಬರ್ಟ್‌’, ‘ಯುವರತ್ನ’ ಹೀಗೆ ಸಾಲು ಸಾಲು ಚಿತ್ರಗಳು ತೆರೆ ಮೇಲೆ ರಾರಾಜಿಸಿ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರದತ್ತ ಸೆಳೆದಿದ್ದವು. ಇದೇ ಸಂಭ್ರಮದಲ್ಲಿದ್ದ ಚಿತ್ರರಂಗ ಚೇತರಿಕೆಯ ಹಾದಿಯಲ್ಲಿದ್ದಾಗಲೇ ಇದೀಗ ಮತ್ತೆ ‘ಪ್ಯಾಕಪ್‌’ ಎಂದಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಶೇ 50 ನಿರ್ಬಂಧದ ಬೆನ್ನಲ್ಲೇ 14 ದಿನಗಳ ಕೊರೊನಾ ಕರ್ಫ್ಯೂ ಆದೇಶ, ಇಡೀ ಚಿತ್ರರಂಗ ಹಾಗೂ ಕಿರುತೆರೆ ಮತ್ತೆ ಸ್ತಬ್ಧವಾಗುವಂತೆ ಮಾಡಿದೆ.

ನಟ ಪುನೀತ್ ರಾಜ್‌ಕುಮಾರ್‌ ಅಭಿನಯದ ‘ಯುವರತ್ನ’ ಬಿಡುಗಡೆಯಾದ ಮೂರೇ ದಿನಕ್ಕೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ನಿರ್ಬಂಧದ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಇದರ ಪರಿಣಾಮ, ನಷ್ಟ ತಪ್ಪಿಸಿಕೊಳ್ಳಲು ಬಿಡುಗಡೆಯಾದ ಒಂದು ವಾರದೊಳಗೆ ಚಿತ್ರವನ್ನು ಒಟಿಟಿಗೆ ನಿರ್ಮಾಪಕರು ಮಾರಾಟ ಮಾಡಿದರು. ಈ ಕಠಿಣ ಸ್ಥಿತಿಯಲ್ಲೂ ನಟ ಅಜೇಯ್‌ ರಾವ್‌ ನಟನೆಯ ‘ಕೃಷ್ಣ ಟಾಕೀಸ್‌’ ಚಿತ್ರವು ಚಿತ್ರಮಂದಿರಕ್ಕೆ ಹೆಜ್ಜೆ ಇಟ್ಟಿತ್ತು. ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆ ಹಾಗೂ ಸರ್ಕಾರವು ಲಾಕ್‌ಡೌನ್‌ ಮಾಡುವ ಸೂಚನೆ ದೊರೆತ ಬೆನ್ನಲ್ಲೇ ಚಿತ್ರತಂಡವು ಪ್ರದರ್ಶನವನ್ನು ಸ್ಥಗಿತಗೊಳಿಸಿ, ಚಿತ್ರಮಂದಿರಗಳು ತೆರೆದ ಬಳಿಕ ಮತ್ತೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಹೈದರಾಬಾದ್‌ಗೆ ‘ಲಗಾಮ್‌’?‌
ಕಳೆದ ವಾರವಷ್ಟೇ ಮುಹೂರ್ತ ನಡೆದಿದ್ದ ಸೂಪರ್‌ಸ್ಟಾರ್‌ ಉಪೇಂದ್ರ ನಟನೆಯ ‘ಲಗಾಮ್‌’ ಚಿತ್ರದ ಚಿತ್ರೀಕರಣ ಏ.26ರಿಂದ ಮೈಸೂರಿನಲ್ಲಿ ಆರಂಭವಾಗಬೇಕಿತ್ತು. ಆದರೆ ಲಾಕ್‌ಡೌನ್‌ ನಿರ್ಬಂಧದ ಕಾರಣ ಇದನ್ನು ಮುಂದೂಡಲಾಗಿದೆ. ‘ಮೇ 2ರಂದು ಚುನಾವಣಾ ಫಲಿತಾಂಶದ ಬಳಿಕ ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ನೋಡಬೇಕು. ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಆಗದೇ ಇದ್ದರೆ ಹೈದರಾಬಾದ್‌ಗೆ ಪ್ರಯಾಣಿಸಲು ನಾವು ನಿರ್ಧರಿಸಿದ್ದೇವೆ. ರಾಮೋಜಿರಾವ್‌ ಫಿಲ್ಮ್‌ಸಿಟಿಯಲ್ಲಿ ಹತ್ತು ದಿನ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಿದ್ದೇವೆ. ಬಳಿಕ ಮೈಸೂರಿಗೆ ಮರಳಲಿದ್ದೇವೆ. ಮೇ 10ರ ಬಳಿಕ ರಾಜ್ಯ ಸರ್ಕಾರ ಚಿತ್ರೀಕರಣಕ್ಕೆ ಅನುಮತಿ ನೀಡಬೇಕು. ಇಲ್ಲವಾದಲ್ಲಿ ಕಳೆದ ವರ್ಷ ಅನುಭವಿಸಿದ ಸಂಕಷ್ಟವನ್ನೇ ಮತ್ತೆ ಚಿತ್ರರಂಗ ಅನುಭವಿಸಲಿದೆ’ ಎಂದು ಲಗಾಮ್‌ ಚಿತ್ರದ ಪ್ರೊಡಕ್ಷನ್‌ ಕಂಟ್ರೋಲರ್‌ ಕೇಶವ್‌ ಅವರು ತಿಳಿಸಿದರು.

ವಿಸ್ತರಣೆಯಾದರೆ ಕಷ್ಟ!
‘ಕಳೆದ ಬಾರಿ ಏಕಾಏಕಿ ಲಾಕ್‌ಡೌನ್‌ ಘೋಷಣೆಯಾದ ಕಾರಣ ಧಾರಾವಾಹಿಗಳ ಪ್ರಸಾರಕ್ಕೆ ಸಮಸ್ಯೆಯಾಗಿತ್ತು. ಸಂಚಿಕೆಗಳ ಸಂಗ್ರಹ ಇರಲಿಲ್ಲ. ಈ ಬಾರಿಯೂ ಇದೇ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈ ಬಾರಿಯ ಲಾಕ್‌ಡೌನ್‌ ಸ್ವಲ್ಪ ವಿಸ್ತರಣೆಯಾದರೆ, ಸಂಚಿಕೆಗಳು ನಿಧಾನ ಹೋಗಲಿವೆ. ಕಳೆದ ಬಾರಿಯಂತೆ ತಿಂಗಳುಗಟ್ಟಲೆ ಲಾಕ್‌ಡೌನ್‌ ವಿಸ್ತರಣೆಯಾದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಬಿಗ್‌ಬಾಸ್‌ ಈಗಾಗಲೇ ನಡೆಯುತ್ತಿರುವ ಕಾರ್ಯಕ್ರಮವಾದ ಕಾರಣ, ಅದು ಸ್ಥಗಿತಗೊಳ್ಳುವುದಿಲ್ಲ. ಸ್ಪರ್ಧಿಗಳೆಲ್ಲರೂ ಒಂದು ಮನೆಯೊಳಗೆ ಇದ್ದಾರೆ. ಬಯೋಬಲ್‌ನಲ್ಲಿ ಇದು ನಡೆಯುತ್ತಿದೆ. ವಾರಾಂತ್ಯದ ಸಂಚಿಕೆಗಳ ಚಿತ್ರೀಕರಣವೇ ನಮಗೆ ಸವಾಲಾಗಿದೆ. ಈ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ಈ ಬಾರಿಯ ಆವೃತ್ತಿಯಲ್ಲಿ ವಾರಾಂತ್ಯದ ಸಂಚಿಕೆಗಳಿಗೆ ಯಾವುದೇ ಅತಿಥಿಗಳಿಲ್ಲ’ ಎಂದು ಕಲರ್ಸ್ ಕನ್ನಡ ಕ್ಲಸ್ಟರ್ ಹೆಡ್ ಹಾಗೂ ಬಿಗ್ ಬಾಸ್ ಶೋನ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ತಿಳಿಸಿದರು.

ಇನ್ನೂ ಕೆಲ ಧಾರಾವಾಹಿ ತಂಡಗಳು ರೆಸಾರ್ಟ್‌ನತ್ತ ಮುಖ ಮಾಡಿದ್ದು, ಅಲ್ಲಿಯೇ ಬಯೋಬಬಲ್‌ನಲ್ಲಿ ಇದ್ದುಕೊಂಡು ಚಿತ್ರೀಕರಣ ನಡೆಸಲು ಚಿಂತನೆ ನಡೆಸಿವೆ. ಒಟ್ಟಾರೆ ಕಲಾರಂಗ ಸ್ತಬ್ಧವಾಗಿರುವುದರಿಂದ ನಿರ್ಮಾಪಕರಿಂದ ಹಿಡಿದು ಲೈಟ್‌ಬಾಯ್‌ವರೆಗೂ, ಚಿತ್ರಮಂದಿರದ ಮಾಲೀಕರಿಂದ ಹಿಡಿದು ಅಲ್ಲಿ ಪಾಪ್‌ಕಾರ್ನ್‌ ಮಾರುವವನವರೆಗೂ ಮತ್ತೆ ಸಂಕಷ್ಟ ಎದುರಾಗಿದೆ.

ಪರಮೇಶ್ವರ್‌ ಗುಂಡ್ಕಲ್‌, ಹೇಮಂತ್‌, ಪವನ್‌ ಒಡೆಯರ್‌
ಪರಮೇಶ್ವರ್‌ ಗುಂಡ್ಕಲ್‌, ಹೇಮಂತ್‌, ಪವನ್‌ ಒಡೆಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT